ಜೂಬಿಲಿ: ಕಥೋಲಿಕ ಸಹೋದರಿಯರು ಮರಣದಂಡನೆಯನ್ನು ವಿರೋಧಿಸಿ, ಕ್ಷಮೆಯ ಅನುಗ್ರಹವನ್ನು ಸ್ವಾಗತಿಸುತ್ತಾರೆ
ಕ್ರಿಸಾನ್ನೆ ವೈಲನ್‌ಕೋರ್ಟ್ ಮರ್ಫಿ, ಕ್ಯಾಥೋಲಿಕ್ ಮೊಬಿಲೈಸಿಂಗ್ ನೆಟ್‌ವರ್ಕ್
ಪ್ರತಿ 25 ವರ್ಷಗಳಿಗೊಮ್ಮೆ, ವಿಶ್ವಗುರುಗಳು ಸಾಧಾರಣವಾಗಿ ಜೂಬಿಲಿ ವರ್ಷವನ್ನು ಘೋಷಿಸುತ್ತಾರೆ, ಇದು ಸಂಧಾನದ, ಪರಿವರ್ತನೆ ಮತ್ತು ವಿಮೋಚನೆಯನ್ನು ಬಯಸುವ ವಿಶೇಷ ವರ್ಷವಾಗಿದೆ. ಈ ವರ್ಷದ ಜೂಬಿಲಿ ವಿಷಯದ ಧ್ಯೇಯದ ಮೂಲಕ, ವಿಶ್ವಗುರು ಫ್ರಾನ್ಸಿಸ್ ರವರು ಸಂಘರ್ಷ, ಆತಂಕ ಮತ್ತು ಸಿನಿಸಿಸಮ್ ತುಂಬಾ ಸಾಮಾನ್ಯವಾಗಿ ಕಾಣುತ್ತಿರುವ ಜಗತ್ತಿನಲ್ಲಿ, "ಭರವಸೆ ನಿರಾಸೆಗೊಳಿಸುವುದಿಲ್ಲ" ಎಂದು ನಮಗೆ ನೆನಪಿಸಿದ್ದಾರೆ.
ಪವಿತ್ರ ಪಿತಾಮಹರು ವಿವರಿಸುದಂತೆ, ನಮ್ಮ ಜಗತ್ತಿನಲ್ಲಿರುವ ಅಪಾರ ಒಳ್ಳೆಯತನವನ್ನು ನಾವು ಗುರುತಿಸಬೇಕು, ಇಲ್ಲದಿದ್ದರೆ ನಾವು ದುಷ್ಟತನ ಮತ್ತು ಹಿಂಸೆಯಿಂದ ಮುಳುಗಿದ್ದೇವೆ ಎಂದು ಭಾವಿಸುವ ಪ್ರಲೋಭನೆಗೆ ಒಳಗಾಗುತ್ತೇವೆ ಎಂದು ಹೇಳುತ್ತಾರೆ.
ಈ ಜೂಬಿಲಿ ವರ್ಷದಲ್ಲಿ ನಮಗೆಲ್ಲರಿಗೂ ಸ್ಫೂರ್ತಿ ಮತ್ತು ಭರವಸೆಯನ್ನು ನೀಡಬಲ್ಲ ಅದ್ಭುತ ಸಾಕ್ಷಿಯನ್ನು ಪ್ರದರ್ಶಿಸಿದ ಮಹಿಳೆಯರ ಗುಂಪಿನೊಂದಿಗೆ ಕೆಲಸ ಮಾಡುವ ಸೌಭಾಗ್ಯ ನನಗೆ ಇತ್ತೀಚೆಗೆ ಸಿಕ್ಕಿದೆ ಎಂದು ಓಹಿಯೋದ ಕ್ಲೀವ್‌ಲ್ಯಾಂಡ್‌ನ ಉರ್ಸುಲಿನ್ ಸಹೋದರಿಯು ಹೇಳಿದ್ದಾರೆ.
