ಮ್ಯಾನ್ಮಾರ್‌ನಲ್ಲಿ ಕಥೋಲಿಕ ಪಾಲನಾ ಕೇಂದ್ರದ ಮೇಲೆ ಬಾಂಬ್ ದಾಳಿ
ಡೆಬೊರಾ ಕ್ಯಾಸ್ಟೆಲ್ಲಾನೊ ಲುಬೊವ್
ಮ್ಯಾನ್ಮಾರ್‌ನ ಸೇನೆಯು ಉತ್ತರ ಕಚಿನ್ ರಾಜ್ಯದ ಕಥೋಲಿಕ ಪಾಲನಾ ಕೇಂದ್ರದ ಮೇಲೆ ಬಾಂಬ್ ದಾಳಿ ಮಾಡಿದೆ.
ವ್ಯಾಟಿಕನ್‌ನ ಫೈಡ್ಸ್ ಸುದ್ದಿ ಸಂಸ್ಥೆಯ ಪ್ರಕಾರ, ಬನ್ಮಾವ್ ಧರ್ಮಕ್ಷೇತ್ರದ ನಾನ್ ಹ್ಲೈಂಗ್ ಗ್ರಾಮೀಣ ಪ್ರದೇಶದಲ್ಲಿರುವ ಕಥೋಲಿಕ ದೇವಾಲಯವಾದ ಸಂತ ಮೈಕೆಲ್ ದೇವಾಲಯದ ಪಾಲನಾ ಕೇಂದ್ರವು ಮಾರ್ಚ್ 3 ರಂದು ಬರ್ಮೀಸ್ ಸೈನ್ಯ ನಡೆಸಿದ ಬಾಂಬ್ ದಾಳಿಯಿಂದ ನಾಶವಾಯಿತು. ಈ ದೇವಾಲಯವು ನೂರು ವರ್ಷಗಳಿಗೂ ಹೆಚ್ಚಿನ ಇತಿಹಾಸವನ್ನು ಹೊಂದಿದೆ.
ಧರ್ಮಕೇಂದ್ರದ ಗುರುಗಳ ಸಹಾಯಕ್ಕಾಗಿ ಜೆಸ್ವಿಟ್ ಯಾಜಕ ವಿಲ್ಬರ್ಟ್ ಮಿರೆಹ್ ರವರು, ತಮ್ಮ ದೇವಾಲಯದ ಸಂಕೀರ್ಣದ ಮೇಲೆ ಐದು ಶೆಲ್‌ಗಳು ಮತ್ತು ಎರಡು ಏರ್ ಬಾಂಬ್‌ಗಳನ್ನು ಹಾರಿಸಲಾಯಿತು, ಇದು ಕಟ್ಟಡದ ರಚನೆಗೆ ಡಿಕ್ಕಿ ಹೊಡೆದು ಹಾನಿಯನ್ನುಂಟುಮಾಡಿತು, ಆದರೆ ಯಾವುದೇ ಸಾವುನೋವುಗಳು ಸಂಭವಿಸಿಲ್ಲ ಎಂದು ಫೈಡ್ಸ್‌ಗೆ ತಿಳಿಸಿದರು.
ಕಚಿನ್ ರಾಜ್ಯದ ಸ್ಥಳೀಯ ಕಥೊಲಿಕ ಸಮುದಾಯವು, ಬನ್ಮಾವ್ ನಗರದ ಬಳಿಯ ಸ್ಥಳಗಳನ್ನು ವಶಪಡಿಸಿಕೊಂಡಿರುವ ಸಾಮಾನ್ಯ ಸೈನ್ಯ ಮತ್ತು ಜನಾಂಗೀಯ ಕಚಿನ್ ಪಡೆಗಳ ನಡುವೆ ನಡೆಯುತ್ತಿರುವ ಭೀಕರ ಸಂಘರ್ಷವನ್ನು ಸಹಿಸಿಕೊಳ್ಳುತ್ತಿದೆ.
