MAP

Hilda Ayyad Gaza cristiana Hilda Ayyad Gaza cristiana 

ಯುದ್ಧದ ದುಃಸ್ವಪ್ನ ಶೀಘ್ರದಲ್ಲೇ ಕೊನೆಗೊಳ್ಳಲಿ

ಗಾಜಾದ, ಪವಿತ್ರ ಕುಟುಂಬ ದೇವಾಲಯದ ಕಥೋಲಿಕ ಧರ್ಮಕೇಂದ್ರದಲ್ಲಿ ಆಶ್ರಯ ಪಡೆಯುತ್ತಿರುವ ಭಕ್ತಾಧಿಗಳು, ಹಿಲ್ಡಾ ಜೋಸೆಫ್ ಅಯ್ಯದ್ ರವರು ತಮ್ಮ 20ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವಾಗ, ಅವರು ಯುದ್ಧದ ಹೊರೆಯನ್ನು ಮತ್ತು ಸಂಘರ್ಷವು ಶೀಘ್ರದಲ್ಲೇ ಕೊನೆಗೊಳ್ಳಬಹುದು ಎಂಬ ಭರವಸೆಯ ಕಿಡಿಯನ್ನು ಹಂಚಿಕೊಳ್ಳುತ್ತಾರೆ.

ಹಿಲ್ಡಾ ಜೋಸೆಫ್ ಅಯ್ಯದ್ - ಗಾಜಾ

ನನ್ನ ಜೀವನದ ಹೊಸ ದಶಕದ ಆರಂಭದ ಆಚರಣೆಯಾಗಬೇಕಿದ್ದ ಈ ರಾತ್ರಿ, ಜೀವನ ಮತ್ತು ಅವಕಾಶಗಳಿಂದ ತುಂಬಿದೆ ಎಂದು ನಾನು ಯಾವಾಗಲೂ ಊಹಿಸಿದ್ದೆ, ನನ್ನ ಇಪ್ಪತ್ತನೇ ವರ್ಷದಲ್ಲಿ, ನಾನು ಆಳವಾದ ಪರಕೀಯತೆ ಮತ್ತು ನಷ್ಟದ ಭಾವನೆಯಿಂದ ತುಂಬಿದ್ದೇನೆ.

ಇಪ್ಪತ್ತು ವರ್ಷಗಳು ಭೂತಕಾಲದ ನೆನಪಿನ ಅವಶೇಷಗಳ ನಡುವೆ, ನನ್ನ ಬಾಲ್ಯ ಮತ್ತು ಯೌವನದ ಕನಸುಗಳಿಗೆ ಸಾಕ್ಷಿಯಾದ ನನ್ನ ಮನೆ ಈಗ ನನ್ನ ನೆನಪಿನಲ್ಲಿ ಕೇವಲ ನೋವಿನ ಚಿತ್ರವಾಗಿದೆ.

ನನ್ನ ಜೀವನದ ಎರಡು ವರ್ಷಗಳು, ಆರಂಭ ಮತ್ತು ರಚನೆಯ ಅತ್ಯಂತ ಅಮೂಲ್ಯ ವರ್ಷಗಳು, ಈ ಕ್ರೂರ ಮತ್ತು ನಿರ್ದಯ ಅಗ್ನಿಪರೀಕ್ಷೆಯ ಮಧ್ಯೆ ಮಾಯವಾಗಿವೆ. ಅವುಗಳನ್ನು ನನ್ನಿಂದ ಮತ್ತು ನನ್ನ ಪೀಳಿಗೆಯ ಅನೇಕರಿಂದ ಕದಿಯಲಾಯಿತು, ಉಜ್ವಲ ಭವಿಷ್ಯವನ್ನು ನಿರ್ಮಿಸುವ ಕನಸು ಕಂಡ ಆ ಪೀಳಿಗೆಯು, ಆದರೆ ಅನಿವಾರ್ಯ ಸಂದರ್ಭಗಳಿಗೆ ಬಂಧಿಯಾಗಿತ್ತು.

ಕೆಲವೊಮ್ಮೆ ನಾನು ಇಪ್ಪತ್ತರ ಹರೆಯದ ಯುವತಿಯಂತೆ ಭಾಸವಾಗುತ್ತೆ, ಆದರೆ ನನ್ನ ಆತ್ಮವು ಇನ್ನೂ ಹೆಚ್ಚಿನ ವರ್ಷಗಳ ಹೊರೆಯನ್ನು ಹೊತ್ತಿದೆ. ನನ್ನ ಕನಸುಗಳು ಸರಳ ಮತ್ತು ಸಾಧಿಸಬಹುದಾದ ದಿನಗಳಿಗೆ ನಾನು ಹಿಂದಿನಂತೆ ಹಿಂತಿರುಗಲು ಸಾಧ್ಯವಿಲ್ಲ, ಅಥವಾ ನನ್ನ ವರ್ತಮಾನವನ್ನು ಶಾಂತಿಯಿಂದ ಬದುಕಲು ಸಾಧ್ಯವಿಲ್ಲ, ಏಕೆಂದರೆ ಪ್ರತಿಯೊಂದು ವಿಷಯವು ಅಥವಾ ಅನುಭವವು ನಾನು ಕಳೆದುಕೊಂಡದ್ದನ್ನು ನೆನಪಿಸುತ್ತದೆ. ಭವಿಷ್ಯವು ಮಸುಕಾಗಿ ಕಾಣುತ್ತದೆ, ನನ್ನಲ್ಲಿ ಉತ್ತರವಿಲ್ಲದ ಕಹಿ ಪ್ರಶ್ನೆಗಳಿಂದ ತುಂಬಿದೆ.

