MAP

Nigeria: Kidnapped Nigeria: Kidnapped   (Nigerian Catholics)

ನೈಜೀರಿಯಾದ ಧರ್ಮಗುರು: 'ಕ್ರಿಸ್ತರ ನಿಮಿತ್ತ ನನ್ನನ್ನು ಬಂಧಿಸಿದರೆ ಸಂತೋಷವಾಗುತ್ತದೆ'

2024ರಲ್ಲಿ 3,100ಕ್ಕೂ ಹೆಚ್ಚು ಕ್ರೈಸ್ತರು ಕೊಲ್ಲಲ್ಪಟ್ಟ ದೇಶದಲ್ಲಿ, ನೈಜೀರಿಯಾದ ಯಾಜಕರೊಬ್ಬರ ಸಾಕ್ಷ್ಯವು ಆಗ್ನೇಯ ಪ್ರದೇಶದ ಕ್ರೈಸ್ತರ ದೈನಂದಿನ ಪರೀಕ್ಷೆಗಳು ಮತ್ತು ಆಳವಾದ ವಿಶ್ವಾಸದ ಮೇಲೆ ಬೆಳಕು ಚೆಲ್ಲುತ್ತದೆ.

ಜೀನ್-ಬೆನೊಯಿಟ್ ಹರೆಲ್

ನಮಗೆ ಸಾವಿನ ಬೆದರಿಕೆ ಹಾಕುವವರು ನಮ್ಮನ್ನು ವಿಶ್ವಾಸದಲ್ಲಿ ಇನ್ನೂ ಬಲಪಡಿಸುತ್ತಾರೆ. ಜಗತ್ತಿನ ಅತ್ಯಂತ ಅಪಾಯಕಾರಿ ದೇಶಗಳಲ್ಲಿ ಕ್ರೈಸ್ತನಾಗಿರಲು ಅಷ್ಟು ಸುಲಭವಲ್ಲ ಹಾಗೂ ಒಬ್ಬ ಆಧ್ಯಾತ್ಮಿಕ ಯಾಜಕರಾದ ಫಾದರ್ ಕ್ಲೆಮೆಂಟ್ ಚಿಮಾವೊಬಿ ಎಮೆಫುರವರು, ಭಯವು ತನ್ನ ಜೀವನವನ್ನು ನಿಯಂತ್ರಿಸುವುದನ್ನು ನಿರಾಕರಿಸುತ್ತಾರೆ. ಎನುಗು ರಾಜ್ಯದ ಅಟ್ಟಕ್ವುವಿನಲ್ಲಿರುವ ಸ್ಪಿರಿಟನ್ ಇಂಟರ್ನ್ಯಾಷನಲ್ ಸ್ಕೂಲ್ ಆಫ್ ಥಿಯಾಲಜಿ (SIST)ನಲ್ಲಿ ಧರ್ಮಸಭೆಯ ನಿಯಮಾವಳಿಯ ಪ್ರಾಧ್ಯಾಪಕರಾಗಿರುವ ಅವರು, ತಮ್ಮ ವಿದ್ಯಾರ್ಥಿಗಳಿಗೆ ಮಾದರಿಯಾಗಿ ಮತ್ತು "ಭರವಸೆಯ ಸಂಕೇತ" ವಾಗಿ ಕಾರ್ಯನಿರ್ವಹಿಸಲು ಪ್ರಯತ್ನಿಸುತ್ತಾರೆ, ಏಕೆಂದರೆ ಅವರು ಹೇಳುವಂತೆ, ನಮ್ಮನ್ನು ದುರ್ಬಲರನ್ನಾಗಿ ಮಾಡುವ ವಿಷಯವು ನಮ್ಮ ವಿಶ್ವಾಸವನ್ನು ಬಲಪಡಿಸುತ್ತದೆ.

