ಪವಿತ್ರ ಗುರುವಾರ: ಪ್ರೀತಿಯಿಂದ ಹುಟ್ಟಿದ ಭರವಸೆಯ ರಾತ್ರಿ
1. ನೀವು ಸಹ ಒಬ್ಬರನ್ನೊಬ್ಬರು ಪ್ರೀತಿಸಿ
ಆಂಗ್ಲ ಭಾಷೆಯಲ್ಲಿ ಪವಿತ್ರ ಗುರುವಾರವನ್ನು ಮೌನ್‌ಡಿ ತರ್‌ಸ್‌ಡೆ (Maunday Thursday) ಎನ್ನುತ್ತೆವೆ. ಈ ಪದವು ಲಾತಿನ್ ಭಾಷೆಯ mandatum novum do vobis ut diligatis invicem sicut dilexi vo ಎಂಬ ವಾಕ್ಯದ ಮೊದಲನೆಯ ಪದದಿಂದ maundy ಎಂಬ ಪದವನ್ನು ಆರಿಸಲಾಗಿದೆ. Mandatum novum ಎಂದರೆ ಒಂದು ಹೊಸ ಆಜ್ಞೆ ಎಂದರ್ಥ. ಪ್ರಭು ಯೇಸು ಕ್ರಿಸ್ತರು ತಮ್ಮ ಶಿಷ್ಯರಿಗೆ “ನಾನು ನಿಮ್ಮನ್ನು ಪ್ರೀತಿಸಿದಂತೆಯೇ ನೀವು ಸಹ ಒಬ್ಬರನ್ನೊಬ್ಬರು ಪ್ರೀತಿಸಬೇಕು” (ಯೋವಾ 15:12) ಎಂದು ಹೊಸ ಆಜ್ಞೆ ನೀಡಿದ ದಿನವಾಗಿದೆ. ಎಲ್ಲಾ ಆಜ್ಞೆಗಳಿಗಿಂತ ಶ್ರೇಷ್ಟ ಆಜ್ಞೆ ಈ ಆಜ್ಞೆಯಾಗಿದೆ. ಈ ದಿನವನ್ನು ನಾವು ಪ್ರೀತಿಯ ದಿನವೆಂದು ಸಹ ನಾವು ಕರೆಯಬಹುದು. ಪ್ರೀತಿ ಎಂಬುದು ಹರಿಯುವ ನದಿಯಂತೆ ಇರಬೇಕು, ಆ ಪ್ರೀತಿಯು ಎಂದಿಗೂ ನಮ್ಮಲ್ಲೇ ಉಳಿಸಿಕೊಳ್ಳದೆ ಅದು ಹರಿಯುವ ನೀರಾಗಿ ನಮ್ಮ ನೆರೆಹೊರೆಯವರನ್ನು ಸೇರಬೇಕಾಗಿದೆ.
2. ಪ್ರಥಮ ಬಲಿಪೂಜೆ/ ಪರಮ ಪ್ರಸಾದ ಸಂಸ್ಕಾರ ಸ್ಥಾಪಿಸಿದ ದಿನ
ಯೆಹೂದ್ಯರ ಪಾಸ್ಕ ಹಬ್ಬವನ್ನು ಹೊಸ ಒಡಂಬಡಿಕೆಯ ಪಾಸ್ಕ ಹಬ್ಬವಾಗಿ ಪ್ರಭು ಯೇಸು ಕ್ರಿಸ್ತರು ಬದಲಾಯಿಸಿದ ದಿನವಾಗಿದೆ. ಯೆಹೂದ್ಯರ ಹುಳಿ ಹಿಟ್ಟಿನ ಹಬ್ಬ ಸುಮಾರು 8 ದಿನಗಳ ಕಾಲ ಆಚರಿಸುತ್ತಿದ್ದರು. ಮೊದಲನೆಯ ದಿನ ಮನೆಯ ಮುಖ್ಯಸ್ಥ (Pater familia) ಮನೆಯಲ್ಲಿರುವ ಎಲ್ಲಾ ಹುಳಿ ರೊಟ್ಟಿಯನ್ನು ಮನೆಯಿಂದ ಹೊರ ಹಾಕುತ್ತಿದ್ದರು ಅಥವಾ ಹಬ್ಬದ ಮುಂಚಿತ ದಿನವೆ ಎಲ್ಲಾ ಹುಳಿ ರೊಟ್ಟಿಯನ್ನು ತಿಂದು ಮುಗಿಸುತ್ತಿದ್ದರು. ದೋಷವಿಲ್ಲದ ಕುರಿಮರಿಯನ್ನಾಗಲಿ, ಆಡು ಮರಿಯನ್ನಾಗಲಿ ಬಲಿ ನೀಡಿ ಅದರ ರಕ್ತವನ್ನು ಮನೆಯ ಬಾಗಿಲಿಗೆ ಹಾಕಬೇಕಾಗಿತ್ತು. ಕುಟುಂಬ ಚಿಕ್ಕದಾಗಿದ್ದರೆ ಎರಡು ಮೂರು ಕುಟುಂಬ ಹಂಚಿ ತಿನ್ನಬಹುದಿತ್ತು. ಆ ಬಲಿ ನೀಡಿದ ಕುರಿಮರಿಯ ಮಾಂಸವನ್ನು ಚೆನ್ನಾಗಿ ಸುಡುತ್ತಿದ್ದರು ಹಾಗೂ ಅದರ ಜೊತೆ 3 ಲೋಟಗಳಷ್ಟು ದ್ರಾಕ್ಷರಸವನ್ನು ಒಬ್ಬೊಬ್ಬರಿಗೂ ಇಡುತ್ತಿದ್ದರು. ಇತ್ತ ಮಾಂಸ, ರೊಟ್ಟಿ, ದ್ರಾಕ್ಷರಸ ಹಾಗೂ ಕಹಿಯಾದ ಬೇವಿನ ರಸವನ್ನು ಅರೆದು ಇಡುತ್ತಿದ್ದರು. ಈ ಸಮಾರಂಭವು ಮೂರು ಹಂತದಲ್ಲಿ ನಡೆಯುತಿತ್ತು.
• ಮೊದಲನೆಯದಾಗಿ ಈ ಭೋಜನ ಆರಂಭಗೊಳ್ಳುವಾಗ ಕೀರ್ತನೆ 113-114 ನ್ನು ಹಾಡುತ್ತ ಮೊದಲನೆಯ ಲೋಟದ ದ್ರಾಕ್ಷಾರಸವನ್ನು ಕುಡಿಯುತ್ತಾರೆ ಹಾಗೂ ಅದರ ಜೊತೆ ಕಹಿ ಬೇವಿನ ರಸವನ್ನು ಸೇವಿಸುತ್ತಾರೆ. ಇದು ಇಸ್ರಾಯೇಲ್ ಜನರು ಈಜಿಪ್ಟಿನಲ್ಲಿ ಪಟ್ಟ ಕಷ್ಟವನ್ನು ಸೂಚಿಸುತ್ತದೆ.
• ಎರಡನೆಯದಾಗಿ ಕೀರ್ತನೆ 115-116ನ್ನು ಹಾಡುತ್ತ, ಎರಡನೆಯ ಲೋಟದ ದ್ರಾಕ್ಷರಸವನ್ನು ಸೇವಿಸುತ್ತಾರೆ. ಈ ಸಮಯದಲ್ಲಿ ಮನೆಯ ಮುಖ್ಯಸ್ಥ ದೇವರು ಯಾವ ರೀತಿ ಫರೋಹನ ಅಧಿಕಾರದಿಂದ ಇಸ್ರಯೇಲ್ ಜನರನ್ನು ಹೊರತಂದರು ಎಂದು ವಿವರಿಸಿ ತನ್ನ ಮಕ್ಕಳಿಗೆ ಹೇಳುತ್ತಾನೆ. ಈ ಸಮಯದಲ್ಲಿ ಸುಟ್ಟ ಕುರಿಯ ಮಾಂಸವನ್ನು ತಿನ್ನುತ್ತಾರೆ.
• ಮೂರನೆಯ ಹಂತದಲ್ಲಿ ಕೀರ್ತನೆ 117-118ನ್ನು ಹಾಡಿ ಮೂರನೆಯ ಲೋಟದ ದ್ರಾಕ್ಷರಸವನ್ನು ಸೇವಿಸುತ್ತಾರೆ. ನಂತರ ಹುಳಿಯಿಲ್ಲದ ರೊಟ್ಟಿಯನ್ನು ತಿಂದು, ದೇವರು ತಮ್ಮನ್ನು ಯಾವ ರೀತಿ ರಕ್ಷಿಸಿದರು ಎಂದು ನೆನೆಸಿ ಈ ಹಬ್ಬವನ್ನು ಆಚರಿಸುತ್ತಾರೆ.
