"ಅವಿನಾಭಾವ ಮಕ್ಕಳ" ಮೈತ್ರಿ: ಯುದ್ಧದ ಸಂತ್ರಸ್ತ ಮಕ್ಕಳಿಗೆ ಭರವಸೆ
ಫ್ರಾನ್ಸೆಸ್ಕಾ ಮೆರ್ಲೊ
ಜಗತ್ತು ಸಂಘರ್ಷಗಳ ಗಾಯಗಳನ್ನು ಅನುಭವಿಸುತ್ತಲೇ ಇರುವುದರಿಂದ, ಯುದ್ಧದ ದೌರ್ಜನ್ಯಗಳಿಗೆ ಬಲಿಯಾದ ಮಕ್ಕಳಿಗೆ ಭರವಸೆ ಮತ್ತು ಘನತೆಯನ್ನು ತರುವ ಧ್ಯೇಯದೊಂದಿಗೆ ಅಂತರರಾಷ್ಟ್ರೀಯ ಮೈತ್ರಿಕೂಟವನ್ನು ರಚಿಸಲಾಗಿದೆ. ಜನವರಿ 29 ರಂದು ರೋಮ್‌ನಲ್ಲಿ ನಡೆದ ಮಕ್ಕಳ ಹಕ್ಕುಗಳ ಕುರಿತಾದ ಮೊದಲ ಅಂತರರಾಷ್ಟ್ರೀಯ ಶೃಂಗಸಭೆಯ ಸಂದರ್ಭದಲ್ಲಿ “ಅವಿನಾಭಾವ ಮಕ್ಕಳ" ಮೈತ್ರಿಯನ್ನು ಮೊದಲು ಘೋಷಿಸಲಾಯಿತು, ಇದು ಯುದ್ಧದಿಂದ ಮಕ್ಕಳು ಮತ್ತು ಅವರ ಕುಟುಂಬಗಳ ಮೇಲೆ ಉಂಟಾದ ಆಳವಾದ ದೈಹಿಕ ಮತ್ತು ಮಾನಸಿಕ ಗಾಯಗಳನ್ನು ಪರಿಹರಿಸಲು ಪ್ರಯತ್ನಿಸುತ್ತದೆ.
ಇಟಲಿಯ ರಾಷ್ಟ್ರೀಯ ಮಿಸೆರಿಕಾರ್ಡಿ ಒಕ್ಕೂಟ, ಅನ್‌ಬ್ರೋಕನ್ ಫೌಂಡೇಶನ್ ಮತ್ತು 5P ಯುರೋಪ್ ಫೌಂಡೇಶನ್ ರಚಿಸಿದ ಈ ಉಪಕ್ರಮವು, ಮಾನವೀಯ ಘಟಕಗಳ ನಡುವಿನ ಸಹಕಾರದಿಂದ ಬರಬಹುದಾದ ಶಕ್ತಿಯನ್ನು ಪ್ರದರ್ಶಿಸುತ್ತದೆ. ಈ ಮೈತ್ರಿಕೂಟವು ತನ್ನ ಪಾಲುದಾರರ ಮೂಲಕ, ಯುದ್ಧದಿಂದ ಪ್ರಭಾವಿತರಾದ ಎಲ್ಲರಿಗೂ ವೈದ್ಯಕೀಯ ನೆರವು, ಮಾನಸಿಕ ಬೆಂಬಲ ಮತ್ತು ಸುಸ್ಥಿರ ಪುನರ್ವಸತಿಯನ್ನು ಒದಗಿಸುವ ಉದ್ದೇಶಿತ ಕಾರ್ಯಕ್ರಮಗಳನ್ನು ಜಾರಿಗೆ ತರುವ ಗುರಿಯನ್ನು ಹೊಂದಿದೆ.
ರೋಮ್‌ನಲ್ಲಿ ಅಧಿಕೃತ ಸಭೆ
ಫೆಬ್ರವರಿ 2 ನೇ ತಾರೀಖಿನ ಭಾನುವಾರ, ಲಾರೊದಲ್ಲಿರುವ ರೋಮ್‌ನ ಸ್ಯಾನ್ ಸಾಲ್ವತೋರ್‌ನ ಮಹಾದೇವಾಲಯದಲ್ಲಿ, ಪಾಲುದಾರ ಸಂಸ್ಥೆಗಳ ಪ್ರತಿನಿಧಿಗಳು ಸಹಯೋಗ ಒಪ್ಪಂದಕ್ಕೆ ಸಹಿ ಹಾಕುವಂತೆ ಆತಿಥ್ಯ ವಹಿಸಲಿದೆ. ಈ ಅಧಿಕೃತ ಸಭೆಯಲ್ಲಿ, ಭಾಗವಹಿಸುವವರಲ್ಲಿ ಚಳುವಳಿಯೊಂದಿಗೆ ಒಗ್ಗಟ್ಟನ್ನು ವ್ಯಕ್ತಪಡಿಸುವ ಉನ್ನತ ಶ್ರೇಣಿಯ ಅಂತರರಾಷ್ಟ್ರೀಯ ವ್ಯಕ್ತಿಗಳು ಇರುತ್ತಾರೆ.
