ಸಿರಿಯಾ: 'ಇದ್ದ ಕೆಲವು ನಿಶ್ಚಿತಗಳು ಈಗ ಹೋಗಿವೆ'
ಕೀಲ್ಸ್ ಗುಸ್ಸಿ
ಸಿರಿಯಾದಲ್ಲಿ ಕಳೆದ ಕೆಲವು ವಾರಗಳಲ್ಲಿ ಕೊಲೆಗಳು, ಅಪಹರಣಗಳು, ಕಳ್ಳತನ, ಕಿರುಕುಳ ಮತ್ತು ಕೊಲೆಗಳು ಹೆಚ್ಚಿವೆ. ಡಿಸೆಂಬರ್ ತಿಂಗಳ ಆರಂಭದಲ್ಲಿ ಬಶರ್ ಅಲ್-ಅಸ್ಸಾದ್ ರವರ ಆಡಳಿತ ಪತನವಾಯಿತು ಮತ್ತು ಮೂರು ತಿಂಗಳ ನಂತರ ಈ ಪ್ರದೇಶದಲ್ಲಿ ಮತ್ತೊಮ್ಮೆ ಅಶಾಂತಿ ಭುಗಿಲೆದ್ದಿದೆ.
ಅನಿಶ್ಚಿತ ಅವಧಿ
ಸಿರಿಯಾದ ಮಾನವ ಹಕ್ಕುಗಳ ವೀಕ್ಷಣಾಲಯದ ಪ್ರಕಾರ, ಅಸ್ಸಾದ್ ರವರು ಪದಚ್ಯುತಗೊಂಡ 100 ದಿನಗಳಲ್ಲಿ ಅಂದಾಜು 4,700 ನಾಗರಿಕರು ಕೊಲ್ಲಲ್ಪಟ್ಟಿದ್ದಾರೆ. ಹಲವು ತಿಂಗಳುಗಳ ಶಾಂತಿಯುತ ಪರಿಸ್ಥಿತಿಯ ನಂತರ, ಅಲ್-ಅಸ್ಸಾದ್ ಪರ ಬೆಂಬಲಿಗರು ಭದ್ರತಾ ಗಸ್ತು ಪಡೆಯ ಮೇಲೆ ಮಾರಕ ಹೊಂಚುದಾಳಿ ನಡೆಸಿದ ನಂತರ ಸಂಘರ್ಷ ಮತ್ತೆ ಭುಗಿಲೆದ್ದಿದೆ. ಪ್ರತೀಕಾರವಾಗಿ, ಸುನ್ನಿ ಇಸ್ಲಾಂ ಧರ್ಮದ ನೇತೃತ್ವದ ಸರ್ಕಾರವನ್ನು ಬೆಂಬಲಿಸುವ ಬಂದೂಕುಧಾರಿಗಳು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಅಲೆಪ್ಪೊದ ಲತೀನ್ ಧರ್ಮಕೇಂದ್ರದ ಧರ್ಮಗುರು ಮತ್ತು ಅಲೆಪ್ಪೊದಲ್ಲಿನ ಲತೀನ್‌ಗಳ ಪ್ರೇಷಿತ ಶ್ರೇಷ್ಠಗುರು ಕ್ರೈಸ್ತ ಧರ್ಮದ ಮಾಧ್ಯಮ ಕೇಂದ್ರದೊಂದಿಗೆ ಮಾತನಾಡುತ್ತಾ, ಕ್ರೈಸ್ತರ ಪರಿಸ್ಥಿತಿ ಮತ್ತು ಸಿರಿಯಾದಲ್ಲಿ ಶಾಂತಿಯನ್ನು ಸಾಧಿಸುವಲ್ಲಿ ಅವರ ಪಾತ್ರವನ್ನು ವಿವರಿಸಿದರು.
