ಅಲೆಪ್ಪೊದ ಪ್ರೇಷಿತ ಶ್ರೇಷ್ಠಗುರು: ನಮಗೆ ಮತ್ತೆ-ಒಂದುಗೂಡಿರುವ ಸಿರಿಯಾ ಬೇಕು
ರಾಬರ್ಟೊ ಸೆಟೆರಾ
ಸಿರಿಯಾವನ್ನು ಮತ್ತೆ ಒಂದುಗೂಡಿಸಬೇಕು ಮತ್ತು ಅಂತರರಾಷ್ಟ್ರೀಯ ಸಮುದಾಯವು ಶಾಂತಿ ಪ್ರಯತ್ನಗಳಿಗೆ ಕೊಡುಗೆ ನೀಡಬೇಕು ಎಂದು ಧರ್ಮಾಧ್ಯಕ್ಷರಾದ ಹನ್ನಾ ಜಲ್ಲೌಫ್ ರವರು ಹೇಳುತ್ತಾರೆ. ಅಲೆಪ್ಪೊದ ಪ್ರೇಷಿತ ಶ್ರೇಷ್ಠಗುರು ಮತ್ತು ಸಿರಿಯಾದ ಲತೀನ್ ಕಥೊಲಿಕರ ಆಧ್ಯಾತ್ಮಿಕ ನಾಯಕ ವ್ಯಾಟಿಕನ್ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ, ವಿಭಜಿತ ದೇಶವನ್ನು ಆವರಿಸಿರುವ ಆಘಾತಕಾರಿ ಪರಿಸ್ಥಿತಿಯ ಬಗ್ಗೆ ಚರ್ಚಿಸಿದರು.
ಅಸ್ಸಾದ್ ಕುಟುಂಬದೊಂದಿಗೆ ಸಂಬಂಧ ಹೊಂದಿರುವ ಅಲವೈಟ್ ಅಲ್ಪಸಂಖ್ಯಾತರು ವಾಸಿಸುವ ಕರಾವಳಿ ಲಟಾಕಿಯಾ ಪ್ರದೇಶದಲ್ಲಿ, ಮಾಜಿ ಅಧ್ಯಕ್ಷ ಬಷರ್ ಅಲ್-ಅಸ್ಸಾದ್ ರವರ ಅಲವೈಟ್ ಬೆಂಬಲಿಗರು ಮತ್ತು ದೇಶದ ಹೊಸ ಆಡಳಿತಗಾರರ ನಡುವೆ ಗುರುವಾರ ಭಾರೀ ಘರ್ಷಣೆಗಳು ಪ್ರಾರಂಭವಾದವು. ಅಲಾವೈಟ್ಸ್ ಜನರು, ಸಿರಿಯಾದಲ್ಲಿ ಸುನ್ನಿ ಮುಸ್ಲಿಮರ ನಂತರ ಎರಡನೇ ಅತಿದೊಡ್ಡ ಧಾರ್ಮಿಕ ಗುಂಪಾಗಿದ್ದಾರೆ. ಅಸ್ಸಾದ್ ರವರ ನೇತೃತ್ವದ ರಾಜ್ಯವು ತನ್ನ ಸೈನ್ಯ ಮತ್ತು ಭದ್ರತಾ ಉಪಕರಣಕ್ಕಾಗಿ ಅಲಾವೈಟ್ ಸಮುದಾಯದಿಂದ ಹೆಚ್ಚಿನ ಜನರನ್ನು ನೇಮಿಸಿಕೊಂಡಿದೆ.
72 ಗಂಟೆಗಳಲ್ಲಿ, 1,300ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು, ಅವರಲ್ಲಿ ಹಲವರು ನಾಗರಿಕರು. ವಿಶ್ವಸಂಸ್ಥೆಯ ಪ್ರಕಾರ, ಈ ಪ್ರದೇಶದಲ್ಲಿ ನಡೆದ ಪ್ರತೀಕಾರದ ದಾಳಿಯಲ್ಲಿ, ಮಹಿಳೆಯರು ಮತ್ತು ಮಕ್ಕಳೊಂದಿಗೆ ಸಂಪೂರ್ಣ ಅಲವೈಟ್ ಕುಟುಂಬಗಳು ಕೊಲ್ಲಲ್ಪಟ್ಟವು, ಅನೇಕ ಅಲವೈಟ್ ನ ನಾಗರಿಕರ ಮನೆಗಳು ಸುಟ್ಟುಹೋದವು ಮತ್ತು ಅವರನ್ನು ಬಲವಂತದಿಂದ ಸ್ಥಳಾಂತರಿಸಲಾಗಿದೆ. ಅಂತರರಾಷ್ಟ್ರೀಯ ಸಮುದಾಯದವರ ಪ್ರತಿಕ್ರಿಯೆಯ ಕೊರತೆಯು ಪರಿಸ್ಥಿತಿಯನ್ನು ಉಲ್ಬಣಗೊಳಿಸಿದೆ, ಇದು ತನಿಖೆಗಳು ಮತ್ತು ಹೊಣೆಗಾರಿಕೆಯ ಕರೆಗಳಿಗೆ ಕಾರಣವಾಗಿದೆ.
