ಭಾರತ: ಮಣಿಪುರ ಹಿಂಸಾಚಾರದ ಸಂತ್ರಸ್ತರಿಗೆ ಚೇತರಿಕೆಯ ಹಾದಿಯಲ್ಲಿ ಧರ್ಮಸಭೆಯ ನೆರವು
ಸಿಸ್ಟರ್ ಫ್ಲೋರಿನಾ ಜೋಸೆಫ್, SCN
ಭಾರತದ ಈಶಾನ್ಯ ರಾಜ್ಯವಾದ ಮಣಿಪುರದಲ್ಲಿ ಕುಕಿ ಮತ್ತು ಮೈಟೈ ಸಮುದಾಯಗಳ ನಡುವೆ ಜನಾಂಗೀಯ ಸಂಘರ್ಷ ಭುಗಿಲೆದ್ದು ಸುಮಾರು ಎರಡು ವರ್ಷಗಳು ಕಳೆದಿವೆ.
200ಕ್ಕೂ ಹೆಚ್ಚು ಜೀವಗಳನ್ನು ಬಲಿತೆಗೆದುಕೊಂಡ ಈ ಹಿಂಸಾಚಾರವು ಭಾರಿ ಸಂಖ್ಯೆಯಲ್ಲಿ ಸ್ಥಳಾಂತರಕ್ಕೂ ಕಾರಣವಾಯಿತು, 2024ರ ಗ್ಲೋಬಲ್ ರಿಪೋರ್ಟ್ಸ್ ಪ್ರಕಾರ, ಸರಿಸುಮಾರು 67,000 ಜನರನ್ನು ಆಂತರಿಕವಾಗಿ ಸ್ಥಳಾಂತರಗೊಂಡವರು (IDP) ಎಂದು ವರ್ಗೀಕರಿಸಲಾಗಿದೆ.
ಇಂದು, ಸಂಘರ್ಷದ ಸಂತ್ರಸ್ತರು ತಮ್ಮ ಆಘಾತದಿಂದ ಬಳಲುತ್ತಿದ್ದಾರೆ. ಹಲವರು ಪರಿಹಾರ ಶಿಬಿರಗಳಲ್ಲಿ ವಾಸಿಸುತ್ತಿದ್ದರೆ, ಇತರರು ಬಾಡಿಗೆ ಮನೆಗಳಲ್ಲಿ ಅಥವಾ ಇಂಫಾಲ್ ಮಹಾಧರ್ಮಕ್ಷೇತ್ರವು ನಿರ್ಮಿಸಿದ ಮನೆಗಳಲ್ಲಿ ಆಶ್ರಯ ಪಡೆದಿದ್ದಾರೆ. ಕುಟುಂಬ, ಮನೆಗಳು, ಭೂಮಿ ಮತ್ತು ಆಸ್ತಿಯ ಆಳವಾದ ನಷ್ಟದ ಜೊತೆಗೆ, ಅವರು ಪ್ರತಿದಿನವೂ ತಮ್ಮ ಮೂಲಭೂತ ಅಗತ್ಯಗಳನ್ನು ಪೂರೈಸಲು ಹೆಣಗಾಡುತ್ತಿದ್ದಾರೆ.
ಮಾರ್ಚ್ 1 ರಂದು, ಮಣಿಪುರದ ಸಿಂಗ್‌ಗಟ್‌ನಲ್ಲಿರುವ ಸಂತ ಥೋಮಾಸ್ ರವರ ದೇವಾಲಯದ ಧರ್ಮಕೇಂದ್ರದಲ್ಲಿ, ಮಾನಸಿಕ ಯೋಗಕ್ಷೇಮದ ಮೇಲೆ ಕೇಂದ್ರೀಕರಿಸಿದ ತರಬೇತಿ ಕಾರ್ಯಕ್ರಮವನ್ನು ನಡೆಸಲಾಯಿತು. ಈ ಉಪಕ್ರಮವು ವಿವಿಧ ಪರಿಹಾರ ಶಿಬಿರಗಳಿಂದ 63 ಭಾಗವಹಿಸುವವ ವ್ಯಕ್ತಿಗಳನ್ನು ಒಟ್ಟುಗೂಡಿಸಿತು, ಈ ಶಿಬಿರಗಳ ಒಳಗೆ ಮತ್ತು ಹೊರಗೆ ಬೆಂಬಲ ಹಾಗೂ ಸೇವೆಗಳನ್ನು ಒದಗಿಸಲು 12 ಸ್ವಯಂಸೇವಕ ನಾಯಕರನ್ನು ಆಯ್ಕೆ ಮಾಡಲಾಯಿತು.
