ಏಷ್ಯಾ ಕೇಂದ್ರಿತ ಹೊಸ ಪುಸ್ತಕದಲ್ಲಿ, ಸಿನೊಡಾಲಿಟಿ - ಸ್ಥಳೀಯ ಬುದ್ಧಿವಂತಿಕೆ
ಲಿಕಾಸ್ ಸುದ್ಧಿ
ಸಿನೊಡಾಲಿಟಿ ಮತ್ತು ಏಷ್ಯಾದಲ್ಲಿ ಸ್ಥಳೀಯ ಜೀವನ ಸಂಪ್ರದಾಯಗಳು ಎಂಬ ಶೀರ್ಷಿಕೆಯ, ಹೊಸ ಪುಸ್ತಕವು ಸಾರ್ವತ್ರಿಕ ಧರ್ಮಸಭೆಯೊಳಗೆ ಸ್ಥಳೀಯ ಧ್ವನಿಗಳನ್ನು ವರ್ಧಿಸುವ ಗುರಿಯನ್ನು ಹೊಂದಿರುವ ಪ್ರಬಂಧಗಳು, ಚಿಂತನೆಗಳು, ಪಾಲನಾ ಸೇವೆಯ ಅನುಭವಗಳು ಮತ್ತು ಪ್ರಸ್ತಾಪಗಳ ಸಂಗ್ರಹವಾಗಿದೆ.
ಮಾರ್ಚ್ 12 ರಂದು ಥೈಲ್ಯಾಂಡ್‌ನ ಬ್ಯಾಂಕಾಕ್‌ನಲ್ಲಿ ನಡೆದ ಸಭೆಯಲ್ಲಿ ಈ ಪುಸ್ತಕವನ್ನು ಮಿಯಾವೊದ ಸೇಲ್ಸಿಯನ್ ಧರ್ಮಾಧ್ಯಕ್ಷರಾದ ಜಾರ್ಜ್ ಪಲ್ಲಿಪ್ಪರಂಬಿಲ್ ರವರು ಪರಿಚಯಿಸಿದರು ಮತ್ತು ಏಷ್ಯಾದ ಧರ್ಮಾಧ್ಯಕ್ಷರುಗಳ ಸಮ್ಮೇಳನಗಳ ಒಕ್ಕೂಟದ ಅಧ್ಯಕ್ಷರಾದ ಕಾರ್ಡಿನಲ್ ಫಿಲಿಪ್ ನೆರಿ ಫೆರಾವೊರವರು ಈ ಪುಸ್ತಕವನ್ನು ಬಿಡುಗಡೆ ಮಾಡಿದರು.
ಈ ಪುಸ್ತಕವು ನವೆಂಬರ್ 10-16, 2024 ರಂದು ನೇಪಾಳದ ಕಠ್ಮಂಡುವಿನಲ್ಲಿ ನಡೆದ ವಿಚಾರ ಸಂಕಿರಣದ ಉತ್ಪನ್ನವಾಗಿದೆ, ಅಲ್ಲಿ ಧರ್ಮಾಧ್ಯಕ್ಷರುಗಳು, ವಿದ್ವಾಂಸರು, ಸಭಾಪಾಲಕರು, ಯುವಕರು ಮತ್ತು ಮಹಿಳಾ ನಾಯಕರು, ಅವರಲ್ಲಿ ಅನೇಕರು ಸ್ಥಳೀಯ ಸಮುದಾಯಗಳಿಗೆ ಸೇರಿದವರು ಅಥವಾ ಕೆಲಸ ಮಾಡುವವರು, ವಿಶ್ವಾಸ ಮತ್ತು ಸ್ಥಳೀಯ ಗುರುತಿನ ಕುರಿತು ಚರ್ಚೆಗಾಗಿ ಒಟ್ಟುಗೂಡಿದರು.
ಈ ಕಾರ್ಯಕ್ರಮ ಮತ್ತು ಪುಸ್ತಕದ ಮೂಲವು: ಕ್ಯಾಥೋಲಿಕ್ ನೆಟ್‌ವರ್ಕ್ ಅಮಾಂಗ್ ಇಂಡಿಜಿನಸ್ ಪೀಪಲ್ಸ್ ಆಫ್ ಏಷ್ಯಾ (ಏಷ್ಯಾದ ಸ್ಥಳೀಯ ಜನರ ಕಥೋಲಿಕರ ಜಾಲ), ನೇತೃತ್ವದ ಉಪಕ್ರಮದ ಭಾಗವಾಗಿತ್ತು, ಇದು ಸಿನೊಡಲ್ ಪ್ರಕ್ರಿಯೆಯ ಮೂಲಕ ಸ್ಥಳೀಯ ದೃಷ್ಟಿಕೋನಗಳೊಂದಿಗೆ ಧರ್ಮಸಭೆಯ ತೊಡಗಿಸಿಕೊಳ್ಳುವಿಕೆಯನ್ನು ಗಾಢವಾಗಿಸಲು ಪ್ರಯತ್ನಿಸುತ್ತದೆ.
