ಉಕ್ರೇನಿಯ ಮಿಲಿಟರಿಯ ಧರ್ಮಗುರು: ದೇವರನ್ನು ಯುದ್ಧದ ಕತ್ತಲೆಗೆ ತರುವುದು
ಸ್ವಿಟ್ಲಾನಾ ಡುಖೋವಿಚ್
"ಯುದ್ಧದ ಕತ್ತಲೆಯಲ್ಲೂ ದೇವರು ನಮ್ಮ ನಡುವೆ ಇರುವಂತೆ ಮಾಡಲು ಮಿಲಿಟರಿಯ ಪಕ್ಕದಲ್ಲಿರುವುದು."
ಉಕ್ರೇನಿಯದ ಗ್ರೀಕ್ ಕಥೋಲಿಕ ಧರ್ಮಸಭೆಯ ಪಿತೃಪ್ರಧಾನ ಕಾರ್ಯಾಲಯದಲ್ಲಿ ಮಿಲಿಟರಿಯ ವಿಭಾಗದ ಜವಾಬ್ದಾರಿಯನ್ನು ವಹಿಸಿರುವ ಉಪ ಮುಖ್ಯಸ್ಥ ಜೆಸ್ವಿಟ್ ಯಾಜಕ ಆಂಡ್ರಿ ಜೆಲಿನ್ಸ್ಕಿರವರು, ವ್ಯಾಟಿಕನ್ ಸುದ್ಧಿಗೆ ತಮ್ಮ ಧ್ಯೇಯವನ್ನು ಈ ಮೇಲ್ಕಂಡ ವಾಕ್ಯದಲ್ಲಿ ವಿವರಿಸಿದ್ದಾರೆ.
ಫೆಬ್ರವರಿ 9 ರಂದು ಸಶಸ್ತ್ರ ಪಡೆಗಳು, ಪೊಲೀಸ್ ಮತ್ತು ಭದ್ರತ ಪಡೆಯ ಜ್ಯೂಬಿಲಿ ಮಹೋತ್ಸವದ ಕಾರ್ಯಕ್ರಮಗಳಲ್ಲಿ ಸೇರುವ ಮೊದಲು, ಫೆಬ್ರವರಿ 6 ರಿಂದ 8 ರವರೆಗೆ ಯುರೋಪಿನ ಧರ್ಮಾಧ್ಯಕ್ಷರುಗಳ ಸಮ್ಮೇಳನಗಳ ಮಂಡಳಿ (CCEE) ಆಯೋಜಿಸಿದ್ದ ಮಿಲಿಟರಿ ಅಧಿಕಾರಿಗಳು ಮತ್ತು ಮಿಲಿಟರಿ ವಿಭಾಗದ ಚಾಪ್ಲಿನ್ಸಿ ನಾಯಕರ ಸಭೆಯಲ್ಲಿ ಭಾಗವಹಿಸಲು ಅವರು ರೋಮ್‌ಗೆ ಭೇಟಿ ನೀಡುತ್ತಿದ್ದರು.
ಪ್ರಸ್ತುತ ಪ್ರಪಂಚದ ಕತ್ತಲೆಯಲ್ಲಿ ಭರವಸೆ ಕಳೆದುಕೊಳ್ಳದಿರಲು, ನಾವು ಪರಸ್ಪರ, ನಮ್ಮ ಸೇವೆ ಮತ್ತು ಕಾರ್ಯಗಳ ಮೂಲಕ ಒಬ್ಬರಿಗೊಬ್ಬರು ಹತ್ತಿರವಾಗಿರಬೇಕು ಎಂದು ಅವರು ಹೇಳಿದರು, ಭರವರಸೆಯ ಜ್ಯೂಬಿಲಿಯನ್ನು ಪ್ರತಿಬಿಂಬಿಸುತ್ತಾ. ನಾವು ನಮ್ಮ ದೃಷ್ಟಿಯನ್ನು ಶಿಲುಬೆಗೇರಿಸಿದ ಪ್ರಭುಯೇಸುವಿನ ಮೇಲೆ ಕೇಂದ್ರೀಕರಿಸಬೇಕು ಮತ್ತು ಅವರ ಪುನರುತ್ಥಾನವನ್ನು ಎಂದಿಗೂ ಮರೆಯಬಾರದು ಎಂದು ಹೇಳುತ್ತಾರೆ.
ಪ್ರಶ್ನೆ: ಯಾಜಕ ಆಂಡ್ರಿರವರೆ, ಮಿಲಿಟರಿ ಚಾಪ್ಲಿನ್ ರವರ ಪಾತ್ರವೇನು ಮತ್ತು ಯುದ್ಧವು ಈ ಧ್ಯೇಯವನ್ನು ಹೇಗೆ ಬದಲಾಯಿಸುತ್ತದೆ?
ಮಿಲಿಟರಿ ಚಾಪ್ಲಿನ್‌ನ ಪ್ರಮುಖ ಕರ್ತವ್ಯವೆಂದರೆ ಚೈತನ್ಯದ ಆರೈಕೆ, ಅಂದರೆ ನಾವು ಸೇವೆ ಸಲ್ಲಿಸುವವರ ಮಾನವೀಯತೆಯನ್ನು ನೋಡಿಕೊಳ್ಳುವುದು.
ಮಾನವೀಯತೆಗೆ ಸೇವೆ ಸಲ್ಲಿಸುವುದು ಎಂದರೆ ಮಾನವೀಯತೆಯಲ್ಲಿ ದೈವಿಕತೆಯ ಸವಿಯನ್ನು ಸೇವಿಸುವುದು, ಏಕೆಂದರೆ ನಾವೆಲ್ಲರೂ ದೇವರ ಪ್ರತಿರೂಪದಲ್ಲಿ ಸೃಷ್ಟಿಸಲ್ಪಟ್ಟಿದ್ದೇವೆ; ನಾವು ಜಗತ್ತಿನ ಸೃಷ್ಟಿಯಲ್ಲಿ ದೇವರ ಪ್ರಸನ್ನತೆ ಹೊಂದಿದವರು. ಇದರರ್ಥ ಜನರ ಸಂಕಷ್ಟಕ್ಕೆ ನೆರವಾಗುವುದು, ಜನರೊಂದಿಗೆ ನಡೆಯುವುದು, ಯುದ್ಧದ ಕತ್ತಲೆಯ ಮಧ್ಯೆಯೂ ದೇವರನ್ನು ನಮ್ಮ ನಡುವೆ ಪ್ರಸ್ತುತಪಡಿಸುವುದು.
ಪ್ರಶ್ನೆ: ಸೈನಿಕರನ್ನು ಮನುಷ್ಯರಾಗಿ ವರ್ತಿಸುವಂತೆ ಸಹಾಯ ಮಾಡುವುದು ಚಾಪ್ಲಿನ್ ರವರ ಪ್ರಮುಖ ಪಾತ್ರ. ಆದರೆ "ಮಾನವೀಯತೆ" ಎಂದರೆ ನಿಜವಾಗಿಯೂ ಏನು? ಇಂದು ಅದನ್ನು ವಿವರಿಸುವುದು ಅಗತ್ಯವೆಂದು ನೀವು ಭಾವಿಸುತ್ತೀರಾ?
ಹೌದು, ಅಗತ್ಯವೆಂದು ನಾನು ನಂಬುತ್ತೇನೆ, ಏಕೆಂದರೆ ನಾವು ಯುದ್ಧ, ದೌರ್ಜನ್ಯಗಳು, ಉಕ್ರೇನ್‌ನಲ್ಲಿ ನಾವು ಸ್ಪಷ್ಟವಾಗಿ ಕಣ್ಣಾರೆ ನೋಡುವ ಎಲ್ಲದರಿಂದ, ಆದರೆ ಅಲ್ಲಿ ಮಾತ್ರವಲ್ಲ, ನಾವೆಲ್ಲರೂ, ಮಾನವೀಯತೆಯು ಗಾಯಗೊಂಡಿರುವ ಜಗತ್ತಿನಲ್ಲಿ ವಾಸಿಸುತ್ತಿದ್ದೇವೆ. ಇಡೀ ಜಗತ್ತು ಯುದ್ಧದಿಂದ ಗಾಯಗೊಂಡಿದೆ. ವಿಭಿನ್ನ ವ್ಯಾಖ್ಯಾನಗಳನ್ನು ತಪ್ಪಿಸಲು ನಾವು 'ಮಾನವೀಯತೆ' ಎಂದರೆ ಏನು ಎಂದು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ.