ಎನುಗು ರಾಜ್ಯವು ಉತ್ತರ ನೈಜೀರಿಯಾಕ್ಕಿಂತ ಭಿನ್ನವಾಗಿ, ಕ್ರೈಸ್ತ ಧರ್ಮದ ಬಹುಸಂಖ್ಯಾತ ಭಕ್ತಾಧಿಗಳನ್ನು ಹೊಂದಿದೆ. ಆದಾಗ್ಯೂ, ಬೊಕೊ ಹರಾಮ್‌ನಂತಹ ಗುಂಪುಗಳಿಂದ ನಡೆಯುವ ಜಿಹಾದಿ ದಾಳಿಗಳು ಹೆಚ್ಚಾಗಿ ಉತ್ತರದೊಂದಿಗೆ ಸಂಬಂಧ ಹೊಂದಿದ್ದರೂ,ಕ್ರೈಸ್ತರಿಗೆ ಇರುವ ಬೆದರಿಕೆ ರಾಷ್ಟ್ರವ್ಯಾಪಿ ಹರಡುತ್ತಿದೆ ಎಂದು ಫಾದರ್ ಎಮೆಫುರವರು ನಂಬುತ್ತಾರೆ. ಅವರ ಪ್ರಕಾರ, ಕ್ರೈಸ್ತರು "ನೈಜೀರಿಯಾದ ಇಸ್ಲಾಂ ಧರ್ಮೀಕರಣದ ಯೋಜನೆಯನ್ನು ಎದುರಿಸುತ್ತಿದ್ದಾರೆ, ಇದನ್ನು ಅವರು "ಮುಂದುವರೆಯುತ್ತಿರುವ ಪ್ರಕ್ರಿಯೆ" ಎಂದು ವಿವರಿಸುತ್ತಾರೆ, ಇವು ಹಿಂಸೆ ಮತ್ತು ಸಾಂಸ್ಥಿಕ ನಿರ್ಲಕ್ಷ್ಯದಿಂದ ಗುರುತಿಸಲ್ಪಟ್ಟಿದೆ.

ಅಪಹರಣಗಳ ಸಂಖ್ಯೆಯಲ್ಲಿ ಹೆಚ್ಚಳ
ಆಗ್ನೇಯದಲ್ಲಿ ಕ್ರೈಸ್ತರಿಗೆ ಹೆಚ್ಚು ಗೋಚರಿಸುವ ಬೆದರಿಕೆಗಳಲ್ಲಿ ಹೆಚ್ಚುತ್ತಿರುವ ಅಪಹರಣಗಳ ಸಂಖ್ಯೆಯೂ ಒಂದು. ಕಳೆದ ದಶಕದಲ್ಲಿ, ನೈಜೀರಿಯಾದಲ್ಲಿ 200ಕ್ಕೂ ಹೆಚ್ಚು ಯಾಜಕರು ಮತ್ತು ಧಾರ್ಮಿಕರ ಅಪಹರಣಗಳು ನಡೆದಿವೆ. 2025ರ ಆರಂಭದಲ್ಲಿ ಈಗಾಗಲೇ ಅಪಹರಣಗಳ ತೀವ್ರ ಏರಿಕೆ ಕಂಡುಬಂದಿದ್ದು, ಸುಮಾರು ಒಂದು ಡಜನ್ ಅಪಹರಣಗಳು ನಡೆದಿದ್ದು, ಅವುಗಳಲ್ಲಿ ಎರಡು ಇಬ್ಬರು ಸಂತ್ರಸ್ತರ ಸಾವಿಗೆ ಕಾರಣವಾಗಿವೆ.

ಶಾಲೆಗಳು, ಆಸ್ಪತ್ರೆಗಳು ಅಥವಾ ದೂರದ ಸಮುದಾಯಗಳಿಗೆ ಸೇವೆ ಸಲ್ಲಿಸಲು ಹೆಚ್ಚಾಗಿ ಒಂಟಿಯಾಗಿ ಪ್ರಯಾಣಿಸುವ ಯಾಜಕರು ಮತ್ತು ಧಾರ್ಮಿಕರು ವಿಶೇಷವಾಗಿ ದುರ್ಬಲರಾಗಿದ್ದಾರೆ. ನೈಜೀರಿಯಾದ ಆಗ್ನೇಯ ಸ್ಪಿರಿಟನ್ ಪ್ರಾಂತ್ಯದ ಧರ್ಮಸಭೆಯ ನಿಯಮಾವಳಿಯ ಪ್ರಾಧ್ಯಾಪಕರಾಗಿರುವ ಫಾದರ್ ಎಮೆಫುರವರು, ಒನಿತ್ಶಾದಲ್ಲಿರುವ ತಮ್ಮ ಕಚೇರಿಯನ್ನು ತಲುಪಲು ಆಗಾಗ್ಗೆ 100 ಕಿಲೋಮೀಟರ್‌ಗಳಿಗಿಂತ ಹೆಚ್ಚು ದೂರ ಅಸುರಕ್ಷಿತ ರಸ್ತೆಗಳಲ್ಲಿ ಚಾಲನೆ ಮಾಡುತ್ತಿರುತ್ತಾರೆ.