ಎರಡು ವಿಭಾಗಗಳಾಗಿ ವಿಂಗಡಿಸಲಾದ ಈ ಪುಸ್ತಕವು ಮೊದಲು ದೈವಶಾಸ್ತ್ರ ಮತ್ತು ಪಾಲನಾ ಸೇವೆಯ ಚಿಂತನೆಗಳನ್ನು ಪರಿಶೀಲಿಸುತ್ತದೆ, ಆದರೆ ಎರಡನೇ ಭಾಗವು ಸ್ಥಳೀಯ ಸಮುದಾಯಗಳಿಂದ ಸಂದರ್ಭೋಚಿತ ಕಥೆಗಳು ಮತ್ತು ಸಾಕ್ಷ್ಯಗಳನ್ನು ಪ್ರಸ್ತುತಪಡಿಸುತ್ತದೆ.
ಪುಸ್ತಕದ ಸಂಪಾದಕರಾದ ಧರ್ಮಗುರು ಜಾರ್ಜ್ ಪ್ಲಾಥೋಟ್ಟಮ್ ರವರ SDB ಪ್ರಕಾರ, ಈ ಪುಸ್ತಕವು ಸ್ಥಳೀಯ ಜನರ ಜೀವಂತ ವಾಸ್ತವಗಳು, ಅವರ ಬುದ್ಧಿವಂತಿಕೆ, ಸಾಮುದಾಯಿಕ ಮೌಲ್ಯಗಳು ಮತ್ತು ದೈವಿಕತೆ, ಪರಿಸರ ಮತ್ತು ಪರಸ್ಪರರೊಂದಿಗಿನ ಅವರ ಸಂಬಂಧಗಳನ್ನು ಎತ್ತಿ ತೋರಿಸುತ್ತದೆ.
ಇದು ನಗರೀಕರಣ, ವಲಸೆ, ಹವಾಮಾನ ಬದಲಾವಣೆ ಮತ್ತು ಭೂಮಿ ಮತ್ತು ಸಾಂಸ್ಕೃತಿಕ ಸಂರಕ್ಷಣೆಗಾಗಿ ಹೋರಾಟಗಳಂತಹ ಒತ್ತುವ ಸವಾಲುಗಳನ್ನು ಸಹ ಪರಿಹರಿಸುತ್ತದೆ.
ಲೇಖಕರು ಹಂಚಿಕೊಂಡ ಈ ವಿಚಾರಗಳು ಅವರ ಸ್ವಂತ ಅಧ್ಯಯನ, ಚಿಂತನೆ ಮತ್ತು ಅನುಭವದ ಫಲವಾಗಿದೆ, ಆದ್ದರಿಂದ, ಅವುಗಳನ್ನು ಸಂಪಾದಿಸುವಾಗ, ಅವರ ಕೊಡುಗೆಯ ಮೂಲ ಮೌಲ್ಯಗಳ ಪರಿಮಳವನ್ನು ದುರ್ಬಲಗೊಳಿಸದೆ ಅವುಗಳನ್ನು ಪ್ರಸ್ತುತಪಡಿಸಲು ಪ್ರಯತ್ನಿಸಲಾಗಿದೆ ಎಂದು ಅವರು ಹೇಳಿದರು.
ಈ ಪುಸ್ತಕವು ಸ್ಥಳೀಯ ದೈವಶಾಸ್ತ್ರಗಳು, ಧಾರ್ಮಿಕ ಸಂಸ್ಕೃತಿ ಮತ್ತು ಸಮನ್ವಯದ ಪ್ರಯತ್ನಗಳಿಗೆ ಹೆಚ್ಚಿನ ಮನ್ನಣೆ ನೀಡುವ ಕರೆಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಧರ್ಮಗುರು ಹೇಳಿದರು. ಇದು ಸಿನೊಡಾಲಿಟಿ ಮತ್ತು ಲೌಡಾಟೊ ಸಿ' ಕುರಿತ ಸಿನೊಡ್‌ನ ವಿಷಯಗಳೊಂದಿಗೆ ಹೊಂದಿಕೆಯಾಗುತ್ತದೆ, ಧರ್ಮಸಭೆಯ ಭವಿಷ್ಯವನ್ನು ರೂಪಿಸುವಲ್ಲಿ ಸ್ಥಳೀಯ ಸಮುದಾಯಗಳ ಪೂರ್ಣ ಭಾಗವಹಿಸುವಿಕೆಯ ಮಹತ್ವವನ್ನು ಒತ್ತಿಹೇಳುತ್ತದೆ.