ಆದರೆ ಹೊಸ ಒಡಂಬಡಿಕೆಯಲ್ಲಿ ಪ್ರಭು ಯೇಸುವೇ ಸ್ವತಃ ಕುರಿಮರಿಯಾಗಿ ಬಲಿಯಾಗಿ ಅವರ ನೆನಪಿಗೆ ರೊಟ್ಟಿ ಮತ್ತು ದ್ರಾಕ್ಷಾರಸವನ್ನು ತಮ್ಮ ಶರೀರ ಮತ್ತು ರಕ್ತವಾಗಿ ನಮಗೆ ನೀಡುತ್ತಾರೆ. ಯಾವ ರೀತಿ ಯೆಹೂದ್ಯರೂ ಪಾಸ್ಕ ಹಬ್ಬದ ಸಮಯದಲ್ಲಿ ದೇವರು ತಮ್ಮನ್ನು ರಕ್ಷಿಸಿದರು ಎಂದು ಜ್ಞಾಪಿಸಿಕೊಳ್ಳುತ್ತಾರೋ ಅದೇ ರೀತಿ ನಾವು ಸಹ ಪ್ರತಿ ದಿನ ಬಲಿಪೂಜೆಯಲ್ಲಿ ಕ್ರಿಸ್ತನ ತ್ಯಾಗ ಮತ್ತು ಪ್ರೀತಿಯನ್ನು ನೆನೆಯಬೇಕಾಗಿದೆ. ಒಬ್ಬ ಗುರು ತಾನು ಸಾಯುವಾಗ ತನ್ನ ನೆನೆಪಿಗೆಂದು 7 ಸುತ್ತಿನ ಮಲ್ಲಿಗೆ ಹೂವನ್ನ ತನ್ನ ಆಪ್ತ ಶಿಷ್ಯನಿಗೆ ಕೊಡುತ್ತಾನೆ. ಸ್ವಲ್ಪ ಸಮಯದ ನಂತರ ಆ ಗುರುವು ಸಾಯುತ್ತಾನೆ. ಸ್ವಲ್ಪ ದಿನಗಳ ನಂತರ ಆ ಮಲ್ಲಿಗೆ ಹೂವು ಬಾಡಿ ಹೋಗುತ್ತದೆ. ಅದರೊಂದಿಗೆ ಗುರುವಿನ ನೆನಪುಗಳು ಸಹ ಮಾಸಿ ಹೋಗುತ್ತದೆ. ಆದರೆ ಪ್ರಭುಕ್ರಿಸ್ತರು ನೀಡಿದಂತಹ ಸ್ಮರಣಿಕೆ ಪವಿತ್ರ ಪರಮ ಪ್ರಸಾದವಾಗಿದೆ. ಜೀವಂತ ಪರಮ ಪ್ರಸಾದದ ಪ್ರಸನ್ನತೆಯೊಂದಿಗೆ ಅವರ ನೆನಪು ಇನ್ನೂ ಹಚ್ಚ ಹಸಿರಾಗಿ ಉಳಿದಿದೆ ಮತ್ತು ಅವರು ನಮ್ಮಲ್ಲಿ ಜೀವಂತವಾಗಿ ನೆಲೆಸಿದ್ದಾರೆ. ಈ ಅವಿಸ್ಮರಣೀಯ ಶ್ರೇಷ್ಠ ಸಂಸ್ಕಾರವನ್ನು ಸ್ಥಾಪಿಸಿದ ಸುದಿನ ಇದಾಗಿದೆ.
3. ಗುರು ದ್ರೋಹ
ಇತಿಹಾಸದಲ್ಲಿ ನಂಬಿಸಿ ದ್ರೋಹ ಮಾಡಿದ ವ್ಯಕ್ತಿ ಅಥವಾ ಗುರು ದ್ರೋಹಿ ಎಂದು ನಾವು ನೆನೆಪಿಗೆ ತಂದುಕೊಂಡರೆ ಮೊದಲು ನಮಗೆ ನೆನೆಪಿಗೆ ಬರುವ ವ್ಯಕ್ತಿಯೆಂದರೆ ಅದು ಯೂದ ಇಸ್ಕಾರಿಯೋತ. ತಾನು ಪ್ರೀತಿಯಿಂದ ಆಯ್ಕೆಮಾಡಿದ ಶಿಷ್ಯ ಕೇವಲ ಬಿಡಿಕಾಸಿಗೊಸ್ಕರ ತನ್ನ ಗುರುವನ್ನೇ ಹಿಡಿದುಕೊಟ್ಟ ದಿನವಾಗಿದೆ. ಈ ಪವಿತ್ರ ಗುರುವಾರ. ದೇವರ ಸ್ವರ್ಗ ಸಾಮ್ರಾಜ್ಯವನ್ನು ಸಾರಲೆಂದು ತಮ್ಮ ಶಿಷ್ಯರಾಗಿ ಪ್ರಭು ಯೇಸು ಯೂದನನ್ನು ಆಯ್ಕೆ ಮಾಡಿಕೊಂಡರು. ಆದರೆ ಸೈತಾನನು ಆತನ ಹೃದಯವನ್ನು ಹೊಕ್ಕಿ ಪ್ರಭುವಿನ ಕೆನ್ನೆಗೆ ಮುತ್ತಿಡುವುದರ ಮೂಲಕ ಇಸ್ಕಾರಿಯೋತಿನ ಯೂದನು ಗುರುದ್ರೋಹ ಮಾಡುತ್ತಾನೆ.
