MAP

Sulaymaniyah Deir Maryam al-Adhra Sulaymaniyah Deir Maryam al-Adhra 

ಇರಾಕ್‌ನ ಧಾರ್ಮಿಕ ವಿಭಜನೆಗಳನ್ನು ಗುಣಪಡಿಸುವ ಮಠ

ಉತ್ತರ ಇರಾಕ್‌ನ ಕುರ್ದಿಸ್ತಾನ್ ಪ್ರದೇಶದಲ್ಲಿ ನೆಲೆಸಿರುವ ಸ್ವಿಸ್ ಯಾಜಕ, ಧರ್ಮಗುರು ಜೆನ್ಸ್ ಪೆಟ್ಜೋಲ್ಡ್ ರವರು, ಅಂತರ-ಧರ್ಮೀಯ ಒಗ್ಗಟ್ಟನ್ನು ನಿರ್ಮಿಸುವ, ನಿರಾಶ್ರಿತರಿಗೆ ಸಹಾಯ ಮಾಡುವ ಮತ್ತು ಪುಟ್ಟ ಸ್ಥಳೀಯ ಕ್ರೈಸ್ತರ, ನಿರಂತರವಾಗಿ ಬದಲಾಗುತ್ತಿರುವ ಜನಸಂಖ್ಯೆಗೆ ಸೇವೆ ಸಲ್ಲಿಸುವ ತಮ್ಮ ಕೆಲಸದ ಬಗ್ಗೆ ವ್ಯಾಟಿಕನ್ ಸುದ್ಧಿಯೊಂದಿಗೆ ಮಾತನಾಡುತ್ತಾರೆ.

ಜೋಸೆಫ್ ಟುಲ್ಲೊಚ್

1990ರ ದಶಕದ ಮಧ್ಯಭಾಗದಲ್ಲಿ, ಜೆನ್ಸ್ ಪೆಟ್ಜೋಲ್ಡ್ ರವರು ಮೊದಲು ಸಿರಿಯಾಕ್ಕೆ ಬಂದಾಗ, ಅದು ಅವರ ಸ್ಥಳೀಯ ಸ್ವಿಟ್ಜರ್ಲೆಂಡ್‌ನಿಂದ ಪೂರ್ವಕ್ಕೆ ಪ್ರಯಾಣದ ತಾತ್ಕಾಲಿಕ ನಿಲ್ದಾಣವಾಗಿರಬೇಕಿತ್ತು. ಒಬ್ಬ ಅಜ್ಞೇಯತಾವಾದಿ ಮತ್ತು ಆಧ್ಯಾತ್ಮಿಕ ಅನ್ವೇಷಕನಾಗಿದ್ದ ಆತನ ನೈಜ ಗುರಿ, ಪೂರ್ವ ಏಷ್ಯಾದಲ್ಲಿ ಆತನು ಟಾವೊ ತತ್ತ್ವ ಮತ್ತು ಝೆನ್ ಬೌದ್ಧಧರ್ಮವನ್ನು ಅನ್ವೇಷಿಸಲು ಆಶಿಸಿದನು.

ಸಿರಿಯಾದಲ್ಲಿದ್ದಾಗ, ಪೆಟ್ಜೋಲ್ಡ್ ಮಾರ್ ಮೂಸಾದ ಮರುಭೂಮಿ ಮಠದ ಬಗ್ಗೆ ಕೇಳಿದ್ದರು. ಐದನೇ ಅಥವಾ ಆರನೇ ಶತಮಾನದಷ್ಟು ಹಿಂದಿನದ್ದಾದ ಇತ್ತೀಚೆಗೆ ಮುಸ್ಲಿಂ-ಕ್ರೈಸ್ತರ ಸಂವಾದಕ್ಕೆ ಮೀಸಲಿಟ್ಟಿದ್ದ ಇದನ್ನು ಇಟಾಲಿಯದ ಜೆಸ್ವಿಟ್ ಪಾವೊಲೊ ಡಾಲ್'ಒಗ್ಲಿಯೊರವರು ಪುನಃ ತೆರೆದರು.

