"ಹಳೆಯದನ್ನು ಮರೆತು, ಪ್ರಭುವಿನ ಕರುಣೆಯನ್ನು ಅಪ್ಪಿಕೊಂಡು, ಹೊಸ ಜೀವನದ ಕಡೆಗೆ ಹೆಜ್ಜೆ ಹಾಕೋಣ"
1. ಇಗೋ ನೂತನ ಕಾರ್ಯವನ್ನು ನಾನೆಸಗುವೆ- ಹೊಸ ದಾರಿಯನ್ನು ಸಿದ್ಧಪಡಿಸುವೆ ಎಂಬುದು ದೇವರ ವಾಗ್ದಾನ
ಇಂದಿನ ಮೊದಲನೆಯ ವಾಚನ ಪ್ರವಾದಿ ಯೆಶಾಯರು ಮಹತ್ತರವಾದ ದೇವರ ಅನುಗ್ರಹಕ್ಕೆ ಸಾಕ್ಷಿಗಳಾಗಲು ಕರೆಯನ್ನು ನೀಡುತ್ತಾರೆ. ಸರ್ವೇಶ್ವರ ಸ್ವಾಮಿ ನುಡಿಯುವಂತೆ ಹಳೆಯದನ್ನು ಮರೆತು ಹಳೆಯ ಪಾಪದಲ್ಲೇ ಮುಳುಗಿ ಹೋಗದೆ ದೇವರು ತೋರ್ಪಡಿಸುವಂತಹ ಹೊಸ ದಾರಿಯಲ್ಲಿ ಹೆಜ್ಜೆ ಹಾಕಲು ಕರೆ ನೀಡುತ್ತಿದ್ದಾರೆ. ಈ ವಾಗ್ದಾನವು ದೋಷ ಮತ್ತು ಅಪರಾಧ ಪ್ರಜ್ಞೆಯಿಂದ ಜೀವನವನ್ನು ಕಳೆದುಕೊಂಡಿರುವಂತಹ ಜನರಿಗೆ ಭರವಸೆಯ ಚಿಹ್ನೆಯಾಗಿ ಮಾರ್ಪಟ್ಟಿದೆ. ದೇವರು ಇಸ್ರೇಲ್ ಜನರಿಗೆ ಈಜಿಪ್ಪ್ ದೇಶದಿಂದ ತಪ್ಪಿಸಿಕೊಳ್ಳಲು ಆ ಸಮುದ್ರದ ನಡುವೆ ದಾರಿಯನ್ನು ಮಾಡಿಕೊಟ್ಟಂತೆ, ನಮ್ಮ ಪಾಪಮಯ ಜೀವನದ ಮೂಲಕ ಬರಡಾಗಿರುವ ಜೀವನಕ್ಕೆ ಜೀವನದಿಯಾಗಿ ದೇವರು ನಮಗೆ ಮತ್ತೊಂದು ಅವಕಾಶವನ್ನು ನೀಡುತ್ತಿದ್ದಾರೆ. ದೈವಶಾಸ್ತ್ರಜ್ಞರು ನುಡಿಯುವಂತೆ ತಪಸ್ಸು ಕಾಲವು ಪವಿತ್ರ ಕಾಲವಾಗಿದೆ. ಈ ಕಾಲದಲ್ಲಿ ದೇವರು ನಮ್ಮ ಕಿವಿಗಳಲ್ಲಿ ಈ ರೀತಿ ಪಿಸುಗೊಡುತ್ತಾರೆ, ಅದೇನೆಂದರೆ ನೀನು ಯಾರೆಂಬುದನ್ನು ನಿನ್ನ ಪಾಪಮಯ ಜೀವನವು ನಿರ್ಧರಿಸುವುದಲ್ಲ ಬದಲಾಗಿ ನಾನು ನಿನ್ನ ದೇವರು ನಿನ್ನ ಮೂಲಕ ಮಾಡುತ್ತಿರುವಂತಹ ಮಹತ್ಕಾರ್ಯಗಳು ನೀನು ಯಾರೆಂಬುದನ್ನ ನಿರ್ಧರಿಸುತ್ತದೆ. ಈ ವಾಗ್ದಾನಗಳನ್ನು ಮೀರಿಯೂ ನಾನಿನ್ನು ನನ್ನ ಪಾಪಮಯ ಜೀವನಕ್ಕೆ ಆ ಭೂತಕಾಲಕ್ಕೆ ನಾನು ದಾಸನಾಗಿದ್ದೇನೆಯೇ ?ಅಥವಾ ದೇವರ ಕೃಪೆಯಿಂದ ಅವುಗಳನ್ನು ಜಯಿಸಲು ಸಿದ್ಧನಿದ್ದೇನೆಯೇ ?