ಸಂಪುಟದಲ್ಲಿನ ಕೊಡುಗೆಗಳು ಧರ್ಮಸಭೆಗಳು, ಸರ್ಕಾರಗಳು ಮತ್ತು ಸ್ಥಳೀಯ ಗುಂಪುಗಳಲ್ಲಿ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಗಳಲ್ಲಿ ಸ್ಥಳೀಯರ ಧ್ವನಿಯನ್ನು ಒಳಗೊಳ್ಳುವ ಅಗತ್ಯತೆಯ ಬಗ್ಗೆ ಬೆಳೆಯುತ್ತಿರುವ ಅರಿವನ್ನು ಪ್ರತಿಬಿಂಬಿಸುತ್ತವೆ.
ಪುಸ್ತಕದಲ್ಲಿ, ಸಮಗ್ರ ಮಾನವ ಅಭಿವೃದ್ಧಿಯನ್ನು ಉತ್ತೇಜಿಸುವ ಡಿಕ್ಯಾಸ್ಟ್ರಿಯ ಪ್ರಿಫೆಕ್ಟ್ ಕಾರ್ಡಿನಲ್ ಮೈಕೆಲ್ ಕ್ಜೆರ್ನಿರವರು, ಸ್ಥಳೀಯ ಸಮುದಾಯಗಳೊಂದಿಗೆ ಪ್ರಧಾನ ಸಂವಾದ ಪಾಲುದಾರರಾಗಿ ತೊಡಗಿಸಿಕೊಳ್ಳುವ ಮತ್ತು ಪ್ರಭುಯೇಸುಕ್ರಿಸ್ತರ ಸುವಾರ್ತೆಯನ್ನು ಹಂಚಿಕೊಳ್ಳುವಾಗ ಅವರ "ನಾಗರಿಕತೆಯ ಬುದ್ಧಿವಂತಿಕೆ" ಯಿಂದ ಕಲಿಯುವ ಮಹತ್ವವನ್ನು ಒತ್ತಿ ಹೇಳುತ್ತಾರೆ.
ಧರ್ಮಸಭೆಯು ಜೀವಂತ ಸಂಪ್ರದಾಯಗಳು, ಸಂಸ್ಕೃತಿಗಳು, ಧರ್ಮಗಳೊಂದಿಗೆ, ಸಂಕ್ಷಿಪ್ತವಾಗಿ ಹೇಳುವುದಾದರೆ, ಅದು ಆಳವಾಗಿ ಬೇರು ಬಿಟ್ಟ ಜನರ, ಎಲ್ಲಾ ಜೀವನ ವಾಸ್ತವಗಳೊಂದಿಗೆ ನಿರಂತರವಾಗಿ, ಪ್ರೀತಿಯ ಮತ್ತು ವಿನಮ್ರ ಸಂವಾದದಲ್ಲಿ ತೊಡಗಿಸಿಕೊಳ್ಳುವ ಅಗತ್ಯವನ್ನು ಅವರು ಒತ್ತಿ ಹೇಳಿದರು.
ಸಂಸ್ಕೃತಿ ಮತ್ತು ಶಿಕ್ಷಣಕ್ಕಾಗಿ ಡಿಕ್ಯಾಸ್ಟ್ರಿಯ ಕಾರ್ಯದರ್ಶಿಯಾದ ಧರ್ಮಾಧ್ಯಕ್ಷರಾದ ಪಾಲ್ ಟಿಘೆರವರು, ಆಲಿಸುವಿಕೆ ಮತ್ತು ಅಂತರಸಾಂಸ್ಕೃತಿಕ ಸಂವಾದದ ಮೌಲ್ಯವನ್ನು ಒತ್ತಿಹೇಳುತ್ತಾರೆ.