ರಾಜ್ಯದಲ್ಲಿ ಸ್ವ-ನಿರ್ಣಯಕ್ಕಾಗಿ ಹೋರಾಡುವ ಕಚಿನಿನ ಸ್ವತಂತ್ರ ಸೇನಾಪಡೆಯು (ಕೆಐಎ), ದಶಕಗಳಿಂದ ಸಕ್ರಿಯವಾಗಿರುವ ಅತ್ಯುತ್ತಮ ಸಂಘಟಿತ ಜನಾಂಗೀಯ ಸೇನಾಪಡೆಗಳಲ್ಲಿ ಒಂದಾಗಿದೆ ಮತ್ತು ಆಡಳಿತಾರೂಢ ಮಿಲಿಟರಿ ಆಡಳಿತದ ವಿರುದ್ಧದ ಪ್ರತಿರೋಧದಲ್ಲಿ ಸೇರಿಕೊಂಡಿದೆ.
ನಿರಂತರ ಉದ್ವಿಗ್ನತೆ ಮತ್ತು ಹೋರಾಟ
ಕಚಿನ್ ರಾಜ್ಯದಲ್ಲಿ, ಬರ್ಮಾ ಸೈನ್ಯವು ಹೆಚ್ಚಿನ ಪ್ರದೇಶದಿಂದ ಹಿಂದೆ ಸರಿಯುವಂತೆ ಒತ್ತಾಯಿಸಲ್ಪಟ್ಟಿದೆ ಮತ್ತು ಫಿರಂಗಿ ಹಾಗೂ ವಾಯು ಬಾಂಬ್ ದಾಳಿಯ ಮೇಲೆ ಹೆಚ್ಚು ಅವಲಂಬಿತವಾಗಿದೆ.
ಸ್ಥಳೀಯ ಮೂಲಗಳ ಪ್ರಕಾರ, ಬನ್ಮಾವ್ ನಿಯಂತ್ರಣಕ್ಕಾಗಿ ನಡೆಯುತ್ತಿರುವ ಯುದ್ಧದಿಂದಾಗಿ, ನಗರದ ಹೆಚ್ಚಿನ ನಿವಾಸಿಗಳು ಪಲಾಯನ ಮಾಡಿದ್ದಾರೆ, ಕೇವಲ 20,000 ನಿವಾಸಿಗಳು ಮಾತ್ರ ಉಳಿದಿದ್ದಾರೆ.
ಸ್ಥಳಾಂತರಗೊಂಡವರು ಕಾಡುಗಳು ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಆಶ್ರಯ ಪಡೆದಿದ್ದಾರೆ, ಅಲ್ಲಿ ಬದುಕುಳಿಯಲು ಸಂಪನ್ಮೂಲಗಳು ವಿರಳವಾಗಿವೆ.
ಇತ್ತೀಚಿನ ವರ್ಷಗಳಲ್ಲಿ, 2021ರ ದಂಗೆಗೆ ಮುಂಚೆಯೇ, ಮ್ಯಾನ್ಮಾರ್ ಸೇನೆ ಮತ್ತು ಕೆಐಎ ನಡುವಿನ ಸಂಘರ್ಷವು ಈಗಾಗಲೇ 120,000ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಿತ್ತು.
ಯುದ್ಧವು ತೀವ್ರಗೊಂಡಿದೆ ಮತ್ತು ಕಳೆದ ಎರಡು ವರ್ಷಗಳಲ್ಲಿ, ಇದು ಬನ್ಮಾವ್ ಧರ್ಮಕ್ಷೇತ್ರದಲ್ಲಿರುವ ಹದಿಮೂರು ಧರ್ಮಕೇಂದ್ರಗಳಲ್ಲಿ ಒಂಬತ್ತು ಧರ್ಮಕೇಂದ್ರಗಳ ಮೇಲೆ ಪರಿಣಾಮ ಬೀರಿದೆ, ನಿರಾಶ್ರಿತರ ಸಂಖ್ಯೆಯನ್ನು ಹೆಚ್ಚಿಸಿದೆ.
ವಿನಾಶದ ಹೊರತಾಗಿಯೂ, ನಂಬಿಕೆ ಬಲವಾಗಿ ಉಳಿದಿದೆ
ಘಟನೆಯನ್ನು ವರದಿ ಮಾಡಲು, ವಿದ್ಯುತ್ ಮತ್ತು ಇಂಟರ್ನೆಟ್ (ಅಂತರ್ಜಾಲದ) ಸಂಪರ್ಕವಿರುವ ಸ್ಥಳವನ್ನು ಹುಡುಕಲು ದೂರದ ಸ್ಥಳಕ್ಕೆ ಪ್ರಯಾಣಿಸಬೇಕಾಯಿತು ಎಂದು ಯಾಜಕ ಮಿರೆಹ್ ರವರು ವಿವರಿಸಿದರು.
