ಹೋಲಿ ಕ್ರಾಸ್ ಸಭೆಯು ಗಡಿಗಳನ್ನು ಮೀರಿದ ಕಾರ್ಯಾಚರಣೆಗೆ ಸಜ್ಜಾಗಿದೆ
FSSA ನ ಸಿಸ್ಟರ್ ಜೆಸಿಂತರ್ ಆಂಟೊನೆಟ್ ಒಕೋತ್
ಧರ್ಮಸಭೆಯು 2025ರ ಈಸ್ಟರ್ ಆಚರಣೆಯನ್ನು ಆಚರಿಸುತ್ತಿರುವುದರಿಂದ, ಹೋಲಿ ಕ್ರಾಸ್ ಸಭೆಯು (CSC) "ಹೋಪ್ ಆಫ್ ಮಿಷನ್ ಇಯರ್" (ಧರ್ಮಪ್ರಚಾರದ ಭರವಸೆಯ ವರ್ಷ) ಎಂಬ ಪರಿವರ್ತನಾ ಪ್ರಯಾಣವನ್ನು "ಗಡಿಗಳನ್ನು ಮೀರಿದ ಭರವಸೆ" ಎಂಬ ಶೀರ್ಷಿಕೆಯ ಅಡಿಯಲ್ಲಿ ಕೈಗೊಳ್ಳಲಿದೆ.
ಹೋಲಿ ಕ್ರಾಸ್ ಸಭೆಯ ಪ್ರಧಾನ ಶ್ರೇಷ್ಠಗುರುವಾದ ಸಹೋದರ ಪಾಲ್ ಬೆಡ್ನಾರ್ಸಿಕ್ ರವರ ಪ್ರಕಾರ, ಈ ಉಪಕ್ರಮದ ಕರೆಯು, ಕ್ರಿಯೆಗೂ ಮತ್ತು ನವೀಕರಣಕ್ಕಾಗಿ ಹಾತೊರೆಯುತ್ತಿರುವ ವಿಶ್ವದಲ್ಲಿ ಕ್ರಿಸ್ತನ ಮಿತಿಯಿಲ್ಲದ ಪ್ರೀತಿಯನ್ನು ವೀಕ್ಷಿಸಲು ನೀಡಿರುವ ಆಳವಾದ ಆಹ್ವಾನವಾಗಿದೆ.
ನಮ್ಮ ಪವಿತ್ರ ಸಂಸ್ಥಾಪಕರಾದ, ಪೂಜ್ಯ ಬೆಸಿಲ್ ಮೊರೊರವರ ಜನ್ಮ ವಾರ್ಷಿಕೋತ್ಸವದಂದು, ಏಪ್ರಿಲ್ 28 ರಂದು ಪ್ರಾರಂಭವಾಗುವ ಧರ್ಮಪ್ರಚಾರ ವರ್ಷವನ್ನು, ಸಾರ್ವಜನಿಕವಾಗಿ ಘೋಷಿಸಲು ನನಗೆ ಸಂತೋಷವಾಗಿದೆ ಎಂದು ಅವರು ವರ್ಷಪೂರ್ತಿ ವಾರ್ಷಿಕೋತ್ಸವವನ್ನು ಘೋಷಿಸುವ ಪತ್ರದಲ್ಲಿ ತಿಳಿಸಿದ್ದಾರೆ. ಈ ಉದ್ಘಾಟನಾ ದಿನಾಂಕವು 1840ರಲ್ಲಿ ಯಾಜಕ ಬೆಸಿಲ್ ಮೊರೊರವರು ಫ್ರಾನ್ಸ್‌ನ ಹೊರ ದೇಶಗಳಿಗೆ ಪ್ರಪ್ರಥಮವಾಗಿ, ತಮ್ಮ ಸಭೆಯಾದ ಹೋಲಿ ಕ್ರಾಸ್ ನ ಧರ್ಮಪ್ರಚಾರಕರನ್ನು ಅಲ್ಜಿಯರ್ಸ್‌ಗೆ ಕಳುಹಿಸಿದ 185ನೇ ವಾರ್ಷಿಕೋತ್ಸವದ ವರ್ಷವಾಗಿದೆ.
ಸಹೋದರ ಬೆಡ್ನಾರ್ಜಿಕ್ ರವರು ಸಭೆಯ ಸಂವಿಧಾನಗಳನ್ನು ಉಲ್ಲೇಖಿಸಿ, "ನಮ್ಮ ಧ್ಯೇಯವು ನಮ್ಮನ್ನು ಎಲ್ಲಾ ರೀತಿಯ ಗಡಿಗಳನ್ನು ದಾಟಿಸುತ್ತದೆ" (2:17) ಎಂದರು.
