MAP

FRANCE-AI-SUMMIT FRANCE-AI-SUMMIT  (AFP or licensors)

'ಕೈಗಾರಿಕಾ ಕ್ರಾಂತಿಗೆ ಹೋಲಿಸಬಹುದಾದ ಪ್ರಮಾಣದಲ್ಲಿ AI ಕ್ರಾಂತಿಗಳನ್ನು ತರಲಿದೆ'

ಸಂಸ್ಕೃತಿ ಮತ್ತು ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಮತ್ತು ಪವಿತ್ರ ಅಧಿಕಾರ ಪೀಠವು, ಕೃತಕ ಬುದ್ಧಿಮತ್ತೆಯ ಹೊಸ ದಾಖಲೆ 'ಆಂಟಿಕ್ವಾ ಎಟ್ ನೋವಾ'ದ ಲೇಖಕರಲ್ಲಿ ಒಬ್ಬರಾದ ಮಹಾಧರ್ಮಾಧ್ಯಕ್ಷರಾದ ಕಾರ್ಲೊ ಮಾರಿಯಾ ಪೋಲ್ವಾನಿರವರು, ದಾಖಲೆಯ ಪ್ರಮುಖ ಒಳನೋಟಗಳನ್ನು ಹಂಚಿಕೊಳ್ಳುತ್ತಾರೆ, AI ಕೈಗಾರಿಕಾ ಕ್ರಾಂತಿಯಂತೆಯೇ ಪರಿಣಾಮಗಳನ್ನು ಬೀರುತ್ತದೆ ಎಂದು ಹೇಳುತ್ತಾರೆ.

ಡೆಲ್ಫಿನ್ ಅಲೈರ್

ಫೆಬ್ರವರಿ 10 ಮತ್ತು 11 ರಂದು ಪ್ಯಾರಿಸ್‌ನಲ್ಲಿ ನಡೆಯಲಿರುವ ಶೃಂಗಸಭೆಯಲ್ಲಿ ಕೃತಕ ಬುದ್ಧಿಮತ್ತೆಯು ಈ ವಲಯದ ಪ್ರಭಾವಿ ವ್ಯಕ್ತಿಗಳನ್ನು ಒಟ್ಟುಗೂಡಿಸುವ ಕೇಂದ್ರಬಿಂದುವಾಗಿದೆ. ಭಾರತದ ಸಹ-ಅಧ್ಯಕ್ಷತೆಯಲ್ಲಿ ನಡೆಯುವ ಈ ಅಂತರರಾಷ್ಟ್ರೀಯ ಸಭೆಯು ಜಾಗತಿಕ AI ಆಡಳಿತದ ಅಡಿಪಾಯವನ್ನು ಸ್ಥಾಪಿಸಲು ಖಾಸಗಿ ವಲಯ ಮತ್ತು ನಾಗರಿಕ ಸಮಾಜದಿಂದ ಸಾವಿರಕ್ಕೂ ಹೆಚ್ಚು ಜನರನ್ನು ಒಟ್ಟುಗೂಡಿಸುತ್ತದೆ.

ಪವಿತ್ರ ಅಧಿಕಾರ ಪೀಠವು, ಹಲವಾರು ವರ್ಷಗಳಿಂದ AI ಯ ನೈತಿಕ ಅಂಶಗಳ ಬಗ್ಗೆ ಪೂರ್ವಭಾವಿಯಾಗಿ ಕಾರ್ಯನಿರ್ವಹಿಸುತ್ತಿದೆ ಮತ್ತು ಜನವರಿ 28 ರಂದು, ವ್ಯಾಟಿಕನ್‌ನ ಸಂಸ್ಕೃತಿ ಮತ್ತು ಶಿಕ್ಷಣಕ್ಕಾಗಿನ ಡಿಕ್ಯಾಸ್ಟರಿ, ಡಿಕ್ಯಾಸ್ಟರಿ ಫಾರ್ ದಿ ಡಾಕ್ಟ್ರಿನ್ ಆಫ್ ದಿ ಫೇತ್ ಸಹಯೋಗದೊಂದಿಗೆ, ಈ ವಿಷಯದ ಕುರಿತು ಗಮನಾರ್ಹ ಮತ್ತು ದಟ್ಟವಾದ ದಾಖಲೆಯನ್ನು ಪ್ರಕಟಿಸಿತು.

