ಡಿಆರ್‌ಸಿ ಸಂಘರ್ಷ ಉಲ್ಬಣಗೊಳ್ಳುತ್ತಿದ್ದಂತೆ ಆಫ್ರಿಕಾದ ಧರ್ಮಾಧ್ಯಕ್ಷರುಗಳು ಪ್ರಾರ್ಥನೆ, ಉಪವಾಸವನ್ನು ಕೈಗೊಳ್ಳಲು ಒತ್ತಾಯಿಸುತ್ತಾರೆ
ಸಿಸ್ಟರ್ ಜೆಸಿಂತರ್ ಆಂಟೊನೆಟ್ ಒಕೋತ್, FSSA
ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯದಲ್ಲಿ (DRC) ಹೆಚ್ಚುತ್ತಿರುವ ಹಿಂಸಾಚಾರ ಮತ್ತು ಅಸ್ಥಿರತೆಯ ಮಧ್ಯೆ, ಆಫ್ರಿಕಾದ ಧರ್ಮಾಧ್ಯಕ್ಷರುಗಳು ಖಂಡ ಮತ್ತು ಅದರ ದ್ವೀಪಗಳಲ್ಲಿನ ಕ್ರೈಸ್ತರು ಮತ್ತು ಎಲ್ಲಾ ಸದ್ಭಾವನೆಯ ಜನರು ಶಾಂತಿಗಾಗಿ ಪ್ರಾರ್ಥನೆ ಮತ್ತು ಉಪವಾಸದಲ್ಲಿ ತೊಡಗಿಸಿಕೊಳ್ಳಲು ಕರೆ ನೀಡಿದ್ದಾರೆ. ರುವಾಂಡದ ಬೆಂಬಲಿತ M23 ಬಂಡುಕೋರರು ಪೂರ್ವ ಕಾಂಗೋದ ಎರಡನೇ ಅತಿದೊಡ್ಡ ನಗರವಾದ ಬುಕಾವುವನ್ನು ಪ್ರವೇಶಿಸಿದಾಗ ಈ ಮನವಿ ಬಂದಿತು.
ಘಾನಾದ ಅಕ್ರಾದಲ್ಲಿ ನಡೆದ ತಮ್ಮ ಮೊದಲ ವಾರ್ಷಿಕ ಸಾಮಾನ್ಯ ಸಭೆಯ ನಂತರ, ಆಫ್ರಿಕಾ ಮತ್ತು ಮದಗಾಸ್ಕರ್‌ನ ಧರ್ಮಾಧ್ಯಕ್ಷರ ಸಮ್ಮೇಳನಗಳ ಸಿಂಪೋಸಿಯಂ (SECAM) ಸ್ಥಾಯಿ ಸಮಿತಿಯು ನೀಡಿದ ಹೇಳಿಕೆಯಲ್ಲಿ, ಆಫ್ರಿಕಾದ ಶ್ರೀಮಂತ ಸಂಪನ್ಮೂಲಗಳಿಂದಾಗಿ ಮುಂದುವರೆಯುತ್ತಿರುವ ರಕ್ತಪಾತವನ್ನು ಧರ್ಮಾಧ್ಯಕ್ಷರಗಳು ಖಂಡಿಸಿದ್ದಾರೆ. ಸಂಘರ್ಷದಿಂದ ಪ್ರಭಾವಿತರಾದವರಿಗೆ ಭರವಸೆ ತರುವಲ್ಲಿ ವಿಶ್ವಾಸ ಮತ್ತು ಒಗ್ಗಟ್ಟಿನ ಶಕ್ತಿಯನ್ನು ಅವರು ಒತ್ತಿ ಹೇಳುತ್ತಾರೆ.