ರಾಷ್ಟ್ರಗಳು ಮತ್ತು ರಾಜ್ಯಗಳನ್ನು ಬೇರ್ಪಡಿಸುವ ಭೌತಿಕ ಗಡಿಗಳನ್ನು ಮಾತ್ರವಲ್ಲದೆ, ನಮ್ಮ ಮತ್ತು ಇತರರ ನಡುವೆ ನಾವು ನಿರ್ಮಿಸುವ ಎಲ್ಲಾ ಗಡಿಗಳು ಮತ್ತು ಗೋಡೆಗಳನ್ನು ತಲುಪಲು ಹಾಗೂ ದಾಟಲು, ಆ 'ಇತರರು' ಯಾರೇ ಆಗಿರಲಿ, ಭರವಸೆಯ ವಾರ್ಷಿಕೋತ್ಸವವು ಪ್ರೋತ್ಸಾಹಿಸುತ್ತದೆ ಎಂದು ಆದೇಶದ ಮಾರ್ಗದರ್ಶಿ ದಾಖಲೆಯು ಸದಸ್ಯರಿಗೆ ನೆನಪಿಸುತ್ತದೆ ಎಂದು ಅವರು ಹೇಳಿದರು.
ʻಗಡಿಗಳನ್ನು ಮೀರಿದ ಭರವಸೆʼ ಎಂದರೆ ನಮ್ಮ ಸೌಕರ್ಯ ವಲಯಗಳಿಂದ ಹೊರಬಂದು, ಪರಿಚಿತರನ್ನು ಬಿಟ್ಟು ಪರಿಚಯವಿಲ್ಲದ ಕಡೆಗೆ ಹೋಗಿ, ಯಾರನ್ನು ಮತ್ತು ಯಾವುದೇ ಸಮಸ್ಯೆಗಳನ್ನು ಬೇಕಾದರೂ ಎದುರುಗೊಳ್ಳಬಹುದು ಎಂಬುದನ್ನು ಕಾಣಲು ಸಿದ್ಧರಿರುವುದು. ಇದು ಹೊಸ ಜನರು ಮತ್ತು ಸಂಸ್ಕೃತಿಗಳನ್ನು ಭೇಟಿಯಾಗುವುದು, ಸೇವೆಯಲ್ಲಿ ಹೊಸ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸುವುದು ಮತ್ತು ಚಿಂತನೆ ಹಾಗೂ ಯೋಜನೆಯ ಸೃಜನಶೀಲ ಮಾರ್ಗಗಳ ಅಗತ್ಯವಿರುವ ಹೊಸ ಮಾದರಿಗಳನ್ನು ಅಳವಡಿಸಿಕೊಳ್ಳುವ ರೂಪವನ್ನು ತೆಗೆದುಕೊಳ್ಳಬಹುದು ಎಂದು ಅವರು ಹೇಳಿದರು.
ಭರವಸೆಯ ಯಾತ್ರಿಕರು - ಗಡಿಗಳನ್ನು ಮೀರಿದ ಭರವಸೆ
ಧರ್ಮಸಭೆಯ 2025ರ ಜೂಬಿಲಿ ವರ್ಷದ ಮುಖ್ಯ ಶೀರ್ಷಿಕೆಯಾದ, ಭರವಸೆಯ ಯಾತ್ರಿಕರು, ನಾವು ಜೀವನದ ಅನಿಶ್ಚಿತತೆಗಳನ್ನು ನಿಭಾಯಿಸುವಾಗ ದೇವರ ಅನುಗ್ರಹದಲ್ಲಿ ವಿಶ್ವಾಸವಿಟ್ಟು, ಭರವಸೆಯಲ್ಲಿ ನಡೆಯಲು ಭಕ್ತವಿಶ್ವಾಸಿಗಳನ್ನು ಪ್ರೋತ್ಸಾಹಿಸುತ್ತದೆ. ಅದೇ ರೀತಿ, CSCಯ ಧ್ಯೇಯದ ಶೀರ್ಷಿಕೆಯಾದ, ಹೋಪ್ ಬಿಯಾಂಡ್ ಬಾರ್ಡರ್ಸ್ (ಗಡಿಗಳನ್ನು ಮೀರಿದ ಭರವಸೆ), ವೈಯಕ್ತಿಕ ಸದಸ್ಯರಿಗೆ, ವಿಶ್ವಾಸ ಮತ್ತು ಸೇವೆಯ ದಾರ್ಶನಿಕತೆಯನ್ನು ವಿಸ್ತರಿಸಲು, ಭರವಸೆಯು ಭೌಗೋಳಿಕತೆ, ಸಂಸ್ಕೃತಿ ಅಥವಾ ಸನ್ನಿವೇಶಗಳಿಂದ ಸೀಮಿತವಾಗಿಲ್ಲ ಎಂದು ಗುರುತಿಸಲು ಸವಾಲು ಹಾಕುತ್ತದೆ.