ಸುಲಿಗೆಯ ಸಂದಿಗ್ಧತೆ
ಇತ್ತೀಚಿನ ಪ್ರಕರಣಗಳಲ್ಲಿ ಸ್ಪಿರಿಟನ್ ನ ಧರ್ಮಗುರುವಾದ ಫಾದರ್ ಜೆರಾಲ್ಡ್ ಒಹೇರಿರವರನ್ನು ನವೆಂಬರ್ 30, 2024 ರಂದು ಪ್ಯೂಲ್ಸ್ ಎಂದೂ ಕರೆಯಲ್ಪಡುವ ಅಲೆಮಾರಿ ಮುಸ್ಲಿಂ ಜನಾಂಗೀಯ ಫುಲಾನಿ ಅಪಹರಣಕಾರರು ಅಪಹರಿಸಿದ್ದಾರೆ. ಧರ್ಮಸಭೆಯು ತಾನು ಸುಲಿಗೆ ಪಾವತಿಸುವುದಿಲ್ಲ ಎಂದು ಹೇಳಿಕೊಂಡರೂ, ಫಾದರ್ ಎಮೆಫುರವರ ಪರಿಸ್ಥಿತಿಯ ಸಂಕೀರ್ಣತೆಯನ್ನು ಒಪ್ಪಿಕೊಳ್ಳುತ್ತಾರೆ: "ಪ್ರಾಯೋಗಿಕವಾಗಿ, ಇದು ತುಂಬಾ ಕಷ್ಟಕರವಾಗಿದೆ, ಏಕೆಂದರೆ ನಿಮ್ಮ ಸಹೋದರ ಗಂಭೀರ ಬೆದರಿಕೆಯಲ್ಲಿದ್ದಾರೆ."

ಅವರು ಫಾದರ್ ಓಹ್ರಿಯರವರ ಬಿಡುಗಡೆಯನ್ನು ಖಚಿತಪಡಿಸಿಕೊಳ್ಳಲು ತಮ್ಮ ಎಲ್ಲಾ ಪ್ರಯತ್ನಗಳಲ್ಲಿ ತಮ್ಮನ್ನು ನಿಕಟವಾಗಿ ತೊಡಗಿಸಿಕೊಂಡಿದ್ದರು. ಆದರೂ ಅವರು "ನಾವು ಮೂರ್ಖತನದಿಂದ ಸುಲಿಗೆ ಪಾವತಿಸಲು ಒಪ್ಪಿಕೊಂಡರೆ, ಯಾಜಕರು, ಸನ್ಯಾಸಿಗಳು ಮತ್ತು ಸನ್ಯಾಸಿನಿಯರ ಅಪಹರಣಗಳು ಘಾತೀಯವಾಗಿ ಹೆಚ್ಚಾಗುತ್ತಲೇ ಇರುತ್ತವೆ" ಎಂದು ಎಚ್ಚರಿಸುತ್ತಾರೆ. ಪಾವತಿಸಲು ಉತ್ಸುಕರಾಗಿರುವ ಕುಟುಂಬಗಳಿಂದ ಬರುವ ಒತ್ತಡವು ಧರ್ಮಸಭೆಯ ನಿಲುವನ್ನು ಮತ್ತಷ್ಟು ಸಂಕೀರ್ಣಗೊಳಿಸುತ್ತದೆ.