ಆದರೆ ಮೈತ್ರಿಕೂಟದಲ್ಲಿ ಮುಖ್ಯವಾಗಿ ಸಹಿ ಹಾಕಲು ರೋಮ್‌ನಲ್ಲಿ ಹಾಜರಿರುವವರು, ಯುದ್ಧವನ್ನು ನೇರವಾಗಿ ಕಣ್ಣಾರೆ ಕಂಡು ಅನುಭವಿಸಿದವರು. ಯುದ್ಧದ ಸಂತ್ರಸ್ತರ ಆರೈಕೆಗಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡಿರುವ ವೈದ್ಯಕೀಯ ತಂಡಗಳು ಮತ್ತು ನೆರವು ಕಾರ್ಯಕರ್ತರೊಂದಿಗೆ ಮಕ್ಕಳು ಸಾಕ್ಷ್ಯಗಳನ್ನು ನೀಡುತ್ತಾರೆ, ಅಂತಹ ಸಂಘಟಿತ ಮಾನವೀಯ ಕ್ರಮದ ತುರ್ತು ಅಗತ್ಯವನ್ನು ನಮಗೆ ನೆನಪಿಸುತ್ತಾರೆ.
ಉಕ್ರೇನ್ ಮತ್ತು ಪ್ಯಾಲೆಸ್ತೀನಿಗೆ ಹತ್ತಿರದಲ್ಲಿದೆ
ಮೈತ್ರಿಕೂಟದಲ್ಲಿ ಆಸಕ್ತಿ ಹೊಂದಿರುವ ದೇಶಗಳಲ್ಲಿ ಉಕ್ರೇನ್ ಕೂಡ ಒಂದು, ಅಲ್ಲಿ ಅನ್‌ಬ್ರೋಕನ್ ಫೌಂಡೇಶನ್ ಯುದ್ಧದಿಂದ ಹಾನಿಗೊಳಗಾದ ಆರೋಗ್ಯ ರಕ್ಷಣಾ ರಚನೆಗಳನ್ನು ಪುನರ್ನಿರ್ಮಿಸಲು ಕೆಲಸ ಮಾಡುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡು, ಅವಿನಾಭಾವ ಮಕ್ಕಳ ಯೋಜನೆಯಡಿಯಲ್ಲಿ ಎಲ್ವಿವ್‌ನಲ್ಲಿ ಮಕ್ಕಳ ಆಸ್ಪತ್ರೆಯ ನಿರ್ಮಾಣಕ್ಕೆ ಯೋಜನೆಗಳು ಪ್ರಸ್ತುತ ಕಾರ್ಯನಿರ್ವಹಿಸುತ್ತಿವೆ. ಅದೇ ಸಮಯದಲ್ಲಿ, ಮಿಸೆರಿಕಾರ್ಡಿಯು, ಹಲವಾರು ಮಾನವೀಯ ಕಾರ್ಯಾಚರಣೆಗಳ ಮೂಲಕ ಕಾಲಾನಂತರದಲ್ಲಿ ಪ್ರದೇಶದ ಅತ್ಯಂತ ಒತ್ತಡ ನೀಡುವ ಅಗತ್ಯಗಳನ್ನು ಗುರುತಿಸಿ ಅದಕ್ಕೆ ಪ್ರತಿಕ್ರಿಯಿಸುತ್ತಿದೆ, ವೈದ್ಯಕೀಯ ಸರಬರಾಜುಗಳನ್ನು ಒದಗಿಸುತ್ತಿದೆ ಮತ್ತು ಸ್ಥಳೀಯ ಆರೋಗ್ಯ ಸೌಲಭ್ಯಗಳನ್ನು ಬೆಂಬಲಿಸುತ್ತಿದೆ.