ಪೆಟ್ಜೋಲ್ಡ್ ರವರು ಈ ಸ್ಥಳಕ್ಕೆ ಭೇಟಿ ನೀಡಲು ನಿರ್ಧರಿಸಿದರು. ಆ ಸಮಯದಲ್ಲಿ, ಕ್ರೈಸ್ತರು ಇನ್ನೊಂದು ಧರ್ಮವನ್ನು ಕೀಳಾಗಿ ನೋಡದೆ ಗಂಭೀರವಾಗಿ ಪರಿಗಣಿಸುವ ಸಾಮರ್ಥ್ಯ ಹೊಂದಿದ್ದಾರೆಂದು ನನಗೆ ತಿಳಿದಿರಲಿಲ್ಲ ಎಂದು ಧರ್ಮಗುರು ಪೆಟ್ಜೋಲ್ಡ್ ರವರು ವ್ಯಾಟಿಕನ್ ಸುದ್ಧಿಗೆ ಹೇಳುತ್ತಾರೆ. "ನನಗೆ ಈ ಕ್ರಿಯೆ ತುಂಬಾ ಇಷ್ಟವಾಯಿತು." ಕೊನೆಗೆ, ಮಾರ್ ಮೂಸಾದಲ್ಲಿ ಹಲವಾರು ಬಾರಿ ತಂಗಿದ್ದ ನಂತರ, ಪೆಟ್ಜೋಲ್ಡ್ ರವರು ಅಲ್ಲಿ ದೀಕ್ಷಾಸ್ನಾನ ಪಡೆಯಲು ನಿರ್ಧರಿಸಿದರು ಕೆಲವು ದಿನಗಳ ನಂತರ, 1996ರ ಕೊನೆಯಲ್ಲಿ, ಅವರು ಮಠಕ್ಕೆ ನವಶಿಷ್ಯರಾಗಿ ಪ್ರವೇಶಿಸಿದರು.

ಕುರ್ದಿಸ್ತಾನಕ್ಕೆ ಆಗಮನ
ಮಾರ್ ಮೂಸಾದಲ್ಲಿ ಒಂದು ದಶಕದ ಸೇವೆಯ ನಂತರ, 2010ರಲ್ಲಿ, ಮಹಾಧರ್ಮಾಧ್ಯಕ್ಷ ಲೂಯಿಸ್ ರಾಫೆಲ್ ಸಾಕೊರವರು - ಆಗ ಕಿರ್ಕುಕ್‌ನ ಚಾಲ್ಡಿಯನ್ನಿನ ಮಹಾಧರ್ಮಾಧ್ಯಕ್ಷರಾಗಿದ್ದರು, ಈಗ ಬಾಗ್ದಾದ್‌ನ ಪಿತೃಪ್ರಧಾನರು - ಇರಾಕ್‌ನಲ್ಲಿ ಒಂದು ಮಠವನ್ನು ತೆರೆಯಲು ಅಲ್ಲಿನ ಸಮುದಾಯದವರನ್ನು ಕೇಳಿಕೊಂಡರು.

ಈ ಯೋಜನೆಗೆ ಜೀವ ತುಂಬಲು ಇರಾಕ್‌ಗೆ ಕಳುಹಿಸಲಾದ ಮಾರ್ ಮೂಸಾ ಸನ್ಯಾಸಿಗಳಲ್ಲಿ ಪೆಟ್ಜೋಲ್ಡ್ ರವರು ಸಹ ಒಬ್ಬರು ಮತ್ತು ಅಂದಿನಿಂದ ಅವರು ಅಲ್ಲಿಯೇ ಇದ್ದಾರೆ.

ಇಂದು ಅವರು ಉತ್ತರ ಇರಾಕ್‌ನ ಕುರ್ದಿಸ್ತಾನ್ ಪ್ರದೇಶದ ಸುಲೈಮಾನಿಯಾದಲ್ಲಿರುವ ಮಠದ ಮುಖ್ಯಸ್ಥರಾಗಿದ್ದಾರೆ. ಈಗ ಚಾಲ್ಡಿಯನ್ನಿನ ಕಥೋಲಿಕ ದೇವಾಲಯದಲ್ಲಿ ದೀಕ್ಷೆ ಪಡೆದ ಯಾಜಕರಾಗಿರುವ ಧರ್ಮಗುರು ಪೆಟ್ಜೋಲ್ಡ್ ರವರ ಜೊತೆಗೆ, ಈ ಮಠವು ಜರ್ಮನಿಯ ಮಾರ್ ಮೂಸಾ ಸಮುದಾಯದ ಸಹ ಸದಸ್ಯರಾದ ಸಿಸ್ಟರ್ ಫ್ರೆಡೆರಿಕ್ ಗ್ರಾಫ್ ರವರ ನೆಲೆಯಾಗಿದೆ.