ಅಲೆಪ್ಪೊದ ಲತೀನ್ ಧರ್ಮಕೇಂದ್ರದ ಧರ್ಮಗುರು ಬಹಜತ್ ಕರಕಾಚ್ ರವರು, ಅಲೆಪ್ಪೊ ಮತ್ತು ಸಿರಿಯಾದಲ್ಲಿನ ವಾತಾವರಣವನ್ನು ಒಟ್ಟಾರೆಯಾಗಿ ಅನಿಶ್ಚಿತವಾಗಿದೆ ಎಂದು ಬಣ್ಣಿಸಿದ್ದಾರೆ. ಆಡಳಿತದ ಪತನವು ಸ್ವಯಂಚಾಲಿತವಾಗಿ ಸಾಮಾನ್ಯ ಜೀವನಕ್ಕೆ ಮರಳುವುದನ್ನು ಅರ್ಥೈಸುವುದಿಲ್ಲ ಎಂದು ಅವರು ವಿವರಿಸಿದರು, ಪ್ರಸ್ತುತ ಪರಿಸ್ಥಿತಿಯನ್ನು ಅತ್ಯಂತ ಕಷ್ಟಕರವೆಂದು ಕರೆದರು. ಜನರು ಭಯದಲ್ಲಿ ಜೀವಿಸುತ್ತಿದ್ದಾರೆ ಮತ್ತು ಭವಿಷ್ಯ ಏನಾಗುತ್ತದೆ ಎಂಬುದರ ಬಗ್ಗೆ ಅನಿಶ್ಚಿತರಾಗಿದ್ದಾರೆ ಏಕೆಂದರೆ ಲತೀನ್ ಧರ್ಮಕೇಂದ್ರದ ಧರ್ಮಗುರು ಹೇಳಿದಂತೆ, "ಇದ್ದ ಕೆಲವು ನಿಶ್ಚಿತಗಳು ಈಗ ಹೋಗಿವೆ."
13 ವರ್ಷಗಳ ರಕ್ತಸಿಕ್ತ ಅಂತರ್ಯುದ್ಧವನ್ನು ಕೊನೆಗೊಳಿಸಿದ ಡಿಸೆಂಬರ್‌ನಲ್ಲಿ ಅಸ್ಸಾದ್ ಪದಚ್ಯುತಗೊಂಡ ನಂತರದ ಅತ್ಯಂತ ಭೀಕರ ಹಿಂಸಾಚಾರ ಇದಾಗಿದೆ. ಅಲೆಪ್ಪೊದಲ್ಲಿನ ಲತೀನ್‌ಗಳ ಪ್ರೇಷಿತ ಶ್ರೇಷ್ಠಗುರು, ಧರ್ಮಾಧ್ಯಕ್ಷರಾದ ಹನ್ನಾ ಜಲ್ಲೌಫ್ ರವರು, ವಿಭಿನ್ನ ಗುಂಪುಗಳ ನಡುವಿನ ಈ ಘರ್ಷಣೆಗಳು "ನಾಚಿಕೆಗೇಡಿನ ಘರ್ಷಣೆಗಳಿವು" ಎಂದು ಒತ್ತಿ ಹೇಳಿದರು. ಭೂತಕಾಲಕ್ಕೆ ಮರಳಲು ಹಾತೊರೆಯುವವರು ಇತಿಹಾಸ ಎಂದಿಗೂ ಹಿಂದಕ್ಕೆ ಚಲಿಸುವುದಿಲ್ಲ, ಅದು ಮುಂದೆ ಮಾತ್ರ ಚಲಿಸುತ್ತದೆ ಎಂಬುದನ್ನು ಮರೆತುಬಿಡುತ್ತಾರೆ" ಎಂದು ಅವರು ಹೇಳಿದರು.
