MAP

Funeral mass for priest Funeral mass for priest  

ಮ್ಯಾನ್ಮಾರ್‌ನಲ್ಲಿ ಹತ್ಯೆಗೀಡಾದ ಕಥೋಲಿಕ ಯಾಜಕನ ಅಂತ್ಯಕ್ರಿಯೆ

ಫೆಬ್ರವರಿ 14 ರಂದು ಮ್ಯಾಂಡಲೆಯ ಮಹಾಧರ್ಮಕ್ಷೇತ್ರದಲ್ಲಿರುವ ಲೂರ್ದುಮಾತೆ ದೇವಾಲಯ (ಅವರ್ ಲೇಡಿ ಆಫ್ ಲೂರ್ಡ್ಸ್)ದ ಧರ್ಮಕೇಂದ್ರದಲ್ಲಿ ಕ್ರೂರವಾಗಿ ಹತ್ಯೆಗೀಡಾದ ಕಥೋಲಿಕ ಯಾಜಕರಾದ ಧರ್ಮಗುರು ಡೊನಾಲ್ಡ್ ಮಾರ್ಟಿನ್ ಯೆ ನೈಂಗ್ ವಿನ್ ರವರಿಗೆ ಬರ್ಮದ ಸಾವಿರಾರು ನಾಗರಿಕರು ಅಂತಿಮ ವಿದಾಯ ಹೇಳಿದರು.

ಲಿಕಾಸ್‌ ಸುದ್ಧಿ

ಪೈನ್ ಊ ಲ್ವಿನ್ ಗ್ರಾಮದಲ್ಲಿ 5,000ಕ್ಕೂ ಹೆಚ್ಚು ಜನರು ಒಟ್ಟುಗೂಡಿದರು, ಅಪಾಯಗಳು ಮತ್ತು ಚಾಲ್ತಿಯಲ್ಲಿರುವ ಹಿಂಸಾಚಾರವನ್ನು ಧಿಕ್ಕರಿಸಿ, ದಿವಂಗತ ಯಾಜಕರನ್ನು ಗೌರವಿಸಿದರು.

ಮಹಾಧರ್ಮಾಧ್ಯಕ್ಷರಾದ ಮಾರ್ಕೊ ಟಿನ್ ವಿನ್ ರವರು ಕಥೋಲಿಕ ದೇವಾಲಯವಾದ ಕನ್ಯಮಾತೆಯ ಸ್ವರ್ಗಾರೋಹಣಾ ದೇವಾಲಯದಲ್ಲಿ (ಚರ್ಚ್ ಆಫ್ ದಿ ಅಸಂಪ್ಷನ್ ಆಫ್ ದಿ ವರ್ಜಿನ್ ಮೇರಿ) ದಿವಂಗತ ಧರ್ಮಗುರು ಡೊನಾಲ್ಡ್ ರವರ ಅಂತ್ಯಕ್ರಿಯೆಯ ದಿವ್ಯಬಲಿಪೂಜೆಯ ಅಧ್ಯಕ್ಷತೆ ವಹಿಸಿದ್ದರು. ಯಾಜಕರು, ಧಾರ್ಮಿಕ ವ್ಯಕ್ತಿಗಳು ಮತ್ತು ಭಕ್ತವಿಶ್ವಾಸಿಗಳೆಲ್ಲರೂ ಒಟ್ಟುಗೂಡಿ, ಹತ್ಯೆಗೀಡಾದ ಯಾಜಕರ ಕುಟುಂಬಕ್ಕೆ ಸಂತಾಪ ಮತ್ತು ಪ್ರಾರ್ಥನೆಗಳನ್ನು ಸಲ್ಲಿಸಿದರು.

ಈ ಹೃದಯಸ್ಪರ್ಶಿ ಸಮಾರಂಭದಲ್ಲಿ ಯಾಂಗೋನ್‌ನಲ್ಲಿರುವ ಪ್ರೇಷಿತ ರಾಯಭಾರಿ ಮತ್ತು ಮ್ಯಾನ್ಮಾರ್‌ನ ಧರ್ಮಾಧ್ಯಕ್ಷರುಗಳ ಸಮ್ಮೇಳನದ ಸಂದೇಶಗಳನ್ನು ಓದಲಾಯಿತು, ಇದು ದುಃಖಿತ ಸಮುದಾಯದೊಂದಿಗೆ ತಮ್ಮ ಆಳವಾದ ಒಗ್ಗಟ್ಟನ್ನು ವ್ಯಕ್ತಪಡಿಸಿತು.

ಫೈಡ್ಸ್ ಸುದ್ಧಿ ಏಜೆನ್ಸಿಯ ಮೂಲಗಳ ಪ್ರಕಾರ, ಅಂತ್ಯಕ್ರಿಯೆಯಲ್ಲಿ ಅಗಾಧವಾದ ಜನಸಮೂಹವು ಸ್ಥಳೀಯ ಜನರಲ್ಲಿ ಧರ್ಮಗುರು ಡೊನಾಲ್ಡ್ ರವರ ಬಗ್ಗೆ ಇದ್ದ ಹೆಚ್ಚಿನ ಗೌರವವನ್ನು ಪ್ರತಿಬಿಂಬಿಸುತ್ತದೆ.