ಜುಲೈ 2024 ರಿಂದ ನಮ್ಮ ಪ್ರದೇಶದಲ್ಲಿ ವಿದ್ಯುತ್, ಫೋನ್ ಸೇವೆ ಮತ್ತು ಉಪಯುಕ್ತತೆಗಳನ್ನು ಸಂಪೂರ್ಣವಾಗಿ ಕಡಿತಗೊಳಿಸಲಾಗಿದೆ ಎಂದು ಅವರು ವಿವರಿಸಿದರು.
ಈ ದಾಳಿಯಲ್ಲಿ ಯಾವುದೇ ಸಾವುನೋವುಗಳು ಸಂಭವಿಸಿಲ್ಲ ಎಂದು ಗುರುಗಳು ಕೃತಜ್ಞತೆ ವ್ಯಕ್ತಪಡಿಸಿದರು, ಆದರೆ ಇಲ್ಲಿ ಜನರು ಬದುಕಲು ಹೆಣಗಾಡುತ್ತಿದ್ದಾರೆ, ಶಾಲೆಗಳು, ಚಿಕಿತ್ಸಾಲಯಗಳು ಅಥವಾ ವ್ಯಾಪಾರವಿಲ್ಲ ಎಂದು ಎಚ್ಚರಿಸಿದರು.
ಈ ಇತ್ತೀಚಿನ ದುರಂತದ ನಂತರವೂ, ಅವರು ತಮ್ಮ ಅಭಪ್ರಾಯವನ್ನು ಹಂಚಿಕೊಂಡರು, ಭಕ್ತವಿಶ್ವಾಸಿಗಳು ತಮ್ಮನ್ನು ತಾವು ಪ್ರಧಾನ ದೇವದೂತ ಮೈಕೆಲ್ ರವರ ಮೇಲೆ ಭರವಸೆಯಿಟ್ಟು, ತಮ್ಮನ್ನು ರಕ್ಷಿಸುವಂತೆ ಪ್ರಾರ್ಥಿಸುತ್ತಾರೆ. ಮಕ್ಕಳು ಮತ್ತು ಯುವಕರೂ ಸಹ ಸಂತ ಮೈಕೆಲ್ ರವರಿಗೆ ಸಮರ್ಪಿಸಿದ ಹಾಡನ್ನು ಹಾಡುತ್ತಾರೆ ಮತ್ತು ತಮಗೆ ರಕ್ಷಣೆಯಾಗಿರಲು ಸಂತ ಮೈಕೆಲ್ ರವರಲ್ಲಿ ಪ್ರಾರ್ಥಿಸುತ್ತಾರೆ.
"ದೇವಾಲಯದಲ್ಲಿ ಇದ್ದು ದೈವಾರಾಧನಾ ವಿಧಿ ಅರ್ಪಿಸವುದು ತುಂಬಾ ಅಪಾಯಕಾರಿ ಸನ್ನಿವೇಶವನ್ನು ಈ ದಾಳಿಯು ಉಂಟುಮಾಡಿದೆ, ಆದ್ದರಿಂದ ಅವರು ಸಾಮಾನ್ಯವಾಗಿ ಮರಗಳ ಕೆಳಗೆ ಪವಿತ್ರ ದೈವಾರಾಧನಾ ವಿಧಿಯನ್ನು ಅರ್ಪಿಸುತ್ತಾರೆ ಎಂದು ಅವರು ವಿವರಿಸಿದರು.
ಯಾತನೆ ಮತ್ತು ಕಠಿಣ ಪರಿಸ್ಥಿತಿಗಳ ಹೊರತಾಗಿಯೂ, ಅವರು ಹೇಳಿದರು, "ನಮ್ಮ ವಿಶ್ವಾಸ ಮತ್ತು ಆತ್ಮವು ಬಲವಾಗಿ ಉಳಿದಿದೆ.