2. ಆ ಗುರಿಯನ್ನು ತಲುಪಲಿಂದೆ ನಾನು ಮುಂದೋಡುತಲಿದ್ದೇನೆ: ಪ್ರಭು ಕ್ರಿಸ್ತರ ಮೇಲೆ ದೃಷ್ಟಿಯಲ್ಲಿರಿಸಿ ಓಡಬೇಕಾಗಿದೆ
ಸಂತ ಪೌಲರು ನಮ್ಮೊಂದಿಗೆ ಒಬ್ಬ ಓಟಗಾರನಿಗೆ ತನ್ನ ಹೃದಯದಲ್ಲಿ ಇರಬೇಕಾದಂತಹ ಕಿಚ್ಚಿನ ಬಗ್ಗೆ ನಮ್ಮೆಲ್ಲರಿಗೂ ತಿಳಿಯಪಡಿಸುತ್ತಿದ್ದಾರೆ. ಅದೇನೆಂದರೆ ಆ ಓಟಗಾರನಿಗೆ ಜಯವು ಎಷ್ಟು ಮುಖ್ಯವೋ ಅದೇ ರೀತಿ ನಮಗಿರುವಂತಹ ಜಯ ಪ್ರಭು ಕ್ರಿಸ್ತರೇ ಆಗಿದ್ದಾರೆ ಆ ಜಯವನ್ನು ನಮ್ಮದಾಗಿಸಿಕೊಂಡಾಗ ನಾವು ಯಾವುದಕ್ಕಾಗಿಯೂ ಅಂಜಬೇಕಾಗಿಲ್ಲ. ಈ ತಪಸ್ಸುಕಾಲದಲ್ಲಿ ನಾನು ಯಾವುದಕ್ಕೋಸ್ಕರ ಶ್ರಮಿಸುತ್ತಿದ್ದೇನೆ ?
ಸಂತ ಪೌಲರ ಜೀವನದಲ್ಲೂ ಸಹ ಈ ಪ್ರಪಂಚಿಕ ಮೋಹಗಳಿಗೆ ಹಾಗೂ ಆಧ್ಯಾತ್ಮಿಕ ದರ್ಪಗಳಿಗೆ ಅಂಟಿಕೊಂಡಿದ್ದರು. ಆದರೆ ಪ್ರಭು ಕ್ರಿಸ್ತರನ್ನು ಅರಿತುಕೊಂಡಾಗ, ಅವರ ಪ್ರೀತಿಯನ್ನು ಸವಿದಾಗ ಎಲ್ಲವುಗಳನ್ನ ತ್ಯಜಿಸಿ ಪ್ರಭು ಕ್ರಿಸ್ತರ ಚಿತ್ತಕ್ಕೆ ಮಣಿದು ಆ ಪ್ರೀತಿಯ ಕಿಚ್ಚನ್ನು ತನ್ನ ಬರಹದ ಮೂಲಕ, ತನ್ನ ಜೀವನದ ಮೂಲಕ ಪ್ರತಿಯೊಬ್ಬರಿಗೂ ಸಾರುತ್ತಿದ್ದಾರೆ. ಸಂತ ಪೌಲರಂತೆ ನಾವು ಸಹ ಈ ವಿಶ್ವಾಸದ ಯಾತ್ರೆಯಲ್ಲಿ ನಮ್ಮನ್ನು ನಿಧಾನಗೊಳಿಸುವಂತಹ ಅವಮಾನ, ಅಪರಾಧದ ಪ್ರಜ್ಞೆ ಹಾಗೂ ಆಧ್ಯಾತ್ಮಿಕ ಅತೃಪ್ತಿ ಇವೆಲ್ಲವುಗಳನ್ನ ಬದಿಗೊತ್ತಿ ಪ್ರಭು ಕ್ರಿಸ್ತನ ಮೇಲೆ ನಮ್ಮ ದೃಷ್ಟಿಯನ್ನಿರಿಸಿ ಓಡಲು ನಮ್ಮ ಆತ್ಮಬಲವನ್ನು ಹೆಚ್ಚಿಸಿಕೊಳ್ಳಬೇಕಾಗಿದೆ.
