ಮಯನ್ಮಾರ್ ನ ಭೂಕಂಪದ ಕುರಿತು ಮ್ಯಾಂಡಲೆ ಮಹಾಧರ್ಮಾಧ್ಯಕ್ಷರು: 'ನಮ್ಮ ಭರವಸೆಯನ್ನು ನಂದಿಸಲು ಸಾಧ್ಯವಿಲ್ಲ'
ವರದಿ: ವ್ಯಾಟಿಕನ್ ನ್ಯೂಸ್
ಮ್ಯಾಂಡಲೆ ಮಹಾಧರ್ಮಾಧ್ಯಕ್ಷರು ಮಯನ್ಮಾರ್ ನ ಎಲ್ಲಾ ವಿಶ್ವಾಸಿಗಳು ಈ ಭೂಕಂಪದ ಹೊಡೆತದಿಂದ ಹಲವಾರು ಜೀವನಗಳು ದ್ವಂಸಗೊಂಡಿದ್ದರೂ, ನಾವೆಲ್ಲರೂ ಪ್ರಾರ್ಥನೆಯಲ್ಲಿ ಒಟ್ಟುಗೂಡಿ ಮತ್ತು ಐಕ್ಯತೆಯಿಂದಿರಲು ಕರೆ ನೀಡಿದ್ದಾರೆ.
ನಾವು ಎಷ್ಟಾಗಿ ನಮ್ಮ ಜೀವನದಲ್ಲಿ ಕಷ್ಟವನ್ನು ಅನುಭವಿಸುತ್ತೇವೋ, ಅಷ್ಟಾಗಿ ದೇವರಲ್ಲಿ ವಿಶ್ವಾಸವಿಡುತ್ತೇವೆ. ಇಂದು ನಮ್ಮ ಭಕ್ತವಿಶ್ವಾಸಿಗಳು ದೇವರ ಕರುಣೆಯಲ್ಲಿ ಹಾಗೂ ಅವರ ಪ್ರೀತಿಯಲ್ಲಿ ನೆಲೆಯೂರಿದ್ದಾರೆ ಎಂಬುದಾಗಿ ಮಾರ್ಕೊ ತಿನ್ ವಿನ್ ರವರು ತಮ್ಮ ಸಂದರ್ಶನದಲ್ಲಿ ನುಡಿದಿದ್ದಾರೆ.
ಮಹಾಧರ್ಮಾಧ್ಯಕ್ಷ ತಿನ್ ವಿನ್ ಅವರ ಧರ್ಮಪ್ರಾಂತ್ಯವು ಅಧಿಕ ಭೂಕಂಪನದ ಪ್ರದೇಶದಲ್ಲಿದ್ದು ವಿದ್ಯುತ್ ಕಡಿತ ಮತ್ತು ಸಂವಹನ ತೊಂದರೆಗಳಿಂದ ಜನರ ಸ್ಥಿತಿಯು ಅಸ್ತವ್ಯಸ್ತಗೊಂಡಿದೆ. ಮಾರ್ಚ್ 28 ರವರೆಗೂ 3145 ಜನರು ತಮ್ಮ ಜೀವನವನ್ನು ಕಳೆದುಕೊಂಡಿದ್ದಾರೆ, 4,589 ಜನ ಗಾಯಗೊಂಡಿದ್ದಾರೆ ಮತ್ತು 221 ಜನ ಕಾಣೆಯಾಗಿದ್ದಾರೆ ಎಂಬುದಾಗಿ ದೇಶದ ಸೈನ್ಯ ಸರ್ಕಾರ ಪ್ರಕಟಿಸಿದೆ.
ಸ್ಥಳೀಯ ಧರ್ಮಕೇಂದ್ರಗಳು ಅಲ್ಲಿನ ಜನರನ್ನು ಸುರಕ್ಷಿತವಾದ ಸ್ಥಳಕ್ಕೆ ಕರೆದುಕೊಂಡು ಹೋಗುವುದರ ಮೂಲಕ ದೇವಾಲಯಗಳನ್ನು, ಆಶ್ರಮಗಳನ್ನು ಹಾಗೂ ಸೆಮಿನರಿಗಳನ್ನು ಆಶ್ರಯ ತಾಣಗಳನ್ನಾಗಿ ಮಾರ್ಪಡಿಸಿದ್ದಾರೆ. ಇದರೊಂದಿಗೆ ಯಾಜಕರು ಮತ್ತು ಹಲವಾರು ಕನ್ಯಾ ಭಗಿನಿಯರು ಊಟ, ನೀರು, ಔಷದ ಮತ್ತು ಇನ್ನಿತರ ವ್ಯವಸ್ಥೆಗಳನ್ನು ರೂಪಿಸುವುದರ ಮೂಲಕ ಜನರಿಗೆ ಬೇಕಾದಂತ ಸೌಕರ್ಯಗಳನ್ನು ಒದಗಿಸಿಕೊಡುತ್ತಿದ್ದಾರೆ.
ಧರ್ಮಕ್ಷೇತ್ರದ 40 ದೇವಾಲಯಗಳಲ್ಲಿ ಮೂರು ದೇವಾಲಯಗಳು ತೀವ್ರ ಹಾನಿ ಒಳಗಾಗಿದ್ದು ಮತ್ತಿತರ ದೇವಾಲಯಗಳು ಬಿರುಕು ಬಿಟ್ಟಿವೆ ಹಾಗೂ ಹಾನಿಗೆ ಒಳಗಾಗಿದೆ. ಈ 40 ದೇವಾಲಯಗಳ ಪೈಕಿ 25 ದೇವಾಲಯಗಳು ಆರಾಧನ ವಿಧಿಗಳನ್ನು ಸಲ್ಲಿಸಲು ಸುರಕ್ಷಿತವಲ್ಲ ಎಂಬುದಾಗಿ ತಿಳಿಸಿದ್ದಾರೆ. ಧರ್ಮಕ್ಷೇತ್ರದ ಗುರು ಮಂದಿರಗಳು ಸಹ ಹಾನಿಗೆ ಒಳಗಾಗಿದೆ.
ಇಂತಹ ಸಂದಿಗ್ಧ ಸ್ಥಿತಿಯಲ್ಲೂ ಸಹ ನಾವೆಲ್ಲರೂ ಒಟ್ಟಿಗೆ ಬಳಲುತ್ತೇವೆ, ಒಬ್ಬರನ್ನೊಬ್ಬರು ಸಮಾಧಾನ ಪಡಿಸುತ್ತೇವೆ ಮತ್ತು ಒಟ್ಟಾಗಿ ಪ್ರಾರ್ಥಿಸುತ್ತೇವೆ ಎಂಬುದಾಗಿ ಮಹಾಧರ್ಮಧ್ಯಕ್ಷ ತಿನ್ ವಿನ್ ರವರು ತಿಳಿಸಿದ್ದಾರೆ. ನಾನು ಜನರಿಗೆ ಪ್ರೋತ್ಸಾಹದ ಮಾತುಗಳನ್ನು ಹೇಳಿದ್ದೇನೆ: "ನಾವಿದ್ದೇವೆ. ಪ್ರಭು ನಮಗೆ ನುಡಿದ ಹಾಗೆ: ನಾನು ನಿಮ್ಮೊಂದಿಗಿರುತ್ತೇನೆ."