ಪೂರ್ವ ಧರ್ಮಸಭೆಗಳ ಸುದ್ದಿ ಸಮಾಚಾರ – ಮಾರ್ಚ್ 7, 2025
ಪೂರ್ವ ಧರ್ಮಸಭೆಗಳಿಂದ ಈ ವಾರದ ಸುದ್ದಿಗಳು
ತಪಸ್ಸುಕಾಲ ಪ್ರಾರಂಭವಾಗುತ್ತದೆ
ಈ ಬುಧವಾರ, ಪ್ರಪಂಚದಾದ್ಯಂತದ ಕ್ರೈಸ್ತರು ತಪಸ್ಸುಕಾಲವನ್ನು ಪ್ರಾರಂಭಿಸಿದರು. ಕೆಲವು ಪೂರ್ವ ಧರ್ಮಸಭೆಗಳಲ್ಲಿ, ಈಸ್ಟರ್‌ಗೆ 48 ದಿನಗಳ ಮೊದಲು, ಕ್ಲೀನ್ ಸೋಮವಾರವೆಂಬ, ಎರಡು ದಿನಗಳ ಮುಂಚೆಯೇ ತಪಸ್ಸುಕಾಲವು ಪ್ರಾರಂಭವಾಗುತ್ತದೆ. ತಪಸ್ಸುಕಾಲದಲ್ಲಿ, ಪೂರ್ವ ಧರ್ಮಸಭೆಯ ಭಕ್ತವಿಶ್ವಾಸಿಗಳು ಮಾಂಸ ಮತ್ತು ಡೈರಿ(ಹಾಲಿನ) ಉತ್ಪನ್ನಗಳಿಂದ ದೂರವಿರುತ್ತಾರೆ ಹಾಗೂ ಮಧ್ಯರಾತ್ರಿಯಿಂದ ಮಧ್ಯಾಹ್ನದವರೆಗೆ ಉಪವಾಸ ಮಾಡುತ್ತಾರೆ. ಬೈಜಾಂಟೈನ್ ಸಂಪ್ರದಾಯದಲ್ಲಿ, ತಪಸ್ಸುಕಾಲವನ್ನು ಸೋಮವಾರದಂದು ಗ್ರೇಟ್ ಕಾಂಪ್ಲೈನ್, ಗುರುವಾರಗಳಂದು ಪವಿತ್ರ ಉಡುಗೊರೆಗಳ ದೈವಾರಾಧನಾ ವಿಧಿಯನ್ನು ಮತ್ತು ಶುಕ್ರವಾರದಂದು ಅಕಾಥಿಸ್ಟ್ ಸ್ತೋತ್ರಗೀತೆಯಂತಹ ವಿಶೇಷ ಪ್ರಾರ್ಥನೆಗಳಿಂದ ಪವಿತ್ರ ದಿನಗಳನ್ನು ಆಚರಿಸಲಾಗುತ್ತದೆ.
ಉಕ್ರೇನಿಯದ ಕಥೋಲಿಕ ಧರ್ಮಸಭೆಯು ಶಾಂತಿಗೆ ಕರೆ ನೀಡುತ್ತದೆ
ಸತ್ಯ ಮತ್ತು ನ್ಯಾಯವಿಲ್ಲದೆ ಯಾವುದೇ ಶಾಂತಿ ಒಪ್ಪಂದಕ್ಕೆ ಸಹಿ ಹಾಕಲಾಗುವುದಿಲ್ಲ. ಉಕ್ರೇನಿಯದ ಗ್ರೀಕ್ ಕಥೋಲಿಕ ಧರ್ಮಸಭೆಯ ಪ್ರಧಾನ ಮಹಾಧರ್ಮಾಧ್ಯಕ್ಷರಾದ ಸ್ವಿಯಾಟೋಸ್ಲಾವ್ ಶೆವ್‌ಚುಕ್ ರವರು ಉಕ್ರೇನ್‌ನಲ್ಲಿನ ಸಂಘರ್ಷಕ್ಕೆ ಸಂಬಂಧಿಸಿದ ಇತ್ತೀಚಿನ ಬೆಳವಣಿಗೆಗಳಿಗೆ ಪ್ರತಿಕ್ರಿಯಿಸಿದ್ದಾರೆ. ಭಕ್ತರಿಗೆ ನೀಡಿದ ಈ ವಾರದ ವೀಡಿಯೊ ಸಂದೇಶದಲ್ಲಿ, ಮಹಾಧರ್ಮಾಧ್ಯಕ್ಷರು ಉಕ್ರೇನ್ ತನ್ನ ಉಳಿವಿಗಾಗಿ ಹೋರಾಡುತ್ತಿದೆ ಎಂದು ಒತ್ತಿ ಹೇಳಿದರು. ಅಂತರರಾಷ್ಟ್ರೀಯ ಒತ್ತಡದ ನಡುವೆಯೂ, ಉಕ್ರೇನಿಯದವರು ದೃಢವಾಗಿ ನಿಲ್ಲುವಂತೆ ಒತ್ತಾಯಿಸಿದರು: "ಈ ಜಗತ್ತಿನ ಶಕ್ತಿಶಾಲಿಗಳಿಗೆ ಭಯಪಡಬೇಡಿ!" ಎಂದು ಅವರು ಹೇಳಿದರು. ಉಕ್ರೇನ್‌ನ ವಿಜಯವನ್ನು ಖಚಿತಪಡಿಸಿಕೊಳ್ಳಲು ನಾವು ನಿಶ್ಚಲವಾದ ಮನಸ್ಸು, ಉರಿಯುವ ಹೃದಯ ಮತ್ತು ದೃಢ ಇಚ್ಛೆಯನ್ನು ಇಟ್ಟುಕೊಳ್ಳಬೇಕಾಗುತ್ತದೆ.
ಜೋರ್ಡಾನ್‌ನಲ್ಲಿ ಧರ್ಮಾಧ್ಯಕ್ಷೀಯ ದೀಕ್ಷೆ
ಧರ್ಮಾಧ್ಯಕ್ಷರಾದ ಇಯಾದ್ ತ್ವಾಲ್ ರವರನ್ನು ಅಲ್-ಮಗ್ತಾಸ್‌ನಲ್ಲಿರುವ ಪ್ರಭುಯೇಸುವಿನ ದೀಕ್ಷಾಸ್ನಾನದ ದೇವಾಲಯದಲ್ಲಿ ನಡೆದ ಐತಿಹಾಸಿಕ ಸಮಾರಂಭದಲ್ಲಿ ಜೋರ್ಡಾನ್‌ನಲ್ಲಿರುವ ಲತೀನ್-ವಿಧಿಯ ಕಥೋಲಿಕರಿಗೆ ಧರ್ಮಾಧ್ಯಕ್ಷರಾಗಿ ಮತ್ತು ಪಿತೃಪ್ರಧಾನ ಶ್ರೇಷ್ಠಗುರುವಾಗಿ ನೇಮಿಸಲಾಗಿದೆ. ಇತ್ತೀಚೆಗೆ ಪವಿತ್ರಗೊಳಿಸಲಾದ ನೂತನ ದೇವಾಲಯದಲ್ಲಿ ಜೋರ್ಡಾನಿನ ಪಿತೃಪ್ರಧಾನ ಶ್ರೇಷ್ಠಗುರುವಾಗಿ ನೇಮಕಗೊಂಡಿರುವುದು ಇದೇ ಮೊದಲು. ಕಾರ್ಡಿನಲ್ ಪಿಯರ್‌ಬಟಿಸ್ಟಾ ಪಿಜ್ಜಬಲ್ಲಾರವರ ಅಧ್ಯಕ್ಷತೆಯಲ್ಲಿ ನಡೆದ ಆಚರಣೆಯು ಹಲವಾರು ಧರ್ಮಸಭೆಯ ಅಧಿಕಾರಿಗಳು ಮತ್ತು ರಾಜತಾಂತ್ರಿಕರನ್ನು ಒಟ್ಟುಗೂಡಿಸಿತು. ಪವಿತ್ರೀಕರಣದ ಸಮಯದಲ್ಲಿ, ಪವಿತ್ರ ಕ್ರಿಸ್ತ ಅಭ್ಯಂಗಿತ ತೈಲದಿಂದ ಅಭಿಷೇಕಿಸುವ ಮೊದಲು ಹೊಸ ಧರ್ಮಾಧ್ಯಕ್ಷರವರ ಶಿರಸ್ಸಿನ ಮೇಲೆ ಸುವಾರ್ತೆಯನ್ನು ಇರಿಸಲಾಯಿತು.