ವಿಶ್ವಗುರು ಫ್ರಾನ್ಸಿಸ್‌ರವರಿಗಾಗಿ ಜೆಮೆಲ್ಲಿಯಲ್ಲಿ ದೈನಂದಿನ ಒಂದು ಗಂಟೆಯ ಆರಾಧನೆ ಮತ್ತು ದಿವ್ಯಬಲಿಪೂಜೆಯನ್ನು ಅರ್ಪಿಸಲಾಗುತ್ತಿದೆ
ವ್ಯಾಟಿಕನ್ ಸುದ್ಧಿ
ರೋಮ್ ಧರ್ಮಕ್ಷೇತ್ರದ ಪ್ರಧಾನ ಶ್ರೇಷ್ಠಗುರು ಕಾರ್ಡಿನಲ್ ಬಲ್ದಾಸರೆ ರೀನಾರವರು ವಿಶ್ವಗುರು ಫ್ರಾನ್ಸಿಸ್‌ರವರೊಂದಿಗೆ ಇಟಾಲಿಯದ ಧರ್ಮಾಧ್ಯಕ್ಷರುಗಳ ಒಗ್ಗಟ್ಟನ್ನು ವ್ಯಕ್ತಪಡಿಸಿ ಮತ್ತು ಎಲ್ಲರೂ ಅವರಿಗಾಗಿ ಪ್ರಾರ್ಥಿಸುವಂತೆ ಪ್ರೋತ್ಸಾಹಿಸುವ ಹೇಳಿಕೆಯನ್ನು ಬಿಡುಗಡೆ ಮಾಡಿದರು.
ಸಾಮೂಹಿಕ ಪ್ರಾರ್ಥನೆ ಎಷ್ಟು ಅಮೂಲ್ಯವಾದುದು ಎಂಬುದನ್ನು ಅರಿತುಕೊಂಡು, ಎಲ್ಲಾ ಧರ್ಮಕೇಂದ್ರಗಳು ಮತ್ತು ಧಾರ್ಮಿಕ ಸಮುದಾಯಗಳು ಒಂದು ಗಂಟೆ ಮೌನ ಆರಾಧನೆಯಲ್ಲಿ ಕಳೆಯುವಂತೆ ನಾವು ಕೇಳಿಕೊಳ್ಳುತ್ತೇವೆ ಎಂದು ಅವರು ಹೇಳಿದರು. ಒಂದು ದೊಡ್ಡ ಕುಟುಂಬವಾಗಿ, ಈ ಸೂಕ್ಷ್ಮ ಕ್ಷಣವನ್ನು ಎದುರಿಸಲು ನಮ್ಮ ಧರ್ಮಾಧ್ಯಕ್ಷರುಗಳಿಗೆ ಅಗತ್ಯವಾದ ಶಕ್ತಿಯನ್ನು ನೀಡಬೇಕೆಂದು ನಾವು ದೇವರಲ್ಲಿ ಕೇಳಿಕೊಳ್ಳುತ್ತೇವೆ.
ಸಾಮೂಹಿಕ ಪ್ರಾರ್ಥನೆಗೆ ಈ ಆಹ್ವಾನವನ್ನು ಅನುಸರಿಸಿ, ಜೆಮೆಲ್ಲಿ ವಿಶ್ವವಿದ್ಯಾಲಯ ಆಸ್ಪತ್ರೆಯ ಸಮುದಾಯ ಮತ್ತು ಪವಿತ್ರ ಹೃದಯದ ಕಥೋಲಿಕ ವಿಶ್ವವಿದ್ಯಾಲಯದ ರೋಮನ್ ಶಾಖೆಯು ಈ ಪರೀಕ್ಷೆ ಮತ್ತು ಸಂಕಟದ ಸಮಯದಲ್ಲಿ ಪವಿತ್ರ ವಿಶ್ವಗುರು ಫ್ರಾನ್ಸಿಸ್‌ರವರೊಂದಿಗೆ ಇನ್ನೂ ಹೆಚ್ಚಿನ ಅವರ ಬೆಂಬಲ ಮತ್ತು ಒಗ್ಗಟ್ಟನ್ನು ವಿವಿಧ ಪ್ರಾರ್ಥನೆಯ ಮೂಲಕ ವ್ಯಕ್ತಪಡಿಸಿತು.