ಈ ಮಠದಲ್ಲಿ ಆರು ಅಥವಾ ಏಳು ಪೂರ್ಣಾವಧಿ ಉದ್ಯೋಗಿಗಳಿದ್ದು, ಅವರು ಅದರ ವಿವಿಧ ಯೋಜನೆಗಳನ್ನು ನಡೆಸಲು ಸಹಾಯ ಮಾಡುತ್ತಾರೆ. ಇದು ವಿವಿಧ ಭಾಷಾ ಕೋರ್ಸ್‌ಗಳನ್ನು ಆಯೋಜಿಸುತ್ತದೆ - ಅರಬ್ಬರಿಗೆ ಕುರ್ದಿಶ್, ಕುರ್ದಿಗಳಿಗೆ ಅರೇಬಿಕ್ ಮತ್ತು ಎರಡೂ ಗುಂಪುಗಳಿಗೆ ಇಂಗ್ಲಿಷ್ ಭಾಷೆಯನ್ನು ಕಲಿಸುವುದು. ಇದು ನಾಯಕತ್ವ ಮತ್ತು ನಿರ್ಧಾರ ತೆಗೆದುಕೊಳ್ಳುವಿಕೆಯಂತಹ ವಿಷಯಗಳ ಕುರಿತು ಕಾರ್ಯಕ್ರಮಗಳನ್ನು ನಡೆಸುತ್ತದೆ ಮತ್ತು ಪುಟ್ಟ ಸ್ಥಳೀಯ ಕ್ರೈಸ್ತ ಸಮುದಾಯದ ಗ್ರಾಮೀಣ ಅಗತ್ಯಗಳನ್ನು ಪೂರೈಸುತ್ತದೆ.

ಅಂತರಧರ್ಮೀಯ ಕೆಲಸ ಮತ್ತು ಶಾಂತಿ ನಿರ್ಮಾಣ
ಇರಾಕ್‌ನಲ್ಲಿ, ವಿವಿಧ ಸಮುದಾಯಗಳ ನಡುವಿನ ಸಂಪರ್ಕಗಳು ಸಿರಿಯಾಕ್ಕಿಂತ ಹೆಚ್ಚು ಸ್ಪಷ್ಟವಾಗಿ ಕಂಡುಬರುತ್ತವೆ ಎಂದು ಧರ್ಮಗುರು ಪೆಟ್ಜೋಲ್ಡ್ ರವರು ವಿವರಿಸುತ್ತಾರೆ. ಸಿರಿಯಾದಲ್ಲಿ, ವಿವಿಧ ಧರ್ಮಗಳ ವಿದ್ಯಾರ್ಥಿಗಳು ಒಟ್ಟಿಗೆ ಪ್ರವಾಸ ಕೈಗೊಳ್ಳುವುದನ್ನು ನಾನು ಹೆಚ್ಚಾಗಿ ನೋಡುತ್ತಿದ್ದೆ. ಆದರೆ, ಇರಾಕ್‌ನಲ್ಲಿ ಅದು ತುಂಬಾ ಕಡಿಮೆ ಸಂಭವಿಸುತ್ತದೆ.

