MAP

-

ಶಿಲುಬೆ ಹತಾಶೆಯ ಸಂಕೇತವಲ್ಲ, ಭರವಸೆಯ ಸಂಕೇತ

ಕ್ರಿಸ್ತಯೇಸು ಶಿಲುಬೆಯ ಮೇಲೆ ಮರಣ ಹೊಂದಿದ ಈ ದಿನ ನಮ್ಮೆಲ್ಲರ ಜನನ ದಿನ, ಹೀಗಾಗಿ ನಮಗಿದು ಶುಭದಿನ. ಶಿಲುಬೆ ಅವಮಾನ ಸಂಕೇತವಲ್ಲ ಅಭಿಮಾನದ ಸಂಕೇತ, ಶಿಲುಬೆ ಸೋಲಿನ ಚಿಹ್ನೆಯಲ್ಲ, ವಿಜಯದ ಚಿಹ್ನೆ. ಶಿಲುಬೆ ಹತಾಶೆಯ ಕುರಹಲ್ಲ ಚೈತನ್ಯದ ಸಾಧನ. ಈ ಶುಭಶುಕ್ರವಾರವನ್ನು ಸಂಭ್ರಮಿಸೋಣ ಮತ್ತು ಶಿಲುಬೆಯ ಮೇಲೆ ನಮ್ಮ ಭರವಸೆಯನ್ನಿಡೋಣ.

ಪಾಸ್ಕ ತ್ರಿದಿನಗಳು ಪವಿತ್ರ ಗುರುವಾರದಿಂದ ಆರಂಭವಾಗಿ ಪಾಸ್ಕ ಹಬ್ಬದ ದಿನಮುಕ್ತಾಯಗೊಳ್ಳುತ್ತದೆ. ನಮ್ಮಲ್ಲಿ ಒಂದು ಪ್ರಶ್ನೆ ಮೂಡಬಹುದು ಗುರುವಾರದಿಂದ ಭಾನುವಾರ ನಾಲ್ಕುದಿನಗಳಲ್ಲವೆ? ಎಂದು, ಆದರೆ ಈ ಪಾಸ್ಕ ತ್ರಿದಿನಗಳ ಮೊದಲನೆಯ ದಿನ ಪವಿತ್ರ ಗುರುವಾರದ ಸಂಜೆ ಪ್ರಭುವಿನ ಕೊನೆಯ ಭೋಜನದ ಪೂಜೆಯಿಂದ ಪ್ರಾರಂಭಗೊಂಡು, ಶುಭ ಶುಕ್ರವಾರಕ್ಕೆ ಮುಂದುವರೆಯುತ್ತದೆ. ಎರಡನೆಯ ದಿನ ಪವಿತ್ರ ಶನಿವಾರ ಮೌನ ಏಕಾಂತದ ದಿನವಾಗಿರುತ್ತದೆ ಏಕೆಂದರೆ ಕ್ರಿಸ್ತನ ಪಾಡು ಮತ್ತು ಮರಣದ ಶೋಕದಲ್ಲಿ ನಿರತರಾಗಿರುತ್ತೇವೆ ಶುಭ ಶುಕ್ರವಾರ ಅಥವಾ ಪವಿತ್ರ ಶುಕ್ರವಾರ ಎಂಬ ಪದವನ್ನು ಕೇಳಿದರೆ ಸಾಕು ನಮ್ಮೆಲ್ಲರಿಗೂ ಮನಸಿನಲ್ಲಿ ಏನೋ ಒಂದು ರೀತಿ ಶೋಕ ಮನೋಭಾವ ಮೂಡುತ್ತದೆ. ಕ್ರಿಸ್ಮಸ್ ಎಂದರೆ ಹೇಗೆ ಕ್ರಿಸ್ತನ ಜನನದ ಸಂಭ್ರಮ, ಸಂತಸ ಆಚರಣೆಯೋ ಅದೇ ರೀತಿ ಶುಭ ಶುಕ್ರವಾರ ಎಂದರೆ ಕ್ರಿಸ್ತನ ಪಾಡು ಮತ್ತು ಮರಣದ ದಿನವಾಗಿದೆ.

ಸಾವು ಎಂದ ತಕ್ಷಣ ನಮ್ಮಲ್ಲಿ ಅನೇಕರಿಗೆ ಆತಂಕ ಹಾಗೂ ನೋವು ಉಂಟಾಗುತ್ತದೆ. ಅದರಲ್ಲೂ ನಮಗೆ ಆಪ್ತರಾಗಿರುವವರು, ಕುಟುಂಬಸ್ಥರು ಇಹಲೋಕವನ್ನು ತ್ಯಜಿಸಿ ಪರಲೋಕದ ಯಾತ್ರೆಯನ್ನು ನಡೆಸಿದರೆ ಆಗುವ ನೋವು ಯಾರಿಂದಲೂ ಸಮಾಧಾನ ಮಾಡಲು ಸಾದ್ಯವಿಲ್ಲ. ಅವರೊಂದಿಗೆ ಕಳೆದ ಮಧುರ ಕ್ಷಣಗಳು ಮರಳಿ ಯಾವಾಗಲೂ ಮರುಕಳಿಸುತ್ತದೆ. ನಮ್ಮನ್ನು ಅತೀವವಾಗಿ ಪ್ರೀತಿಸಿ, ತಮ್ಮ ಪ್ರಾಣವನ್ನು ನೀಡಿದವರು ನಮ್ಮ ಪ್ರಭು ಯೇಸುಕ್ರಿಸ್ತರಾಗಿದ್ದಾರೆ. ಪ್ರಪಂಚದ ಎಲ್ಲೆಡೆ ಈ ಪವಿತ್ರ ದಿನದಂದು ಪ್ರತಿಯೋಬ್ಬ ಕ್ರೈಸ್ತನು ನಮ್ಮನ್ನು ಪ್ರೀತಿಸಿ ಪ್ರಾಣತ್ಯಾಗಮಾಡಿದ ಕ್ರಿಸ್ತನ ಪಾಡು ಮತ್ತು ಮರಣದ ದ್ಯಾನದಲ್ಲಿ ನಿರತರಿರುತ್ತಾರೆ.