ಅವರು ವಿಶ್ವಗುರು ಫ್ರಾನ್ಸಿಸ್ ರವರ ಬಾಹ್ಯ ದೃಷ್ಟಿಕೋನದ ಮತ್ತು ವಿಭಿನ್ನ ಸಂಸ್ಕೃತಿಗಳೊಂದಿಗೆ ನಿಜವಾದ ಸಂಭಾಷಣೆಗಳಲ್ಲಿ ತೊಡಗಿರುವ ಧರ್ಮಸಭೆಯ ದೃಷ್ಟಿಕೋನವನ್ನು ಪುನರುಚ್ಚರಿಸಿದರು. ನಾವು ಇತರ ಜನರನ್ನು, ಅವರ ಅನುಭವವಗಳ ಹಾಗೂ ಹೇಳಿಕೆಗಳನ್ನು ಪ್ರಾಮಾಣಿಕವಾಗಿ ಆಲಿಸುವ ಮೂಲಕ ಪ್ರಾರಂಭಿಸುತ್ತೇವೆ, ಅವರ ಕಾಳಜಿಗಳನ್ನು, ಭರವಸೆಗಳನ್ನು, ನಿರೀಕ್ಷೆಗಳನ್ನು ಆಲಿಸುತ್ತೇವೆ, ತದನಂತರವೇ ಅವರೊಂದಿಗೆ ಸಂಭಾಷಣೆಗೆ ಇಳಿಯುತ್ತೇವೆ ಎಂದು ಅವರು ಹೇಳಿದರು.
ಭಾರತ ಮತ್ತು ನೇಪಾಳದ ಪ್ರೇಷಿತ ರಾಯಭಾರಿಯಾದ ಮಹಾಧರ್ಮಾಧ್ಯಕ್ಷರಾದ ಲಿಯೋಪೋಲ್ಡೊ ಗಿರೆಲ್ಲಿರವರು, ಸ್ಥಳೀಯ ಸಂಪ್ರದಾಯಗಳ ಶ್ರೀಮಂತಿಕೆ ಮತ್ತು ಆಧುನಿಕ ಸಮಾಜಕ್ಕೆ ಅವುಗಳ ಪ್ರಸ್ತುತತೆಯನ್ನು ಎತ್ತಿ ತೋರಿಸಿದರು.
"ಪ್ರಕೃತಿಯೊಂದಿಗೆ ಆರೋಗ್ಯಕರ ಸಂಬಂಧವನ್ನು ಪುನರ್ನಿರ್ಮಿಸುವ ಮತ್ತು ಅದರ ಕಾರ್ಯಗಳನ್ನು ನಿರ್ವಹಿಸುವ ಬಗ್ಗೆ ಬುಡಕಟ್ಟು ಸಂಸ್ಕೃತಿಗಳು ಪ್ರಪಂಚದ ಉಳಿದ ಭಾಗಗಳಿಗೆ ಕಲಿಸುವಂತದ್ದು ಬಹಳಷ್ಟು ಇವೆ ಎಂದು ಪರಿಸರಶಾಸ್ತ್ರಜ್ಞರು ಸರಿಯಾಗಿಯೇ ವಾದಿಸುತ್ತಾರೆ" ಎಂದು ಅವರು ಹೇಳಿದರು, ಈ ಸಮುದಾಯಗಳು ಒಗ್ಗಟ್ಟು, ಪ್ರಾಮಾಣಿಕತೆ ಮತ್ತು ಪರಸ್ಪರ ಅನ್ಯೋನ್ಯತೆಯ ಬಲವಾದ ಪ್ರಜ್ಞೆಯನ್ನು ಹೊಂದಿವೆ, ಅದು ವಿಶಾಲ ಜಗತ್ತಿಗೆ ಪ್ರಮುಖ ಪಾಠಗಳಾಗಿ ಕಾರ್ಯನಿರ್ವಹಿಸುತ್ತದೆ ಎಂದು ಅವರು ಹೇಳಿದರು.
ಪುಸ್ತಕದಲ್ಲಿರುವ ಚಿಂತನೆಗಳ ಒಳನೋಟಗಳು ಏಷ್ಯಾದ ಸ್ಥಳೀಯ ಸಮುದಾಯಗಳನ್ನು ಬೆಂಬಲಿಸುವಲ್ಲಿ ಆಳವಾದ ದೈವಶಾಸ್ತ್ರದ ತೊಡಗಿಸಿಕೊಳ್ಳುವಿಕೆ ಮತ್ತು ದೃಢವಾದ ಕ್ರಮಗಳಿಗೆ ಕಾರಣವಾಗುತ್ತವೆ ಎಂದು ಲೇಖಕರು ತಮ್ಮ ಭರವಸೆಯನ್ನು ವ್ಯಕ್ತಪಡಿಸಿದರು.