ಇತ್ತೀಚಿನ ಸಶಸ್ತ್ರ ಘರ್ಷಣೆಗಳು ದೇಶವನ್ನು ಮತ್ತೊಮ್ಮೆ ಅಂತರ್ಯುದ್ಧದತ್ತ ತಳ್ಳುತ್ತಿವೆಯೇ ಮತ್ತು ಹೊಸ ಆಡಳಿತವು ರಾಷ್ಟ್ರೀಯ ಪುನರೀಕೀಕರಣ ಮತ್ತು ಅಲ್ಪಸಂಖ್ಯಾತರ ಬಗ್ಗೆ ಸಹಿಷ್ಣುತೆಯನ್ನು ಅನುಸರಿಸುವ ಭರವಸೆಗಳನ್ನು ಉಳಿಸಿಕೊಳ್ಳುತ್ತಿದೆಯೇ ಎಂದು ಧರ್ಮಾಧ್ಯಕ್ಷರಾದ ಜಲ್ಲೌಫ್ ರವರು ತಮ್ಮ ಸಂದರ್ಶನದಲ್ಲಿ ಚರ್ಚಿಸಿದ್ದಾರೆ. ಆಂತರಿಕ ವಿಭಜನೆಗಳನ್ನು ಉತ್ತೇಜಿಸುವ ವಿದೇಶಿ ಶಕ್ತಿಗಳ ವಿರುದ್ಧವೂ ಅವರು ಎಚ್ಚರಿಸುತ್ತಾರೆ.
ಪ್ರಶ್ನೆ: ಸಿರಿಯಾದಲ್ಲಿ ಏನಾಗುತ್ತಿದೆ? ಇತ್ತೀಚಿನ ಸಶಸ್ತ್ರ ಘರ್ಷಣೆಗಳು ದೇಶವನ್ನು ಮತ್ತೆ ಅಂತರ್ಯುದ್ಧಕ್ಕೆ ತಳ್ಳುತ್ತಿವೆಯೇ? ಅಹ್ಮದ್ ಅಲ್-ಶರಾ ಅವರ ಹೊಸ ಆಡಳಿತವು ರಾಷ್ಟ್ರೀಯ ಪುನರೀಕೀಕರಣ ಮತ್ತು ಅಲ್ಪಸಂಖ್ಯಾತರ ಬಗ್ಗೆ ಸಹಿಷ್ಣುತೆಯ ಭರವಸೆಗಳನ್ನು ದ್ರೋಹ ಮಾಡುತ್ತಿದೆಯೇ?
ನಮ್ಮ ಭಕ್ತವಿಶ್ವಾಸಿಗಳ ಮೂಲಕ ನಾವು ಸಂಗ್ರಹಿಸಿದ ವರದಿಗಳು ಮತ್ತು ಸರ್ಕಾರಿ ಅಧಿಕಾರಿಗಳು ಒದಗಿಸಿದ ಅಧಿಕೃತ ಆವೃತ್ತಿಯಿಂದ, ಪದಚ್ಯುತ ಅಧ್ಯಕ್ಷರಾದ ಬಷರ್ ಅಲ್-ಅಸ್ಸಾದ್‌ಗೆ ನಿಷ್ಠರಾಗಿರುವ ಉಗ್ರಗಾಮಿಗಳು ಪ್ರಸ್ತುತ ಆಡಳಿತವನ್ನು ಉರುಳಿಸುವ ಗುರಿಯನ್ನು ಹೊಂದಿರುವ ಸಶಸ್ತ್ರ ದಂಗೆಯನ್ನು ಪ್ರಯತ್ನಿಸಿದ್ದಾರೆಂದು ತೋರುತ್ತದೆ. ಈ ಉಪಕ್ರಮವನ್ನು ನಂತರ ಸರ್ಕಾರಿ ಪರ ಪಡೆಗಳು ಕಠಿಣವಾಗಿ ಹತ್ತಿಕ್ಕಿದವು.