ಇದರ ನಡುವೆ, ಪ್ಯಾಲೆಸ್ತೀನಲ್ಲಿನ ಯುದ್ಧದ ಪರಿಣಾಮಗಳು ನಾಗರಿಕ ಜೀವನವನ್ನು ಧ್ವಂಸಗೊಳಿಸುತ್ತಲೇ ಇರುವುದರಿಂದ, ಮಾನವೀಯ ಕವಣೆಯ ಮೂಲಕ ಗಾಜಾದ ಜನರಿಗೆ 70 ಟನ್ ಮಾನವೀಯ ನೆರವು ಕಳುಹಿಸಲಾಗಿದೆ. ಈ ಯುದ್ಧ ಪೀಡಿತ ಪ್ರದೇಶಗಳಿಗೆ ವೈದ್ಯಕೀಯ ಸರಬರಾಜು ಮತ್ತು ಆಹಾರದ ಸುರಕ್ಷಿತ ಸಾಗಣೆಯನ್ನು ಖಚಿತಪಡಿಸಿಕೊಳ್ಳಲು ಹೆಚ್ಚಿನ ಕಾರ್ಯಾಚರಣೆಗಳನ್ನು ಯೋಜಿಸಲಾಗುತ್ತಿದೆ. ಈ ಯೋಜನೆಯಲ್ಲಿ ರಮಲ್ಲಾ, ನಜರೇತ್ ಮತ್ತು ಗಾಜಾದಲ್ಲಿ ಮೂರು ಹೊಸ ವೈದ್ಯಕೀಯ ಚಿಕಿತ್ಸಾಲಯಗಳನ್ನು ತೆರೆಯುವ ಯೋಜನೆಯೂ ಸೇರಿದೆ.
ಸಾಮಾನ್ಯವಾಗಿ ಕಂಡುಬರುವಂತೆ, ಹೆಚ್ಚು ಪರಿಣಾಮಕ್ಕೊಳಾಗುವವರು ಮಹಿಳೆಯರು ಮತ್ತು ಮಕ್ಕಳು, ಉಚಿತ ವೈದ್ಯಕೀಯ ಆರೈಕೆಯನ್ನು ಒದಗಿಸುವ ಗುರಿಯನ್ನು ಹೊಂದಿರುವ ಸಂಪೂರ್ಣ ಸುಸಜ್ಜಿತ ಮೊಬೈಲ್ ಚಿಕಿತ್ಸಾಲಯಗಳ ನಿಯೋಜನೆಯಿಂದಾಗಿ ಅವರು ವಿಶೇಷ ಗಮನವನ್ನು ಪಡೆಯುತ್ತಿದ್ದಾರೆ.
ಜ್ಯೂಬಿಲಿ ವರ್ಷದಲ್ಲಿ ಭರವಸೆಯ ಭವಿಷ್ಯ
ಅವಿನಾಭಾವ ಮಕ್ಕಳ ಮೈತ್ರಿ, ಪ್ರದೇಶದ ವೈದ್ಯಕೀಯ ಮೂಲಸೌಕರ್ಯದ ಮೇಲೆ ಶಾಶ್ವತ ಪರಿಣಾಮ ಬೀರುವುದನ್ನು ಖಚಿತಪಡಿಸಿಕೊಳ್ಳಲು ಸ್ಥಳೀಯ ಆರೋಗ್ಯ ಕಾರ್ಯಕರ್ತರಿಗೆ ವಿಶೇಷ ತರಬೇತಿಯನ್ನು ಸಂಯೋಜಿಸಲು ಕೆಲಸ ಮಾಡುವಂತಹ ತಕ್ಷಣದ ಪರಿಹಾರವನ್ನು ಮೀರಿದ ಸೇವೆಗಳನ್ನು ನೀಡುತ್ತಿದೆ.
ಸಂಘರ್ಷ ವಲಯಗಳಲ್ಲಿ ಮಕ್ಕಳು ಮತ್ತು ಕುಟುಂಬಗಳ ರಕ್ಷಣೆಯನ್ನು ಸಂಪೂರ್ಣ ಆದ್ಯತೆಯನ್ನಾಗಿ ಮಾಡುವುದು ಈ ಉಪಕ್ರಮದ ತುರ್ತು ಮನವಿಯಾಗಿದೆ. ಧರ್ಮಸಭೆಯು ಜ್ಯೂಬಿಲಿ ವರ್ಷವನ್ನು ಆಚರಿಸುತ್ತಿರುವಾಗ, ಈ ಉಪಕ್ರಮವು ಭರವಸೆಯ ಸ್ಪಷ್ಟ ಸಂಕೇತವನ್ನು ತೋರಿಸುತ್ತದೆ, ಕಿರಿಯ ಸಂತ್ರಸ್ತರು ಎಂದಿಗೂ ಕೇವಲ ಅಂಕಿಅಂಶಗಳಾಗಿ ಬದಲಾಗುವುದಿಲ್ಲ, ಜಗತ್ತು ಅವರ ಅಗತ್ಯಗಳನ್ನು ಸಹಾನುಭೂತಿ ಮತ್ತು ಭರವಸೆಯಿಂದ ಗುರುತಿಸುತ್ತದೆ.