"ಆಫ್ರಿಕಾದ ಶ್ರೀಮಂತ ಖನಿಜ ನಿಕ್ಷೇಪಗಳು, ನಿಜವಾಗಿಯೂ ಸಮೃದ್ಧಿಯ ಸಂಭಾವ್ಯ ಮೂಲವಾಗಿದ್ದು, ಬದಲಾಗಿ ಸಂಘರ್ಷದ ಮೂಲವಾಗಿ ಮುಂದುವರೆದಿದೆ ಎಂದು ನಮಗೆ ತಿಳಿದಿದೆ. ಈ ಸಂಪನ್ಮೂಲಗಳನ್ನು ನಿಯಂತ್ರಿಸುವ ಮತ್ತು ಸ್ವಾಧೀನಪಡಿಸಿಕೊಳ್ಳುವ ಬಯಕೆಯು, ಪ್ರಬಲ ರಾಷ್ಟ್ರಗಳು ಮತ್ತು ಬಹುರಾಷ್ಟ್ರೀಯ ಕಂಪನಿಗಳನ್ನು ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ (DRC), ನೈಜೀರಿಯಾ, ಮೊಜಾಂಬಿಕ್, ಸುಡಾನ್ ಮುಂತಾದ ಕೆಲವು ಆಫ್ರಿಕಾದ ದೇಶಗಳಲ್ಲಿ ಸಶಸ್ತ್ರ ಬಣಗಳಿಗೆ ಹಣಕಾಸು ಒದಗಿಸಲು ಪ್ರೇರೇಪಿಸುತ್ತದೆ, ಇದರಿಂದಾಗಿ ಹಿಂಸೆ, ಸ್ಥಳಾಂತರ ಮತ್ತು ಅಸ್ಥಿರತೆ ಶಾಶ್ವತವಾಗುತ್ತದೆ" ಎಂದು ಧರ್ಮಾಧ್ಯಕ್ಷರುಗಳು ಶುಕ್ರವಾರ 14 ರಂದು ಬಿಡುಗಡೆ ಮಾಡಿದ ಮತ್ತು SECAM ಅಧ್ಯಕ್ಷ ಫ್ರಿಡೋಲಿನ್ ಕಾರ್ಡಿನಲ್ ಅಂಬೊಂಗೊ ಬೆಸುಂಗುರವರು ಸಹಿ ಮಾಡಿದ ದಾಖಲೆಯ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪ್ರಾರ್ಥನೆಗೆ ಕರೆ
ನಮಗೆ ಬೇಕಾಗಿರುವ ನೆರವಿನ ಅಗತ್ಯಗಳಾದ ದೈವಿಕ ಮಾರ್ಗದರ್ಶನ, ಏಕತೆ ಮತ್ತು ಶಕ್ತಿಯನ್ನು, ಪ್ರಾರ್ಥನೆಯ ಕರೆಯು ನೆನಪಿಸುತ್ತದೆ. "ಎಲ್ಲಾ ಭಕ್ತವಿಶ್ವಾಸಿಗಳು ಪ್ರಾರ್ಥನೆಗಾಗಿ ಸಮಯವನ್ನು ಮೀಸಲಿಡಬೇಕೆಂದು ನಾವು ಒತ್ತಾಯಿಸುತ್ತೇವೆ, ಯುದ್ಧವನ್ನು ಕೊನೆಗೊಳಿಸಲು, ನೊಂದವರಿಗೆ ಸಾಂತ್ವನ ಹೇಳಲು ಮತ್ತು ನಮ್ಮ ನಾಯಕರನ್ನು, ನ್ಯಾಯ ಮತ್ತು ಸಮನ್ವಯದ ಕಡೆಗೆ ಮಾರ್ಗದರ್ಶನ ಮಾಡಲು ದೇವರನ್ನು ಕೇಳಿಕೊಳ್ಳುತ್ತೇವೆ" ಎಂದು ಧರ್ಮಾಧ್ಯಕ್ಷರುಗಳ ಪರವಾಗಿ ಕಾರ್ಡಿನಲ್ ಅಂಬೊಂಗೊರವರು ಹೇಳಿದರು. ಅವರು ಮಾರ್ಚ್ 3 ರಿಂದ 5, 2025 ರವರೆಗೆ ಆಫ್ರಿಕಾದ ಪ್ರತಿಯೊಂದು ಧರ್ಮಕ್ಷೇತ್ರ, ಧರ್ಮಕೇಂದ್ರ ಮತ್ತು ಧಾರ್ಮಿಕ ಸಮುದಾಯವನ್ನು ತಮ್ಮ ಸ್ಥಳೀಯ ಪದ್ಧತಿಗಳು ಮತ್ತು ಸೌಲಭ್ಯಗಳಿಗೆ ಅನುಗುಣವಾಗಿ ಪ್ರಾರ್ಥನೆ ಮತ್ತು ಉಪವಾಸದ ತ್ರಿದಿನೋತ್ಸವದಲ್ಲಿ ಒಂದಾಗಲು ಆಹ್ವಾನಿಸುತ್ತಾರೆ.