ಈ ಕಾರಣಕ್ಕಾಗಿ, ಅಂತರ್ಧರ್ಮೀಯ ತಿಳುವಳಿಕೆಯನ್ನು ಉತ್ತೇಜಿಸುವ ಮಾರ್ ಮೂಸಾದ ಕಾಯಕವು ಸಿರಿಯದ ಮರುಭೂಮಿಯಲ್ಲಿ ಯಶಸ್ವಿಯಾಗುವಂತೆ ಸುಲೈಮಾನಿಯಾದಲ್ಲಿಯೂ ಯಶಸ್ವಿಯಾಗುತ್ತದೆಯೇ ಎಂಬ ಬಗ್ಗೆ ಅವರಿಗೆ ಆರಂಭದಲ್ಲಿ ಸಂದೇಹವಿತ್ತು ಎಂದು ಧರ್ಮಗುರು ಪೆಟ್ಜೋಲ್ಡ್ ರವರು ಹೇಳುತ್ತಾರೆ.

ಅವರು ಮುಂದುವರಿಸುತ್ತಾ, ನಾನು ಒಂದು ದಿನ ಮಠದ ದೇವಾಲಯದಲ್ಲಿ ನಿಂತಿದ್ದೆ, ಅಲ್ಲಿ ಪೂಜ್ಯ ಕನ್ಯಾಮರಿಯಳ ಐತಿಹಾಸಿಕ ಪ್ರತಿಮೆಯ ಮುಂದೆ ಮೇಣದಬತ್ತಿಗಳನ್ನು ಬೆಳಗಿಸಲು ಬರುವ ಹೆಚ್ಚಿನ ಮಹಿಳೆಯರು ಮುಸ್ಲಿಮರು ಎಂದು ನಾನು ಅರಿತುಕೊಂಡೆ. ಆಗ ನನಗೆ ಅರಿವಾಯಿತು, ಈ ಕ್ರಿಯೆ ಕಾರ್ಯನಿರ್ವಹಿಸುವುದು ಎಂದು ತಿಳಿದುಕೊಂಡೆ.

ಮಠದ ಎಲ್ಲಾ ಯೋಜನೆಗಳು ಅಂತರ್ಧರ್ಮೀಯ ಸಂಬಂಧಗಳನ್ನು ಉತ್ತೇಜಿಸುವ ಗುರಿಗೆ ಕೊಡುಗೆ ನೀಡುತ್ತವೆ ಎಂದು ಧರ್ಮಗುರು ಪೆಟ್ಜೋಲ್ಡ್ ಹೇಳುತ್ತಾರೆ. ಪ್ರತಿ ವರ್ಷ ಸುಮಾರು 2,000 ರಿಂದ 3,000 ಜನರು ಮಠಕ್ಕೆ ಭೇಟಿ ನೀಡಿ ಅದರ ಕೋರ್ಸ್‌ಗಳಲ್ಲಿ ಭಾಗವಹಿಸುತ್ತಾರೆ ಮತ್ತು ಅವರಲ್ಲಿ ಕೆಲವೇ ಜನರು ಕ್ರೈಸ್ತರು.

ಆದರೆ ಸ್ವಿಸ್ ಧರ್ಮಗುರು ಮಠದ ಅತಿದೊಡ್ಡ ಕೊಡುಗೆಯೆಂದರೆ ಅದು ಸುಗಮಗೊಳಿಸುವ ಅನೌಪಚಾರಿಕ ಸಭೆಗಳು ಎಂದು ಭಾವಿಸುತ್ತಾರೆ. ಅವರ ಮುಖ್ಯ ಉದ್ದೇಶ ಜನರನ್ನು ಭೇಟಿಯಾಗಿ ಚರ್ಚಿಸುವಂತೆ ಮಾಡುವುದು ಮಾತ್ರ ಎಂದು ಅವರು ಹೇಳುತ್ತಾರೆ. ಮಾನವ ಹಕ್ಕುಗಳ ಬಗ್ಗೆ ದೀರ್ಘ ಚರ್ಚೆಗಳನ್ನು ನಡೆಸುವುದಕ್ಕಿಂತ ಒಟ್ಟಿಗೆ ಚಹಾ ಕುಡಿಯುವುದು ಶಾಂತಿ ನಿರ್ಮಾಣಕ್ಕೆ ಹೆಚ್ಚು ಪರಿಣಾಮಕಾರಿಯಾಗಿದೆ.”