ಸಹೋದರ ಬೆಡ್ನಾರ್ಸಿಕ್ ರವರ ಪ್ರಕಾರ, ಎರಡೂ ಶೀರ್ಷಿಕೆಗಳು ಒಂದಕ್ಕೊಂದು ಹೆಣೆದುಕೊಂಡಿವೆ, ಧರ್ಮಸಭೆಯ ಸಾರ್ವತ್ರಿಕ ಮತ್ತು ಧರ್ಮಪ್ರಚಾರದ ಸ್ವರೂಪವನ್ನು ಎತ್ತಿ ತೋರಿಸುತ್ತವೆ. ಗಡಿಗಳನ್ನು ಮೀರಿದ ಭರವಸೆಯ ಬಗ್ಗೆ ಚಿಂತಿಸುತ್ತಾ, ಸಿಎಸ್‌ಸಿಯ ಸದಸ್ಯರು ಸೇವೆ ಸಲ್ಲಿಸಲು, ಶುಭಸಂದೇಶ ಸಾರಲು ಮತ್ತು ನೆರವಿನ ಅಗತ್ಯವಿರುವವರಿಗೆ ಕ್ರಿಸ್ತರ ಪ್ರೀತಿಯನ್ನು ತರಲು ಪ್ರೋತ್ಸಾಹಿಸುತ್ತಾರೆ ಎಂದು ಅವರು ಹೇಳಿದರು. ಅದೇ ಸಮಯದಲ್ಲಿ, ಭರವಸೆಯು ನಿಷ್ಕ್ರಿಯವಲ್ಲ ಬದಲಿಗೆ ಕ್ರಿಯಾತ್ಮಕವಾಗಿದೆ ಎಂದು ಈ ಶೀರ್ಷಿಕೆಯು ಭರವಸೆ ನೀಡುತ್ತದೆ, ಸಭೆಯು ಧೈರ್ಯ ಮತ್ತು ದೃಢವಿಶ್ವಾಸದಿಂದ ಮುಂದುವರಿಯಲು ಮತ್ತು ವಿಶ್ವವನ್ನು, ಒಂದು ಪರಿವರ್ತನೆ ಮತ್ತು ನವೀಕರಣದ ಸ್ಥಳವಾಗಿ ಸ್ವೀಕರಿಸಲು ಒತ್ತಾಯಿಸುತ್ತದೆ.
ಅಂತಿಮವಾಗಿ, ಹೋಪ್ ಬಿಯಾಂಡ್ ಬಾರ್ಡರ್ಸ್ ನಮ್ಮನ್ನು 'ಹೆಚ್ಚು ನ್ಯಾಯಯುತ ಮತ್ತು ಮಾನವೀಯ ಸಮಾಜ'ದಲ್ಲಿ ಬದುಕುವ ನಮ್ಮ ಬಯಕೆಯನ್ನು ಹಂಚಿಕೊಳ್ಳುವ ಎಲ್ಲೆಡೆ ಪುರುಷರು ಮತ್ತು ಮಹಿಳೆಯರೊಂದಿಗೆ ಆಳವಾದ ಏಕತೆಯ ಒಡನಾಟಕ್ಕೆ ಕರೆದೊಯ್ಯುತ್ತದೆ ಎಂದು ಅವರು ಫೆಬ್ರವರಿ 11ರ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.
ಹೊಸ ಧ್ಯೇಯ
ಧರ್ಮಪ್ರಚಾರ ವರ್ಷದಲ್ಲಿ, ಸಭೆಯು ಪಪುವಾ ನ್ಯೂಗಿನಿಯಾದ ಬೌಗೆನ್‌ವಿಲ್ಲೆಯಲ್ಲಿ ಹೋಲಿ ಫ್ಯಾಮಿಲಿ ಮಿಷನ್ (ಪವಿತ್ರ ಕುಟುಂಬದ ಧ್ಯೇಯ) ನ್ನು ಸ್ಥಾಪಿಸುತ್ತದೆ.
"ಹೋಲಿ ಕ್ರಾಸ್ ಹಿಂದೆಂದೂ ದೇವರನ್ನು ಅರಿಯದ, ಅಂದರೆ ವಿಶ್ವದ ಯಾವುದೋ ಒಂದು ಭಾಗದಲ್ಲಿ ದೇವರನ್ನು ಪರಿಚಯಿಸಲು, ದೇವರಿಂದ ಪ್ರೀತಿಸಲ್ಪಟ್ಟಿದ್ದಾರೆ ಎಂದು ಅಲ್ಲಿನ ಜನರಿಗೆ ಮನವರಿಕೆ ಮಾಡಲು ಮತ್ತು ಅವರಿಗೆ ಸೇವೆ ಮಾಡಲು" ಸಭೆಯು ಧರ್ಮಪ್ರಚಾರ ನಿಯೋಗದ ಸಿಬ್ಬಂದಿಯಾಗಿ, 8 ಧರ್ಮಪ್ರಚಾರಕರನ್ನು ಕಳುಹಿಸುತ್ತದೆ ಎಂದು ಸಹೋದರ ಬೆಡ್ನಾರ್ಜಿಕ್ ರವರು ಹೇಳಿದರು.