ಜಾಗತಿಕ ಸಾಲದ ಬಿಕ್ಕಟ್ಟನ್ನು ಕೊನೆಗೊಳಿಸುವ ಬಗ್ಗೆ ಚರ್ಚೆ
ಕೀಲ್ಸ್ ಗುಸ್ಸಿ
ಶತಕೋಟಿ ಜನರನ್ನು ಬಡತನದಲ್ಲಿ ಇರಿಸಿರುವ ಜಾಗತಿಕ ಸಾಲದ ಬಿಕ್ಕಟ್ಟನ್ನು ಹೇಗೆ ಕೊನೆಗೊಳಿಸುವುದು ಎಂಬುದರ ಕುರಿತು ಚರ್ಚಿಸಲು ವ್ಯಾಟಿಕನ್‌ನ ಹಿರಿಯ ಅಧಿಕಾರಿಗಳು, ನಾಗರಿಕ ಸಮಾಜದ ನಾಯಕರು ಮತ್ತು ಅಂತರರಾಷ್ಟ್ರೀಯವಾಗಿ ಗುರುತಿಸಲ್ಪಟ್ಟ ಅರ್ಥಶಾಸ್ತ್ರಜ್ಞರು ಎಲ್ಲರೂ "ಟೌನ್‌ಹಾಲ್" ಸಭೆಯಲ್ಲಿ ವಾಸ್ತವಿಕವಾಗಿ ಒಟ್ಟುಗೂಡಲಿದ್ದಾರೆ.
ಅಂತರರಾಷ್ಟ್ರೀಯ ಕಾರಿತಾಸ್ ಮತ್ತು ವ್ಯಾಟಿಕನ್‌ನ ಸಮಗ್ರ ಮಾನವ ಅಭಿವೃದ್ಧಿಯನ್ನು ಉತ್ತೇಜಿಸುವ ಡಿಕ್ಯಾಸ್ಟರಿಯಿಂದ ಆಯೋಜಿಸಲ್ಪಟ್ಟ ಈ ಕಾರ್ಯಕ್ರಮವು "ಭರವಸೆಯ ಯಾತ್ರಿಕರು: ಸಾಲ, ಹವಾಮಾನ ಮತ್ತು ಅಭಿವೃದ್ಧಿಯ ಮೇಲಿನ ಕ್ರಮಕ್ಕಾಗಿ ಒಂದು ಜೂಬಿಲಿಯ ಸ್ಫೂರ್ತಿ" ಎಂಬ ಶೀರ್ಷಿಕೆಯನ್ನು ಹೊಂದಿದೆ. ಇದು ಮೇ 28 ರಂದು ರೋಮ್ ಸಮಯ 14:30-16:00 ಕ್ಕೆ ನಡೆಯಲಿದೆ.
ಸಾಲವನ್ನು ಭರವಸೆಯನ್ನಾಗಿ ಮಾಡಿ
ಈ ವೆಬಿನಾರ್ ನ್ನು ಡಿಸೆಂಬರ್ 23, 2024 ರಂದು ಪ್ರಾರಂಭವಾದ ಅಂತರರಾಷ್ಟ್ರೀಯ ಕಾರಿತಾಸ್ ನ ವಿಶ್ವಾದ್ಯಂತ ಅಭಿಯಾನವಾದ “ಸಾಲವನ್ನು ಭರವಸೆಯನ್ನಾಗಿ ಮಾಡುವ” ಕಾರ್ಯದಡಿಯಲ್ಲಿ ಆಯೋಜಿಸಲಾಗಿದೆ. ಜೂಬಿಲಿ ವರ್ಷದ ಆಶಾವಾದದ ಸಂದರ್ಭದಲ್ಲಿ, ಧಾರ್ಮಿಕ ಮುಖಂಡರು ಮತ್ತು ನೀತಿ ತಜ್ಞರು ಪವಿತ್ರ ವರ್ಷವು "ಜಾಗತಿಕ ಸಾಲ ಬಿಕ್ಕಟ್ಟನ್ನು ಕೊನೆಗೊಳಿಸಲು ಒಂದು ದಾರ್ಶನಿಕತೆಯನ್ನು ಹೇಗೆ ಒದಗಿಸುತ್ತದೆ" ಎಂಬುದರ ಕುರಿತು ಚಿಂತನೆ ನಡೆಸಲಿದ್ದಾರೆ.
"ಪ್ರಸ್ತುತ ಜಾಗತಿಕ ಸಾಲ ಬಿಕ್ಕಟ್ಟು, ಇದು ಕೇವಲ ಹಣಕಾಸಿನದಲ್ಲ, ಅಂತಿಮವಾಗಿ ಅಭಿವೃದ್ಧಿಯ ಬಿಕ್ಕಟ್ಟಿ"ನತ್ತ ಗಮನ ಸೆಳೆಯುವುದು ಈ ಅಭಿಯಾನದ ಗುರಿಯಾಗಿದೆ. ಏಕೆಂದರೆ 3.3 ಶತಕೋಟಿಗೂ ಹೆಚ್ಚು ಜನರು, ಸರ್ಕಾರಗಳು ಶಿಕ್ಷಣ ಮತ್ತು ಆರೋಗ್ಯ ರಕ್ಷಣೆಯಂತಹ ಮೂಲಭೂತ ಸಾರ್ವಜನಿಕ ಸೇವೆಗಳಿಗಿಂತ ತಮ್ಮ ಸಾಲಗಳನ್ನು ಮರುಪಾವತಿಸಲು ಹೆಚ್ಚು ಖರ್ಚು ಮಾಡುವ ದೇಶಗಳಲ್ಲಿ ವಾಸಿಸುತ್ತಿದ್ದಾರೆ.
ಇದಲ್ಲದೆ, ಈ ವರ್ಚುವಲ್ ಟೌನ್‌ಹಾಲ್ ವಿಶ್ವಗುರು ಫ್ರಾನ್ಸಿಸ್ ರವರ ಲೌದಾತೊ ಸಿ’ಯ ಹತ್ತನೇ ವಾರ್ಷಿಕೋತ್ಸವ ಮತ್ತು 2025ರ ವಿಶ್ವ ಶಾಂತಿ ದಿನದಂದು ದಿವಂಗತ ವಿಶ್ವಗುರುಗಳು ವಿಶ್ವದಾದ್ಯಂತ ಹೆಚ್ಚು ಸಾಲಗಾರರಾಗಿರುವ ದೇಶಗಳಿಗೆ ಪರಿಹಾರವನ್ನು ನೀಡಬೇಕೆಂದು ಮಾಡಿದ ಮನವಿಯೊಂದಿಗೆ ಹೊಂದಿಕೆಯಾಗುತ್ತದೆ.
ಚರ್ಚೆಗೆ ಇನ್ಯಾವ ವಿಷಯವಿದೆ?
ಕೊಲಂಬಿಯಾ ವಿಶ್ವವಿದ್ಯಾಲಯದ ಅಂತರರಾಷ್ಟ್ರೀಯ ಮತ್ತು ಸಾರ್ವಜನಿಕ ವ್ಯವಹಾರಗಳ ಶಾಲೆಯ ಪ್ರಾಧ್ಯಾಪಕ ಮಾರ್ಟಿನ್ ಗುಜ್ಮಾನ್ ರವರು, ಸಮಗ್ರ ಮಾನವ ಅಭಿವೃದ್ಧಿಯನ್ನು ಉತ್ತೇಜಿಸುವ ಡಿಕ್ಯಾಸ್ಟರಿಯ ಕಾರ್ಯದರ್ಶಿ ಸಿಸ್ಟರ್ ಅಲೆಸ್ಸಾಂಡ್ರಾ ಸ್ಮೆರಿಲ್ಲಿರವರು ಮತ್ತು ವಿಶ್ವಸಂಸ್ಥೆಯ ಪವಿತ್ರ ಪೀಠಾಧಿಕಾರದ ಶಾಶ್ವತ ವೀಕ್ಷಕ ಮಹಾಧರ್ಮಾಧ್ಯಕ್ಷರಾದ ಗೇಬ್ರಿಯೆಲ್ ಗಿಯೋರ್ಡಾನೊ ಕ್ಯಾಸಿಯಾರವರು ಪ್ಯಾನೆಲಿಸ್ಟ್‌ಗಳಲ್ಲಿ ಸೇರಿದ್ದಾರೆ.
ಜೂಬಿಲಿ ವರ್ಷದ ಸಂದರ್ಭದಲ್ಲಿ ಸಾಲದ ಹೊರೆಗಳನ್ನು ನಿವಾರಿಸಲು ಮತ್ತು ಜಾಗತಿಕ ಹಣಕಾಸು ವ್ಯವಸ್ಥೆಯನ್ನು ಸುಧಾರಿಸಲು ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಚರ್ಚೆಗಳು ಗಮನಹರಿಸಲಿವೆ.