ಸಿಯೋಲ್‌ನ ಧರ್ಮಸಭೆ- 2027ರ ವಿಶ್ವ ಯುವ ದಿನಾಚರಣೆಯ ಪೂರ್ವವೀಕ್ಷಣೆ
ಲಿಕಾಸ್ ಸುದ್ದಿ
ಜೂಬಿಲಿ ವರ್ಷ ಮತ್ತು ದೈವಕರೆಯ ಭಾನುವಾರದ ಸಂದರ್ಭದಲ್ಲಿ ನಡೆದ ಈ ಮೂರು ದಿನಗಳ ಕಾರ್ಯಕ್ರಮವನ್ನು 2027ಕ್ಕೆ ನಿಗದಿಯಾಗಿದ್ದ ಜಾಗತಿಕ ಕಥೋಲಿಕ ಯುವ ಸಭೆಯ ಪೂರ್ವವೀಕ್ಷಣೆಯಾಗಿ ವಿನ್ಯಾಸಗೊಳಿಸಲಾಗಿದೆ.
"ಬೆಳಕು", "ಭರವಸೆ" ಮತ್ತು "ಸಂತೋಷ"ಕ್ಕಾಗಿ ಕೊರಿಯದ ಪಾತ್ರಗಳಿಂದ ಪ್ರೇರಿತವಾದ ಕಾರ್ಯಕ್ರಮಗಳ ಮೂಲಕ ಯುವಕರ ನೇತೃತ್ವದ ವಿಶ್ವಾಸ, ದೈವಕರೆ ಮತ್ತು ಸಮುದಾಯದ ರೋಮಾಂಚಕ ಆಚರಣೆಯನ್ನು ನೀಡುವ ಗುರಿಯನ್ನು ಈ ಉತ್ಸವ ಹೊಂದಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ವಿಷಯಾಧಾರಿತ ವಲಯಗಳು, ಸಂಗೀತ ಕಚೇರಿಗಳು, ದೈವಾರಾಧನಾ ವಿಧಿಯ ಆಚರಣೆಗಳು ಮತ್ತು ಸಂವಾದಾತ್ಮಕ ಪ್ರದರ್ಶನಗಳನ್ನು ಒಳಗೊಂಡ ಉತ್ಸವವನ್ನು ಯೋಜಿಸುವಲ್ಲಿ ಮತ್ತು ಕಾರ್ಯಗತಗೊಳಿಸುವಲ್ಲಿ ಯುವಕರು ಪ್ರಮುಖ ಪಾತ್ರ ವಹಿಸಿದರು.
ಆಯೋಜಕರ ಪ್ರಕಾರ, ಈ ಕಾರ್ಯಕ್ರಮವು "ಎಲ್ಲಾ ವಯಸ್ಸಿನ, ರಾಷ್ಟ್ರೀಯತೆಗಳ ಮತ್ತು ಧಾರ್ಮಿಕ ಹಿನ್ನೆಲೆಯ ಜನರನ್ನು ಸ್ವಾಗತಿಸಿತು, ಹಂಚಿಕೊಂಡ ಸಂತೋಷ ಮತ್ತು ಅಂತರಸಾಂಸ್ಕೃತಿಕ ಸಂವಾದದ ಸ್ಥಳವನ್ನು ಸೃಷ್ಟಿಸಿತು."
ವಿಶ್ವ ಯುವ ದಿನಾಚರಣೆಯ ಪೂರ್ವವೀಕ್ಷಣೆ
ವಿಶ್ವ ಯುವ ದಿನಾಚರಣೆಯ ಅಂಶಗಳನ್ನು ಪ್ರತಿಬಿಂಬಿಸುವಂತೆ ರಚಿಸಲಾದ ಸಿಯೋಲ್ ಸಭೆಯಲ್ಲಿ ಧರ್ಮೋಪದೇಶ, ಸಾಕ್ಷಿ ಮಾತುಕತೆಗಳು, ಸೃಜನಶೀಲ ಪ್ರದರ್ಶನಗಳು, ಪ್ರಾರ್ಥನಾ ಜಾಗರಣೆ ಮತ್ತು ಮೇ 11 ರಂದು "ಸತ್ಯ ವಲಯ" ಎಂದೂ ಕರೆಯಲ್ಪಡುವ ಕಥೋಲಿಕ ವಿಶ್ವವಿದ್ಯಾಲಯದ ಸುಂಗ್ಸಿನ್ ಸಂಭಾಗಣದಲ್ಲಿ ನಡೆದ ಮುಕ್ತಾಯದ ದಿವ್ಯಬಲಿಪೂಜೆಯೂ ಸಹ ಸೇರಿವೆ.
ದಿವ್ಯಬಲಿಪೂಜೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಿಯೋಲ್‌ನ ಮಹಾಧರ್ಮಾಧ್ಯಕ್ಷರಾದ ಪೀಟರ್ ಸೂನ್-ಟೈಕ್ ಚುಂಗ್ ರವರು, ಯುವಜನರು ದೈವ ಕರೆಗೆ ಕಿವಿಗೊಡಬೇಕೆಂದು ಒತ್ತಾಯಿಸಿದರು.