ಆರಂಭಿಕ ಪುನರ್ನಿರ್ಮಾಣಗಳ ಪ್ರಕಾರ, ಈ ಯೋಜನೆಯನ್ನು ಹಿಂದಿನ ದಿನಗಳಲ್ಲಿ ಅಸ್ಸಾದ್ ರವರ ಸರ್ಕಾರದ ಮಾಜಿ ಅಲಾವೈಟ್ ಅಧಿಕಾರಿಗಳು, ಹೆಜ್ಬೊಲ್ಲಾದ ಸಿರಿಯಾದ ಶಾಖೆ ಮತ್ತು ಇರಾನಿನ ಪರ ಶಿಯಾ ಮಿಲಿಟಿಯಾಗಳ ನಡುವಿನ ಸಭೆಯಲ್ಲಿ ರೂಪಿಸಲಾಗಿದೆ ಎಂದು ತೋರುತ್ತದೆ. ಆದಾಗ್ಯೂ, ಈ ಘರ್ಷಣೆಗಳು ಮೆಡಿಟರೇನಿಯದ ಕರಾವಳಿ ಗಡಿಗೆ ಸೀಮಿತವಾಗಿವೆ, ಜಬ್ಲೇಹ್‌ನಲ್ಲಿ ಪ್ರಾರಂಭವಾಗಿ ಲಟಾಕಿಯಾ ಪ್ರಾಂತ್ಯದ ಮೂಲಕ ಹೋಮ್ಸ್‌ನ ಒಳನಾಡಿನ ಗಡಿಯವರೆಗೆ ಹರಡಿವೆ.
ಮೊದಲ ದಾಳಿಯಲ್ಲಿ, ಹೊಸ ಸರ್ಕಾರದ ಸುಮಾರು ಇಪ್ಪತ್ತು ಸೈನಿಕರು ಸಾವನ್ನಪ್ಪಿದ್ದಾರೆಂದು ವರದಿಯಾಗಿದೆ, ಎರಡನೇ ಸರ್ಕಾರಿ ಸಿಬ್ಬಂದಿಯ ಚೆಕ್‌ಪಾಯಿಂಟ್ ಮೇಲೆ ನಡೆದ ದಾಳಿಯಲ್ಲಿ ಅಷ್ಟೇ ಸಂಖ್ಯೆಯ ಸೈನಿಕರು ಸಾವನ್ನಪ್ಪಿದ್ದಾರೆ. ಇದು ಸರ್ಕಾರಿ ಪಡೆಗಳ ತೀವ್ರ ದಮನಕ್ಕೆ ಕಾರಣವಾಯಿತು, ಇದರ ಪರಿಣಾಮವಾಗಿ ನೂರಾರು ಜನರು ಸಾವನ್ನಪ್ಪಿದರು. ದುರದೃಷ್ಟವಶಾತ್, ಕೆಲವು ಕ್ರೈಸ್ತರೂ ಸಹ ಕೊಲ್ಲಲ್ಪಟ್ಟರು ಎಂದು ನಾನು ತಿಳಿದುಕೊಂಡಿದ್ದೇನೆ, ಆದರೆ ಅವರ ಸಾವು ಆಕಸ್ಮಿಕವಾಗಿದ್ದರೂ, ಅವರು ಕ್ರೈಸ್ತರೂ ಎಂಬ ಕಾರಣಕ್ಕಾಗಿ ಅಲ್ಲ.
ಪ್ರಶ್ನೆ: ಆಡಳಿತ ಬದಲಾವಣೆಯ ನಂತರ ಹೊಸ ನಾಯಕತ್ವವನ್ನು ವ್ಯಕ್ತಪಡಿಸಿದ ರಾಷ್ಟ್ರೀಯ ಸಾಮರಸ್ಯದ ಕರೆಗಳಿಗೆ ಇದು ವಿರುದ್ಧವಾಗಿದೆಯೇ?