ನಾವೆಲ್ಲರೂ ಶಾಂತಿಗಾಗಿ ಉತ್ಸಾಹದಿಂದ ಕೆಲಸ ಮಾಡುವಾಗಲೂ ದೇವರು ತನ್ನ ಜನರ ಕೂಗನ್ನು ಕೇಳುತ್ತಾರೆ ಎಂಬ ವಿಶ್ವಾಸದೊಂದಿಗೆ, ಒಗ್ಗಟ್ಟಿನಿಂದ ದೇವರೆಡೆಗೆ ನಮ್ಮ ಧ್ವನಿಯನ್ನು ಎತ್ತೋಣ... ಸಂಘರ್ಷದಿಂದ ಬಳಲುತ್ತಿರುವ ಪೂರ್ವ ಕಾಂಗೋ ಮತ್ತು ಇತರ ಎಲ್ಲಾ ದೇಶಗಳಿಗೆ ದೇವರು ಶಾಂತಿಯನ್ನು ನೀಡಲಿ ಎಂದು ಧರಮಾಧ್ಯಕ್ಷರುಗಳು ಮನವಿ ಮಾಡುತ್ತಾರೆ.
ಸಂಕಷ್ಟದ ಸಮಯದಲ್ಲಿ ಭರವಸೆಯ ಪಯಣ
ಈ ಜೂಬಿಲಿ ವರ್ಷದಲ್ಲಿ ಭರವಸೆಯ ಯಾತ್ರಿಕರಾಗಿ ಪವಿತ್ರ ಪ್ರಯಾಣವು ದೇವರ ಜನರು ಆತನ ವಾಗ್ದಾನಗಳಲ್ಲಿ ನಂಬಿಕೆ ಇಡಲು ಮತ್ತು ಇತರರಿಗೆ ಬೆಳಕಾಗಿರಲು ಕರೆ ನೀಡುತ್ತಿದೆ. ಇದು ಸಿನೊಡಲಿಟಿಯ ಕುರಿತಾದ ಸಿನೊಡ್‌ನ ಉತ್ಸಾಹದಲ್ಲಿ ಒಟ್ಟಿಗೆ ನಡೆಯಲು, ದಣಿದವರ ಹೊರೆಗಳನ್ನು ಹೊತ್ತುಕೊಳ್ಳಲು, ದೀನದಲಿತರನ್ನು ಮೇಲಕ್ಕೆತ್ತಲು ಮತ್ತು ಕಷ್ಟದ ಪರೀಕ್ಷೆಗಳ ನಡುವೆಯೂ ದೇವರ ಅನುಗ್ರಹವು ಸದಾ ಹೊಳೆಯುತ್ತಲೇ ಇರುತ್ತದೆ ಹಾಗೂ ನವೀಕರಣ ಮತ್ತು ಏಕತೆಯತ್ತ ನಮ್ಮನ್ನು ಕರೆದೊಯ್ಯುತ್ತದೆ ಎಂದು ವಿಶ್ವಾಸಿಸುವ ಸಮಯವು ಇದಾಗಿದೆ.
ಧರ್ಮಾಧ್ಯಕ್ಷರುಗಳು ಶಾಂತಿಯ ಸಾಧನಗಳಾಗಿರಲು ಮತ್ತು ದೇವರ ಜನರು "ವಿಭಜನೆಯ ಮೇಲೆ ಸಂವಾದವನ್ನು, ದ್ವೇಷದ ಮೇಲೆ ಪ್ರೀತಿಯನ್ನು ಮತ್ತು ಹತಾಶೆಯ ಮೇಲೆ ಭರವಸೆಯನ್ನು ಆರಿಸಿಕೊಳ್ಳಲು" ಒತ್ತು ನೀಡುತ್ತಾರೆ.
ಅವರು ತಮ್ಮ ಹೇಳಿಕೆಯಲ್ಲಿ " ಇಲ್ಲಿ ಯಾರೂ ಒಬ್ಬಂಟಿಯಾಗಿ ನಿಲ್ಲಲು ಸಾಧ್ಯವಿಲ್ಲ; ಏಕೆಂದರೆ ನಾವೆಲ್ಲರೂ ಕ್ರಿಸ್ತನಲ್ಲಿ ಒಂದೇ ದೇಹವಾಗಿದ್ದೇವೆ. ಆಫ್ರಿಕಾದಲ್ಲಿ ಧರ್ಮಸಭೆಯ ಕುರುಬರಾಗಿ, ನಾವು ಐಕ್ಯತೆಯ ರಚನೆಗಳನ್ನು ಬಲಪಡಿಸಲು ಮತ್ತು ಧರ್ಮಸಭೆಯು, ನಮ್ಮ ಸಮಾಜದಲ್ಲಿ ಸತ್ಯ, ನ್ಯಾಯ ಮತ್ತು ಭರವಸೆಯ ಧ್ವನಿಯಾಗಿ ಉಳಿಯುವಂತೆ ನೋಡಿಕೊಳ್ಳಲು ಬದ್ಧರಾಗಿದ್ದೇವೆ" ಎಂದು ಹೇಳಿದ್ದಾರೆ.