ಈ ಕಾರ್ಯಕ್ರಮವನ್ನು ಅಂತರರಾಷ್ಟ್ರೀಯ ಕಥೋಲಿಕ ವಲಸೆ ಆಯೋಗ (ICMC), ಭಾರತೀಯ ಕಥೋಲಿಕ ಧರ್ಮಾಧ್ಯಕ್ಷರುಗಳ ಸಮ್ಮೇಳನ (CCBI), ವಲಸಿಗರ ಆಯೋಗದ ಸಹಯೋಗದೊಂದಿಗೆ ಆಯೋಜಿಸಿದ್ದು, ಹಿಂಸಾಚಾರದಿಂದ ಬಾಧಿತರಾದವರ ಮಾನಸಿಕ, ದೈಹಿಕ ಮತ್ತು ಆಧ್ಯಾತ್ಮಿಕ ಯೋಗಕ್ಷೇಮವನ್ನು ಪರಿಹರಿಸುವ ಗುರಿಯನ್ನು ಹೊಂದಿದೆ.
ಮಣಿಪುರದ ಪ್ರಸ್ತುತ ಸ್ಥಿತಿ
ಸಿಂಗ್‌ನ್‌ಗಟ್‌ನಲ್ಲಿರುವ ಸಂತ ಥೋಮಾಸ್ ರವರ ದೇವಾಲಯದ ಧರ್ಮಕೇಂದ್ರದಲ್ಲಿ ಯಾಜಕ ಧರ್ಮಗುರು ಅಥಾನಾಸಿಯಸ್ ಮುಂಗ್ ರವರು, ಸಂಘರ್ಷದಿಂದ ಸ್ಥಳಾಂತರಗೊಂಡ ಸಂತ್ರಸ್ತರಿಗೆ ಸೇವೆ ಸಲ್ಲಿಸಿದ ತಮ್ಮ ಅನುಭವದ ಬಗ್ಗೆ ವ್ಯಾಟಿಕನ್ ಸುದ್ಧಿಯೊಂದಿಗೆ ಮಾತನಾಡಿದರು.
ಗುಂಡೇಟಿನ ಶಬ್ದಗಳು, ಹಿಂಸೆ ಮತ್ತು ಪ್ರಲಾಪಗಳು ಮಾತ್ರ ಕೇಳಿಬರುತ್ತಿದ್ದ ಸಮಯಕ್ಕೆ ಹೋಲಿಸಿದರೆ ನಾವು ಈಗ ಸಾಕಷ್ಟು ಶಾಂತಿ ಮತ್ತು ಸ್ಥಿರತೆಯನ್ನು ಕಾಣುತ್ತಿದ್ದೇವೆ, ಆದರೆ, ವಿಷಯಗಳು ಸಹಜ ಸ್ಥಿತಿಗೆ ಮರಳಿವೆ ಎಂದು ನಾನು ಹೇಳುವುದಿಲ್ಲ, ಆದರೆ ಉತ್ತಮ ಸ್ಥಿರತೆ ಕಂಡು ಬರುತ್ತಿದೆ ಎಂದು ಅವರು ಹೇಳಿದರು.
