ಉಕ್ರೇನ್‌ನ ಪ್ರೇಷಿತ ರಾಯಭಾರಿ: ಧರ್ಮಸಭೆಗಾಗಿ ಮತ್ತು ಮಾನವೀಯತೆಗಾಗಿ ಪ್ರಾರ್ಥಿಸಿರಿ
ಸ್ವಿಟ್ಲಾನಾ ಡುಖೋವಿಚ್
ಉಕ್ರೇನ್‌ನ ಪ್ರೇಷಿತ ರಾಯಭಾರಿಯಾದ, ಮಹಾಧರ್ಮಾಧ್ಯಕ್ಷಕರಾದ ವಿಶ್ವಲ್ದಾಸ್ ಕುಲ್ಬೊಕಾಸ್ ರವರು, ಸಾಮಾನ್ಯ ಪ್ರೇಕ್ಷಕರ ಸಭೆಯಲ್ಲಿ ವಿಶ್ವಗುರು ಹದಿನಾಲ್ಕನೇ ಲಿಯೋರವರ ಮನವಿಯನ್ನು ಪ್ರತಿಧ್ವನಿಸುತ್ತಾ, "ರಾಜಕೀಯ ಸಮಸ್ಯೆಗಳು ಬಗೆಹರಿಯದೆ ಉಳಿದಿದ್ದರೂ ಸಹ ಕನಿಷ್ಠ ಪಕ್ಷ ಕೈದಿಗಳ ವಿನಿಮಯವು, ಸಂವಾದವು ಮತ್ತು ಮಾನವೀಯ ದೃಷ್ಟಿಕೋನದಿಂದ ಉಪಯುಕ್ತವಾಗಿದೆ" ಎಂದು ತೋರಿಸುತ್ತದೆ ಎಂದು ಒತ್ತಿ ಹೇಳಿದರು.
ಸಂತ ಪೇತ್ರರ ಚೌಕದಲ್ಲಿ ಭಕ್ತರೊಂದಿಗಿನ ಸಾಮಾನ್ಯ ಸಭೆಯ ಕೊನೆಯಲ್ಲಿ, ವಿಶ್ವಗುರು ಹದಿನಾಲ್ಕನೇ ಲಿಯೋರವರು ಉಕ್ರೇನ್‌ನಲ್ಲಿ ಶಾಂತಿಗಾಗಿ ಪ್ರಾರ್ಥಿಸುವಂತೆ ಎಲ್ಲಾ ಭಕ್ತರಿಗೆ ಮನವಿ ಮಾಡಿದರು, ಯುದ್ಧವು ಕೊನೆಗೊಳ್ಳಲಿ, ಸಂವಾದದ ಪ್ರಯತ್ನಗಳಿಗೆ ಅಂತರರಾಷ್ಟ್ರೀಯ ಬೆಂಬಲವನ್ನು ಕೋರಿದರು.
ನಾಗರಿಕರು ಮತ್ತು ಮೂಲಸೌಕರ್ಯಗಳ ಮೇಲಿನ ಹೊಸ ಗಂಭೀರ ದಾಳಿಗಳಿಂದ ಪ್ರಭಾವಿತವಾಗಿರುವ ಉಕ್ರೇನಿನ ಜನರ ಕಡೆಗೆ ಹೆಚ್ಚಾಗಿ ತಮ್ಮ ಆಲೋಚನೆಗಳು ತಿರುಗುತ್ತವೆ ಎಂದು ಪೂಜ್ಯ ತಂದೆ ಹೇಳಿದ್ದರು, ಈ ಕೆಳಗಿನ ಸಂದರ್ಶನದಲ್ಲಿ ಪ್ರೇಷಿತ ರಾಯಭಾರಿಯು ದೃಢಪಡಿಸಿದಂತೆ, ಕಾಲಾನಂತರದಲ್ಲಿ ಕ್ರೂರ ದಾಳಿಗಳು ಹೆಚ್ಚಿವೆ.