"ಆಂಟಿಕ್ವಾ ಎಟ್ ನೋವಾ" ಎಂಬ ಶೀರ್ಷಿಕೆಯ ಇದರ 35 ಪುಟಗಳು ಕೃತಕ ಮತ್ತು ಮಾನವ ಬುದ್ಧಿಮತ್ತೆಯ ನಡುವಿನ ಸಂಬಂಧವನ್ನು ಹಾಗೂ ವಿಶ್ವಗುರು ಎತ್ತಿದ ನೈತಿಕ ಮತ್ತು ಮಾನವಶಾಸ್ತ್ರೀಯ ಕಾಳಜಿಗಳನ್ನು ಅನ್ವೇಷಿಸುತ್ತವೆ. ಇದು 2024 ರ ವಿಶ್ವ ಶಾಂತಿ ದಿನದ AI ಮತ್ತು ಶಾಂತಿಯ ಕುರಿತು ಪವಿತ್ರ ತಂದೆಯ ಸಂದೇಶ ಮತ್ತು 2024ರ ಜೂನ್ 14 ರಂದು ದಕ್ಷಿಣ ಇಟಲಿಯಲ್ಲಿ ಕೃತಕ ಬುದ್ಧಿಮತ್ತೆಯ ಕುರಿತು G7 ಅಧಿವೇಶನದಲ್ಲಿ ಅವರ ಭಾಷಣಕ್ಕೆ ಪೂರಕವಾಗಿದೆ.

ವ್ಯಾಟಿಕನ್ ಸುದ್ಧಿಯೊಂದಿಗಿನ ಈ ಸಂದರ್ಶನದಲ್ಲಿ, ಸಂಸ್ಕೃತಿ ಮತ್ತು ಶಿಕ್ಷಣಕ್ಕಾಗಿ ಡಿಕ್ಯಾಸ್ಟರಿಯ ಕಾರ್ಯದರ್ಶಿ ಮತ್ತು ಆಂಟಿಕ್ವಾ ಎಟ್ ನೋವಾದ ಲೇಖಕ ಮಹಾಧರ್ಮಾಧ್ಯಕ್ಷರಾದ ಕಾರ್ಲೊ ಮಾರಿಯಾ ಪೋಲ್ವಾನಿರವರು, ಈ ಉಪಕರಣದ ಪ್ರಮುಖ ಅಸ್ತಿತ್ವವಾದ ಮತ್ತು ಮಾನವಶಾಸ್ತ್ರೀಯ ಪಣಗಳನ್ನು ಎತ್ತಿ ತೋರಿಸುವ ದಾಖಲೆಯ ಪ್ರಮುಖ ಒಳನೋಟಗಳನ್ನು ಹಂಚಿಕೊಂಡಿದ್ದಾರೆ.