ನಾವು ಮಾನವೀಯತೆಯ ಬಗ್ಗೆ ಮಾತನಾಡುವಾಗ, ʻದೇವರೆ-ಸೃಷ್ಟಿಸಿದ ಈ ಜಗತ್ತಿನಲ್ಲಿ ದೇವರ ಪ್ರಸನ್ನತೆ ನಮ್ಮೊಂದಿಗೆ ಇದೆ' ಎಂದು ಅರ್ಥೈಸುತ್ತೇವೆ ಎಂದು ನಾನು ನಂಬುತ್ತೇನೆ. ಕಥೋಲಿಕ ಧರ್ಮಸಭೆಯ ದೈವಶಾಸ್ತ್ರದ ಸಂಪ್ರದಾಯದಲ್ಲಿ, ಕ್ರೈಸ್ತ ಸಂಪ್ರದಾಯದಲ್ಲಿ, ದೈವತ್ವವು ಸಾರ್ವತ್ರಿಕ ಗುಣಲಕ್ಷಣಗಳನ್ನು ಹೊಂದಿದೆ: ದೇವರು ಸತ್ಯ, ಸಂಪೂರ್ಣ ಉತ್ತಮ, ನ್ಯಾಯಯುತ ಮತ್ತು ಸೌಂದರ್ಯಯುತವಾದುದು.
ಯುದ್ಧದ ಕತ್ತಲೆಯಲ್ಲಿ ನಡೆಯುತ್ತಿರುವ ನಮಗೆ, ಅತ್ಯಂತ ಮುಖ್ಯವಾದ ವಿಷಯವೆಂದರೆ ಇಲ್ಲಿಯೂ ಸಹ ನಾವು ಸೌಂದರ್ಯದ ಬಗ್ಗೆ ಕುರಿತು ಆಲೋಚಿಸಬೇಕು ಎಂಬುದನ್ನು ನೆನಪಿಟ್ಟುಕೊಳ್ಳುವುದು. ಸೌಂದರ್ಯವೆಂದರೆ, ಅದರಲ್ಲಿ ಬಹಳಷ್ಟಿದೆ: ಸೇವೆ ಮಾಡಲು, ಹಂಚಿಕೊಳ್ಳಲು ಸಿದ್ಧವಾಗಿರುವ ಹೃದಯದ ಸೌಂದರ್ಯತೆ. ನಾವು ಉಕ್ರೇನಿಯದ ಸೈನಿಕರು ಮತ್ತು ನಾಗರಿಕರಿಬ್ಬರಿಗೂ ಸೇವೆ ಸಲ್ಲಿಸುವಾಗ ಈ ಅನುಭವವನ್ನು ಕಾಣುತ್ತೇವೆ - ಮಾನವ ಹೃದಯದಲ್ಲಿ ತುಂಬಾ ಸೌಂದರ್ಯವಿದೆ ಮತ್ತು ಇದು ವಿಜಯದ ಮೂಲವಾಗಿದೆ, ಏಕೆಂದರೆ ಪ್ರೀತಿ ಮಾತ್ರ ಆ ಸೌಂದರ್ಯತೆಯನ್ನು ಗೆಲ್ಲಬಲ್ಲದು.