ಶುಭ ಶುಕ್ರವಾರವನ್ನು ಪಾಸ್ಕ ಜಾಗರಣೆ ಹಾಗೂ ಪ್ರಭುವಿನ ಪುನರುತ್ಥಾನದೊಂದಿಗೆ ಆಚರಿಸುವುದು ಮೊದಲಿನಿಂದಲೇ ರೂಡಿಯಿದೆ. ಅಂದು ಯಾವುದೆ ಬಲಿಪೂಜೆ ಇರುವುದಿಲ್ಲ ಹಿಂದಿನ ದಿನ ಪ್ರತ್ಯೇಕವಾಗಿಟ್ಟಿದ್ದ ಪರಮಪ್ರಸಾದವನ್ನು ಸ್ವಿಕಾರಮಾಡಲಾಗುವುದು, ಯೇಸುವಿನ ಪೂಜ್ಯ ವೃತ್ತಾಂತದ ವಾಚನವನ್ನು ಆಲಿಸಲಾಗುವುದು, ಶಿಲುಬೆಯ ಸನ್ಮಾನ ಮಾಡಲಾಗುವುದು. ಕೆಲವೊಂದು ಧರ್ಮಕೇಂದ್ರಗಲ್ಲಿ ಮಧ್ಯಾಹ್ನ 12 ಗಂಟೆಗೆ ಶಿಲುಬೆ ಹಾದಿಯಿಂದ ಆರಂಭಗೊಂಡ 3 ಗಂಟೆಯ ನಂತರ ಸಾಂಗ್ಯಗಳು ಆರಂಭಗೊಳ್ಳುತ್ತದೆ. ಬಲಿಪೀಠವು ಯಾವುದೇ ಪೂಜಾವಸ್ತ್ರವಿಲ್ಲದೆ ಇರುತ್ತದೆ ಹಾಗೂ ಎಲ್ಲಾ ಸ್ವರೂಪಗಳನ್ನು ಬಟ್ಟೆಗಳಿಂದ ಮುಚ್ಚಲಾಗಿರುತ್ತದೆ. ಸಾಂಗ್ಯಗಳು ಮುಗಿದ ನಂತರ ಸ್ಮಶಾನದ ಮೌನದಿಂದ ಕ್ರಿಸ್ತನ ಮರಣದ ಶೋಕದಲ್ಲಿ ಸರ್ವರು ಮನೆಗೆ ತೆರಳುತ್ತಾರೆ. ಅಂದು ತಾಯಿ ಧರ್ಮಸಭೆಯು ನಮ್ಮ ಪಾಪಗಳಿಗೆ ಪಶ್ಚಾತ್ತಾಪ ಪಡಲು ಕರೆನೀಡುತ್ತಿದೆ. ಮನುಕುಲದ ಸ್ವಾರ್ಥಕ್ಕಾಗಿ ಅಮಾಯಕ ಕ್ರಿಸ್ತನ ಮರಣಕ್ಕೆ ಕಾರಣವಾದೆವು. ಆ ಕ್ರಿಸ್ತನ ತ್ಯಾಗದ ಫಲವಾಗಿ ಆತನ ಹಾದಿಯಲ್ಲಿ ನಡೆದು ಬಾಳಲು ನಮಗೆ ಕರೆ ನೀಡುತ್ತದೆ.

ಕ್ರಿಸ್ತಯೇಸು ಶಿಲುಬೆಯ ಮೇಲೆ ಮರಣ ಹೊಂದಿದ ಈ ದಿನ ನಮ್ಮೆಲ್ಲರ ಜನನ ದಿನ, ಹೀಗಾಗಿ ನಮಗಿದು ಶುಭದಿನ. ಶಿಲುಬೆ ಅವಮಾನ ಸಂಕೇತವಲ್ಲ ಅಭಿಮಾನದ ಸಂಕೇತ, ಶಿಲುಬೆ ಸೋಲಿನ ಚಿಹ್ನೆಯಲ್ಲ, ವಿಜಯದ ಚಿಹ್ನೆ. ಶಿಲುಬೆ ಹತಾಶೆಯ ಕುರಹಲ್ಲ ಚೈತನ್ಯದ ಸಾಧನ. ಈ ಶುಭಶುಕ್ರವಾರವನ್ನು ಸಂಭ್ರಮಿಸೋಣ ಮತ್ತು ಶಿಲುಬೆಯ ಮೇಲೆ ನಮ್ಮ ಭರವಸೆಯನ್ನಿಡೋಣ.

16 ಏಪ್ರಿಲ್ 2025, 11:20