ಪ್ರಶ್ನೆ: ಮಾನವರು ತಮ್ಮದೇ ಆದ ಸೃಷ್ಟಿಕರ್ತರೆಂದು ನಂಬುವಂತೆ ಮಾಡುವ, ಕೆಲವೊಮ್ಮೆ ದೈವಿಕ ಯೋಜನೆಗೆ ಪ್ರತಿಸ್ಪರ್ಧಿಯಾಗುವಂತೆ ಮಾಡುವ AIನ ಪ್ರಲೋಭನೆಗೆ ನಾವು ಹೇಗೆ ಪ್ರತಿಕ್ರಿಯಿಸಬೇಕು?
ಆಂಟಿಕ್ವಾ ಎಟ್ ನೋವಾ ಪುಸ್ತಕದ ಮೊದಲ ಭಾಗವು AIನ್ನು ಶಾಸ್ತ್ರೀಯ ತತ್ವಶಾಸ್ತ್ರ ಮತ್ತು ಮಾನವಶಾಸ್ತ್ರದಲ್ಲಿ ವೈಚಾರಿಕತೆ ಮತ್ತು ಬುದ್ಧಿಮತ್ತೆಯ ಐತಿಹಾಸಿಕ ಸಂದರ್ಭದಲ್ಲಿ ಇರಿಸುತ್ತದೆ. ಬುದ್ಧಿಮತ್ತೆಯ ಬಹು ರೂಪಗಳಿವೆ. ಇಂದು, ಭಾವನಾತ್ಮಕ ಬುದ್ಧಿವಂತಿಕೆಯು ಬೌದ್ಧಿಕ ಬುದ್ಧಿವಂತಿಕೆಗಿಂತ ಭಿನ್ನವಾಗಿದೆ ಎಂದು ನಾವು ವೈಜ್ಞಾನಿಕವಾಗಿ ಅರ್ಥಮಾಡಿಕೊಂಡಿದ್ದೇವೆ. ಈ ವಿಶ್ಲೇಷಣೆ ಇಲ್ಲದೆ, AIನ್ನು ಎಲ್ಲದಕ್ಕೂ ಪರಿಹಾರವಾಗಿ ನೋಡುವ ಅಪಾಯವಿದೆ, ಆದರೆ ಅದು ನಿಜವಲ್ಲ. AI ಮಾನವರು ನಿಗದಿಪಡಿಸಿದ ಉದ್ದೇಶಗಳಿಗೆ ಮಾತ್ರ ಸೀಮಿತವಾಗಿರಬೇಕು. AIನ ಗುರಿಗಳು ಮತ್ತು ಅನ್ವಯಿಕೆಗಳ ಮೇಲೆ ಮಾನವೀಯತೆಯು ನಿಯಂತ್ರಣವನ್ನು ಕಳೆದುಕೊಂಡಾಗ ನಿಜವಾದ ಅಪಾಯ ಉದ್ಭವಿಸುತ್ತದೆ.

ಪ್ರಶ್ನೆ: ಈ ಜ್ಯೂಬಿಲಿ ವರ್ಷದಲ್ಲಿ AI ಅನ್ನು ಭರವಸೆಯೊಂದಿಗೆ ಹೇಗೆ ಜೋಡಿಸಬಹುದು? ಅದರ ಬಳಕೆಯು ನಾವು ಉತ್ತಮರಾಗಲು ಸಹಾಯ ಮಾಡಬಹುದೇ?
AI ಭವಿಷ್ಯದಲ್ಲಿ ಮಾನವೀಯತೆ ಎದುರಿಸುವ ಅತ್ಯಂತ ಸಂಕೀರ್ಣ ಸವಾಲುಗಳಲ್ಲಿ ಒಂದಾಗಿದೆ. ಆದಾಗ್ಯೂ, ಈ ಸವಾಲುಗಳನ್ನು ಎದುರಿಸಲು ಮಾನವರು ತಮ್ಮನ್ನು ತಾವು ಸಿದ್ಧಪಡಿಸಿಕೊಳ್ಳುತ್ತಾರೆ ಎಂಬ ಭರವಸೆ ನಮಗಿರಬೇಕು. ವಿಶ್ವಗುರು ಇದನ್ನು ನಂಬುತ್ತಾರೆ ಮತ್ತು ಧರ್ಮಸಭೆಯು ಇದನ್ನು ನಂಬುತ್ತದೆ. ನಾವು ಹತಾಶೆಗೊಳ್ಳಬಾರದು, ಏಕೆಂದರೆ ಇದೊಂದು ಅಸಾಧಾರಣ ಅವಕಾಶ. AIಗೆ ಅಪಾರವಾದ ಒಳಿತನ್ನು ಮಾಡುವ ಸಾಮರ್ಥ್ಯವಿದೆ. ಖಂಡಿತವಾಗಿಯೂ ತಪ್ಪುಗಳು ಆಗುತ್ತಲೇ ಇರುತ್ತವೆ - ಮಾನವೀಯತೆ ಯಾವಾಗಲೂ ತಪ್ಪುಗಳನ್ನು ಮಾಡಿದೆ - ಆದರೆ ಇದರರ್ಥ ನಾವು ಅನಾವರಣ (ಅಪೋಕ್ಯಾಲಿಪ್ಟಿಕ್) ಚಿಂತನೆಗೆ ಬಲಿಯಾಗಬೇಕು ಎಂದಲ್ಲ. ಕೊನೆಯಲ್ಲಿ, ಮಾನವೀಯತೆಯು ಜಯಗಳಿಸುತ್ತದೆ ಮತ್ತು ಈ ಸಾಧನವನ್ನು ಬುದ್ಧಿವಂತಿಕೆಯಿಂದ ಬಳಸುತ್ತದೆ ಎಂದು ನಂಬಲು ಭರವಸೆ ನಮಗೆ ಆಂತರಿಕ ಶಾಂತಿಯನ್ನು ಒದಗಿಸುತ್ತದೆ.