ಮಹಾಧರ್ಮಾಧ್ಯಕ್ಷರಾದ ಟಿನ್ ವಿನ್ ರವರು, ದೈವಾರಾಧನಾ ವಿಧಿಯ, ತಮ್ಮ ಪ್ರಬೋಧನಾ ಸಮಯದಲ್ಲಿ, ರಾಷ್ಟ್ರವನ್ನು ಆವರಿಸಿರುವ ಹಿಂಸಾಚಾರವನ್ನು ಖಂಡಿಸುತ್ತಾ, "ಹಿಂಸೆ - ಸಾವು ಮತ್ತು ವಿನಾಶವನ್ನು ಮಾತ್ರ ತರುತ್ತದೆ; ಹಿಂಸೆ - ಯಾವಾಗಲೂ ಸೋಲನ್ನು ಮಾತ್ರ ತರುತ್ತದೆ" ಎಂದು ಹೇಳಿದರು.

ಸಂಘರ್ಷದಲ್ಲಿ ಭಾಗಿಯಾಗಿರುವ ಎಲ್ಲಾ ಸಶಸ್ತ್ರ ಗುಂಪುಗಳು, ತಮ್ಮ ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಶಾಂತಿ ಮತ್ತು ಸಾಮರಸ್ಯದ ಹಾದಿಯನ್ನು ಹಿಡಿಯಬೇಕು ಎಂದು ಅವರು ಕರೆ ನೀಡಿದರು.

ಮಹಾಧರ್ಮಾಧ್ಯಕ್ಷರವರು ದಿವಂಗತ ಧರ್ಮಗುರುಗಳ, ಕುಟುಂಬ ಮತ್ತು ನೆರೆದಿದ್ದ ಸಭೆಯನ್ನು ಕನ್ಯಾ ಮಾತೆಮೇರಿಯ ಮಧ್ಯಸ್ಥಿಕೆಗೆ ಒಪ್ಪಿಸಿದರು. ನಮ್ಮ ದೇವತಾಯಿ ಮಾತೆಮರಿಯಮ್ಮನವರು ದಿವಂಗತ ಧರ್ಮಗುರು ಡೋನಾಲ್ಡ್ ರವರನ್ನು ಸ್ವರ್ಗಕ್ಕೆ ಕರೆದೊಯ್ಯಲಿ ಮತ್ತು ಎಲ್ಲರನ್ನೂ ತನ್ನ ಹೊದಿಕೆಯಡಿಯಲ್ಲಿಟ್ಟು ರಕ್ಷಿಸಲಿ, ಧರ್ಮಗುರು ಡೋನಾಲ್ಡ್ ರವರ ಕುಟುಂಬದವರಿಗೆ, ಸಾಂತ್ವನ ಮತ್ತು ಭರವಸೆಯನ್ನು ನೀಡಲಿ" ಎಂದು ಅವರು ಹೇಳಿದರು.

ಲೂರ್ದುಮಾತೆ ದೇವಾಲಯ (ಅವರ್ ಲೇಡಿ ಆಫ್ ಲೂರ್ಡ್ಸ್) ದ ಧರ್ಮಕೇಂದ್ರದ, ಮೊದಲ ಧರ್ಮಕೇಂದ್ರದ ಯಾಜಕರಾಗಿದ್ದ ಧರ್ಮಗುರು ಡೊನಾಲ್ಡ್ ರವರು, ಸಮುದಾಯಕ್ಕೆ, ವಿಶೇಷವಾಗಿ ಮಕ್ಕಳು ಮತ್ತು ಯುವಜನರಿಗೆ ಶೈಕ್ಷಣಿಕ ಉಪಕ್ರಮಗಳನ್ನು ಆಯೋಜಿಸುವಲ್ಲಿ ತಮ್ಮ ಸಮರ್ಪಣಾ ಕಾರ್ಯಗಳಿಗೆ ಹೆಸರುವಾಸಿಯಾಗಿದ್ದರು.

ಮುಂದುವರೆಯುತ್ತಿರುವ ಅಂತರ್ಯುದ್ಧದಿಂದಾಗಿ, ಈ ಪ್ರದೇಶದ ಅನೇಕ ಶಾಲೆಗಳು ಮುಚ್ಚಲ್ಪಟ್ಟಿವೆ, ಇದರಿಂದಾಗಿ ಧಾರ್ಮಿಕ ಮುಖಂಡರು ಮತ್ತು ಧರ್ಮೋಪದೇಶಕರು, ಅನೌಪಚಾರಿಕ ಶಿಕ್ಷಣವನ್ನು ಒದಗಿಸಬೇಕಾಗುತ್ತದೆ.