ಮೌನ ರೂಪದ ಕಿರುಕುಳ
ಬೆದರಿಕೆಗಳು ಅಪಹರಣಗಳನ್ನು ಮೀರಿ ವಿಸ್ತರಿಸುತ್ತವೆ. ಫಾದರ್ ಎಮೆಫುರವರ ಪ್ರಕಾರ, ಉತ್ತರದಿಂದ ಬಂದ ಮುಸ್ಲಿಂ ಧರ್ಮದ ಅಲೆಮಾರಿಗಳಾದ ಸಶಸ್ತ್ರ ದನಗಾಹಿಗಳ ಉಪಸ್ಥಿತಿಯು ಆಗ್ನೇಯದಲ್ಲಿ ಹೆಚ್ಚಾಗಿ ಗೋಚರಿಸುತ್ತಿದೆ. " ಮುಸ್ಲಿಂ ಧರ್ಮದ ಈ ಅಲೆಮಾರಿಗಳು ಎಲ್ಲೆಡೆ ಇದ್ದಾರೆ" ಎಂದು ಅವರು ಹೇಳುತ್ತಾರೆ. "ನಾನು ಶಾಲೆಯಿಂದ ಎನುಗು ನಗರಕ್ಕೆ ಹೋದಾಗಲೂ ಅವರನ್ನು ಎದುರುಗೊಳ್ಳುತ್ತೇವೆ."

ಈ ಗುಂಪುಗಳು ಆಗಾಗ್ಗೆ ಕೃಷಿಭೂಮಿಯನ್ನು ಅತಿಕ್ರಮಿಸಿ, ಕ್ರೈಸ್ತ ಧರ್ಮದ ಭೂಮಾಲೀಕರನ್ನು ಬೆದರಿಸಿ ಪಲಾಯನ ಮಾಡುವಂತೆ ಒತ್ತಾಯಿಸುತ್ತವೆ. ಭಯೋತ್ಪಾದನೆ ಎಂದು ವರ್ಗೀಕರಿಸದಿದ್ದರೂ, ಈ ಸ್ಥಳಾಂತರವು ನಿಧಾನ ಮತ್ತು ಮೌನವಾದ ಕಿರುಕುಳಕ್ಕೆ ಕಾರಣವಾಗುತ್ತದೆ. "ಅವರು ಕಾಡುಗಳು, ಕೃಷಿಭೂಮಿಗಳನ್ನು ಪ್ರವೇಶಿಸಿ ಭೂಮಾಲೀಕರಿಗೆ, ಹೆಚ್ಚಾಗಿ ಕ್ರೈಸ್ತರಿಗೆ ಬೆದರಿಕೆ ಹಾಕುತ್ತವೆ, ಅವರು ಅಲ್ಲಿಂದ ಪಲಾಯನ ಮಾಡುವಂತೆ ಒತ್ತಾಯಿಸಲ್ಪಡುತ್ತಾರೆ" ಎಂದು ಅವರು ವಿವರಿಸುತ್ತಾರೆ. ಈ ಪ್ರದೇಶಗಳಲ್ಲ ಇಂತಹ ಕ್ರಿಯೆಗಳು ಭೀಕರವಾಗಿ ಹೆಚ್ಚುತ್ತಿದೆ.

ಅಪಾಯಗಳ ಹೊರತಾಗಿಯೂ, ಬಹಿರಂಗವಾಗಿ ಮಾತನಾಡುವುದು
ಅಂತಹ ಹಿಂಸಾಚಾರವನ್ನು ಸಾರ್ವಜನಿಕವಾಗಿ ಖಂಡಿಸುವುದು ತನ್ನದೇ ಆದ ಅಪಾಯಗಳನ್ನು ಹೊಂದಿರುತ್ತದೆ. ಹತ್ತಿರದ ಮಕುರ್ಡಿ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ, ಧರ್ಮಾಧ್ಯಕ್ಷ ವಿಲ್ಫ್ರೆಡ್ ಅನಾಗ್ಬೆ, CMF ರವರು, ಇತ್ತೀಚೆಗೆ ಆಫ್ರಿಕಾದ ಅಮೇರಿಕದ ವಿದೇಶಾಂಗ ವ್ಯವಹಾರಗಳ ಉಪಸಮಿತಿಯ ಮುಂದೆ ಸಾಕ್ಷ್ಯ ನೀಡಿದ ನಂತರ ನೈಜೀರಿಯಾಕ್ಕೆ ಹಿಂದಿರುಗಿದ ನಂತರ ಬಂಧನವನ್ನು ಎದುರಿಸಬಹುದು ಎಂದು ತಿಳಿಸಲಾಯಿತು. ತಮ್ಮ ಭಾಷಣದಲ್ಲಿ, ಧರ್ಮಾಧ್ಯಕ್ಷರು ನೈಜೀರಿಯಾವನ್ನು "ನಿರ್ದಿಷ್ಟ ಕಾಳಜಿಯ ದೇಶ" ಎಂದು ಹೆಸರಿಸುವಂತೆ ಅಮೇರಿಕ ಸರ್ಕಾರವನ್ನು ಒತ್ತಾಯಿಸಿದರು.