"ಈ ವರ್ಷ ವಿಶೇಷ ರೀತಿಯಲ್ಲಿ, ಜೂಬಿಲಿ ವರ್ಷದ ಕೃಪೆಯಲ್ಲಿ ನಾವು 2027ರ ವಿಶ್ವ ಯುವ ದಿನದತ್ತ ಸಾಗುತ್ತಿರುವಾಗ, 'ಹೀ, ಹೀ, ಹೀ' ಯುವ ಉತ್ಸವವು, ಹೆಚ್ಚಿನ ಯುವಜನರು ಪ್ರಭುವಿನ ದೈವಕರೆಗೆ ತಮ್ಮ ಹೃದಯಗಳನ್ನು ತೆರೆದು ಧೈರ್ಯ ಮತ್ತು ವಿಶ್ವಾಸದಿಂದ ಪ್ರತಿಕ್ರಿಯಿಸಲು ಪ್ರೇರೇಪಿಸುತ್ತದೆ ಎಂದು ನಾನು ಪ್ರಾಮಾಣಿಕವಾಗಿ ಭಾವಿಸುತ್ತೇನೆ" ಎಂದು ಅವರು ತಮ್ಮ ಪ್ರಬೋಧನೆಯಲ್ಲಿ ಹೇಳಿದರು.
ಧರ್ಮಸಭೆಯು ಹೊಸ ದೈವಕರೆಗೆ ನಾಂದಿ ಹಾಡಿದಾಗ ಅದು ಅಭಿವೃದ್ಧಿ ಹೊಂದುತ್ತದೆ ಮತ್ತು ಅದಕ್ಕೆ ತಕ್ಕಂತೆ ಫಲ ನೀಡುತ್ತದೆ" ಎಂದು ಅವರು ಹೇಳಿದರು.
ಸರಿ ಸುಮಾರು 3,500 ಜನರು ದಿವ್ಯಬಲಿಪೂಜೆಯಲ್ಲಿ ಭಾಗವಹಿಸಿದ್ದರು, ಇದರಲ್ಲಿ ಸಂಗೀತ, ಸಾಕ್ಷ್ಯಗಳು ಮತ್ತು ದೈವಕರೆಯ ವಿವೇಚನೆಯ ಮೇಲೆ ಬಲವಾದ ಗಮನವಿತ್ತು.
ಮೂರು ವಲಯಗಳು, ಒಂದು ಧ್ಯೇಯ
ಉತ್ಸವವನ್ನು ಮೂರು ವಿಷಯಾಧಾರಿತ ಕ್ಷೇತ್ರಗಳಾಗಿ ವಿಂಗಡಿಸಲಾಗಿದೆ, ಸತ್ಯ, ಶಾಂತಿ ಮತ್ತು ಪ್ರೀತಿ, ಪ್ರತಿಯೊಂದೂ ಕ್ರೈಸ್ತ ಜೀವನ ಮತ್ತು ಸಾಕ್ಷಿಗೆ ಒಂದು ವಿಶಿಷ್ಟ ಪ್ರವೇಶ ಬಿಂದುವನ್ನು ನೀಡುತ್ತದೆ.
ಸತ್ಯ ವಲಯ: ಉತ್ಸವದ ಆಧ್ಯಾತ್ಮಿಕ ಕೇಂದ್ರವಾಗಿ ಕಾರ್ಯನಿರ್ವಹಿಸಿತು, ಮೇ 10ರ ಜಾಗರಣೆ ಮತ್ತು ಮೇ 11ರ ದೈವಾರಾಧನಾ ವಿಧಿಯ ಪ್ರಾರ್ಥನೆಯನ್ನು ಆಯೋಜಿಸಿತು. ಈ ಸ್ಥಳವು ವಿಶ್ವಾಸ ಮತ್ತು ದೈವಕರೆಯ ಬಗ್ಗೆ ಆಳವಾದ ಪ್ರತಿಬಿಂಬವನ್ನು ಪ್ರೋತ್ಸಾಹಿಸಿತು.