ಪ್ರಶ್ನೆ: ಗೌರವಾನ್ವಿತರೇ, ಸಾಮಾನ್ಯ ಸಭೆಯಲ್ಲಿ ಉಕ್ರೇನ್‌ಗಾಗಿ ವಿಶ್ವಗುರು ಹದಿನಾಲ್ಕನೇ ಲಿಯೋರವರ ಮನವಿಯ ನಂತರ, ನೀವು ಏನು ಹೇಳಲು ಬಯಸುತ್ತೀರಿ?
ಉಕ್ರೇನಿನ ನಗರಗಳು ಮತ್ತು ಮೂಲಸೌಕರ್ಯಗಳ ಮೇಲಿನ ದಾಳಿಗಳ ಕುರಿತು ವಿಶ್ವಗುರು ಹದಿನಾಲ್ಕನೇ ಲಿಯೋರವರ ಮಾತುಗಳು ಮತ್ತು ಶಾಂತಿಗಾಗಿ ಪ್ರಾರ್ಥಿಸಲು ಅವರ ಆಹ್ವಾನವು ಬಹಳ ಮುಖ್ಯವಾಗಿವೆ. ನಾನು ವಿಶೇಷವಾಗಿ ಆ ಕೊನೆಯ ಅಂಶವನ್ನು ಒತ್ತಿ ಹೇಳಲು ಬಯಸುತ್ತೇನೆ, ಅದು ಶಾಂತಿಗಾಗಿ ಪ್ರಾರ್ಥಿಸುವುದು. ನಾವು ಯುದ್ಧದ ನಾಲ್ಕನೇ ವರ್ಷದಲ್ಲಿದ್ದೇವೆ ಎಂಬ ಸನ್ನಿವೇಶ ಇರುವುದರಿಂದ, ನಗರಗಳು ಮತ್ತು ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿಗಳು ಕಡಿಮೆಯಾಗುತ್ತಿಲ್ಲ, ಬದಲಿಗೆ ಹೆಚ್ಚುತ್ತಿವೆ ಎಂಬುದು ಸ್ಪಷ್ಟವಾಗಿ ತಿಳಿದು ಬರುತ್ತದೆ.
ಇತ್ತೀಚೆಗೆ, ರಾಜಧಾನಿ ಕೈವ್‌ನಲ್ಲಿ ಪ್ರತಿದಿನ, ಪ್ರತಿ ರಾತ್ರಿ ನಿರಂತರ ಬಾಂಬ್ ದಾಳಿಗಳನ್ನು ನಾವು ನೋಡಿದ್ದೇವೆ. ಜಗತ್ತಿನ ಯಾವುದೇ ಸೈನ್ಯವು ಅಂತಹ ತೀವ್ರವಾದ ದಾಳಿಯಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಯಾರೂ ಜೀವ, ನಗರಗಳು ಅಥವಾ ಮೂಲಸೌಕರ್ಯಗಳನ್ನು ಸಂಪೂರ್ಣವಾಗಿ ರಕ್ಷಿಸಲು ಸಾಧ್ಯವಾಗದ ಈ ವಾಸ್ತವವನ್ನು ಎದುರಿಸುತ್ತಿರುವಾಗ, ವಿಶ್ವಗುರು ಹದಿನಾಲ್ಕನೇ ಲಿಯೋರವರ ಮನವಿಯು ಶಾಂತಿಗಾಗಿ ಪ್ರಾರ್ಥಿಸುವುದಾಗಿದೆ.
ನಾವು ಇನ್ನೂ ಮೇ ತಿಂಗಳಲ್ಲಿದ್ದೇವೆ, ಇದು ಜಪಸರ ಮಾತೆಗೆ ಮೀಸಲಾದ ತಿಂಗಳು. ಫಾತಿಮಾ ನಗರದಲ್ಲಿ ಪೂಜ್ಯ ಕನ್ಯಾ ಮಾತೆಮೇರಿಯ ಮಾತುಗಳನ್ನು ನಾನು ಯಾವಾಗಲೂ ನೆನಪಿಸಿಕೊಳ್ಳುತ್ತೇನೆ: ಅದು 'ಪ್ರಾರ್ಥನೆ, ಪ್ರಾರ್ಥನೆ, ಪ್ರಾರ್ಥನೆ. ಪ್ರಾರ್ಥನೆಯ ಮೂಲಕ ನೀವು ವಿನಾಶ ಮತ್ತು ಯುದ್ಧವನ್ನು ಜಯಿಸಿ, ಹೃದಯಗಳ ಪರಿವರ್ತನೆಯನ್ನು ಪಡೆಯುತ್ತೀರಿ.'