1995ರಲ್ಲಿ ಕ್ಲೀವ್‌ಲ್ಯಾಂಡ್ ಉರ್ಸುಲೈನ್ಸ್‌ನ ಸಿಸ್ಟರ್ ಜೋವಾನ ಮೇರಿ ಮಸ್ಚಾರವರನ್ನು ಸಭೆಯ ಪ್ರಧಾನಮನೆಯ ಹಿಂದೆ ಡ್ಯಾನಿಯಲ್ ಪಿಚರ್ ಎಂಬ ವ್ಯಕ್ತಿ ಅತ್ಯಾಚಾರ ಮಾಡಿ ಕೊಲೆ ಮಾಡಿದಾಗ ಅವರ ಸಭೆಯ ಸಮುದಾಯವು ಒಂದು ದೊಡ್ಡ ದುರಂತವನ್ನು ಅನುಭವಿಸಿತು. ಸಿಸ್ಟರ್ ಜೋವಾನ ಮೇರಿಯವರು ಸಮುದಾಯದ ಪ್ರೀತಿಯ ಸದಸ್ಯರಾಗಿದ್ದರು, ಜಗತ್ತಿನಲ್ಲಿ ಶಾಂತಿ ಮತ್ತು ನ್ಯಾಯವನ್ನು ಮುನ್ನಡೆಸಲು ಶ್ರಮಿಸಿದ ಸೌಮ್ಯತೆಯ ಆತ್ಮದ ವ್ಯಕ್ತಿಯೆಂದೇ ಪ್ರಸಿದ್ಧರಾಗಿದ್ದರು.
ಆಕೆಯ ಹತ್ಯೆಯ ನಂತರ, ಉರ್ಸುಲಿನ್ ಸಹೋದರಿಯರು ಡ್ಯಾನಿಯಲ್ ಪಿಚರ್‌ಗೆ ಮರಣದಂಡನೆ ವಿಧಿಸುವುದಕ್ಕೆ, ತಮ್ಮ ವಿರೋಧವನ್ನು ವ್ಯಕ್ತಪಡಿಸಿದರು. ಫಿರ್ಯಾಧಿಗಳು ಈ ಆಶಯವನ್ನು ನಿರ್ಲಕ್ಷಿಸಿದಾಗ, ಪ್ರಪಂಚದಾದ್ಯಂತದ ಸಹೋದರಿಯರಿಂದ ಸಂದೇಶಗಳು ಮತ್ತು ಫೋನ್ ಕರೆಗಳಿಂದ ತುಂಬಿ, ಮರಣದಂಡನೆಯನ್ನು ಕೈಬಿಡುವಂತೆ ಅವರನ್ನು ಬೇಡಿಕೊಂಡರು.
ಆತನ ಹಿಂಸೆಯ ಕೃತ್ಯಕ್ಕೆ ಮರಣದಂಡನೆಯಷ್ಟು ಶಿಕ್ಷೆಯಾಗದಿರಲಿ ಎಂದು ಅವರು ಪ್ರಾರ್ಥಿಸಿದರು. ಅಂತಿಮವಾಗಿ, ಪಿಚರ್ ರವರು ತಪ್ಪಿತಸ್ಥನೆಂದು ಘೋಷಿಸಲಾಯಿತು, ಆದರೆ ತೀರ್ಪುಗಾರರು ಮರಣದಂಡನೆಯನ್ನು ಆತನಿಗೆ ಶಿಕ್ಷೆಯಾಗಿ ಆಯ್ಕೆಮಾಡಲು ನಿರಾಕರಿಸಿದರು.