ಶಾಂತಿ ವಲಯ: ಡಾಂಗ್‌ಸಂಗ್ ಮಧ್ಯಮ ಮತ್ತು ಪ್ರೌಢಶಾಲೆಯಲ್ಲಿ ನೆಲೆಗೊಂಡಿರುವ ಈ ಪ್ರದೇಶವು ದೈವಕರೆಯ ರಚನೆಯ ಮೇಲೆ ಕೇಂದ್ರೀಕರಿಸಿದೆ. ಕೊರಿಯಾದಾದ್ಯಂತದ ಧಾರ್ಮಿಕ ಸಭೆಗಳು ತಮ್ಮ ಜೀವನ ವಿಧಾನವನ್ನು ಹಂಚಿಕೊಳ್ಳಲು ಬೂತ್‌ಗಳನ್ನು ಸ್ಥಾಪಿಸಿದವು. "ಧಾರ್ಮಿಕರೊಂದಿಗಿನ ಮಾತುಕತೆಯ" ಅಧಿವೇಶನವು ಒಂದು ಪ್ರಮುಖ ಅಂಶವಾಗಿತ್ತು, ಇದು ಧಾರ್ಮಿಕ ಪುರುಷರು ಮತ್ತು ಮಹಿಳೆಯರೊಂದಿಗೆ ಯುವಜನರಿಗೆ ಅನೌಪಚಾರಿಕ ಸಂಭಾಷಣೆಗಳನ್ನು ನೀಡಿತು. ಹತ್ತಿರದಲ್ಲಿ ನಡೆದ "ಒಸೆಯೊ ಕನ್ಸರ್ಟ್(ಸಂಗೀತಮೇಳ)" ಧಾರ್ಮಿಕ ಸಮುದಾಯಗಳಿಂದ ಉತ್ಸಾಹಭರಿತ ಪ್ರದರ್ಶನಗಳನ್ನು ಒಳಗೊಂಡಿತ್ತು, ಅವರ ವೈವಿಧ್ಯಮಯ ವರ್ಚಸ್ಸನ್ನು ಪ್ರದರ್ಶಿಸಿತು.
ಪ್ರೀತಿಯ ವಲಯ: ಕಾರು ರಹಿತ ಡೇಹಕ್-ರೋ ಬೀದಿಯಲ್ಲಿ, ಕಥೋಲಿಕ ಯುವ ಗುಂಪುಗಳು ಮತ್ತು ಪಾಲುದಾರ ಸಂಸ್ಥೆಗಳು ಸಂವಾದಾತ್ಮಕ ಪ್ರದರ್ಶನಗಳು ಮತ್ತು ಪ್ರಚಾರ ಪ್ರಯತ್ನಗಳೊಂದಿಗೆ ಹಬ್ಬದ ವಾತಾವರಣವನ್ನು ಸೃಷ್ಟಿಸಿದವು. ಮೇ 11 ರಂದು ನಡೆದ ಸಂವಾದ ಕಾರ್ಯಕ್ರಮವು ಯುವಕರು, ಯಾಜಕರು ಮತ್ತು ಕಲಾವಿದರನ್ನು ಒಟ್ಟುಗೂಡಿಸಿ ವಿಶ್ವಾಸ, ಉದ್ದೇಶ ಮತ್ತು ಭರವಸೆಯ ಬಗ್ಗೆ ಮುಕ್ತ ಸಂಭಾಷಣೆಗಳನ್ನು ನಡೆಸಿತು.
ಉತ್ಸವದ ಉತ್ಸಾಹ
ಉತ್ಸವವನ್ನು 180 ಯುವ ಸ್ವಯಂಸೇವಕರು ಮತ್ತು 60 ವಯಸ್ಕ ಸಿಬ್ಬಂದಿಗಳು ಬೆಂಬಲಿಸಿದರು. ಸಂಘಟಕರು ಸುಸ್ಥಿರತೆ, ಮರುಬಳಕೆ ಮಾಡಬಹುದಾದ ವಸ್ತುಗಳನ್ನು ಬಳಸುವುದು ಮತ್ತು ಶೂನ್ಯ-ತ್ಯಾಜ್ಯ ಅಭ್ಯಾಸಗಳನ್ನು ಅನುಷ್ಠಾನಗೊಳಿಸುವುದನ್ನು ಒತ್ತಿ ಹೇಳಿದರು. ನೈಜ-ಸಮಯದ ನೆರವು ಮತ್ತು ಆನ್-ಸೈಟ್ ಸಮೀಕ್ಷೆಗಳು ಸುಗಮ ಭಾಗವಹಿಸುವವರ ಅನುಭವಕ್ಕೆ ಕೊಡುಗೆ ನೀಡಿವೆ.
ಈ ಕಾರ್ಯಕ್ರಮವನ್ನು "ಸ್ಥಳೀಯ ಆಚರಣೆಗಿಂತ ಹೆಚ್ಚಿನದು" ಎಂದು ವಿವರಿಸಿದ ಸಂಘಟಕರು, ಇದು "ವಿಶ್ವ ಯುವ ದಿನದ ಭಕ್ತವಿಶ್ವಾಸಿಗಳ ಮುನ್ನೋಟ" ವಾಗಿ ಕಾರ್ಯನಿರ್ವಹಿಸಿತು ಎಂದು ಹೇಳಿದರು. "ಹೀ ಹೀ ಹೀ" ಯುವ ಉತ್ಸವವು, ವಿಶ್ವ ಯುವ ದಿನಾಚರಣೆಯ 2027ರ ದೃಷ್ಟಿಕೋನದ ಒಂದು ನೋಟವನ್ನು ನೀಡಿತು, "ಬೆಳಕಿನಲ್ಲಿ ನಡೆಯಿರಿ, ಭರವಸೆಯೊಂದಿಗೆ ಬದುಕಿರಿ ಮತ್ತು ಸಂತೋಷವನ್ನು ಹೊರಸೂಸಿರಿ” ಎಂದು ಸಂಘಟಕರು ಹೇಳಿದರು.