ಕೆನಡಾದ ಧರ್ಮಸಭೆಗಳು ತಮ್ಮ ತೆರಿಗೆ ಸ್ಥಿತಿಗೆ ಪ್ರಸ್ತಾವಿತ ಬದಲಾವಣೆಗಳಿಂದ ಕಳವಳಗೊಂಡಿವೆ
ಆಲಿವಿಯರ್ ಬೊನ್ನೆಲ್
ಕೆನಡಾದ ಹೊಸ ಪ್ರಧಾನಿ ಮಾರ್ಕ್ ಕಾರ್ನಿರವರು, ಕಳೆದ ವಾರಾಂತ್ಯದಲ್ಲಿ ಲಿಬರಲ್ ಪಕ್ಷದ ನಾಯಕರಾಗಿ ಆಯ್ಕೆಯಾದ ನಂತರ, ಮಾರ್ಚ್ 14, ಶುಕ್ರವಾರದಂದು ಅಧಿಕೃತವಾಗಿ ಅಧಿಕಾರ ವಹಿಸಿಕೊಂಡರು. ಈ ಹಿಂದೆ ಕೆನಡಾ ಮತ್ತು ಯುನೈಟೆಡ್ ಕಿಂಗ್‌ಡಮ್‌ನ, ಕೇಂದ್ರ ಬ್ಯಾಂಕ್‌ಗಳನ್ನು ಮುನ್ನಡೆಸಿದ್ದ ಮಾಜಿ ಬ್ಯಾಂಕರ್, ಸುಮಾರು ಹತ್ತು ವರ್ಷಗಳ ಅಧಿಕಾರದ ನಂತರ ಜನವರಿ ಆರಂಭದಲ್ಲಿ ರಾಜೀನಾಮೆ ಘೋಷಿಸಿದ ಜಸ್ಟಿನ್ ಟ್ರುಡೊರವರು ಉತ್ತರಾಧಿಕಾರಿಯಾಗುತ್ತಾರೆ.
ಕೆನಡಾ ಸರ್ಕಾರದ ಹೊಸ ಮುಖ್ಯಸ್ಥರು ಎದುರಿಸುತ್ತಿರುವ ಮೊದಲ ಹಾಗೂ ಪ್ರಮುಖ ಸವಾಲು, ಡೊನಾಲ್ಡ್ ಟ್ರಂಪ್ ರವರು ಕೆನಡಾದ ವಿರುದ್ಧ ಪ್ರಾರಂಭಿಸಿದ ವ್ಯಾಪಾರ ಯುದ್ಧವನ್ನು ಪರಿಹರಿಸುವುದು. ಕೆನಡಾವನ್ನು "51ನೇ ಅಮೇರಿಕದ ರಾಜ್ಯ" ವನ್ನಾಗಿ ಪರಿವರ್ತಿಸುವ ಅಮೆರಿಕ ಅಧ್ಯಕ್ಷರ ಬೆದರಿಕೆಗಳು ಎರಡೂ ನೆರೆಯ ರಾಷ್ಟ್ರಗಳ ನಡುವೆ ಅಭೂತಪೂರ್ವ ಬಿಕ್ಕಟ್ಟನ್ನು ಹುಟ್ಟುಹಾಕಿವೆ.
ಪ್ರಸ್ತಾವಿತ ಬದಲಾವಣೆಗಳು
ಈ ಬೆದರಿಕೆಗಳು ಮತ್ತು ಪ್ರಚೋದನೆಗಳ ಹಿಂದೆ, ಇತ್ತೀಚಿನ ವಾರಗಳಲ್ಲಿ ಸಂಪೂರ್ಣವಾಗಿ ವಿಭಿನ್ನ ಸ್ವರೂಪದ ಮತ್ತೊಂದು ವಿಷಯವು ಮರೆಮಾಚಲ್ಪಟ್ಟಿದೆ: ಅದು ಕೆನಡಾದ ಧಾರ್ಮಿಕ ಸಂಸ್ಥೆಗಳ ದತ್ತಿ ಸ್ಥಾನಮಾನವನ್ನು ರದ್ದುಗೊಳಿಸುವ ಲಿಬರಲ್ ಸರ್ಕಾರದ ಯೋಜನೆ. ಹಣಕಾಸು ಸ್ಥಾಯಿ ಸಮಿತಿಯು ಡಿಸೆಂಬರ್‌ನಲ್ಲಿ 462 ಶಿಫಾರಸುಗಳೊಂದಿಗೆ ವರದಿಯನ್ನು ನೀಡಿತು. ಅವುಗಳಲ್ಲಿ ಎರಡು ಷರತ್ತುಗಳು ಈ ಸಮಸ್ಯೆಯನ್ನು ನೇರವಾಗಿ ಪರಿಹರಿಸುತ್ತವೆ.