ದಶಕಗಳ ನಂತರ, ಇತ್ತೀಚೆಗೆ ಸಹೋದರಿಯರು ಪಿಚರ್‌ನಿಂದ ಒಂದು ಪತ್ರವನ್ನು ಪಡೆದರು. ಆತನು ತನ್ನ ಕೃತ್ಯಕ್ಕೆ ವಿಷಾದ ಮತ್ತು ದುಃಖವನ್ನು ವ್ಯಕ್ತಪಡಿಸಿದನು ಮತ್ತು ಸಹೋದರಿಯರಿಂದ ಕ್ಷಮೆ ಕೇಳಿದನು. ಸಿಸ್ಟರ್ ಜೋವಾನ ಮೇರಿಯವರ ಹತ್ಯೆಯಿಂದ ಪ್ರಭಾವಿತರಾದ ಇತರರು, ಅವರ ಕುಟುಂಬ ಸದಸ್ಯರು ಸೇರಿದಂತೆ, ತಮ್ಮ ನಿರ್ಧಾರವನ್ನು ಒಪ್ಪಿಕೊಂಡಿದ್ದಾರೆ ಎಂದು ಖಚಿತಪಡಿಸಿಕೊಳ್ಳುವ ಪ್ರಕ್ರಿಯೆಯ ನಂತರ, ಅವರು ತಮ್ಮದೇ ಆದ ಪತ್ರದ ಮೂಲಕ ಪ್ರತಿಕ್ರಿಯಿಸಿದರು.
ಅವರು ಆತನ ಕ್ಷಮೆಯಾಚನೆಯನ್ನು ಒಪ್ಪಿಕೊಂಡರು. ಆತನ ಅಪರಾಧಗಳಿಂದ ಉಂಟಾದ ನೋವು ಮತ್ತು ಸಂಕಟವನ್ನು ಅವರು ಮರಮಾಡಲಿಲ್ಲ, ಅದನ್ನೆಲ್ಲಾ ಪಿಚರ್‌ಗೆ ವಿವರಿಸುತ್ತಾ, "ನೀವು ಆಕೆಯ ಜೀವವನ್ನು ತೆಗೆದುಕೊಂಡಾಗ, ದೇವರ ಪ್ರೀತಿಯನ್ನು ಮಾತ್ರ ಹರಡಲು ಬಯಸುವ ಸೌಮ್ಯ ವ್ಯಕ್ತಿಯನ್ನು ನೀವು ನಮ್ಮ ಸಮುದಾಯದಿಂದ, ಆಕೆಯ ಕುಟುಂಬದಿಂದ ಮತ್ತು ದೇವರ ಪ್ರಪಂಚದಿಂದ ಕಸಿದುಕೊಂಡಿದ್ದೀರಿ ಎಂದು ಹೇಳಿದರು. ಆದರೆ ಆತನನ್ನು "ಒಳ್ಳೆಯತನ, ಶಾಂತಿ ಮತ್ತು ದಯೆಯ ವ್ಯಕ್ತಿ" ಯಾಗಿರಲು ಪ್ರೋತ್ಸಾಹಿಸುತ್ತಾ, ಅವರು ಕ್ಷಮೆಯಾಚನೆಯನ್ನು ಸ್ವೀಕರಿಸಿ ಕ್ಷಮೆಯಾಚಿಸಿದರು.
ಕೊನೆಯದಾಗಿ, ಈ ಧೈರ್ಯಶಾಲಿ ಸಹೋದರಿಯರು ಕ್ಷಮೆಯು ದುರ್ಬಲವಲ್ಲ ಎಂದು ನಮಗೆ ತೋರಿಸುತ್ತಾರೆ. ಅವರ ಧೈರ್ಯವು ಸ್ಪಷ್ಟವಾಗಿದೆ. ಇದು ಅವರ ವಿಶ್ವಾಸದ ಶಕ್ತಿ ಮತ್ತು ಅವರ ಸಮುದಾಯದ ಶಕ್ತಿಗೆ ಸಾಕ್ಷಿಯಾಗಿದೆ. ಅವರ ತತ್ವಗಳನ್ನು ಪರೀಕ್ಷೆಗೆ ಒಳಪಡಿಸಿದಾಗ, ಅವರು ಅವುಗಳ ಪರವಾಗಿ ನಿಂತರು ಮಾತ್ರವಲ್ಲ, ಜಗತ್ತನ್ನು ಪರಿವರ್ತಿಸಲು ಆ ತತ್ವಗಳ ನಿಜವಾದ ಶಕ್ತಿಯನ್ನು ತೋರಿಸಿದರು.