4. ಪಾದಸ್ನಾನ
ಅನಾದಿಕಾಲದಿಂದಲೂ ಪಾದತೊಳೆದು ಮನೆಗೆ ಬರುವ ಅತಿಥಿಗಳನ್ನು ಸ್ವಾಗತಿಸುವವಾಡಿಕೆಯಿದೆ. ಅತಿ ಮುಖ್ಯವಾಗಿ ಭಾರತದ ಬುಡಕಟ್ಟು ಜನಾಂಗದವರು ಇಂದಿಗೂ ಸಹ ಇದೇ ಪದ್ದತಿಯನ್ನು ರೂಡಿಮಾಡಿಕೊಂಡೇ ಬಂದಿದ್ದಾರೆ. ಸಾಮಾನ್ಯವಾಗಿ ಗುರುಗಳ ಪಾದವನ್ನು ಶಿಷ್ಯರು ತೊಳೆದು ಗುರುವಿನ ಸೇವೆ ಮಾಡುವುದನ್ನು ನಾವು ನೋಡುತ್ತೇವೆ. ಆದರೆ ಪ್ರಭು ಯೇಸುಕ್ರಿಸ್ತರು ತಮ್ಮ ಶಿಷ್ಯರಿಗೆ ಪಾದಸ್ನಾನ ಮಾಡುವುದರ ಮೂಲಕ ಎಲ್ಲವನ್ನು ಬುಡಮೇಲು ಮಾಡುತ್ತಾರೆ. ಪ್ರಭು ಯೇಸುಕ್ರಿಸ್ತರು ದೇವರ ಮಗನಾಗಿದ್ದರು ಸಹ ಸೇವಾಕಾರ್ಯದಲ್ಲಿ ತಮ್ಮನ್ನೇ ತೊಡಗಿಸಿಕೊಂಡು ತಾನು ಸೇವೆ ಮಾಡಿಸಿಕೊಳ್ಳಲು ಬರಲಿಲ್ಲ ಬದಲಿಗೆ ಸೇವೆ ಮಾಡಲು ಬಂದಿರುವೆ ಎಂದು ವಿನಯತೆಯನ್ನು ತೋರ್ಪಡಿಸುತ್ತಾರೆ.
5. ಗುರುದೀಕ್ಷೆ ಸಂಸ್ಕಾರ ಸ್ಥಾಪಿತ ದಿನ
ಒರ್ವ ಗುರು ಜನರಿಂದ ಆಯ್ಕೆಯಾದವನು, ಜನರಿಗಾಗಿ ಮತ್ತು ಜನರಿಗೊಸ್ಕರ ತನ್ನ ಸಂಪೂರ್ಣ ಜೀವನವನ್ನು ಮುಡಿಪಾಗಿಡುವವನು. ಹಳೆಯ ಒಡಂಬಡಿಕೆಯಲ್ಲಿ ಆರೋನನ ಕುಟುಂಬದಿAದ ಆರಿಸಿ ಅಭಿಷೇಕಿಸಿ ದೇವರ ಸೇವಕನಾಗಿ ಬಾಳುತಿದ್ದರು. ಅದೇ ಕಾರ್ಯವನ್ನು ನಿರ್ವಹಿಸುತ್ತಿರುವವನು ಒರ್ವ ಗುರುವಾಗಿದ್ದಾನೆ. ಪ್ರತಿದಿನ ಬಲಿಪೂಜೆಯನ್ನು ಅರ್ಪಿಸಿ ಕ್ರಿಸ್ತನ ಪಾಡು, ಮರಣ ಮತ್ತು ಪುನರುತ್ಥಾನದಲ್ಲಿ ಭಾಗಿಯಾಗಲು ಸಹಾಯಮಾಡುವವನು ಗುರುವಾಗಿದ್ದಾರೆ. ಈ ಒಂದು ಪವಿತ್ರ ಸಂಸ್ಕಾರವನ್ನು ಸ್ಥಾಪಿಸಿದ ದಿನ ಈ ಮಹತ್ತರ ದಿನವಾಗಿದೆ.