ಸಂಘರ್ಷವು ಪ್ರಾಥಮಿಕವಾಗಿ ಪ್ರದೇಶದ ಹೊರವಲಯದ ಪ್ರದೇಶಗಳಲ್ಲಿ ಸಂಭವಿಸಿದ್ದು, ಅವು ಈಗ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಒಳಪಟ್ಟಿವೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಕೃತಕ ಗಡಿಗಳನ್ನು ರಚಿಸಲಾಗಿದ್ದರೂ, ಸ್ಥಳಾಂತರಗೊಂಡವರ ಸ್ಥಿತಿ ಇನ್ನೂ ಭೀಕರವಾಗಿದೆ ಅಥವಾ ಚಿಂತಾಜನಕ ಸ್ಥಿತಿಯಲ್ಲಿಯೇ ಇದೆ.
ಜನರು ತಮ್ಮ ಮನೆ, ಭೂಮಿ ಮತ್ತು ಆಸ್ತಿಯನ್ನು ಕಳೆದುಕೊಂಡಿದ್ದಾರೆ ಹಾಗೂ ನಿಜವಾಗಿಯೂ ತುಂಬಾ ಕಷ್ಟಪಡುತ್ತಿದ್ದಾರೆ ಎಂದು ಧರ್ಮಗುರು ಮುಂಗ್ ರವರು ಹೇಳಿದರು. ಕೆಲವರು ಪರಿಹಾರ ಶಿಬಿರಗಳಲ್ಲಿ, ಇತರರು ಬಾಡಿಗೆ ಮನೆಗಳಲ್ಲಿ ಮತ್ತು ಉಳಿದವರು ಇಂಫಾಲ್ ಮಹಾಧರ್ಮಕ್ಷೇತ್ರವು ನಿರ್ಮಿಸಿದ ಆಶ್ರಯಗಳಲ್ಲಿ ವಾಸಿಸುತ್ತಿದ್ದಾರೆ.
ಆಶ್ರಯ ಮನೆಗಳಲ್ಲಿರುವವರ ಬಗ್ಗೆ ಮಾತನಾಡುತ್ತಾ, ಅವರ ನೆಲೆಸಲು ತಲೆಯ ಮೇಲೆ ಒಂದು ಸೂರು ಇರುವುದನ್ನು ಬಿಟ್ಟು ಅವರ ಬಳಿ ಬೇರೆ ಏನೂ ಇಲ್ಲ, ಮೂಲಭೂತ ಅವಶ್ಯಕತೆಗಳೂ ಇಲ್ಲ. ಅವರು ನಿರುದ್ಯೋಗಿಗಳು ಮತ್ತು ಯಾವುದೇ ಆದಾಯದ ಮೂಲಗಳಿಲ್ಲ ಎಂದು ಅವರು ಒತ್ತಿ ಹೇಳಿದರು.
ವಿಶ್ವಾದಾದ್ಯಂತದ ಬೆಂಬಲಿಗರಿಂದ ಉದಾರ ದೇಣಿಗೆಗಳು ನಿರ್ಣಾಯಕ ಸಹಾಯವನ್ನು ಒದಗಿಸಿವೆ ಮತ್ತು ಅವರು ಸರ್ಕಾರದಿಂದ ಪಡಿತರವನ್ನು ಪಡೆಯುತ್ತಾರೆ, ಆದರೆ ಈ ಕೊಡುಗೆಗಳು "ಯೋಗ್ಯ ಜೀವನಕ್ಕೆ ಸಾಕಾಗುವುದಿಲ್ಲ" ಎಂದು ಧರ್ಮಗುರು ಮುಂಗ್ ರವರು ಒಪ್ಪಿಕೊಂಡರು.