ಉರ್ಸುಲಿನ್ ಸಹೋದರಿಯರು ಮರಣದಂಡನೆಗೆ ಬೇಡ ಎಂದು ಹೇಳಿದಾಗ, ಅವರು ಭರವಸೆಗೆ ಹೌದು ಎಂದು ಹೇಳಿದರು. ದಶಕಗಳ ನಂತರ, ಪಿಚರ್ ನ ಚಿಕಿತ್ಸೆ ಮತ್ತು ಕ್ಷಮೆಯನ್ನು ಕೋರುವ ಮೂಲಕ ಪ್ರತಿಕ್ರಿಯಿಸಿದರು.
ಪತ್ರಗಳ ವಿನಿಮಯಕ್ಕೆ ಸಂಬಂಧಿಸಿದ ವಿಷಯವನ್ನು, ಸಭೆಯಲ್ಲಿರುವವರಿಗೆ ವಿವರಿಸುತ್ತಾ ಸಿಸ್ಟರ್ ಸುಸಾನ್ ಡರ್ಕಿನ್ ರವರು, ವೈಯಕ್ತಿಕವಾಗಿ, ನನ್ನಲ್ಲಿ ಒಂದು ರೀತಿಯ ಉಷ್ಣತೆ ಅಥವಾ ನಾನು ಅರಿತುಕೊಳ್ಳದ ಭಾರವನ್ನು ಎತ್ತಿದ್ದೇನೆ ಎಂದು ಹೇಳಿದರು. ಅಲ್ಲಿ ನೆರೆದಿದ್ದ ಎಲ್ಲರಿಗೂ ಮತ್ತು ವಿಶಾಲ ಸಮುದಾಯಕ್ಕೆ ಭರವಸೆ ಮತ್ತು ಕರುಣೆಯು ಗುಣಪಡಿಸುವ ಹೊಸ ಮಾರ್ಗಗಳನ್ನು ತೆರೆಯುತ್ತದೆ ಎಂದು ಹೇಳಿದರು.
ಇದೇ ರೀತಿಯ ಭರವಸೆಯ ಕಥೆಗಳಿಂದ ಪ್ರೇರಿತರಾಗಿ, ಕ್ಷಮೆಯು ನೀಡಬಹುದಾದ ಅನಿರೀಕ್ಷಿತ ಅನುಗ್ರಹಕ್ಕೆ ನಾವು ಸಾಕ್ಷಿಯಾಗಬಹುದು.
ಈ ಜೂಬಿಲಿ ವರ್ಷದಲ್ಲಿ ಕರುಣೆ ಮತ್ತು ಭರವಸೆಯ ಮೂಲಕ ನಾವು ಹೇಗೆ ಗುಣಮುಖರಾಗಬಹುದು ಹಾಗೂ ಪುನರ್ಜ್ಜೀವವನನ್ನು ಪಡೆಯಬಹುದು ಎಂದು ಯೋಚಿಸುತ್ತಿರುವಾಗ, ಉರ್ಸುಲಿನ್ ಸಹೋದರಿಯರು ನಿಜವಾಗಿಯೂ ನಮಗೆ ಒಂದು ಮಾರ್ಗವನ್ನು ತೋರಿಸಿದ್ದಾರೆ. ಇಂದು ನಾವೆಲ್ಲರೂ ಅವರೊಂದಿಗೆ ಸೇರಿ, ಜಗತ್ತಿನಲ್ಲಿ ದೇವರ ಸಾಮ್ರಾಜ್ಯವನ್ನು ನಿರ್ಮಿಸಲು ಕೆಲಸ ಮಾಡುವ ಮೂಲಕ ಅವರ ಸಾಕ್ಷಿಗೆ ಪ್ರತಿಕ್ರಿಯಿಸೋಣ.