ಪ್ರಭುವಿನ ಚಿಂತನೆಯ ದಿನ: ಅಧಿಕವಾದ ಮೇಣದಬತ್ತಿಗಳು, ಕೆಲವು ನೆಲಹಂದಿಗಳು
ಜೆನ್ನಿ ಕ್ರಾಸ್ಕಾ
ಈ ವಾರದ ಶುಭಸಂದೇಶವು ಮಾತೆ ಮರಿಯಮ್ಮನವರು ಮತ್ತು ಜೋಸೆಫ್ ರವರು, ತಮ್ಮ ಚೊಚ್ಚಲ ಮಗು ಯೇಸುವನ್ನು ಧರ್ಮಶಾಸ್ತ್ರದ ಕಾನೂನಿಗೆ ವಿಧೇಯರಾಗಿ, ನಿಯಮದ ಪ್ರಕಾರ ದೇವಾಲಯಕ್ಕೆ ಕರೆತಂದು ದೇವರಿಗೆ ಅರ್ಪಿಸಿದಾಗ, ಅವರ ಆಳವಾದ ವಿಶ್ವಾಸ ಮತ್ತು ಧರ್ಮಶಾಸ್ತ್ರದ ಸಂಪ್ರದಾಯವನ್ನು ನೆರವೇರಿಸುವ ಕ್ಷಣವನ್ನು ಪ್ರಸ್ತುತಪಡಿಸುತ್ತದೆ. ಪ್ರಭುವಿನ ಸಮರ್ಪಣೆಯ ಹಬ್ಬ ಎಂದು ಕರೆಯಲ್ಪಡುವ ಈ ಪವಿತ್ರ ಕಾರ್ಯಕ್ರಮವು ಬೆಳಕು, ಭರವಸೆ ಮತ್ತು ವಾಗ್ದಾನದ ಹಬ್ಬವಾಗಿದೆ. ಇದು, ಅಲ್ಲಿ ಬಹುನಿರೀಕ್ಷಿತ ಮೆಸ್ಸೀಯನನ್ನು ಪ್ರಕಟಪಡಿಸುವ ಕ್ಷಣವಾಗಿದ್ದು, ಆಡಳಿತಗಾರರು ಅಥವಾ ವಿದ್ವಾಂಸರು ಅವರನ್ನು ಗುರುತಿಸುವುದಿಲ್ಲ, ಬದಲಿಗೆ, ನಿರೀಕ್ಷೆಯಲ್ಲಿಯೇ ತಮ್ಮ ಜೀವನವನ್ನು ಸಮರ್ಪಿಸಿದ ಇಬ್ಬರು ವಿಶ್ವಾಸಿಗಳಾದ ಸಿಮಿಯೋನ್ ಮತ್ತು ಅನ್ನರವರು ಆ ಮೆಸ್ಸೀಯನನ್ನು ಗುರುತಿಸುತ್ತಾರೆ.