ಫೆಬ್ರವರಿ 24, ಸೋಮವಾರದಿಂದ ಜೆಮೆಲ್ಲಿ ಆಸ್ಪತ್ರೆಯಲ್ಲಿ ವಿಶ್ವಗುರು ಫ್ರಾನ್ಸಿಸ್‌ರವರ ಸಂಪೂರ್ಣ ಚೇತರಿಕೆಗಾಗಿ, ಆಸ್ಪತ್ರೆಯ ಸಂತ ಜಾನ್ ಪೌಲ್ ರವರ II ಕಿರು ದೇವಾಲಯದಲ್ಲಿ ಪ್ರತಿದಿನ ಮಧ್ಯಾಹ್ನದಿಂದ, ಮಧ್ಯಾಹ್ನ 1 ಗಂಟೆಯವರೆಗೆ ಒಂದು ಗಂಟೆಯ ಪರಮಪ್ರಸಾದ ಆರಾಧನೆ ನಂತರ ದಿವ್ಯಬಲಿಪೂಜೆ ಅರ್ಪಿಸಲಿದ್ದಾರೆ.
ದಿವ್ಯಬಲಿಪೂಜೆ ಮತ್ತು ಆರಾಧನೆಯ ಸಮಯದಲ್ಲಿ, ವಿಶ್ವಗುರು ಫ್ರಾನ್ಸಿಸ್‌ಗಾಗಿ ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸಲಾಗುವುದು. ನಂತರ, ರೋಮ್ ಸಮಯದ ಪ್ರಕಾರ ಸಂಜೆ 4:30ಕ್ಕೆ, ಆಸ್ಪತ್ರೆಯ ಹೊರಗಿನ ಚೌಕದಲ್ಲಿರುವ ಅಥವಾ ಸಭಾಂಗಣದಲ್ಲಿರುವ ಸಂತ ಜಾನ್ ಪೌಲ್ II ರವರ ಪ್ರತಿಮೆಯ ಮುಂದೆ ಜಪಮಾಲೆ ಪಠಿಸಲಾಗುವುದು ಮತ್ತು ಸಂಜೆ 5 ಗಂಟೆಗೆ ಆಸ್ಪತ್ರೆ ಸಭಾಂಗಣದಲ್ಲಿ ದಿವ್ಯಬಲಿಪೂಜೆಯನ್ನು ಅರ್ಪಿಸಲಾಗುವುದು.
ವಿಶ್ವದಾದ್ಯಂತದ ಪ್ರತಿಯೊಬ್ಬರೂ ಈ ಪ್ರಾರ್ಥನೆಯ ಕ್ಷಣಗಳಲ್ಲಿ ದೈಹಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಭಾಗವಹಿಸಲು ಆಹ್ವಾನಿಸಲ್ಪಟ್ಟಿದ್ದಾರೆ. ರೋಮ್‌ನ ಹೊರಗಿನವರು, ಈ ಪ್ರಾರ್ಥನೆಯ ಕ್ಷಣಗಳಲ್ಲಿ ನಮ್ಮೊಂದಿಗೆ ಪ್ರಾರ್ಥನೆಯಲ್ಲಿ ಸೇರಿಕೊಳ್ಳಲು ಬಯಸುವವರು ಈ ಕೆಳಗಿನ ಪ್ರಾರ್ಥನೆಯನ್ನು ಜಪಿಸಬಹುದು.
"ಲೋಕದ ರಕ್ಷಕನೇ, ನಮ್ಮ ಕಷ್ಟ-ನೋವಿನ ಹೊರೆಯನ್ನು ನಿಮ್ಮ ಹೆಗಲ ಮೇಲೆ ತೆಗೆದುಕೊಂಡು ನಮ್ಮ ದುಃಖವನ್ನು ನಿಮ್ಮ ಯಾತನೆಯಲ್ಲಿ ಹೊತ್ತುಕೊಂಡ ಪ್ರಭುಯೇಸುವೇ, ಅನಾರೋಗ್ಯದಿಂದ ನರಳುತ್ತಿರುವ ನಮ್ಮ ಸಹೋದರನಿಗಾಗಿ ನಾವು ಮಾಡುವ ಪ್ರಾರ್ಥನೆಯನ್ನು ಕೇಳಿ: ಅವರಿಗೆ ವಿಶ್ವಾಸವನ್ನು ನೀಡಿ ಮತ್ತು ಅವರ ಭರವಸೆಯನ್ನು ಪುನರುಜ್ಜೀವನಗೊಳಿಸಿ, ಅವರ ದೇಹ ಮತ್ತು ಆತ್ಮದಲ್ಲಿ ಚೇತರಿಸಿಕೊಳ್ಳುವಂತೆ ಅವರನ್ನು ಆರ್ಶೀವದಿಸಿರಿ."