ಕಾಲಾನಂತರದಲ್ಲಿ ಹಿಂಸಾಚಾರ ಕಡಿಮೆಯಾಗಿದ್ದರೂ, ರಾಜಕೀಯ ಉದ್ವಿಗ್ನತೆಗಳು ಸ್ಥಳಾಂತರಗೊಂಡವರ ಜೀವನವನ್ನು ಸಂಕೀರ್ಣಗೊಳಿಸುತ್ತಲೇ ಇವೆ. ಎರಡು ವರ್ಷಗಳ ನಂತರ, ಕೆಲವರು ತಮ್ಮ ಮನೆಗಳಿಗೆ ಮರಳಲು ಪ್ರಯತ್ನಿಸುತ್ತಿದ್ದಾರೆ, ಆದರೆ ನಮ್ಮ ಪ್ರದೇಶಗಳು ಭಾರತೀಯ ಸೇನೆಯ ಭದ್ರಕೋಟೆಯಲ್ಲಿಯೇ ಉಳಿದಿವೆ ಎಂದು ಅವರು ವಿವರಿಸಿದರು.
ಶಿಕ್ಷಣ ಕೂಡ ಅಪಾರ ನಷ್ಟ ಅನುಭವಿಸಿದೆ. ಈ ಪ್ರದೇಶದಲ್ಲಿ ಸರ್ಕಾರಿ ಶಾಲೆಗಳು ಕಾರ್ಯನಿರ್ವಹಿಸುತ್ತಿಲ್ಲ, ಮತ್ತು ಖಾಸಗಿ ಸಂಸ್ಥೆಗಳು ಆರ್ಥಿಕ ನಿರ್ಬಂಧಗಳಿಂದಾಗಿ ಸ್ಥಳಾಂತರಗೊಂಡ ವಿದ್ಯಾರ್ಥಿಗಳಿಗೆ ಉಚಿತವಾಗಿ ವಸತಿ ಕಲ್ಪಿಸಲು ಹೆಣಗಾಡುತ್ತಿವೆ.
ಭರವಸೆಯ ವಿರುದ್ಧ ಭರವಸೆ
ಮಣಿಪುರದ ಬಿಕ್ಕಟ್ಟಿನ ಸಂದರ್ಭದಲ್ಲಿ, ಬಳಲುತ್ತಿರುವವರಿಗೆ ಸಾಂತ್ವನ ನೀಡುವಲ್ಲಿ ಧರ್ಮಸಭೆಯು ಪ್ರಮುಖ ಪಾತ್ರ ವಹಿಸಿದೆ.
ಇಂಫಾಲ್‌ನ ಮಹಾಧರ್ಮಕ್ಷೇತ್ರದ, ಸಹಯೋಗಿಗಳು ಮತ್ತು ದಾನಿಗಳ ಬೆಂಬಲದೊಂದಿಗೆ, ಸ್ಥಳಾಂತರಗೊಂಡ ಕುಟುಂಬಗಳಿಗೆ 600 ಮನೆಗಳನ್ನು ನಿರ್ಮಿಸಲು ಪ್ರಾರಂಭಿಸಿದೆ, ಅದರಲ್ಲಿ 200 ಈಗಾಗಲೇ ಪೂರ್ಣಗೊಂಡು ವಾಸವಾಗಿವೆ.
ಜನಾಂಗೀಯ ಹಿಂಸಾಚಾರದಿಂದ ಉಂಟಾದ ವಿನಾಶದಿಂದ ಪರಿಹಾರ ಶಿಬಿರಗಳಲ್ಲಿರುವ ಜನರು ಭಾವನಾತ್ಮಕವಾಗಿ ಮತ್ತು ಮಾನಸಿಕವಾಗಿ ತೊಂದರೆಗೀಡಾಗಿದ್ದಾರೆ, ಹದಗೆಡುತ್ತಿರುವ ಪರಿಸ್ಥಿತಿಗಳು ಅವರನ್ನು ನಿರುದ್ಯೋಗಿಗಳಾಗಿ ಮತ್ತು ತೀವ್ರ ಬಡತನದಲ್ಲಿ ಸಿಲುಕಿಸಿವೆ ಎಂದು ಧರ್ಮಗುರು ಮುಂಗ್ ರವರು ಹೇಳಿದರು.