ಆದರೆ ಈ ಗಾಢ ಕತ್ತಲೆಯಲ್ಲಿಯೂ ಸಹ, ಭರವಸೆಯ ಮಸುಕಾದ ಕಿಡಿ ನನ್ನ ಹಾದಿಯನ್ನು ಬೆಳಗಿಸುತ್ತದೆ. ನಾನು ನನ್ನ ಜೀವನದ ಆರಂಭದಲ್ಲಿದ್ದಾಗಲೂ ಹತಾಶೆಗೆ ಶರಣಾಗಲು ನಿರಾಕರಿಸುತ್ತೇನೆ.

ನಮ್ಮ ಕನಸುಗಳನ್ನು ಉಸಿರುಗಟ್ಟಿಸುವ ಈ ದುಃಸ್ವಪ್ನವು ಕೊನೆಗೊಳ್ಳುವ ಕ್ಷಣಕ್ಕಾಗಿ, ಗಾಯಗಳಿಂದ ಭಾರವಾದರೂ ದೃಢನಿಶ್ಚಯದಿಂದ ಬಡಿಯುವ ಹೃದಯದೊಂದಿಗೆ ನಾನು ಇನ್ನೂ ಕಾಯುತ್ತಿದ್ದೇನೆ.

ಸ್ವಾತಂತ್ರ್ಯದ ಪರಿಮಳವನ್ನು ಆಘ್ರಾಣಿಸುವ, ನನ್ನ ಕದ್ದ ಭವಿಷ್ಯವನ್ನು ನಿರ್ಮಿಸುವತ್ತ ನನ್ನ ಮೊದಲ ಹೆಜ್ಜೆಗಳನ್ನು ಇಡುವ ಮತ್ತು ನನ್ನ ಯೌವನದ ಕಳೆದುಹೋದ ವರ್ಷಗಳನ್ನು ಇಮ್ಮಡಿಗೊಂಡ ಸಂತೋಷ ಮತ್ತು ಹೆಚ್ಚಿನ ಶಕ್ತಿಯೊಂದಿಗೆ ಮರಳಿ ಪಡೆಯುವ ದಿನಕ್ಕಾಗಿ ನಾನು ಕಾಯುತ್ತಿದ್ದೇನೆ.

ನನ್ನ ಈ ಇಪ್ಪತ್ತನೇ ಹುಟ್ಟುಹಬ್ಬವು ವರ್ಷಗಳ ಆಚರಣೆಯಲ್ಲ, ಬದಲಿಗೆ ದೃಢತೆ ಮತ್ತು ಪ್ರತಿಭಟನೆಯ ನಿಲುವು. ಇದು ನಮ್ಮ ಯೌವನ ಮತ್ತು ನಮ್ಮ ಕನಸುಗಳಿಂದ ನಾವು ಪಾವತಿಸಿದ ಭಾರೀ ಬೆಲೆಯನ್ನು ನೆನಪಿಸುತ್ತದೆ, ಆದರೆ ಇದು ನ್ಯಾಯ, ಶಾಂತಿ ಮತ್ತು ಕಳೆದುಹೋದ ಎಲ್ಲದಕ್ಕೂ ಪರಿಹಾರವನ್ನು ತರುವ ನಾಳೆಗಾಗಿ ಉಳಿಯಲು ಮತ್ತು ಆಶಿಸಲು ನಮ್ಮ ದೃಢ ಇಚ್ಛೆಯ ಘೋಷಣೆಯಾಗಿದೆ.

ನನ್ನ ಜೀವನದ ಈ ಹೊಸ ದಶಕದ ಆರಂಭದಲ್ಲಿ, ಮುಂಬರುವ ದಿನಗಳು ಈ ದುಃಖಕ್ಕೆ ಅಂತ್ಯ ಹಾಡಲಿ, ನಮ್ಮ ಮನೆಗಳಿಗೆ ರಕ್ಷಣೆ ಮತ್ತು ಪ್ರೀತಿಯ ಉಷ್ಣತೆ ಹಾಗೂ ಸುರಕ್ಷತೆ ಮರಳಲಿ ಮತ್ತು ಈ ಪೀಳಿಗೆಯ ಯುವಕರಾದ ನಾವು ನಮ್ಮ ಕನಸುಗಳನ್ನು ಮರಳಿ ಪಡೆಯಲು ಹಾಗೂ ನಮ್ಮ ತ್ಯಾಗಗಳಿಗೆ ಯೋಗ್ಯವಾದ ಭವಿಷ್ಯವನ್ನು ನಿರ್ಮಿಸಲು ಸಾಧ್ಯವಾಗಲಿ ಎಂದು ನಾನು ನನ್ನ ಹೃದಯದಾಳದಿಂದ ಹಾರೈಸುತ್ತೇನೆ.

ನಮಗಾಗಿ ಪ್ರಾರ್ಥಿಸಿರಿ.
 

24 ಮೇ 2025, 12:34