ಈ ಪ್ರಯತ್ನಗಳಲ್ಲಿ ಧರ್ಮಗುರು ಡೊನಾಲ್ಡ್ ರವರು ಮುಂಚೂಣಿಯಲ್ಲಿದ್ದರು, ಅಸ್ಥಿರತೆಯ ಹೊರತಾಗಿಯೂ ಮಕ್ಕಳು ತಮ್ಮ ಶಾಲಾ ಶಿಕ್ಷಣದಲ್ಲಿ ಸ್ವಲ್ಪ ಮಟ್ಟದ ನಿರಂತರತೆಯನ್ನು ಪಡೆಯುವುದನ್ನು ಖಚಿತಪಡಿಸಿಕೊಂಡರು.

ಅವರ ಹತ್ಯೆಯು ಸ್ಥಳೀಯ ಸಮುದಾಯದಲ್ಲಿ ಗೊಂದಲದ ಪ್ರಶ್ನೆಗಳನ್ನು ಹುಟ್ಟುಹಾಕಿದೆ, ಇದು ಅರ್ಥಹೀನ ಹಿಂಸಾಚಾರಕ್ಕೆ ಹೊಣೆಗಾರಿಕೆಯನ್ನು ಕೋರುತ್ತಿದೆ.

ಧರ್ಮಗುರು ಡೊನಾಲ್ಡ್ ರವರು ಸೇವೆ ಸಲ್ಲಿಸಿದ ಪ್ರದೇಶವನ್ನು ಮ್ಯಾನ್ಮಾರ್‌ನ ಮಿಲಿಟರಿ ಜುಂಟಾವನ್ನು ವಿರೋಧಿಸುವ ಸಶಸ್ತ್ರ ಗುಂಪು ಪೀಪಲ್ಸ್ ಡಿಫೆನ್ಸ್ ಫೋರ್ಸ್- ಜನರ ರಕ್ಷಣಾ ಪಡೆ(ಪಿಡಿಎಫ್) ನಿಯಂತ್ರಿಸುತ್ತದೆ.

ದಾಳಿಯ ತನಿಖೆ ನಡೆಸುವಂತೆ ಪಿಡಿಎಫ್ ನಾಯಕತ್ವವನ್ನು ಒತ್ತಾಯಿಸಲಾಗಿದೆ. ಫೈಡ್ಸ್ ಪ್ರಕಾರ, ಧರ್ಮಗುರು ಡೊನಾಲ್ಡ್ ರವರನ್ನು ಕೊಲ್ಲಲ್ಪಟ್ಟ ಕಾನ್ ಗೈ ಟಾವ್ ಗ್ರಾಮದ ಹತ್ತು ಜನರನ್ನು, ಜನರ ರಕ್ಷಣಾ ಪಡೆ ಗುಂಪು ಬಂಧಿಸಿದೆ.

ಧರ್ಮಗುರುವಿನ ಹತ್ಯೆಗೆ ಕಾರಣರಾದವರನ್ನು ಗುರುತಿಸಿ ಶಿಕ್ಷಿಸಲು, ಜನರ ರಕ್ಷಣಾ ಪಡೆ ಗುಂಪು ಪ್ರಯತ್ನಿಸುತ್ತಿರುವುದರಿಂದ, ಈ ವ್ಯಕ್ತಿಗಳನ್ನು ಸರ್ಕಾರಿ ನಿಯಂತ್ರಣದ ಹೊರಗಿನ ಪ್ರದೇಶಗಳಲ್ಲಿ ಪಿಡಿಎಫ್ ಸ್ಥಾಪಿಸಿದ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿದೆ ಎಂದು ವರದಿಯಾಗಿದೆ.

ಮ್ಯಾನ್ಮಾರ್‌ನಲ್ಲಿ ಮುಂದುವರೆಯುತ್ತಿರುವ ಸಂಘರ್ಷದಲ್ಲಿ ಧರ್ಮಗುರು ಡೊನಾಲ್ಡ್ ರವರ ಸಾವು ಇತ್ತೀಚಿನ ದುರಂತವಾಗಿದ್ದು, ಇದು ಲೆಕ್ಕವಿಲ್ಲದಷ್ಟು ಜೀವಗಳನ್ನು ಬಲಿ ತೆಗೆದುಕೊಂಡಿದೆ ಮತ್ತು ಲಕ್ಷಾಂತರ ಜನರನ್ನು ಸ್ಥಳಾಂತರಿಸಿದೆ.

ನಿರಂತರ ಹಿಂಸಾಚಾರದ ನಡುವೆಯೂ ದೇಶದ ಕಥೋಲಿಕ ಧರ್ಮಸಭೆಯು ಶಾಂತಿ ಮತ್ತು ಸಾಮರಸ್ಯಕ್ಕಾಗಿ ಕರೆ ನೀಡುತ್ತಲೇ ಇದೆ.
 

18 ಫೆಬ್ರವರಿ 2025, 11:17