ಆದ್ದರಿಂದ, ಧರ್ಮಸಬೆಗಾಗಿ ಮತ್ತು ಮಾನವೀಯತೆಗಾಗಿ ನಮ್ಮಲ್ಲಿರುವ ಏಕೈಕ ಆಯುಧವಿದು, ಅದು ಪ್ರಾರ್ಥನೆ. ಈ ಮನವಿಗಾಗಿ ನಾನು ವೈಯಕ್ತಿಕವಾಗಿ ಪೂಜ್ಯ ತಂದೆಗೆ ತುಂಬಾ ಕೃತಜ್ಞನಾಗಿದ್ದೇನೆ.
ಪ್ರಶ್ನೆ: ಯುದ್ಧ ಆರಂಭವಾದಾಗಿನಿಂದ ಇತ್ತೀಚೆಗೆ ಉಕ್ರೇನ್ ಮತ್ತು ರಷ್ಯಾ ನಡುವೆ ಅತಿ ದೊಡ್ಡ ಕೈದಿಗಳ ವಿನಿಮಯ ನಡೆದಿದೆ. ಪವಿತ್ರ ಮಠವು ಕೈದಿಗಳ ವಿಷಯದ ಬಗ್ಗೆ ಆಳವಾಗಿ ಕಾಳಜಿ ವಹಿಸುತ್ತದೆ ಎಂದು ನಮಗೆ ತಿಳಿದಿದೆ. ಈ ವಿನಿಮಯದ ಬಗ್ಗೆ ನೀವು ಏನು ಹೇಳುತ್ತೀರಿ?
ಹೌದು, ಒಂದು ಕಡೆಯಿಂದ, ರಾಯಭಾರಿಯಾಗಿ, ಕಾಣೆಯಾದ ಅಥವಾ ಜೈಲಿನಲ್ಲಿರುವ ತಮ್ಮ ಪ್ರೀತಿಪಾತ್ರರನ್ನು ಹುಡುಕಲು ಸಹಾಯ ಕೋರಿ ಬರುವ ಅಥವಾ ಬಂದ ಕುಟುಂಬಗಳು, ಕುಟುಂಬಗಳ ಸಂಘಗಳು ನಮ್ಮನ್ನು ದಿನಕ್ಕೆ ಹಲವಾರು ಬಾರಿ ಸಂಪರ್ಕಿಸುತ್ತವೆ, ಅವರಲ್ಲಿ ಹಲವರು ನಾಗರಿಕರು.
ಈ ವಿನಿಮಯವು ಬಹಳ ಮಹತ್ವದ್ದಾಗಿತ್ತು ಏಕೆಂದರೆ ಇದು ಎರಡೂ ಕಡೆಗಳಲ್ಲಿ 1,000 ಕೈದಿಗಳನ್ನು ಒಳಗೊಂಡಿತ್ತು. ಮನೆಗೆ ಮರಳಲು ಸಾಧ್ಯವಾದವರಿಗೆ ಇದು ನಿಜವಾಗಿಯೂ ಸಂತೋಷಕರ ವಿಷಯವಾಗಿದೆ, ಇದು ಒಂದು ದೊಡ್ಡ ಸಂತೋಷ.