"ಗರ್ಭಪಾತ ವಿರೋಧಿ ಸಂಸ್ಥೆಗಳ" ದತ್ತಿ ಸ್ಥಾನಮಾನವನ್ನು ರದ್ದುಗೊಳಿಸಲು ಷರತ್ತು 429 ಪ್ರಸ್ತಾಪಿಸುತ್ತದೆ. ಷರತ್ತುಗಳು ಮತ್ತು ಷರತ್ತಿನ ಸಂಖ್ಯೆ 430 ಈ ನೀತಿಯನ್ನು ಎಲ್ಲಾ ಧಾರ್ಮಿಕ ಸಂಸ್ಥೆಗಳಿಗೆ ವಿಸ್ತರಿಸುತ್ತದೆ. ಈ ಸಂಸ್ಥೆಗಳು ದತ್ತಿ ಸ್ಥಾನಮಾನವನ್ನು ಪಡೆಯುವುದನ್ನು ತಡೆಯುವ ಗುರಿಯನ್ನು 430ನೇ ಷರತ್ತು ಹೊಂದಿದೆ ಮತ್ತು ಇದು ಕೆನಡಾದ ಸಮಾಜದ ಮೇಲೆ ಭಾರಿ ಪರಿಣಾಮ ಬೀರಬಹುದು" ಎಂದು ಕ್ವಿಬೆಕ್‌ನಲ್ಲಿರುವ ಕ್ಯಾಥೋಲಿಕ್ ಮಾಧ್ಯಮ ಸಂಸ್ಥೆಯಾದ ಲೆ ವರ್ಬೆಯ ಸಂಪಾದಕ ಬೆಂಜಮಿನ್ ಬೋಯಿವಿನ್ ರವರು ವ್ಯಾಟಿಕನ್ ಸುದ್ಧಿಗೆ ವಿವರಿಸಿದರು.
ಧರ್ಮಸಭೆಗಳು ಎಚ್ಚರಿಕೆಯ ಗಂಟೆ ಬಾರಿಸುತ್ತವೆ
ಕೆನಡಾದಲ್ಲಿ ಧಾರ್ಮಿಕ ಸಂಸ್ಥೆಗಳು ನಿರ್ವಹಿಸುತ್ತಿರುವ ದತ್ತಿ ಕಾರ್ಯಗಳಲ್ಲಿ ಧರ್ಮಕೇಂದ್ರಗಳು, ಮಸೀದಿಗಳು ಮತ್ತು ಪ್ರಾರ್ಥನಾ-ಮಂದಿರಗಳು ಸೇರಿದಂತೆ ಹತ್ತಾರು ಸಾವಿರ ಸಂಘಗಳು ಸೇರಿವೆ. ಇಲ್ಲಿಯವರೆಗೆ, ಕೆನಡಾದ ಸಮಾಜದೊಳಗೆ ದತ್ತಿ ಚಟುವಟಿಕೆಗಳನ್ನು ಉತ್ತೇಜಿಸುವ ಸಲುವಾಗಿ ಸರ್ಕಾರವು ಈ ಸಂಸ್ಥೆಗಳಿಗೆ, ವ್ಯಕ್ತಿಗಳು ನೀಡಿದ ದೇಣಿಗೆಗಳ ಒಂದು ಭಾಗವನ್ನು ಮರುಪಾವತಿಸುತ್ತಿತ್ತು ಎಂದು ಬೆಂಜಮಿನ್ ಬೋಯಿವಿನ್ ರವರು ಹೇಳಿದರು.
ಫೆಬ್ರವರಿ 21 ರಂದು, ಟೊರೊಂಟೊದ ಮಹಾಧರ್ಮಾಧ್ಯಕ್ಷರಾದ ಕಾರ್ಡಿನಲ್ ಫ್ರಾಂಕ್ ಲಿಯೋರವರು ಹಣಕಾಸು ಸಚಿವ ಡೊಮಿನಿಕ್ ಲೆಬ್ಲಾಂಕ್ ರವರಿಗೆ ಪತ್ರ ಬರೆದು, ಧಾರ್ಮಿಕ ದತ್ತಿ ಸಂಸ್ಥೆಗಳು ತಮ್ಮ ಸಮರ್ಪಿತ ಸೇವೆ, ಸಂಪರ್ಕ ಪ್ರಯತ್ನಗಳು ಮತ್ತು ಅಗತ್ಯವಿರುವವರಿಗೆ ಕಾಳಜಿ ವಹಿಸುವ ಮೂಲಕ ನಮ್ಮ ರಾಷ್ಟ್ರದ ರಚನೆಯನ್ನು ಬಲಪಡಿಸುತ್ತವೆ ಎಂದು ಕಥೋಲಿಕ ಧರ್ಮಸಭೆಯ ಕಳವಳವನ್ನು ವ್ಯಕ್ತಪಡಿಸಿದರು. ಕಾರ್ಡಿನಲ್ ಲಿಯೋರವರು ಕೂಡ ಈ ಪ್ರಸ್ತಾಪವನ್ನು "ಸಂಪೂರ್ಣವಾಗಿ ಶೋಚನೀಯ ಮತ್ತು ಸ್ವೀಕಾರಾರ್ಹವಲ್ಲ" ಎಂದು ಖಂಡಿಸಿದರು. ಜೀವ ಪರ ಮತ್ತು ಧಾರ್ಮಿಕ ಸಂಸ್ಥೆಗಳು ತಮ್ಮ ದತ್ತಿ ಸ್ಥಾನಮಾನವನ್ನು ಕಳೆದುಕೊಂಡರೆ, ಅದು ಕೆನಡಾದ ಸಮಾಜದಲ್ಲಿ ವಿಶ್ವಾಸ, ಆರಾಧನೆ ಮತ್ತು ಧರ್ಮವು ಭರಿಸಲಾಗದ ಪಾತ್ರದ ದೀರ್ಘಕಾಲೀನ ಮಾನ್ಯತೆಗೆ ವಿರುದ್ಧವಾಗಿರುತ್ತದೆ ಎಂದು ವಾದಿಸಿದರು.