ಇತ್ತೀಚಿನ ದಿನಗಳಲ್ಲಿ, ಮಧ್ಯಂತರ ಅಧ್ಯಕ್ಷರಾದ ಅಲ್-ಶರಾರವರು ನೀಡಿದ ಹೇಳಿಕೆಗಳು ಎಚ್ಚರಿಕೆ ಮತ್ತು ಜವಾಬ್ದಾರಿಯನ್ನು ಪ್ರತಿಬಿಂಬಿಸುತ್ತವೆ ಎಂದು ನಾನು ನಂಬುತ್ತೇನೆ. ಒಂದೆಡೆ, ಹಳೆಯ ಆಡಳಿತದ ಬೆಂಬಲಿಗರಿಂದ ಪ್ರತಿಕೂಲ ಪ್ರತಿರೋಧವನ್ನು ನಿರೀಕ್ಷಿಸಲಾಗಿತ್ತು ಮತ್ತು ಅದನ್ನು ಬಲವಂತವಾಗಿ ಹಿಮ್ಮೆಟ್ಟಿಸಬೇಕು ಎಂದು ಅವರು ಹೇಳಿದರು. ಮತ್ತೊಂದೆಡೆ, ನಮ್ಮ ನಾಡಿಲ್ಲಿರುವ ವಿವಿಧ ಜನಾಂಗೀಯ ಮತ್ತು ಧಾರ್ಮಿಕ ಸಮುದಾಯಗಳ ನಡುವೆ ಸಹಬಾಳ್ವೆಯ ಮೂಲಕ ರಾಷ್ಟ್ರೀಯ ಸಾಮರಸ್ಯವನ್ನು ಸಾಧಿಸುವುದಕ್ಕಿಂತ ಸಿರಿಯಾಕ್ಕೆ ಬೇರೆ ದಾರಿಯಿಲ್ಲ ಎಂದು ಅವರು ದೃಢಪಡಿಸುತ್ತಲೇ ಇದ್ದಾರೆ.
ಪ್ರಶ್ನೆ: ಇಂತಹ ಅನಿಶ್ಚಿತ ಮತ್ತು ಉದ್ವಿಗ್ನ ಸಂದರ್ಭದಲ್ಲಿ, ಕ್ರೈಸ್ತರ ಪಾತ್ರವೇನು ಎಂದು ನೀವು ನಂಬುತ್ತೀರಿ?
ಜನಾಂಗೀಯ ಅಥವಾ ಧಾರ್ಮಿಕವಾಗಿರಲಿ, ಎಲ್ಲಾ ಅಲ್ಪಸಂಖ್ಯಾತರ ಗೌರವ ಮತ್ತು ಪೂರ್ಣ ಭಾಗವಹಿಸುವಿಕೆಗಾಗಿ ಅಧ್ಯಕ್ಷ ಅಲ್-ಶರಾರವರು ನೀಡಿದ ಭರವಸೆಗಳಿಗೆ ನಾವು ಬದ್ಧರಾಗಿದ್ದೇವೆ. ಈಗ, ಈ ನಿಟ್ಟಿನಲ್ಲಿ ಹೊಸ ಸರ್ಕಾರದಿಂದ ನಿರ್ದಿಷ್ಟ ಕ್ರಮಗಳನ್ನು ನಾವು ನೋಡಲು ಬಯಸುತ್ತೇವೆ.
ವಾಸ್ತವವಾಗಿ, ನಾವು ಇನ್ನು ಮುಂದೆ ಅಲ್ಪಸಂಖ್ಯಾತರಾಗಿ ಕಾಣಲು ಬಯಸುವುದಿಲ್ಲ, ಹೊಸ ಸಿರಿಯಾದಲ್ಲಿ ನಮಗೆ ಸಮಾನ ಹಕ್ಕುಗಳು ಮತ್ತು ಕರ್ತವ್ಯಗಳು ಬೇಕಾಗುತ್ತವೆ. ಹೊಸ ಸಂವಿಧಾನದ ಕರಡು ರಚನೆಗಾಗಿ ನಡೆದ ಸಮ್ಮೇಳನದಲ್ಲಿ, ನಾನು ವಿವಿಧ ಕ್ರೈಸ್ತ ಧರ್ಮದ ಪಂಗಡಗಳ, ಇತರ ಧರ್ಮಾಧ್ಯಕ್ಷರುಗಳ ಜೊತೆಗೆ ಪಾಲ್ಗೊಂಡಿದ್ದೆ. ನಾವು ಶಾಂತಿ, ಏಕತೆ, ಸ್ವಾತಂತ್ರ್ಯ ಮತ್ತು ಬಹುಧರ್ಮೀಯ ಸಹಬಾಳ್ವೆಯ ವಿಷಯದಲ್ಲಿ ನಮ್ಮ ಪ್ರಸ್ತಾಪಗಳನ್ನು ಸಲ್ಲಿಸಿದ್ದೇವೆ. ನಮ್ಮ ಈ ಅಂಶಗಳನ್ನು ದಾಖಲಿಸಿ ಅಂಗೀಕರಿಸಲಾಗಿದೆ ಎಂದು ಹೇಳಿದರು.
ಸಿರಿಯಾದಲ್ಲಿ ಶಾಂತಿ ನಿರ್ಮಾಣಕ್ಕೆ ಅಂತರರಾಷ್ಟ್ರೀಯ ಸಮುದಾಯವೂ ಕೊಡುಗೆ ನೀಡುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ.