MAP

Mons. Timothy Broglio USCCB presidente Mons. Timothy Broglio USCCB presidente  (Credits: Senior Airman Kristin High)

ವಿಶ್ವಗುರುಗಳ ಪತ್ರಕ್ಕೆ ಅಮೇರಿಕದ ಧರ್ಮಾಧ್ಯಕ್ಷರುಗಳು ತಮ್ಮ 'ಆಳವಾದ ಕೃತಜ್ಞತೆ' ಯನ್ನು ವ್ಯಕ್ತಪಡಿಸಿದರು

ವಲಸಿಗರಿಗೆ ಬೆಂಬಲ ನೀಡುವ ಕುರಿತು ಅಮೇರಿಕದ ಧರ್ಮಾಧ್ಯಕ್ಷರುಗಳಿಗೆ ವಿಶ್ವಗುರುಗಳು ಬರೆದ ಪತ್ರದ ನಂತರ, ಅಮೇರಿಕದ ಕಥೋಲಿಕ ಧರ್ಮಾಧ್ಯಕ್ಷರುಗಳ ಸಮ್ಮೇಳನದ ಅಧ್ಯಕ್ಷರಾದ ಮಹಾಧರ್ಮಾಧ್ಯಕ್ಷ ತಿಮೋತಿ ಬ್ರೋಗ್ಲಿಯೊರವರು, ನೆರವಿನ ಅಗತ್ಯವಿರುವವರಿಗೆ ತಮ್ಮ ಪಾಲನಾ ಸೇವೆಯ ಕಾರ್ಯವನ್ನು ಮುಂದುವರಿಸಲು ಪ್ರೋತ್ಸಾಹಿಸಿದ್ದಕ್ಕಾಗಿ ಪವಿತ್ರ ತಂದೆಗೆ ಧನ್ಯವಾದಗಳನ್ನು ಅರ್ಪಿಸಿದರು.

ಡೆಬೊರಾ ಕ್ಯಾಸ್ಟೆಲ್ಲಾನೊ ಲುಬೊವ್

"ನಮ್ಮ ಸಮುದಾಯಗಳನ್ನು ರಕ್ಷಿಸುವಾಗ ಎಲ್ಲರ ಘನತೆಯನ್ನು ಕಾಪಾಡುವ, ಹೆಚ್ಚು ಮಾನವೀಯ ವಲಸೆ ವ್ಯವಸ್ಥೆಯನ್ನು ನಿರ್ಮಿಸಲು, ನಾವೆಲ್ಲಾ ಒಂದೇ ರಾಷ್ಟ್ರವಾಗಿ ಧೈರ್ಯವನ್ನು ಕಂಡುಕೊಳ್ಳಲು ನಿಮ್ಮ ನಿರಂತರ ಪ್ರಾರ್ಥನೆಗಳನ್ನು ನಾನು ಧೈರ್ಯದಿಂದ ಕೇಳುತ್ತೇನೆ."

ಅಮೇರಿಕದ ಕಥೋಲಿಕ ಧರ್ಮಾಧ್ಯಕ್ಷರುಗಳ ಸಮ್ಮೇಳನದ (USCCB) ಅಧ್ಯಕ್ಷ ಮತ್ತು ಅಮೇರಿಕದ ಮಿಲಿಟರಿ ಸೇವೆಗಳ ಮಹಾಧರ್ಮಾಧ್ಯಕ್ಷರಾಗಿರುವ, ಮಹಾಧರ್ಮಾಧ್ಯಕ್ಷ ತಿಮೋತಿ ಬ್ರೋಗ್ಲಿಯೊರವರು ಈ ವಾರದ ಆರಂಭದಲ್ಲಿ ಅಮೇರಿಕದ ಧರ್ಮಾಧ್ಯಕ್ಷರುಗಳಿಗೆ ವಲಸೆಯ ಕುರಿತು ಸಂದೇಶವನ್ನು ಕಳುಹಿಸಿದ ಪವಿತ್ರ ತಂದೆಗೆ ತಮ್ಮ ಕೃತಜ್ಞತಾ ಪತ್ರದಲ್ಲಿ ಇದನ್ನು ವ್ಯಕ್ತಪಡಿಸಿದ್ದಾರೆ.

"ಅಮೇರಿಕದ ಕಥೋಲಿಕ ಧರ್ಮಾಧ್ಯಕ್ಷರುಗಳ ಪರವಾಗಿ," ಮಹಾಧರ್ಮಾಧ್ಯಕ್ಷರಾದ ಬ್ರೋಗ್ಲಿಯೊರವರು, "ಫೆಬ್ರವರಿ 11 ರ ನಿಮ್ಮ ಪತ್ರವನ್ನು ಅಂಗೀಕರಿಸಲು ಮತ್ತು ನಿಮ್ಮ ಪ್ರಾರ್ಥನಾಪೂರ್ವಕ ಬೆಂಬಲಕ್ಕಾಗಿ ಆಳವಾದ ಕೃತಜ್ಞತೆಯನ್ನು ವ್ಯಕ್ತಪಡಿಸಲು ನನಗೆ ಗೌರವವಿದೆ" ಎಂದು ಪ್ರಾರಂಭಿಸಿದರು.

ಎಲ್ಲರಿಗೂ ಭರವಸೆ ನೀಡುವ ಏಕೀಕೃತ ಪತ್ರ
ಸಂತ ಪೇತ್ರರವರ ಉತ್ತರಾಧಿಕಾರಿಯಾಗಿ, ನೀವು ಪ್ರತಿಯೊಬ್ಬ ಕಥೋಲಿಕನನ್ನು ಮಾತ್ರವಲ್ಲ, ಪ್ರತಿಯೊಬ್ಬ ಕ್ರೈಸ್ತರಾದ ನಮ್ಮನ್ನು ವಿಶ್ವಾಸದಲ್ಲಿ ಒಂದುಗೂಡಿಸುವದಕ್ಕೆ ಕರೆ ನೀಡಿದ್ದೀರಿ - ಪ್ರತಿಯೊಬ್ಬ ವ್ಯಕ್ತಿ, ನಾಗರಿಕ ಮತ್ತು ವಲಸಿಗರಿಗೆ ಯೇಸುಕ್ರಿಸ್ತನ ಭರವಸೆಯನ್ನು ನೀಡುತ್ತೀರಿ ಎಂದು ಅವರು ಶ್ಲಾಘಿಸಿದರು.

ಭಯ ಮತ್ತು ಗೊಂದಲದ ಈ ಸಮಯದಲ್ಲಿ, ನಮ್ಮ ರಕ್ಷಕರ ಪ್ರಶ್ನೆಯಾದ 'ಇವುಗಳಲ್ಲಿ ಕನಿಷ್ಠವಾದದ್ದಕ್ಕೆ ನೀವು ಏನು ಮಾಡಿದ್ದೀರಿ? ಎಂಬ ಪ್ರಶ್ನೆಗೆ ಉತ್ತರಿಸಲು ನಾವು ಸದಾ ಸಿದ್ಧರಾಗಿರಬೇಕು ಎಂದು ಯುಎಸ್‌ಸಿಸಿಬಿ ಅಧ್ಯಕ್ಷರು ಹೇಳಿದರು.

ನೆರವಿನ ಹತಾಶ ಅಗತ್ಯವಿರುವವರಿಗೆ ಸಹಾಯ ಮಾಡುವುದು
ಇದಲ್ಲದೆ, "ಹಠಾತ್ ನೆರವು ಹಿಂತೆಗೆದುಕೊಳ್ಳುವಿಕೆಯಿಂದ ಬಳಲುತ್ತಿರುವ ಕುಟುಂಬಗಳು ಸಹಿಸಿಕೊಳ್ಳುವ ಶಕ್ತಿಯನ್ನು ಕಂಡುಕೊಳ್ಳಲಿ" ಎಂದು ದೇವರಲ್ಲಿ ಪ್ರಾರ್ಥಿಸಲು, ಮಹಾಧರ್ಮಾಧ್ಯಕ್ಷರಾದ ಬ್ರೋಗ್ಲಿಯೊರವರು ಎಲ್ಲಾ ಭಕ್ತವಿಶ್ವಾಸಿಗಳನ್ನು ಪ್ರಾರ್ಥನೆಯಲ್ಲಿ ಭಾಗಿಯಾಗಲು ಆಹ್ವಾನಿಸಿದರು.

"ನಿಮ್ಮೊಂದಿಗೆ," ಅಮೆರಿಕಾ ಸರ್ಕಾರವು ತೀವ್ರ ಅಗತ್ಯವಿರುವವರಿಗೆ ಸಹಾಯ ಮಾಡಲು ತನ್ನ ಆದ್ಯ-ಬದ್ಧತೆಗಳನ್ನು ಉಳಿಸಿಕೊಳ್ಳಲಿ ಎಂದು ನಾವು ಪ್ರಾರ್ಥಿಸುತ್ತೇವೆ.
ನಿರ್ಗತಿಕರಲ್ಲಿ ದೇವರನ್ನು ಕಾಣುವುದು.

ತಮ್ಮ ಪತ್ರದಲ್ಲಿ, ಯುಎಸ್‌ಎಸ್‌ಬಿ ಅಧ್ಯಕ್ಷರು ಈ ತಪಸ್ಸು ಕಾಲದಲ್ಲಿ ಕಥೋಲಿಕ ಪರಿಹಾರ ಸೇವೆಯ ರಾಷ್ಟ್ರೀಯ ಸಂಗ್ರಹವನ್ನು ಹಾಗೂ ಸ್ಥಳೀಯ ಕಥೋಲಿಕ ದತ್ತಿ ಸಂಸ್ಥೆಗಳ ಕೆಲಸವನ್ನು ಬೆಂಬಲಿಸುವಲ್ಲಿ ದೇವರ ಜನರು ತಮ್ಮ ಕರುಣೆ ಮತ್ತು ಔದಾರ್ಯವನ್ನು ಕೋರಿದರು, ಇದರಿಂದ ಎಲ್ಲರ ಪ್ರಯತ್ನಗಳಿಂದ ಶೂನ್ಯವನ್ನು ತುಂಬಬಹುದು ಎಂದು ಹೇಳಿದರು.

ನಮ್ಮ ಮಧ್ಯದಲ್ಲಿರುವ ನಿರ್ಗತಿಕರ ಬಗ್ಗೆ ನಮ್ಮ ಕಾಳಜಿಯನ್ನು ಮುಂದುವರಿಸಲು ಮತ್ತು ವಲಸಿಗರು ನಮ್ಮ ತೀರಕ್ಕೆ ಬರುವ ಸ್ಥಳಗಳಲ್ಲಿನ ಪರಿಸ್ಥಿತಿಯನ್ನು ಸುಧಾರಿಸುವ ಬಯಕೆಯೊಂದಿಗೆ ನಾವು ಹೆಣಗಾಡುತ್ತಿರುವಾಗ, ಅವರಲ್ಲಿ ನಾವು ಪ್ರಭುಕ್ರಿಸ್ತರ ಮುಖವನ್ನು ನೋಡುತ್ತೇವೆ ಎಂಬುದನ್ನು ನಾವು ಯಾವಾಗಲೂ ಮನಸ್ಸಿನಲ್ಲಿಟ್ಟುಕೊಳ್ಳುತ್ತೇವೆ." ಎಂದು ಅವರು ಒತ್ತಿ ಹೇಳಿದರು.

ಈ ಜ್ಯೂಬಿಲಿ ವರ್ಷದಲ್ಲಿ, "ನಾವು ಸಮನ್ವಯ, ಸೇರ್ಪಡೆ ಮತ್ತು ಭ್ರಾತೃತ್ವದ ಸೇತುವೆಗಳನ್ನು ನಿರ್ಮಿಸೋಣ" ಎಂದು ಮಹಾಧರ್ಮಾಧ್ಯಕ್ಷರಾದ ಬ್ರೋಗ್ಲಿಯೊರವರು ಪ್ರಾರ್ಥಿಸಿದರು, ವಿಶ್ವಗುರು ಫ್ರಾನ್ಸಿಸ್ ರವರ ನಿಕಟತೆ ಮತ್ತು ಬೆಂಬಲಕ್ಕಾಗಿ ಅವರು ಮತ್ತು ಅಮೇರಿಕದ ಇಡೀ ಧರ್ಮಾಧ್ಯಕ್ಷರುಗಳ ಒಕ್ಕೂಟವು ಆಳವಾದ ಕೃತಜ್ಞತೆಯನ್ನು ಮತ್ತೊಮ್ಮೆ ಸಲ್ಲಿಸುತ್ತದೆ.

13 ಫೆಬ್ರವರಿ 2025, 13:30