ಮನುಷ್ಯನಾಗಿರುವುದು ಒಂದು ಉಡುಗೊರೆ ಮತ್ತು ನಮ್ಮ ಹೃದಯ ಹಾಗೂ ಆತ್ಮದೊಳಗಿನ ದೈವಿಕ ಉಪಸ್ಥಿತಿಯನ್ನು ಸಾಧ್ಯವಾದಷ್ಟು ಹೋಲುವಂತೆ ಮಾಡಲು ನಮ್ಮಿಂದಾಗುವ ಪ್ರಯತ್ನದ ಅಗತ್ಯವಿದೆ. ನನಗೆ, ನಾಲ್ಕು ಪ್ರಮುಖ ಗುಣಗಳು ದಾರಿ ತೋರಿಸುತ್ತವೆ: ಯುದ್ಧದ ಕತ್ತಲೆಯ ನಡುವೆಯೂ ಸಹ, ಸತ್ಯವನ್ನು ಹುಡುಕುವುದು, ಒಳ್ಳೆಯತನವನ್ನು ಆರಿಸಿಕೊಳ್ಳುವುದು, ನ್ಯಾಯವನ್ನು ರಕ್ಷಿಸುವುದು ಮತ್ತು ಸೌಂದರ್ಯವನ್ನು ಆಲೋಚಿಸುವುದು.
ಪ್ರಶ್ನೆ: ಉಕ್ರೇನ್‌ನಲ್ಲಿನ ಯುದ್ಧದ ಸಂದರ್ಭದಲ್ಲಿ ಧರ್ಮಗುರುಗಳಿಗೆ ಇರುವ ದೊಡ್ಡ ಸವಾಲುಗಳು ಯಾವುವು?
ಅತ್ಯಂತ ಕಠಿಣವಾದ ವಿಷಯವೆಂದರೆ ನಶಿಸಿ ಹೋಗುತ್ತಿರುವ ಮಾನವೀಯತೆಯನ್ನು ನೋಡುವುದು- ನಿಜವಾದ, ಸಾಕಾರಗೊಂಡ ಮಾನವೀಯತೆ: ಸ್ನೇಹಿತನಲ್ಲಿ, ಮಗುವಿನಲ್ಲಿ, ಮಾನವನಲ್ಲಿ. ಇದು ಅತ್ಯಂತ ಕಷ್ಟಕರ.
ಇಂದು, ಸೌಂದರ್ಯ, ಮುಗ್ಧತೆ ಮತ್ತು ಮಾನವೀಯತೆಯು ಟ್ಯಾಂಕ್‌ಗಳಿಂದ ಮಾತ್ರವಲ್ಲದೆ ನ್ಯಾಯಕ್ಕಾಗಿ ಹೋರಾಡಲು, ಜವಾಬ್ದಾರಿಯನ್ನು ತೆಗೆದುಕೊಳ್ಳಲು, ಕಾಳಜಿ ವಹಿಸಲು ಇಷ್ಟವಿಲ್ಲದಿರುವಿಕೆಯಿಂದ ನಾಶವಾಗುವುದನ್ನು ನಾವು ನೋಡುತ್ತೇವೆ. ಇದು ಕೂಡ ಮಾನವೀಯತೆಯ ಮೇಲಿನ ಗಾಯವಾಗಿದೆ.
ಮುಂಚೂಣಿಯಲ್ಲಿರುವ ಮಿಲಿಟರಿ ಧರ್ಮಗುರುಗಳಿಗೆ, ಹಲವು ಸವಾಲುಗಳಿವೆ, ಆದರೆ ಅತ್ಯಂತ ದೊಡ್ಡ ಸವಾಲು ʻನೈತಿಕತೆಯಾಗಿದೆʼ ಎಂದು ನಾನು ನಂಬುತ್ತೇನೆ: ಇದನ್ನೆಲ್ಲಾ ನೋಡುವುದು ಮತ್ತು ಜಗತ್ತು ಸತ್ಯ, ನ್ಯಾಯ ಮತ್ತು ಸೌಂದರ್ಯವನ್ನು ಗೌರವಿಸುತ್ತದೆ ಎಂದು ಹೇಳಿಕೊಂಡರೂ ಸಹ, ಜಗತ್ತು ಅದನ್ನು ನೋಡದಿರಲು ಆಯ್ಕೆ ಮಾಡುತ್ತದೆ ಎಂದು ಅರಿತುಕೊಳ್ಳುವುದು.