ಮ್ಯಾನ್ಮಾರ್‌ನಲ್ಲಿ ದೇವಾಲಯದ ಮೇಲೆ ಬಾಂಬ್ ದಾಳಿ
ಡೆಬೊರಾ ಕ್ಯಾಸ್ಟೆಲ್ಲಾನೊ ಲುಬೊವ್
ಪ್ರಕ್ಷುಬ್ಧತೆ ಮತ್ತು ಸಂಘರ್ಷದಿಂದ ಆವೃತಗೊಂಡಿರುವ ಜಗತ್ತಿನಲ್ಲಿ, ನಾವು ನಮ್ಮ ಕಣ್ಣುಗಳನ್ನು ಶಾಂತಿಯ ತಾಯಿಯಾದ ಮಾತೆ-ಮೇರಿಯ ಕಡೆಗೆ ತಿರುಗಿಸುತ್ತೇವೆ ಎಂದು ಕಾರ್ಡಿನಲ್ ಚಾರ್ಲ್ಸ್ ಮಾಂಗ್ ಬೊರವರು ಸೂಚಿಸಿದ್ದಾರೆ. ಆಕೆಯ ಅಚಲ ಸ್ವೀಕಾರವು, ನಮ್ಮನ್ನು ಆಂತರಿಕ ಶಾಂತಿಯನ್ನು ಬೆಳೆಸಿಕೊಳ್ಳಲು ಮತ್ತು ತೊಂದರೆಗೀಡಾದ ಈ ಜಗತ್ತಿನಲ್ಲಿ ನಮ್ಮನ್ನು ಶಾಂತಿಯ ರಾಯಭಾರಿಗಳಾಗಲು ಆಹ್ವಾನಿಸುತ್ತದೆ.
ಮ್ಯಾನ್ಮಾರ್‌ನ ಧರ್ಮಾಧ್ಯಕ್ಷರುಗಳ ಸಮ್ಮೇಳನದ ಅಧ್ಯಕ್ಷರಾಗಿರುವ ಯಾಂಗೂನ್‌ನ ಮಹಾಧರ್ಮಾಧ್ಯಕ್ಷ, ತಮ್ಮ ಮಹಾಧರ್ಮಕ್ಷೇತ್ರವಾದ ಬಾಗೊ ಪ್ರದೇಶದ ನ್ಯಾಂಗ್ಲೆಬಿನ್‌ನಲ್ಲಿ ಮುಂಬರುವ ಲೂರ್ದುಮಾತೆಯ ಹಬ್ಬವನ್ನು ಸ್ಮರಿಸುವ ಕಾರ್ಯಕ್ರಮದಲ್ಲಿ ಈ ಪ್ರೋತ್ಸಾಹವನ್ನು ನೀಡಿದರು.
ಕಥೋಲಿಕ ದೇವಾಲಯದ ಮೇಲೆ ಬಾಂಬ್ ದಾಳಿ
ಬರ್ಮಾದ ವಾಯುವ್ಯ ಚಿನ್ ರಾಜ್ಯದ ಮಿಂಡಾಟ್‌ನಲ್ಲಿರುವ ಯೇಸುವಿನ ಪವಿತ್ರ ಹೃದಯದ ಕಥೋಲಿಕ ದೇವಾಲಯದ ಮೇಲೆ ಮ್ಯಾನ್ಮಾರ್ ಮಿಲಿಟರಿ ಜುಂಟಾ, ಬಾಂಬ್ ದಾಳಿ ನಡೆಸಿದ ಕೆಲವು ದಿನಗಳ ನಂತರ ಕಾರ್ಡಿನಲ್ ರವರ ಹೇಳಿಕೆಗಳು ಬಂದವು. ಇದು ಜನವರಿ 25 ರಂದು ವಿಶ್ವಗುರು ಫ್ರಾನ್ಸಿಸ್ ರವರು ರಚಿಸಿದ ಹೊಸದಾಗಿ ಸ್ಥಾಪಿಸಲಾದ ಮಿಂಡಾಟ್ ಧರ್ಮಕ್ಷೇತ್ರದ ಪ್ರಧಾನಾಲಯವಾಗಿ ಆಯ್ಕೆಯಾದ ದೇವಾಲಯವಾಗಿತ್ತು.
ಫೆಬ್ರವರಿ 6 ರಂದು ಹೊಸ ಪ್ರಧಾನಾಲಯದ ಮೇಲೆ ದಾಳಿ ನಡೆಸಲಾಯಿತು, ಆದರೆ ವೈಮಾನಿಕ ಬಾಂಬ್ ದಾಳಿಯಿಂದ ಅದರ ಛಾವಣಿ ಮತ್ತು ಬಣ್ಣದ ಗಾಜಿನ ಕಿಟಕಿಗಳಿಗೆ ಹಾನಿಯಾದ ನಂತರ ಅದು ನಿರುಪಯುಕ್ತವಾಗಿದೆ ಎಂಬ ಸುದ್ದಿ ಇತ್ತೀಚೆಗೆ ಹೊರಬಂದಿತು.
