MAP

ಜರ್ಮನ್ನಿನ ಧರ್ಮಸಭೆಗಳು ಮತದಾರರನ್ನು ಪ್ರಜಾಪ್ರಭುತ್ವದ ಜವಾಬ್ದಾರಿಯನ್ನು ತೆಗೆದುಕೊಳ್ಳುವಂತೆ ಒತ್ತಾಯಿಸುತ್ತವೆ

ಜರ್ಮನಿಯಲ್ಲಿ ಫೆಡರಲ್ ಚುನಾವಣೆಗಳಿಗೆ ಎರಡು ವಾರಗಳಿಗಿಂತ ಕಡಿಮೆ ಸಮಯ ಬಾಕಿ ಇರುವಾಗ, ದೇಶವು ತನ್ನ ಪ್ರಜಾಪ್ರಭುತ್ವ ಬದ್ಧತೆಗಳಲ್ಲಿ ದೃಢವಾಗಿ ನಿಲ್ಲಬೇಕು, ದುರ್ಬಲರನ್ನು ರಕ್ಷಿಸಬೇಕು ಮತ್ತು ಹೆಚ್ಚು ನ್ಯಾಯಯುತ ಹಾಗೂ ಸುಸ್ಥಿರ ಜಗತ್ತಿಗೆ ತಮ್ಮ ಜವಾಬ್ದಾರಿಯುತ ಕೊಡುಗೆ ನೀಡಬೇಕು ಎಂದು ಧರ್ಮಸಭೆಗಳು ಒತ್ತಿಹೇಳುತ್ತವೆ.

ಲಿಸಾ ಝೆಂಗಾರಿನಿ

ಫೆಬ್ರವರಿ 23 ರಂದು ನಡೆಯಲಿರುವ ಕ್ಷಿಪ್ರ ಚುನಾವಣೆಗಳಿಗೆ ಮುಂಚಿತವಾಗಿ ತೀವ್ರ ಬಲಪಂಥೀಯ ಆಲ್ಟರ್ನೇಟಿವ್ ಫಾರ್ ಜರ್ಮನಿ (ಎಎಫ್‌ಡಿ) ಮತದಾನದ ಸಂಖ್ಯೆಗಳು ಹೆಚ್ಚಾಗುತ್ತಿರುವುದನ್ನು ಗಮನಿಸುತ್ತಿದ್ದಂತೆ, ಜರ್ಮನ್ನಿನ ಕ್ರೈಸ್ತ ಧರ್ಮಸಭೆಗಳ ನಾಯಕರು ಈ ವಾರ, ಪ್ರಜಾಪ್ರಭುತ್ವದ ಮೌಲ್ಯಗಳನ್ನು ರಕ್ಷಿಸುವ ಪ್ರಮುಖ ಪ್ರಾಮುಖ್ಯತೆಯನ್ನು ಒತ್ತಿಹೇಳುವ ಜಂಟಿ ಮನವಿಯನ್ನು ನೀಡಿದ್ದಾರೆ.

ಪ್ರಜಾಪ್ರಭುತ್ವವು ವಿನಿಮಯಕ್ಕೆ ಒಳಪಡುವುದಿಲ್ಲ
ಜರ್ಮನ್ನಿನ ಧರ್ಮಾಧ್ಯಕ್ಷರುಗಳ ಸಮ್ಮೇಳನದ (DBK) ಅಧ್ಯಕ್ಷ ಧರ್ಮಾಧ್ಯಕ್ಷ ಜಾರ್ಜ್ ಬಾಟ್ಜಿಂಗ್ ರವರು, ಜರ್ಮನಿಯ ಪ್ರೊಟೆಸ್ಟಂಟ್ ಧರ್ಮಸಭೆ ಪರಿಷತ್ತಿನ ಹಂಗಾಮಿ ಅಧ್ಯಕ್ಷರಾದ, ಧರ್ಮಾಧ್ಯಕ್ಷ ಕಿರ್ಸ್ಟನ್ ಫೆಹ್ರ್ಸ್ ರವರು ಮತ್ತು ಜರ್ಮನಿಯ ಕ್ರೈಸ್ತ ಧರ್ಮಸಭೆಗಳ ಸಂಘದ ಅಧ್ಯಕ್ಷರಾದ ಮಹಾಯಾಜಕ ರಾಡು ಕಾನ್‌ಸ್ಟಾಂಟಿನ್ ಮಿರಾನ್ ರವರು ಸಹಿ ಮಾಡಿದ ಈ ಹೇಳಿಕೆಯು ಪ್ರಜಾಪ್ರಭುತ್ವವು ಮಾತುಕತೆಗೆ ಒಳಪಡುವುದಿಲ್ಲ ಎಂಬ ಮೂಲಭೂತ ಸಂದೇಶವನ್ನು ಒತ್ತಿಹೇಳುತ್ತದೆ.