ಪ್ರಶ್ನೆ: ಪವಿತ್ರ ಅಧಿಕಾರ ಪೀಠವು, ತನ್ನ ಸಂಸ್ಥೆಗಳಲ್ಲಿ ಕೃತಕ ಬುದ್ಧಿಮತ್ತೆಯನ್ನು ಹೇಗೆ ಬಳಸಬಹುದು?
ಕಥೋಲಿಕ ಧರ್ಮಸಭೆಯು, ಅದರ ಕೇಂದ್ರೀಕೃತ ರಚನೆಗಳೊಂದಿಗೆ, ಅಸಾಧಾರಣವಾದ ದತ್ತಾಂಶದ ಸಂಪತ್ತನ್ನು ಹೊಂದಿದೆ. ಸಂಖ್ಯಾಶಾಸ್ತ್ರೀಯ ವಿಶ್ಲೇಷಣೆಯಿಂದ ಹಿಡಿದು ಪಾಲನಾಸೇವೆಯ ಸಂಪರ್ಕದವರೆಗೆ ಹಲವು ಕ್ಷೇತ್ರಗಳಲ್ಲಿ AI ದಕ್ಷತೆಯನ್ನು ಹೆಚ್ಚಿಸಬಹುದು. ಪ್ರಯಾಣ ಕಷ್ಟಕರವಾಗಿರುವ ದೂರದ ಸಮುದಾಯಗಳನ್ನು ತಲುಪಲು ಇದು ಸಹಾಯ ಮಾಡುತ್ತದೆ, ಅಂತೆಯೇ ಧರ್ಮೋಪದೇಶಕರ ಸಹಕಾರದ ಸೌಲಭ್ಯವನ್ನು ಇಂತಹ ಸಮುದಾಯಗಳಿಗೆ ತಲುಪಲು ಸಹಾಯ ಮಾಡುತ್ತದೆ.
AI ದೇವರ ವಾಕ್ಯವ ಪಸರಿಸುವ ಕಾರ್ಯವನ್ನು ಸುಗಮಗೊಳಿಸುತ್ತದೆ, ಸುವಾರ್ತಾಬೋಧನೆಯನ್ನು ಸುಲಭಗೊಳಿಸುತ್ತದೆ. ಒಳಿತಿನ ಸಾಮರ್ಥ್ಯ ಅಪಾರವಾಗಿದೆ ಮತ್ತು ನಾವು ಆಶಾವಾದಿಗಳಾಗಿಯೇ ಇದ್ದೇವೆ.

10 ಫೆಬ್ರವರಿ 2025, 15:45