ʻನಂಕ್ ಡಿಮಿಟಿಸ್ ಅಥವಾ ಸಿಮಿಯೋನನ ಸ್ತುತಿಗೀತೆ (ಸಿಮಿಯೋನ್ ಕ್ಯಾಂಟಿಕಲ್)ʼ ಎಂದು ಕರೆಯಲ್ಪಡುವ ಸಿಮಿಯೋನರವರ ಮಾತುಗಳು, ಸರ್ವೇಶ್ವರ ಕಳುಹಿಸಲಿರುವ ಅಭಿಷಿಕ್ತನಾದ ಲೋಕೋದ್ಧಾರಕನ ದರ್ಶನವನ್ನು ಪಡೆಯುವ ಸಂತೋಷವನ್ನು ಪ್ರತಿಧ್ವನಿಸುತ್ತವೆ: “ನಿನ್ನ ಮಾತು ಸರ್ವೇಶ್ವರಾ, ನೆರವೇರಿತಿಂದು: ಇನ್ನು ತೆರಳಬಿಡು ಶಾಂತಿಯಿಂದ ನಿನ್ನ ದಾಸನಾದ ಎನ್ನನು. ನೀನಿತ್ತ ಉದ್ದಾರಕನನು ನಾ ಕಂಡೆ ಕಣ್ಣಾರೆ ಜನರೆಲ್ಲರ ಸಮ್ಮುಖದಲ್ಲಿ ನೀನೀತನನು ಪ್ರತ್ಯಕ್ಷ ಮಾಡಿರುವೆ. ಈತ ಅನ್ಯ ಜನರನ್ನು ಬೆಳಗಿಸುವ ಜ್ಯೋತಿ: ನಿನ್ನ ಜನ ಇಸ್ರಯೇಲರಿಗೆ ತರುವನು ಕೀರ್ತಿ” (ಲೂಕ 2:29-32). ಅಪಾರ ಭಕ್ತಿಯುಳ್ಳ ವಿಧವೆಯಾದ ಅನ್ನಳು, ಜೆರುಸಲೇಮ್‌ನ ವಿಮೋಚನೆಗಾಗಿ ಕಾಯುತ್ತಿದ್ದ ಎಲ್ಲರಿಗೂ ಈ ಮಗುವಿನ ಬಗ್ಗೆ ಘೋಷಿಸುತ್ತಾಳೆ. ಆಕೆಯ ಜೀವನವು ತಾಳ್ಮೆಯ ಭರವಸೆಯಿಂದ ರೂಪುಗೊಂಡಿತ್ತು ಮತ್ತು ಈ ಕ್ಷಣದಲ್ಲಿ ಆಕೆಯ ವಿಶ್ವಾಸಕ್ಕೆ ಪ್ರತಿಫಲ ದೊರೆಯಿತು. ನಾವು ನಿರೀಕ್ಷೆಯಿಂದ ಕಾಯಬೇಕಾದಾಗಲೂ ಸಹ, ದೇವರು ಯಾವಾಗಲೂ ತನ್ನ ವಾಗ್ದಾನಗಳಿಗೆ ನಂಬಿಗಸ್ತನಾಗಿರುತ್ತಾನೆ ಎಂದು ಅವು ನಮಗೆ ನೆನಪಿಸುತ್ತವೆ.
ಈ ವರ್ಷ, ಧರ್ಮಸಭೆಯು ಜ್ಯೂಬಿಲಿ ವರ್ಷವನ್ನು ಆಚರಿಸುತ್ತಿರುವಾಗ, ಭರವಸೆ ಮತ್ತು ನವೀಕರಣದ ವಿಷಯಗಳು ಇನ್ನಷ್ಟು ಆಳವಾಗಿ ಪ್ರತಿಧ್ವನಿಸುತ್ತವೆ. ಜ್ಯೂಬಿಲಿ ಎಂದರೆ ದೇವರ ಕರುಣೆ, ನಮ್ಮ ಹೊರೆಗಳಿಗಿಂತಲೂ ಮಹತ್ವವಾದದ್ದು ಎಂಬುದನ್ನು ನೆನಪಿಟ್ಟುಕೊಳ್ಳುವ ಸಮಯ. ಸಿಮಿಯೋನ್ ಮತ್ತು ಅನ್ನರು ತಮ್ಮದೇ ಆದ ರೀತಿಯ ಜ್ಯೂಬಿಲಿಯ ಜೀವನವನ್ನು ಜೀವಿಸಿದರು, ಶಾಂತಿಯಿಂದ ಹೊರಡುವ ಮೊದಲು, ಕ್ರಿಸ್ತನನ್ನು ದರ್ಶಿಸುವ ಸಂತೋಷವನ್ನು ಅನುಭವಿಸಿದರು. ಅವರ ಸಾಕ್ಷ್ಯಾ- ಜೀವನವು ನಮ್ಮ ವಿಶ್ವಾಸವನ್ನು ದೇವರ ದೈವಾನುಗ್ರಹದ ಮೇಲಿಡಲು ಆಹ್ವಾನಿಸುತ್ತದೆ ಹಾಗೂ ಆತನ ವಾಗ್ದಾನಗಳನ್ನು, ಆತನು ತಕ್ಕ ಸಮಯದಲ್ಲಿ ಈಡೇರಿಸುತ್ತಾರೆ ಎಂದು ತಿಳಿದುಕೊಳ್ಳಲು ಆಹ್ವಾನಿಸುತ್ತದೆ.