“ಅದು ನನ್ನ ವೈಯಕ್ತಿಕ ವಿಶ್ವಾಸ” ಎಂದು ಅವರು ಹೇಳುತ್ತಾರೆ, ಒಟ್ಟಿಗೆ ಒಂದು ಕಪ್ ಚಹಾ ಕುಡಿದ ನಂತರ ಯಾರನ್ನಾದರೂ ಗುಂಡು ಹಾರಿಸುವುದು ತುಂಬಾ ಕಷ್ಟ.

ಭರವಸೆಯ ಬೀಜಗಳು
ಮಠದಲ್ಲಿ ಕೈಗೊಳ್ಳುವ ಹೆಚ್ಚಿನ ಕೆಲಸಗಳು, ಇಲ್ಲಿನ ಯುವಜನರಿಗೆ ಭವಿಷ್ಯವನ್ನು ರೂಪಿಸಿಕೊಳ್ಳುವ ಬಯಕೆಯೊಂದಿಗೆ ಸಂಬಂಧ ಹೊಂದಿವೆ ಎಂದು ಧರ್ಮಗುರು ಪೆಟ್ಜೋಲ್ಡ್ ರವರು ಹೇಳುತ್ತಾರೆ. ಯುವಕರೊಂದಿಗೆ ಕೆಲಸ ಮಾಡಲು ನನಗೆ ತುಂಬಾ ಆಸಕ್ತಿ ಇದೆ ಎಂದು ಅವರು ಹೇಳುತ್ತಾರೆ. ಅವರು ಸಾಕಷ್ಟು ಶಕ್ತಿಯನ್ನು ಹೊಂದಿದ್ದಾರೆ ಮತ್ತು ಅವರು ಇನ್ನೂ ಸಾಕಷ್ಟು ಭರವಸೆಯನ್ನು ಹೊಂದಿದ್ದಾರೆ. ಕೆಲವೊಮ್ಮೆ, ಅವರು ಇಲ್ಲಿ ನಡೆಸುವ ಚರ್ಚೆಗಳನ್ನು, ಅವರು ಒಟ್ಟಿಗೆ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುವ ರೀತಿಯನ್ನು ನಾನು ನೋಡುತ್ತೇನೆ ಮತ್ತು ಬಹುಶಃ 15 ವರ್ಷಗಳ ನಂತರ ಒಂದು ದಿನ, ಅವರು ಆ ಚರ್ಚೆಗಳನ್ನು ಹಾಗೂ ಒಟ್ಟಿಗೆ ಕೆಲಸ ಮಾಡುವ ಮನೋಭಾವವನ್ನು ನೆನಪಿಸಿಕೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ.

ಈ ಸಂದರ್ಶನವು ವ್ಯಾಟಿಕನ್ ಸುದ್ಧಿಯ 2025ರ ಜ್ಯೂಬಿಲಿ ವರ್ಷದ “ಭರವಸೆಯ ಬೀಜಗಳ” ಯೋಜನೆಯ ಭಾಗವಾಗಿ ನಡೆಯುತ್ತಿರುವುದರಿಂದ, ಹೆಚ್ಚು ಆಶಾದಾಯಕ ಭವಿಷ್ಯದ ಅನಾವರಣಕ್ಕೆ ಮಠದ ಕಾರ್ಯವು ಕೊಡುಗೆ ನೀಡುತ್ತದೆಯೇ ಎಂದು ನಾವು ಧರ್ಮಗುರು ಪೆಟ್ಜೋಲ್ಡ್ ರವರನ್ನು ಕೇಳಿದೆವು. ಅದಕ್ಕೆ ಅವರು ನಾವು 'ಭರವಸೆಯ ಬೀಜ'ವೋ ಇಲ್ಲವೋ ನನಗೆ ಗೊತ್ತಿಲ್ಲ, “ನಾವು ಕೆಲಸ ಮಾಡುವ ಜನರು ತಮ್ಮೊಳಗಿನ ಆ ಭರವಸೆಯ ಬೀಜವನ್ನು ಕಂಡುಕೊಳ್ಳಲು ಸಹಾಯ ಮಾಡುವುದು ನಮ್ಮ ಗುರಿಯಾಗಿದೆ" ಎಂದು ಅವರು ಹೇಳಿದರು.

07 ಫೆಬ್ರವರಿ 2025, 12:55