ಲಾಸ್ ಏಂಜಲಸ್‌ನ ಮಹಾಧರ್ಮಾಧ್ಯಕ್ಷ: 'ನಾವು ಯಾವುದೇ ದೇಶದಿಂದ ಬಂದರೂ ಪರವಾಗಿಲ್ಲ' ದೇವರು ನಮ್ಮನ್ನು ಪ್ರೀತಿಸುತ್ತಾರೆ
ಜೋಸೆಫ್ ಟುಲ್ಲೊಚ್
ಸುಮಾರು ಒಂದು ವಾರದಿಂದ, ಅಮೆರಿಕದ ಲಾಸ್ ಏಂಜಲಸ್‌ನ ನಗರವು ಟ್ರಂಪ್ ಆಡಳಿತದ ಸಾಮೂಹಿಕ ಗಡೀಪಾರು ನೀತಿಯ ವಿರುದ್ಧ ವ್ಯಾಪಕ ಪ್ರತಿಭಟನೆಗಳಿಂದ ತುಂಬಿದೆ.
ಅಮೆರಿಕದ ವಲಸೆ ಮತ್ತು ಕಸ್ಟಮ್ಸ್ ಜಾರಿ ಅಧಿಕಾರಿಗಳು ಲಾಸ್ ಏಂಜಲಸ್‌ನಲ್ಲಿ ನಡೆಸಿದ ದಾಳಿಗಳಿಗೆ ಪ್ರತಿಕ್ರಿಯೆಯಾಗಿ ಜೂನ್ 6 ರಂದು ಪ್ರದರ್ಶನಗಳು ಪ್ರಾರಂಭವಾದವು, ಇದು ಈಗ ಇತರ ನಗರಗಳಿಗೂ ಹರಡಿದೆ.
ಈ ಪ್ರತಿಭಟನೆಗಳು ಜೂನ್ 11ರಂದು ಲಾಸ್ ಏಂಜಲಸ್‌ನ ಮಹಾಧರ್ಮಾಧ್ಯಕ್ಷರಾದ ಜೋಸ್ ಗೊಮೆಜ್ ರವರು 'ಶಾಂತಿ ಮತ್ತು ಏಕತೆಗಾಗಿʼ ಅರ್ಪಿಸಿದ ದಿವ್ಯಬಲಿಪೂಜೆಯು ಕಾರಣವಾಗಿದ್ದವು.
ಲಾಸ್ ಏಂಜಲಸ್ ಬೀದಿಗಳಲ್ಲಿ "ಉದ್ವಿಗ್ನತೆ, ... ಅನಿಶ್ಚಿತತೆ ಮತ್ತು ಹಿಂಸಾಚಾರ" ವನ್ನು ಖಂಡಿಸುವ ಮೂಲಕ ಮಹಾಧರ್ಮಾಧ್ಯಕ್ಷರು ತಮ್ಮ ಪ್ರಭೋದನೆಯನ್ನು ಪ್ರಾರಂಭಿಸಿದರು. ಕಷ್ಟದಲ್ಲಿರುವ ನಮ್ಮ ನೆರೆಹೊರೆಯವರು, ಕಷ್ಟಪಟ್ಟು ದುಡಿಯುವ ಒಳ್ಳೆಯ ಪುರುಷರು ಮತ್ತು ಮಹಿಳೆಯರು, ವಿಶ್ವಾಸಭರಿತ ಜನರು ಹಾಗೂ ಪೊಲೀಸರು ಮತ್ತು ನಮ್ಮ ಸಮುದಾಯಗಳನ್ನು ಸುರಕ್ಷಿತವಾಗಿಡಲು ತಮ್ಮ ಪ್ರಾಣವನ್ನು ಪಣಕ್ಕಿಡುವ ಎಲ್ಲರಿಗಾಗಿ ಅವರು ಪ್ರಾರ್ಥನೆ ಸಲ್ಲಿಸಿದರು.
"ದೇವರು ತನ್ನ ಸೃಷ್ಟಿಗಾಗಿ ತಮ್ಮದೇ ಆದ ಒಂದು ಯೋಜನೆಯನ್ನು ಹೊಂದಿದ್ದಾರೆ, ಅವರು ಇಡೀ ಮಾನವ ಜನಾಂಗದ ಮೇಲೆ ಒಂದು ಪ್ರೀತಿಯ ಕನಸನ್ನು ಹೊಂದಿದ್ದಾರೆ" ಎಂದು ಮಹಾಧರ್ಮಾಧ್ಯಕ್ಷರಾದ ಗೊಮೆಜ್ ರವರು ಹೇಳಿದರು.
"ಪ್ರಭುಯೇಸು ನಮಗಾಗಿ ತನ್ನ ಪ್ರಾಣವನ್ನೇ ತ್ಯಾಗ ಮಾಡವಷ್ಟು ನಮ್ಮನ್ನು ತುಂಬಾ ಪ್ರೀತಿಸುತ್ತಾರೆ," ಎಂದು ಮಹಾಧರ್ಮಾಧ್ಯಕ್ಷರಾದ ಗೊಮೆಜ್ ರವರು ಹೇಳಿದರು. ನಮ್ಮಲ್ಲಿ ಕೆಲವರನ್ನು ಮಾತ್ರವಲ್ಲ, ಪ್ರತಿಯೊಬ್ಬ ಪುರುಷ ಮತ್ತು ಮಹಿಳೆಯನ್ನು ಹಾಗೂ ಇದುವರೆಗೆ ಜನಿಸಿದ ಅಥವಾ ಹುಟ್ಟಲಿರುವ ಪ್ರತಿಯೊಬ್ಬರನ್ನು ಪ್ರಭುಯೇಸು ತುಂಬಾ ಪ್ರೀತಿಸುತ್ತಾರೆ. ನಾವು ಯಾವುದೇ ದೇಶದಿಂದ ಬಂದಿದ್ದರೂ ಪರವಾಗಿಲ್ಲ ಅಥವಾ ನಾವು ಮಾತನಾಡುವ ಭಾಷೆ ಯಾವುದಾದರೂ ಪರವಾಗಿಲ್ಲ ಪ್ರಭುಯೇಸು ತುಂಬಾ ಪ್ರೀತಿಸುತ್ತಾರೆ."
'ಕಥೋಲಿಕ' ಇದರ ಅರ್ಥ 'ಸಾರ್ವತ್ರಿಕ', 'ಅಂತರರಾಷ್ಟ್ರೀಯ', 'ವಿಶ್ವವ್ಯಾಪಿ' ಎಂದು ಗೊಮೆಜ್ ರವರು ವಿವರಿಸಿದರು. ಇದರರ್ಥ ಯಾರನ್ನೂ ಕಡೆಗಣಿಸುವುದಿಲ್ಲ ಅಥವಾ ನಿರಾಕರಿಸುವುದಿಲ್ಲ. ಇದರರ್ಥ ನಾವೆಲ್ಲರೂ ದೇವರ ಮಕ್ಕಳು, ಸಹೋದರ ಸಹೋದರಿಯರು, ಸ್ವರ್ಗದಲ್ಲಿರುವ ನಮ್ಮ ತಂದೆ ದೇವರ ಪುತ್ರರು ಮತ್ತು ಪುತ್ರಿಯರು. ಇದು ಶುಭಸಂದೇಶದ ಸುಂದರ ದಾರ್ಶನಿಕತೆ.