ಕುತೂಹಲಕಾರಿಯಾಗಿ, ಉತ್ತರ ಅಮೆರಿಕಾದಲ್ಲಿ, ಫೆಬ್ರವರಿ 2ನ್ನು ನೆಲಹಂದಿಗಳ ದಿನ (ಗ್ರೌಂಡ್‌ಹಾಗ್ ಡೇ) ಎಂದೂ ಕರೆಯಲಾಗುತ್ತದೆ, ಇದು ವಸಂತಕಾಲದ ಆಗಮನವನ್ನು ಊಹಿಸಲು ಪ್ರಯತ್ನಿಸುವ ಒಂದು ಸಂಪ್ರದಾಯವಾಗಿದೆ. ಈ ದಿನದ ವಿಶೇಷತೆಯು ಸಂಬಂಧವಿಲ್ಲದಂತೆ ತೋರಬಹುದು, ಆದರೆ ಇದು ಮಾನವನ ಆಳವಾದ ಹಂಬಲವನ್ನು ಪ್ರತಿಬಿಂಬಿಸುತ್ತದೆ - ಬೆಳಕಿನ ಬಯಕೆ ಮತ್ತು ಮುಂಬರುವ ಭರವಸೆಯ ಪ್ರಕಾಶಮಾನವಾದ ದಿನಗಳನ್ನು ಸೂಚಿಸುತ್ತದೆ. ಆದರೆ, ಬದಲಾವಣೆಯ ಚಿಹ್ನೆಗಳಿಗಾಗಿ ನೆರಳುಗಳನ್ನು ನೋಡುವವರಿಗಿಂತ ಭಿನ್ನವಾಗಿ, ಕ್ರೈಸ್ತರಾದ ನಾವು ನಮ್ಮ ಭರವಸೆಯನ್ನು ವಿಶ್ವದ ನೈಜ ಜ್ಯೋತಿಯ ಮೇಲೆ ಇಡುತ್ತೇವೆ, ಆ ಜ್ಯೋತಿಯು ಯಾವುದೇ ಕತ್ತಲೆಯು ಜಯಿಸಲಾಗದ ಬೆಳಕಾಗಿದೆ.
ಈ ಹಬ್ಬವನ್ನು ಮೇಣದಬತ್ತಿಯ ದೈವಾರಾಧನೆ ವಿಧಿ-ಕ್ಯಾಂಡಲ್‌ಮಾಸ್ ಎಂದೂ ಕರೆಯುವುದು ಸೂಕ್ತವಾಗಿದೆ, ಏಕೆಂದರೆ ಧರ್ಮಸಭೆಯು ಮೇಣದಬತ್ತಿಗಳನ್ನು ಕ್ರಿಸ್ತನ ಉಪಸ್ಥಿತಿಯ ಸಂಕೇತವಾಗಿ ಆಶೀರ್ವದಿಸುತ್ತದೆ. ಸಿಮಿಯೋನ್ ಬಾಲಯೇಸುವನ್ನು ಎಲ್ಲಾ ರಾಷ್ಟ್ರಗಳ ಬೆಳಕು ಎಂದು ಗುರುತಿಸಿದಂತೆಯೇ, ನಾವೂ ಸಹ ಆ ಬೆಳಕನ್ನು ಜಗತ್ತಿಗೆ ಕೊಂಡೊಯ್ಯಲು ಕರೆಯಲ್ಪಟ್ಟಿದ್ದೇವೆ ಎಂಬುದನ್ನು ಈ ಮೇಣದಬತ್ತಿಗಳು ನಮಗೆ ನೆನಪಿಸುತ್ತವೆ. ಅನಿಶ್ಚಿತತೆಯ ಸಮಯದಲ್ಲಿ, ಭರವಸೆ ಮಂದವಾದಾಗ, ಕ್ರಿಸ್ತನ ಬೆಳಕು ನಮ್ಮನ್ನು ಮುಂದೆ ಕರೆದೊಯ್ಯುತ್ತದೆ ಎಂದು ವಿಶ್ವಾಸಿಸಿ ನಾವು ನಂಬಿಕೆಯ ಜ್ವಾಲೆಯನ್ನು ಹಿಡಿದಿಟ್ಟುಕೊಳ್ಳುತ್ತೇವೆ.