ಮಾನಸಿಕ ಮತ್ತು ಭಾವನಾತ್ಮಕ ಬೆಂಬಲದ ತುರ್ತು ಅಗತ್ಯವನ್ನು ಗುರುತಿಸಿ, CCBI ಘಟಕದ ಸಿಸ್ಟರ್ ರಾಣಿ ಮತ್ತು ಧರ್ಮಗುರು ಜೈಸನ್ ರವರು, ಸಂತ್ರಸ್ತರು ತಮ್ಮ ಆಘಾತದಿಂದ ಗುಣಮುಖರಾಗಲು ಸಹಾಯವನ್ನು ಸಂಘಟಿಸಲು ಮುಂದೆ ಬಂದರು.
ಸ್ಥಳಾಂತರಗೊಂಡ ಸಮುದಾಯಗಳು ವಿವಿಧ ಸ್ಥಳಗಳಲ್ಲಿ ಹರಡಿಕೊಂಡಿರುವುದರಿಂದ, ಅವರಲ್ಲಿ ಕೆಲವರು ತಮ್ಮ ಸಹ ಸಂತ್ರಸ್ತರಿಗೆ ಬೆಂಬಲ ನೀಡಲು ಸ್ವಯಂಪ್ರೇರಿತರಾಗಿದ್ದಾರೆ. ಈ ಸ್ವಯಂಸೇವಕರನ್ನು ಅಗತ್ಯವಾದ ಮಾನಸಿಕ ಯೋಗಕ್ಷೇಮ ಕೌಶಲ್ಯಗಳಿಂದ ಸಜ್ಜುಗೊಳಿಸುವುದು ಸಮುದಾಯವನ್ನು ಗುಣಪಡಿಸಲು ಸಹಾಯ ಮಾಡುತ್ತದೆ ಏಕೆಂದರೆ ಅವರು ತಲುಪಬಹುದಾದ ಸಾಮೀಪ್ಯದಲ್ಲಿರುತ್ತಾರೆ ಹಾಗೂ ಅವರ ನೆರವು ಅವರಿಗೆ ದೇವರ ಭರವಸೆಯನ್ನು ತಂದಿದೆ ಎಂದು ಧರ್ಮಗುರು ಮುಂಗ್ ಗಮನಿಸಿದರು.
ಈ ಸಭೆಯು ಭಾಗವಹಿಸುವವರಿಗೆ ಒಂದು ಉತ್ಕೃಷ್ಟ ಅನುಭವವನ್ನು ನೀಡಿತು, ಅವರಲ್ಲಿ ಹಲವರಿಗೆ ಭೇಟಿಯಾಗುವ ಅವಕಾಶ ವಿರಳವಾಗಿ ಸಿಗುತ್ತದೆ. ಈ ಪುನರ್ಮಿಲನವು ಅವರ ಏಕತೆಯ ಭಾವನೆಯನ್ನು ಪುನರುಜ್ಜೀವನಗೊಳಿಸಿತು ಎಂದು ಅವರು ಹಂಚಿಕೊಂಡರು.
ಧರ್ಮಕೇಂದ್ರದ ಧರ್ಮಗುರುವಾಗಿ, ಮುಂಗ್ ರವರು ಆಧ್ಯಾತ್ಮಿಕ ಬೆಂಬಲದ ಮೇಲೂ ಗಮನಹರಿಸುತ್ತಾರೆ. ಅವರ ಆಧ್ಯಾತ್ಮಿಕ ಅಗತ್ಯಗಳನ್ನು ಪೂರೈಸುವುದು ಅವರಿಗೆ ಭರವಸೆಯನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು. CCBI ಸಹಯೋಗದೊಂದಿಗೆ, ಅವರು ಮಣಿಪುರದ ಸಂತ್ರಸ್ತರುಗಳನ್ನು ಬೆಂಬಲಿಸಲು ಸಿದ್ಧರಿರುವ ಸಂಸ್ಥೆಗಳನ್ನು ತಲುಪುವುದನ್ನು ಮುಂದುವರಿಸುತ್ತಾರೆ.