3. ನಾನು ನಿನಗೆ ಶಿಕ್ಷೆ ವಿಧಿಸುವುದಿಲ್ಲ. ಕರುಣೆ ನಮ್ಮನ್ನು ರೂಪಾಂತರಗೊಳಿಸುತ್ತದೆಯೇ ಹೊರತು ಅವಮಾನಿಸುವುದಿಲ್ಲ
ಇಂದಿನ ಶುಭ ಸಂದೇಶದಲ್ಲಿ ನಾವು ಕಾಣುವಂತೆ ವ್ಯಭಿಚಾರದಲ್ಲಿ ಸಿಕ್ಕಿ ಬಿದ್ದ ಆ ಹೆಂಗಸನ್ನು ಎಳೆದುಕೊಂಡು ಬಂದು ಪ್ರಭು ಕ್ರಿಸ್ತರ ಮುಂದಿರಿಸಿ ಆಗಿಂದಾಗಲೇ ನ್ಯಾಯಕ್ಕೋಸ್ಕರ ಹೋರಾಡಿದಾಗ, ಪ್ರಭು ಕ್ರಿಸ್ತರು ನೆಲದ ಮೇಲೆ ಕುಳಿತು ಈ ರೀತಿ ಬರೆಯುತ್ತಾರೆ. 'ನಿಮ್ಮಲ್ಲಿ ಪಾಪ ಮಾಡಿದವನು ಯಾವನೋ ಅಂತವನು ಇವಳ ಮೇಲೆ ಮೊದಲನೆಯ ಕಲ್ಲು ಬೀರಲಿ', ಒಬ್ಬರಾದ ಮೇಲೆ ಇನ್ನೊಬ್ಬರು ತಮ್ಮ ಕಲ್ಲುಗಳನ್ನು ಅಲ್ಲಿಯೇ ಬಿಟ್ಟು ಅಲ್ಲಿಂದ ತೆರಳುತ್ತಾರೆ. ಆ ಸ್ಥಳದಲ್ಲಿದ್ದದ್ದು ಪ್ರಭು ಕ್ರಿಸ್ತರು ಮಾತ್ರ. ಯಾವ ಪಾಪ ಕಳಂಕವು ಇಲ್ಲದಂತಹ ಪ್ರಭು ಕ್ರಿಸ್ತರು ಆಕೆಯನ್ನು ದಂಡಿಸುವುದಿಲ್ಲ, ಖಂಡಿಸುವುದಿಲ್ಲ ಬದಲಾಗಿ ರೂಪಾಂತರಗೊಳಿಸುತ್ತಾರೆ. 'ಹೋಗು ಇನ್ನು ಮೇಲೆ ಪಾಪ ಮಾಡಬೇಡ' ಎಂಬ ವಾಕ್ಯದ ಮೂಲಕ ಆಕೆಯನ್ನ ಕಳುಹಿಸಿ ಕೊಡುತ್ತಾ ಆಶೀರ್ವದಿಸುತ್ತಾರೆ. ನಮ್ಮ ತಪಸ್ಸುಕಾಲದ ಆಚರಣೆಗಳ ತಿರುಳು ಇದೆ ಆಗಿದೆ. ನಾವು ಸಹ ನಮ್ಮ ಜೀವನದಲ್ಲಿ ಪಾಪಿಗಳಾಗಿರಬಹುದು, ಅಪಾತ್ರರಾಗಿರಬಹುದು ಆದರೆ ಪ್ರಭು ನಮ್ಮನ್ನು ಅವಮಾನಿಸುವುದಿಲ್ಲ ಬದಲಾಗಿ ನಮ್ಮ ಪಾಪಗಳನ್ನು ಕ್ಷಮಿಸಿ ನಮ್ಮನ್ನು ತಲೆಯೆತ್ತಿ, ಆ ಪ್ರಭುವಿನ ಕಣ್ಣಿನಲ್ಲಿ ಕಣ್ಣಿಟ್ಟು ವಿಜಯದೆಡೆಗೆ ದೃಷ್ಟಿಸಿ ನೋಡುತ್ತಾ ಮತ್ತೊಂದು ಅವಕಾಶದೊಂದಿಗೆ ನಮ್ಮನ್ನು ಆಶೀರ್ವದಿಸಿ ಮುನ್ನಡೆಸುತ್ತಾರೆ.