ಮೆಕ್ಸಿಕನ್ ಧರ್ಮಾಧ್ಯಕ್ಷರುಗಳು: ‘ನಾವೆಲ್ಲರೂ ಸಹೋದರ ಸಹೋದರಿಯರು’
ಜೂನ್ 10 ರಂದು ಬಿಡುಗಡೆಯಾದ ಪ್ರತ್ಯೇಕ ಹೇಳಿಕೆಯಲ್ಲಿ, ಮೆಕ್ಸಿಕೊದ ಧರ್ಮಾಧ್ಯಕ್ಷರುಗಳ ಸಮ್ಮೇಳನವು ಲಾಸ್ ಏಂಜಲಸ್‌ನಲ್ಲಿನ “ಸಂಕೀರ್ಣ ಪರಿಸ್ಥಿತಿ”ಯನ್ನು “ನೋವು ಮತ್ತು ಕಳವಳ” ದಿಂದ ತುಂಬಿದೆ ಎಂದು ಹೇಳಿದೆ.
ಲಾಸ್ ಏಂಜಲಸ್‌ನ ಮಹಾಧರ್ಮಾಧ್ಯಕ್ಷರಾದ ಗೊಮೆಜ್ ರವರ ಹಿಂದಿನ ಹೇಳಿಕೆಯನ್ನು ಉಲ್ಲೇಖಿಸಿ, ಮೆಕ್ಸಿಕನ್ ಧರ್ಮಾಧ್ಯಕ್ಷರುಗಳು "ಕೆಲವು ದಾಖಲೆರಹಿತ ವಲಸಿಗರು, ಅಪರಾಧ ಕೃತ್ಯಗಳನ್ನು ಎಸಗಿದರೂ, ಎಲ್ಲಾ ದಾಖಲೆರಹಿತ ವಲಸಿಗರು ಅಪರಾಧಿಗಳಲ್ಲ" ಎಂದು ಹೇಳಿದರು. ಇದಲ್ಲದೆ, ಧರ್ಮಾಧ್ಯಕ್ಷರುಗಳು "ಹೆಚ್ಚಿನ ಸಂಖ್ಯೆಯ ದಾಖಲೆರಹಿತ ವಲಸಿಗರು ತಾವು ವಾಸಿಸುವ ಮತ್ತು ಕೆಲಸ ಮಾಡುವ ಸಮುದಾಯಗಳ ಒಳಿತಿಗೆ ತಮ್ಮ ಆದ ಕೊಡುಗೆಯನ್ನು ನೀಡುತ್ತಾರೆ ಎಂದು ಹೇಳಿದರು.
ವಲಸೆ ವ್ಯವಸ್ಥೆಯ ಸುಧಾರಣೆ ಸೇರಿದಂತೆ "ಎಲ್ಲರ ಒಳಿತಿಗಾಗಿ" ನಿರ್ಧಾರಗಳನ್ನು ತೆಗೆದುಕೊಳ್ಳಬೇಕೆಂದು ಧರ್ಮಾಧ್ಯಕ್ಷರುಗಳ ಸಮ್ಮೇಳನವು ಕರೆ ನೀಡಿತು ಮತ್ತು "ವಿದೇಶಿ ಮತ್ತು ನಿಮ್ಮ ನಡುವೆ ಯಾವುದೇ ವ್ಯತ್ಯಾಸ ಇರಬಾರದು" ಎಂಬ ಸಂಖ್ಯಾಕಾಂಡ ಪುಸ್ತಕದ ಆಜ್ಞೆಯನ್ನು ಉಲ್ಲೇಖಿಸಿತು.
ಮೆಕ್ಸಿಕನ್ ಧರ್ಮಾಧ್ಯಕ್ಷರುಗಳ ಹೇಳಿಕೆಯು, "ನಾವೆಲ್ಲರೂ ಸಹೋದರ ಸಹೋದರಿಯರು ಎಂಬುದನ್ನು ಅರ್ಥಮಾಡಿಕೊಳ್ಳಲು ಮತ್ತು ಒಟ್ಟಾಗಿ ಉತ್ತಮ ಜಗತ್ತನ್ನು ನಿರ್ಮಿಸಲು ದೇವರು ನಮಗೆ ಸಹಾಯ ಮಾಡಲಿ" ಎಂಬ ಪ್ರಾರ್ಥನೆಯೊಂದಿಗೆ ಮುಕ್ತಾಯಗೊಂಡಿತು.