ಹಿಂಸಾಚಾರದ ಸಮಯದಲ್ಲಿ ಮನೆ ಸುಟ್ಟುಹೋದ ಸಾರಾ ಸುನನ್ನುವಾಮ್ ಕೂಡ ಬಾಧಿತರಲ್ಲಿ ಒಬ್ಬರಾಗಿದ್ದಾರೆ.
ನಾನು 20 ವರ್ಷಗಳಿಗೂ ಹೆಚ್ಚು ಕಾಲ ಬದುಕಿದ್ದ ಮನೆಯನ್ನು ಕಳೆದುಕೊಂಡೆ ಎಂದು ಅವರು ಹೇಳಿದರು. ನನ್ನ ಗಂಡ ಮತ್ತು ನಾನು ನಿರುದ್ಯೋಗಿಗಳು ಮತ್ತು ನಾಳೆ ಏನಾಗುತ್ತದೆ ಅಥವಾ ನಾವು ಹೇಗೆ ಬದುಕುಳಿಯುತ್ತೇವೆ ಎಂದು ನಮಗೆ ಎಂದಿಗೂ ತಿಳಿದಿಲ್ಲ. ಆದರೂ, ನಾನು ದೇವರ ಉಪಸ್ಥಿತಿಯನ್ನು ಸ್ಪಷ್ಟವಾಗಿ ಅನುಭವಿಸಿದ್ದೇನೆ ಎಂದು ನಾನು ಹೇಳಲೇಬೇಕು. ಈ ಕಷ್ಟದ ಸಮಯದಲ್ಲಿ ನಮ್ಮನ್ನು ರಕ್ಷಿಸಿದ್ದಕ್ಕಾಗಿ ನಾನು ದೇವರಿಗೆ ಮಾತ್ರ ಕೃತಜ್ಞನಾಗಿದ್ದೇನೆ.
ಮತ್ತೊಬ್ಬ ಬಾಧಿತ ಸಂತ್ರಸ್ತ ಶ್ರೀ ತುಂಗ್ಥಾಂಗ್ ರವರು ತಮ್ಮ ನಷ್ಟದ ಬಗ್ಗೆ ಮಾತನಾಡಿದರು. ನನ್ನ ಮನೆ ಮತ್ತು ವಸ್ತುಗಳು, ನನ್ನ ಗ್ರಾಮ ಮತ್ತು ನನ್ನ ಧರ್ಮಕೇಂದ್ರವು ಸುಟ್ಟುಹೋಗಿವೆ ಮತ್ತು ನಾನು ಲಮ್ಕಾಕ್ಕೆ ಸ್ಥಳಾಂತರಗೊಂಡಿದ್ದೇನೆ. ನಾನು ನೆಲೆಸಿದ ಧರ್ಮಕೇಂದ್ರದಲ್ಲಿ ಆಗಿರುವ ನಷ್ಟ ಭಯಾನಕವಾಗಿದೆ ಆದರೆ ನಾವು ಪರಸ್ಪರ ದೇವರು ನೀಡಿರುವ ಶಕ್ತಿಯನ್ನು ಕಂಡುಕೊಳ್ಳುತ್ತೇವೆ ಎಂದು ಹೇಳಿಕೊಂಡರು.
ಮಣಿಪುರ ಹಿಂಸಾಚಾರದ ಸಂತ್ರಸ್ತರುಗಳ ಚೇತರಿಕೆಯ ಹಾದಿಯು ದೀರ್ಘ ಮತ್ತು ಸವಾಲುಗಳಿಂದ ಕೂಡಿದೆ. ಅವರು ತಮ್ಮ ಜೀವನವನ್ನು ಪುನರ್ನಿರ್ಮಿಸುವಾಗ, ಸ್ಥಳಾಂತರ ಮತ್ತು ನಷ್ಟದ ಪರೀಕ್ಷೆ ಅಥವಾ ಕಷ್ಟಗಳನ್ನು ಜಯಿಸುವಲ್ಲಿ ವಿಶ್ವಾಸ ಮತ್ತು ಒಗ್ಗಟ್ಟು ಅತ್ಯಗತ್ಯವಾಗಿರುತ್ತದೆ.