ಶಾಂತಿ ಸ್ಥಾಪಿಸಲು ಕ್ರೈಸ್ತರ ಪಾತ್ರ
ಕ್ರೈಸ್ತರು ದೇಶದಲ್ಲಿ ಅಲ್ಪಸಂಖ್ಯಾತರಾಗಿದ್ದು, ಅಂತರ್ಯುದ್ಧದ ನಂತರ ಸಿರಿಯಾದ ಜನಸಂಖ್ಯೆಯ ಸುಮಾರು 2% ರಷ್ಟಿದ್ದಾರೆ. ಆದರೆ ಧರ್ಮಾಧ್ಯಕ್ಷರಾದ ಜಲ್ಲೌಫ್ ರವರು ಮತ್ತು ಧರ್ಮಗುರು ಕರಕಾಚ್ ಇಬ್ಬರೂ ತಮ್ಮ ಉಪಸ್ಥಿತಿಯು ಸಂಧಾನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ವಾದಿಸಿದರು.
ಕ್ರೈಸ್ತ ಸಮುದಾಯವು ನಿಷ್ಪಕ್ಷಪಾತವಾದದ್ದು ಎಂದು ಧರ್ಮಗುರು ಕರಕಾಚ್ ರವರು ಬಣ್ಣಿಸಿದ್ದಾರೆ, ಏಕೆಂದರೆ ಅವರು ತಮ್ಮ ಗುರಿಗಳನ್ನು ಸಾಧಿಸಲು, ಎಂದಿಗೂ ಹೋರಾಡಿಲ್ಲ ಅಥವಾ ಹಿಂಸೆಯನ್ನು ಬಳಸಿಲ್ಲ. ಇದು ಸಿರಿಯಾದವರಲ್ಲಿ ಇನ್ನೂ ವಿಶ್ವಾಸಾರ್ಹತೆಯನ್ನು ಉಳಿಸಿಕೊಳ್ಳಲು, ಅವರಿಗೆ ಅವಕಾಶ ಮಾಡಿಕೊಟ್ಟಿದೆ ಎಂದು ಅವರು ವಿವರಿಸಿದರು. ಈ ಪಕ್ಷಪಾತವಿಲ್ಲದ ವಿಧಾನವು ಕ್ರೈಸ್ತರ ವಿಭಿನ್ನ ಗುಂಪುಗಳ ನಡುವಿನ ಸಂವಾದಕ್ಕೆ ಸೇತುವೆಯಾಗಲು ಸಾಧ್ಯವಾಗುತ್ತದೆ ಎಂದರ್ಥ.
ಸಿರಿಯಾವು ಈಗ ವಿಶ್ವದ ಅತ್ಯಂತ ಕೆಟ್ಟ ಮಾನವೀಯ ಬಿಕ್ಕಟ್ಟುಗಳಲ್ಲಿ ಒಂದಾಗಿದ್ದು, ಸುಮಾರು 15 ಮಿಲಿಯನ್ ಜನರಿಗೆ ಆರೋಗ್ಯ ಸೇವೆಯ ಅಗತ್ಯವಿದೆ, ಧರ್ಮಕೇಂದ್ರದದ ಧರ್ಮಗುರು ಕ್ರೈಸ್ತ ಸಮುದಾಯವನ್ನು "ನಮ್ಮ ಸುತ್ತಮುತ್ತಲಿನವರಿಗೆ ಸಂಕೇತವಾಗಿರಲು" ಪ್ರೋತ್ಸಾಹಿಸಿದರು. ಧಾರ್ಮಿಕ ಸ್ವಾತಂತ್ರ್ಯಕ್ಕೆ ಬೆದರಿಕೆ ಇರುವ ಮತ್ತು ಮತಾಂಧತೆ ಹೆಚ್ಚುತ್ತಿರುವ ದೇಶದ ಮಧ್ಯೆ, ಧರ್ಮಗುರು ಕರಕಾಚ್ ರವರು ಒಂದು ಸವಾಲನ್ನು ನೀಡಿದರು: ಇದು ನಮ್ಮನ್ನು ನಿರುತ್ಸಾಹಗೊಳಿಸಬಾರದು, ಇದು ನಮ್ಮನ್ನು ಹೆಚ್ಚು ಸೃಜನಶೀಲರಾಗಿ ಜೀವಿಸುವಂತೆ ಮಾಡಬೇಕು.