ಮಕುರ್ಡಿ ಧರ್ಮಕ್ಷೇತ್ರದ ಯಾಜಕರ ಸಂಘವು ಧರ್ಮಾಧ್ಯಕ್ಷರಾದ ಅನಗ್ಬೆರವರಿಗೆ ಬಲವಾದ ಬೆಂಬಲವನ್ನು ವ್ಯಕ್ತಪಡಿಸಿತು, ಯಾವುದೇ ರೀತಿಯ ಬೆದರಿಕೆಯನ್ನು ಖಂಡಿಸಿತು. ಅವರ ಹೇಳಿಕೆಯು ಅವರ ಸಾಕ್ಷ್ಯವನ್ನು "ನೈತಿಕ ಬಾಧ್ಯತೆ ಮಾತ್ರವಲ್ಲ, ಮಾನವ ಘನತೆಯ ರಕ್ಷಣೆಯಲ್ಲಿ ಬೇರೂರಿರುವ ಸುವಾರ್ತಾಬೋಧನಾ ಕಡ್ಡಾಯ" ದ ಕಾರ್ಯ ಎಂದು ಬಣ್ಣಿಸಿದೆ.

ಅಪಾಯದ ಹೊರತಾಗಿಯೂ, ಫಾರ್. ಮೆಮೆಫಿರವರು ದೃಢನಿಶ್ಚಯದಿಂದ ಇದ್ದಾರೆ. ವ್ಯಾಟಿಕನ್ ಸುದ್ಧಿ ಜೊತೆ ಮಾತನಾಡುತ್ತಾ, ನಗರದ ಹೊರಗೆ ಪ್ರಯಾಣಿಸುವಾಗ ಅಥವಾ ಪಾಲನಾಸೇವೆಯ ಸಮುದಾಯಗಳಲ್ಲಿ ಸೇವೆ ಸಲ್ಲಿಸುವಾಗ ಅವರು ಎದುರಿಸುವ ವೈಯಕ್ತಿಕ ಅಪಾಯಗಳನ್ನು ಅವರು ಒಪ್ಪಿಕೊಳ್ಳುತ್ತಾರೆ. ಆದರೂ ಅವರು SIST ನಲ್ಲಿರುವ ಸುಮಾರು 200 ವಿದ್ಯಾರ್ಥಿಗಳು, ಗುರುವಿದ್ಯಾಮಂದಿರ ವಿದ್ಯಾರ್ಥಿಗಳು ಮತ್ತು ಸಾಮಾನ್ಯ ಜನರು, ಸಾಕ್ಷಿಯಾಗಲು ಬದ್ಧರಾಗಿದ್ದಾರೆ.

"ನಮ್ಮನ್ನು ಬೆದರಿಸುವವರು, ನಮ್ಮನ್ನು ಭಯಭೀತಗೊಳಿಸುವವರು, ನಮ್ಮನ್ನು ದುರ್ಬಲರನ್ನಾಗಿ ಮಾಡುವವರು, ನಮ್ಮ ವಿಶ್ವಾಸವನ್ನು ಇನ್ನೂ ಬಲಪಡಿಸುವಂತಹ ಮೂಲಗಳಾಗಿದ್ದಾರೆ" ಎಂದು ಅವರು ಮುಕ್ತಾಯಗೊಳಿಸುತ್ತಾರೆ.
 

18 ಏಪ್ರಿಲ್ 2025, 16:01