ಬಾಂಬ್ ದಾಳಿಯಲ್ಲಿ ಯಾವುದೇ ಗಾಯಗಳಾಗಿಲ್ಲ, ಏಕೆಂದರೆ ಕಳಪೆ ಭದ್ರತಾ ಪರಿಸ್ಥಿತಿಗಳು ಮತ್ತು ನಡೆಯುತ್ತಿರುವ ಹೋರಾಟದ ಕಾರಣದಿಂದಾಗಿ ಯಾಜಕರು ಮತ್ತು ಭಕ್ತವಿಶ್ವಾಸಿಗಳು ಈಗಾಗಲೇ ಈ ಪ್ರದೇಶವನ್ನು ತೊರೆದಿದ್ದಾರೆ. ಕೆಲವು ದಿನಗಳ ಹಿಂದೆಯೇ, ಸ್ಥಳೀಯ ಯಾಜಕರು ತಪಾಸಣೆಗಳನ್ನು ನಡೆಸಿದ್ದರು ಮತ್ತು ಹೊಸದಾಗಿ ನೇಮಕಗೊಂಡ ಧರ್ಮಾಧ್ಯಕ್ಷರ ಅಂಭ್ಯಗತ ಜೀವನಕ್ಕಾಗಿ ಮುಂಬರುವ ಪ್ರಾರ್ಥನಾ ಆಚರಣೆಗಳನ್ನು ಆಯೋಜಿಸುವ ಬಗ್ಗೆ ಮಾತನಾಡುತ್ತಿದ್ದರು.
ಹಗೆತನ ಮತ್ತು ದಬ್ಬಾಳಿಕೆಯನ್ನು ಎದುರಿಸುವುದು
ಭಾನುವಾರ, ಕಾರ್ಡಿನಲ್ ಬೊರವರು ದುಃಖದ ಸ್ಥಿತಿ ಮತ್ತು ಭರವಸೆಯನ್ನು ಹೇಗೆ ಕಾಪಾಡಿಕೊಳ್ಳುವುದು ಎಂಬುದರ ಕುರಿತು ಚಿಂತನೆ ನಡೆಸಿದರು. ನಿರಾಶ್ರಿತರು ಮತ್ತು ಸ್ಥಳಾಂತರಗೊಂಡವರಂತೆಯೇ ಪೂಜ್ಯ ತಾಯಿಯು ಮತ್ತು ಪವಿತ್ರ ಕುಟುಂಬವು ಹೇಗೆ ನೋವುಗಳನ್ನು ಅನುಭವಿಸಿತು ಎಂಬುದನ್ನು ಅವರು ನೆನಪಿಸಿಕೊಂಡರು.
ಈ ಶಿಬಿರಗಳಲ್ಲಿರುವ ಪ್ರತಿಯೊಬ್ಬ ಗರ್ಭಿಣಿ ತಾಯಿಯಲ್ಲಿ, ತನ್ನ ಮಗುವನ್ನು ಈ ಲೋಕಕ್ಕೆ ತರಲು ಸುರಕ್ಷಿತ ಸ್ಥಳವನ್ನು ಹುಡುಕುತ್ತಾ ಬೆತ್ಲೆಹೇಮ್‌ಗೆ ಪ್ರಯಾಣಿಸುವ ಆತಂಕದ ಮಾತೆಮೇರಿಯ ಮುಖವನ್ನು ನಾವು ಕಾಣುತ್ತೇವೆ ಎಂದು ಅವರು ಗುರುತಿಸಿದರು.
ಸಂಘರ್ಷ ಮತ್ತು ಕಿರುಕುಳದಿಂದ ಬಳಲುತ್ತಿರುವ ಕುಟುಂಬಗಳು
ಕ್ಷಮೆಯಿಲ್ಲದ ಅರಣ್ಯದಲ್ಲಿ ತನ್ನ ಮಗುವನ್ನು ಹೆರಿಗೆ ಮಾಡಲು ಒತ್ತಾಯಿಸಲ್ಪಟ್ಟ ಪ್ರತಿ ಚಿಕ್ಕ ಹುಡುಗಿಯಲ್ಲಿ, ಮಾತೆಮೇರಿಯು ಒಂದು ಪುಟ್ಟ ಗೋದಲಿಯಲ್ಲಿ ತನ್ನ ಮಗುವಿಗೆ ಜನ್ಮ ನೀಡುವುದನ್ನು ನಾವು ನೋಡುತ್ತೇವೆ, ಎಂಬುದನ್ನು ಕಾರ್ಡಿನಲ್ ಬೊರವರು ಗಮನಿಸಿದರು.