ಬಜೆಟ್ ಮತ್ತು ಷರತ್ತು 429 ಹಾಗೂ 430 ಇನ್ನೂ ಅಂಗೀಕರಿಸಲ್ಪಟ್ಟಿಲ್ಲವಾದರೂ, ದೇಶಾದ್ಯಂತ ಧಾರ್ಮಿಕ ಸಂಸ್ಥೆಗಳು ಎಚ್ಚರಿಕೆ ನೀಡುತ್ತಿವೆ. "ಧಾರ್ಮಿಕ ಸಮುದಾಯಗಳ ಅಸ್ತಿತ್ವ ಮತ್ತು ಸೇವೆಯು ಕೆನಡಾದ ಸಮಾಜಕ್ಕೆ ಅವರ ಸ್ವಂತ ಸದಸ್ಯರಿಗಿಂತ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ" ಎಂದು ಕೆನಡಾದ ಇವಾಂಜೆಲಿಕಲ್ ಫೆಲೋಶಿಪ್ (EFC) ಸಚಿವ ಡೊಮಿನಿಕ್ ರವರು ಲೆಬ್ಲಾಂಕ್‌ಗೆ ಕಳುಹಿಸಿದ ಮುಕ್ತ ಪತ್ರದಲ್ಲಿ ಹೇಳಿದ್ದಾರೆ.
ಕೆನಡಾದ ಸಮಾಜಕ್ಕೆ ಹಾನಿ
ವಾಸ್ತವವಾಗಿ, ಕೆನಡಾದಾದ್ಯಂತ ಧಾರ್ಮಿಕ ಸಂಘಗಳ ದತ್ತಿ ಪ್ರಭಾವ (ಕೆನಡಾ ಕಂದಾಯ ಸಂಸ್ಥೆಯ ಪ್ರಕಾರ, ದೇಶದ 73,000 ನೋಂದಾಯಿತ ದತ್ತಿ ಸಂಸ್ಥೆಗಳಲ್ಲಿ ಸರಿಸುಮಾರು 40% ರಷ್ಟಿದೆ) ಧರ್ಮದ ಪಾತ್ರವನ್ನು ಮೀರಿ ತಮ್ಮ ಕಾರ್ಯವನ್ನು ವಿಸ್ತರಿಸುತ್ತದೆ. ಕಾರ್ಡಸ್ ಸಂಶೋಧನಾ ಕೇಂದ್ರವು ಕಳೆದ ಡಿಸೆಂಬರ್‌ನಲ್ಲಿ ಪ್ರಕಟಿಸಿದ ಅಧ್ಯಯನದ ಪ್ರಕಾರ, ಧರ್ಮಸಭೆಗಳು ಮತ್ತು ಧಾರ್ಮಿಕ ಸಂಸ್ಥೆಗಳಿಗೆ ತೆರಿಗೆ ವಿನಾಯಿತಿಗಳು ಸರ್ಕಾರ ಸೇರಿದಂತೆ ಎಲ್ಲಾ ಕೆನಡಿಯದವರಿಗೆ ಅಥವಾ ಕೆನಡಿಯ ನಾಗರಿಕರಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಧಾರ್ಮಿಕ ಸಭೆಗಳು ತಮ್ಮ ಸಮುದಾಯಗಳಿಗೆ ನೀಡುವ ಕೊಡುಗೆಗಳ ಮೌಲ್ಯವು ಅವರು ಪಡೆಯುವ ತೆರಿಗೆ ವಿನಾಯಿತಿಗಳ ಮೊತ್ತಕ್ಕಿಂತ 10.5 ಪಟ್ಟು ಹೆಚ್ಚಾಗಿದೆ ಎಂದು ಅಧ್ಯಯನವು ಕಂಡುಹಿಡಿದಿದೆ.