ಪ್ರಜಾಪ್ರಭುತ್ವ, ರಾಜಿ ಮಾಡಿಕೊಳ್ಳುವ ಮತ್ತು ಅಲ್ಪಸಂಖ್ಯಾತರನ್ನು ರಕ್ಷಿಸುವ ಸಾಮರ್ಥ್ಯವು ಇಂದು ಅದರ ಸ್ಥಿತಿಸ್ಥಾಪಕತ್ವವನ್ನು ಪರೀಕ್ಷಿಸುವ ರಾಜಕೀಯ ಚರ್ಚೆಗಳಿಂದ ಸವಾಲಿಗೆ ಒಳಗಾಗುತ್ತಿದೆ ಎಂದು ಗಮನಿಸಿದ ಧರ್ಮಸಭೇಯ ನಾಯಕರು, ಉಗ್ರವಾದದ ವಿರುದ್ಧ, ವಿಶೇಷವಾಗಿ ಜನಾಂಗೀಯ ರಾಷ್ಟ್ರೀಯತೆಯ ವಿರುದ್ಧ ದೃಢವಾದ ನಿಲುವನ್ನು ತೆಗೆದುಕೊಳ್ಳುತ್ತಾರೆ, ಇದು ಕ್ರೈಸ್ತ ಧರ್ಮದ ಮೌಲ್ಯಗಳಿಗೆ ಹೊಂದಿಕೆಯಾಗುವುದಿಲ್ಲ ಎಂದು ಅವರು ಪುನರುಚ್ಚರಿಸುತ್ತಾರೆ.

ಅನಿಶ್ಚಿತತೆಯ ನಡುವೆಯೂ ಜರ್ಮನಿಗೆ ಭರವಸೆ ಬೇಕು
ಜರ್ಮನ್ ಕ್ರೈಸ್ತ ಧರ್ಮಸಭೆಯ ನಾಯಕರು ತಮ್ಮ ಮನವಿಯಲ್ಲಿ, ಉಕ್ರೇನ್ ಮತ್ತು ಮಧ್ಯಪ್ರಾಚ್ಯದಲ್ಲಿನ ಯುದ್ಧಗಳಿಂದ ಪ್ರದರ್ಶಿಸಲ್ಪಟ್ಟ ಜಾಗತಿಕ ಕ್ರಮದಲ್ಲಿನ ಆಮೂಲಾಗ್ರ ಬದಲಾವಣೆ ಸೇರಿದಂತೆ ಹಲವಾರು ಸವಾಲುಗಳನ್ನು ಎದುರಿಸುತ್ತಿರುವ ಜರ್ಮನಿಗೆ ಇಂದು "ಭವಿಷ್ಯದಲ್ಲಿ ಭರವಸೆ ಮತ್ತು ವಿಶ್ವಾಸದ ಅಗತ್ಯವಿದೆ" ಎಂದು ಹೇಳಿದ್ದಾರೆ. ಈ ಘಟನೆಗಳು, ಜರ್ಮನಿನಲ್ಲಿಯೂ ಸಹ "ಹಲವು ನಿಶ್ಚಿತಗಳನ್ನು ಅಲುಗಾಡಿಸಿವೆ" ಎಂದು ಅವರು ಒಪ್ಪಿಕೊಳ್ಳುತ್ತಾರೆ.

ಕ್ರೈಸ್ತ ಧರ್ಮಸಭೆಯ ನಾಯಕರ ಪ್ರಕಾರ, ಉತ್ತಮ ಭವಿಷ್ಯವನ್ನು ನಿರ್ಮಿಸಲು, ಜರ್ಮನಿಯು ಮೊದಲು ಯುರೋಪನ್ನು "ಸ್ವಾತಂತ್ರ್ಯ, ನ್ಯಾಯ, ಭದ್ರತೆ ಮತ್ತು ಸಮೃದ್ಧಿಯ ಸಾಮಾನ್ಯ ಸ್ಥಳವಾಗಿ" ಬಲಪಡಿಸುವುದನ್ನು ಮುಂದುವರಿಸಬೇಕು ಮತ್ತು ಜಾಗತಿಕ ಶಾಂತಿ ಹಾಗೂ ಮಾನವ ಹಕ್ಕುಗಳನ್ನು ಪೂರೈಸಬೇಕು.
 

14 ಫೆಬ್ರವರಿ 2025, 13:07