ಮೇ 16 ರಂದು ಇಸ್ತಾನ್‌ಬುಲ್‌ನಲ್ಲಿ ನಡೆದ ಮಾತುಕತೆಗಳ ಫಲಿತಾಂಶ ಇದಾಗಿದೆ, ಬಹುಶಃ ಒಂದೇ ಒಂದು ಫಲಿತಾಂಶ ಇದಾಗಿದೆ ಎಂದು ನಮಗೆ ತಿಳಿದಿದೆ. ಆದ್ದರಿಂದ ರಾಜಕೀಯ ಸಮಸ್ಯೆಗಳು ಬಗೆಹರಿಯದಿದ್ದರೂ, ಸಂವಾದವು ಕನಿಷ್ಠ ಮಾನವೀಯತೆ ಮಟ್ಟದಲ್ಲಿ ಸೇವೆ ಸಲ್ಲಿಸಿತು. ಇದು ತುಂಬಾ ಒಳ್ಳೆಯ ಫಲಿತಾಂಶ.
ಪ್ರಶ್ನೆ: ವಿನಿಮಯಕ್ಕೆ ಬಹುತೇಕ ಯಾವುದೇ ಸಾಧ್ಯತೆ ಇಲ್ಲದಿರುವುದರಿಂದ ನಾಗರಿಕರು ಮತ್ತು ಮಕ್ಕಳಿಗೆ ಅತ್ಯಂತ ದೊಡ್ಡ ತೊಂದರೆಯಾಗಿದೆ. ಯಾವ ರೀತಿಯ ವಿನಿಮಯವನ್ನು ಕೈಗೊಳ್ಳಬಹುದು? ಇದಕ್ಕೆ ಪ್ರತಿಯಾಗಿ ಉಕ್ರೇನ್ ಏನನ್ನು ನೀಡಬಹುದು?
ಆದ್ದರಿಂದ, ವಿರೋಧಾಭಾಸವೆಂದರೆ, ಉಕ್ರೇನ್ ಪ್ರತಿಯಾಗಿ ಏನನ್ನಾದರೂ ನೀಡಬಹುದಾದ್ದರಿಂದ, ಮಿಲಿಟರಿ ಯುದ್ಧ ಕೈದಿಗಳನ್ನು ವಿನಿಮಯ ಮಾಡಿಕೊಳ್ಳುವುದು ಸುಲಭ. ನಾಗರಿಕರ ವಿಷಯದಲ್ಲಿ ಹಾಗಲ್ಲ.
ಹೀಗಾಗಿ, ನಾವು ನಮ್ಮ ಪ್ರಾರ್ಥನೆ ಮತ್ತು ನಮ್ಮ ಪ್ರಯತ್ನಗಳನ್ನು ತೀವ್ರಗೊಳಿಸಬೇಕಾಗಿದೆ. ಒಂದೇ ಒಂದು ಸಮಸ್ಯೆಯೆಂದರೆ, ನಾವು ನಮ್ಮ ಶಕ್ತಿಯನ್ನು ಯಾವ ದಿಕ್ಕಿನಲ್ಲಿ ಕೇಂದ್ರೀಕರಿಸಬೇಕು ಎಂಬುದನ್ನು ಸ್ಪಷ್ಟವಾಗಿ ನೋಡುವುದು ಕಷ್ಟ, ಏಕೆಂದರೆ ನಾವು ಕೊನೆಯ ಹಂತದಲ್ಲಿರುವಂತೆ ತೋರುತ್ತಿದೆ.
ವಿನಿಮಯ ಮಾಡಿಕೊಂಡ ಕೆಲವು ಕೈದಿಗಳು ನಾಗರಿಕರಾಗಿದ್ದರು. ಆ ಅಂಶವನ್ನು ನೋಡಿ ನನಗೆ ಸಂತೋಷವಾಯಿತು. ಆದಾಗ್ಯೂ, ಉಕ್ರೇನ್‌ನಲ್ಲಿ, ಉಳಿದಿರುವ [ರಷ್ಯ] ನಾಗರಿಕರ ಸಂಖ್ಯೆ ಬಹಳ ಸೀಮಿತವಾಗಿದೆ, ಇನ್ನೊಂದು ಬದಿಯಲ್ಲಿ ಬಂಧಿಸಲ್ಪಟ್ಟಿರುವ [ಉಕ್ರೇನಿನ] ನಾಗರಿಕರ ಸಂಖ್ಯೆಗೆ ದೂರದಿಂದಲೂ ಹೋಲಿಸಲಾಗುವುದಿಲ್ಲ.