ಮಗುವನ್ನು ಕಳೆದುಕೊಳ್ಳುವ ದುಃಖ
ಹಿಂಸೆ ಅಥವಾ ಅನ್ಯಾಯದಿಂದ ಮಗುವನ್ನು ಕಳೆದುಕೊಂಡ ಪ್ರತಿಯೊಬ್ಬ ತಾಯಿಯೂ, ಮೈಕೆಲ್ಯಾಂಜೆಲೊರವರ ಪಿಯೆಟಾದಲ್ಲಿ ಚಿತ್ರಣದಲ್ಲಿ ಚಿತ್ರಿಸಿದಂತೆ ವ್ಯಾಕುಲ ಮಾತೆಮೇರಿಯ ದುಃಖದಲ್ಲಿ ಭಾಗಿಯಾಗುತ್ತಾರೆ ಎಂದು ಅವರು ಒಪ್ಪಿಕೊಂಡರು.
ಆದರೂ, ಮಾತೆ ಮೇರಿಯಂತೆಯೇ, ಈ ತಾಯಂದಿರು ಕ್ಷಮಿಸಲು ಮತ್ತು ಶಾಂತಿ ಹಾಗೂ ಸಾಮರಸ್ಯದ ಪ್ರತಿಪಾದಕರಾಗಲು ಶಕ್ತಿಯನ್ನು ಕಂಡುಕೊಳ್ಳುತ್ತಾರೆ ಎಂದು ಅವರು ಹೇಳಿದರು.
"ಯುದ್ಧದ ವಿಭಜನೆಗಳು ಶಾಂತಿಯ ಏಕತೆಗೆ ದಾರಿ ಮಾಡಿಕೊಡುವ ಮ್ಯಾನ್ಮಾರ್ ನ್ನು ನಾವು ಕಲ್ಪಿಸಿಕೊಳ್ಳೋಣ" ಎಂದು ಅವರು ಮುಂದುವರಿಸಿದರು.
ಭರವಸೆಯ ಸಾಕ್ಷಿಗಳು
ವಿಶ್ವದಲ್ಲಿ ಈಗಾಗಲೇ ಮೂರನೇ ಮಹಾಯುದ್ಧ ನಡೆಯುತ್ತಿದೆ ಎಂದು ಕೆಲವರು ಹೇಳುತ್ತಾರೆ ಎಂದು ಕಾರ್ಡಿನಲ್ ಗಮನಿಸಿದರು, ಇದು "ಬಡವರ ಸಂಕಟ," "ಜನರನ್ನು ದಮನಿಸುವ ಶಕ್ತಿಶಾಲಿಗಳು," "ಶ್ರೀಮಂತ ದೇಶಗಳಲ್ಲಿ ಸಾಕುಪ್ರಾಣಿಗಳು ಉತ್ತಮ ಆಹಾರವನ್ನು ಆನಂದಿಸುವಾಗ ಹಸಿವಿನಿಂದ ಸಾಯುತ್ತಿರುವ ಸಾವಿರಾರು ಮಕ್ಕಳು" ಮತ್ತು "ಶಾಲೆಗಳಿಗಿಂತ ಹೆಚ್ಚು ಶಸ್ತ್ರಾಸ್ತ್ರ ಕಾರ್ಖಾನೆಗಳು ಇರುವಲ್ಲಿ" ಸಾಕ್ಷಿಯಾಗಿದೆ.
ಕೊನೆಯದಾಗಿ, ಕಾರ್ಡಿನಲ್ ಬೊರವರು ಸಂತ ಬರ್ನದತ್ತರವರಿಗೆ ಕಾಣಿಸಿಕೊಂಡು ಭರವಸೆ ಮತ್ತು ಗುಣಪಡಿಸುವಿಕೆಯ ಸಂದೇಶವನ್ನು ತಂದ ಲೂರ್ದುಮಾತೆಯ ಮಧ್ಯಸ್ಥಿಕೆಗಾಗಿ ಪ್ರಾರ್ಥಿಸಿದರು ಮತ್ತು ಈ ಭರವಸೆಯ ಜ್ಯೂಬಿಲಿ ಸಮಯದಲ್ಲಿ, ಎಲ್ಲಾ ಜನರು ಶಾಂತಿ ಮತ್ತು ಘನತೆಯಿಂದ ಬದುಕಬಹುದಾದ ಜಗತ್ತನ್ನು ನಿರ್ಮಿಸುವ ಬದ್ಧತೆಯನ್ನು ನವೀಕರಿಸಲು ಪ್ರತಿಯೊಬ್ಬರನ್ನು ಒತ್ತಾಯಿಸಿದರು.
ದೇವರ ತಾಯಿ ಮಾತೆಮೇರಿಯು, ಜಾಗತಿಕ ಶಾಂತಿ ಮತ್ತು ಸೌಹಾರ್ದತೆಯನ್ನು, ವಿಶೇಷವಾಗಿ ಮ್ಯಾನ್ಮಾರ್‌ನಲ್ಲಿ ಹುಟ್ಟುಹಾಕಲು ನಮಗೆ ಸಹಾಯ ಮಾಡಲಿ ಎಂದು ಅವರು ಹೇಳಿದರು.