ಪ್ರಭುವಿನ ಸಮರ್ಪಣೆಯು ಕೇವಲ ಒಂದು ಐತಿಹಾಸಿಕ ಘಟನೆಯಲ್ಲ, ಅದಕ್ಕಿಂತ ಹೆಚ್ಚಿನದಾಗಿದೆ; ನಮ್ಮನ್ನು ಭರವಸೆಯಲ್ಲಿ ಬದುಕಲು ನಮಗೀಯುವ ಒಂದು ಆಹ್ವಾನವಾಗಿದೆ. ಇದು ಕಾಯುವಿಕೆಯನ್ನು ಮೀರಿ, ಪ್ರಪಂಚದ ದಣಿವನ್ನು ಮೀರಿ ನೋಡಲು ಮತ್ತು ದೇವರು ನಿರ್ವಹಿಸುತ್ತಿರುವ ಕಾರ್ಯವನ್ನು ಗುರುತಿಸಲು, ಗುಪ್ತ ಮತ್ತು ವಿನಮ್ರ ರೀತಿಯಲ್ಲಿಯೂ ಸಹ ನಮ್ಮನ್ನು ಕರೆಯುತ್ತದೆ. ಸಿಮಿಯೋನ್ ಮತ್ತು ಅನ್ನಾರವರು ಚೊಚ್ಚಲ ಮಗು ಪ್ರಭುಕ್ರಿಸ್ತರನ್ನು ಸಂತೋಷದಿಂದ ಅಪ್ಪಿಕೊಂಡಂತೆ, ನಾವು ಸಹ ನಮ್ಮ ದೈನಂದಿನ ಜೀವನದಲ್ಲಿ ಆತನನ್ನು ಅಪ್ಪಿಕೊಳ್ಳಬೇಕು ಮತ್ತು ಆತನ ಬೆಳಕನ್ನು ಇತರರೊಂದಿಗೆ ಹಂಚಿಕೊಳ್ಳಬೇಕು. ಆಶೀರ್ವದಿಸಿದ ಮೇಣದಬತ್ತಿಗಳು ಉರಿಯುವುದನ್ನು ನಾವು ವೀಕ್ಷಿಸುವಾಗ, ಕ್ರಿಸ್ತನ ಬೆಳಕು ಸದಾ ಪ್ರಕಾಶಮಾನವಾಗಿ ಉರಿಯುತ್ತದೆ ಮತ್ತು ನಮ್ಮ ಹಾದಿಯನ್ನು ಭರವಸೆ ಹಾಗೂ ಶಾಂತಿಯಿಂದ ಬೆಳಗಿಸುತ್ತದೆ ಎಂದು ತಿಳಿದು ನಾವು ನಮ್ಮ ವಿಶ್ವಾಸವನ್ನು ದೃಢಗೊಳಿಸೋಣ.