MAP

MAP Francis MAP Francis  

ವಿಶ್ವ ಧರ್ಮಪ್ರಚಾರ ಜಪಸರವನ್ನು ಪ್ರಾರ್ಥಿಸಲು ಒಟ್ಟುಗೂಡಿದ ಸಾವಿರಾರು ಮಕ್ಕಳು

ಅಮೆರಿಕದಾದ್ಯಂತ ಕಥೋಲಿಕ ಶಾಲೆಗಳ ವಾರವನ್ನು ಆಚರಿಸುತ್ತಿರುವಾಗ, ಸಾವಿರಾರು ಮಕ್ಕಳು ವಿಶ್ವ ಧರ್ಮಪ್ರಚಾರ ಜಪಸರವನ್ನು ಪ್ರಾರ್ಥಿಸಲು ಅಮೇರಿಕದ ವಿಶ್ವಗುರುವಿನ ಧರ್ಮಪ್ರಚಾರ ಸಮಾಜಗಳೊಂದಿಗೆ ಒಟ್ಟುಗೂಡಿದರು.

ಡೆಬೊರಾ ಕ್ಯಾಸ್ಟೆಲ್ಲಾನೊ ಲುಬೊವ್

ಜನವರಿ 28 ರಂದು ಕಥೋಲಿಕ ಶಾಲೆಗಳ ವಾರದ ಸಂದರ್ಭದಲ್ಲಿ, ಜೂಮ್ ಜಾಲತಾಣ ಸಂಪರ್ಕದ ಮೂಲಕ ವಿಶ್ವ ಧರ್ಮಪ್ರಚಾರ ಜಪಸರವನ್ನು ಪ್ರಾರ್ಥಿಸಲು ಅಮೇರಿಕದ ಮಿಡ್‌ವೆಸ್ಟ್‌ನಾದ್ಯಂತ ಸಾವಿರಾರು ಮಕ್ಕಳು ಒಟ್ಟುಗೂಡಿದರು.

ರಾಷ್ಟ್ರೀಯ ಕಥೋಲಿಕ ಶಾಲೆಗಳ ವಾರವು ಅಮೇರಿಕದಲ್ಲಿ ಕಥೋಲಿಕ ಶಿಕ್ಷಣದ ವಾರ್ಷಿಕ ಆಚರಣೆಯಾಗಿದೆ. ಇದು ಜನವರಿಯ ಕೊನೆಯ ಭಾನುವಾರದಂದು ಪ್ರಾರಂಭವಾಗುತ್ತದೆ ಮತ್ತು ಈ ಕಾರ್ಯಕ್ರಮವು ಆ ವಾರಪೂರ್ತಿ ನಡೆಯುತ್ತದೆ.

ವಿಶ್ವಗುರುಗಳ ನಾಲ್ಕು ಧರ್ಮಪ್ರಚಾರ ಸಮಾಜಗಳಲ್ಲಿ ಒಂದಾದ ಮಿಷನರಿ ಚೈಲ್ಡ್‌ಹುಡ್ ಅಸೋಸಿಯೇಷನ್ (ಧರ್ಮಪ್ರಚಾರಕರ ಬಾಲ್ಯದ ಸಂಘ - ಎಂಸಿಎ) ಆಯೋಜಿಸಿದ್ದ ಈ ಪ್ರಾರ್ಥನಾ ಉಪಕ್ರಮವು 14 ಧರ್ಮಕ್ಷೇತ್ರಗಳಾದ್ಯಂತ 77 ಕಥೋಲಿಕ ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳನ್ನು ಒಂದುಗೂಡಿಸಿತು.

ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಹದಿನಾಲ್ಕು ಅಮೇರಿಕದ ಧರ್ಮಕ್ಷೇತ್ರಗಳಲ್ಲಿ ಮಿಲ್ವಾಕೀ ಮಹಾಧರ್ಮಕ್ಷೇತ್ರ, ಕೊಲಂಬಸ್ ಧರ್ಮಕ್ಷೇತ್ರ, ಡೆಸ್ ಮೊಯಿನ್ಸ್ ಧರ್ಮಕ್ಷೇತ್ರ, ಫಾರ್ಗೋ ಧರ್ಮಕ್ಷೇತ್ರ, ಗ್ರ್ಯಾಂಡ್ ರಾಪಿಡ್ಸ್ ಧರ್ಮಕ್ಷೇತ್ರ, ಜೆಫರ್ಸನ್ ನಗರದ ಧರ್ಮಕ್ಷೇತ್ರ, ಜೋಲಿಯೆಟ್ ಧರ್ಮಕ್ಷೇತ್ರ, ಮ್ಯಾಡಿಸನ್ ಧರ್ಮಕ್ಷೇತ್ರ, ಮಾರ್ಕ್ವೆಟ್ ಧರ್ಮಕ್ಷೇತ್ರ, ಪಿಯೋರಿಯಾ ಧರ್ಮಕ್ಷೇತ್ರ, ಸಲೀನಾ ಧರ್ಮಕ್ಷೇತ್ರ, ಸಿಯೋಕ್ಸ್ನಗರದ ಧರ್ಮಕ್ಷೇತ್ರ ಮತ್ತು ಸ್ಪ್ರಿಂಗ್‌ಫೀಲ್ಡ್ ಧರ್ಮಕ್ಷೇತ್ರಗಳು ಸೇರಿವೆ.

ಅಮೇರಿಕದ ವಿಶ್ವಗುರುಗಳ ಧರ್ಮಪ್ರಚಾರ ಸಮಾಜವು, ಸೊಸೈಟಿ ಫಾರ್ ದಿ ಪ್ರೊಪಗೇಷನ್ ಆಫ್ ದಿ ಫೇತ್, ಮಿಷನರಿ ಚೈಲ್ಡ್‌ಹುಡ್ ಅಸೋಸಿಯೇಷನ್, ಸೊಸೈಟಿ ಆಫ್ ಸೇಂಟ್ ಪೀಟರ್ ಅಪೋಸ್ತಲ್ ಮತ್ತು ಮಿಷನರಿ ಯೂನಿಯನ್ ಅನ್ನು ಒಳಗೊಂಡಿದೆ. ಮಿಷನರಿ ಚೈಲ್ಡ್‌ಹುಡ್ ಅಸೋಸಿಯೇಷನ್ ಕಾರ್ಯಕ್ರಮವು ಅಮೇರಿಕಾದ್ಯಂತ ಶಾಲೆಗಳು ಮತ್ತು ಧಾರ್ಮಿಕ ಶಿಕ್ಷಣ ಕಾರ್ಯಕ್ರಮಗಳಿಗೆ ಸೇವೆ ಸಲ್ಲಿಸುತ್ತದೆ.

ಕಥೋಲಿಕ ಶಾಲಾ ವಾರ
ಮಂಗಳವಾರ ನಡೆದ ಅಂತರ್ಜಾಲ ನೇರಪ್ರಸಾರ ಕಾರ್ಯಕ್ರಮದ ಮೂಲಕ ವಿಶ್ವ ಧರ್ಮಪ್ರಚಾರ ಜಪಸರದ ಪ್ರಾರ್ಥನೆಯ ಪಠಣವು ಮಕ್ಕಳಿಗೆ ಮೂಲಭೂತ ಶಿಕ್ಷಣದ ಕೊರತೆಯಿರುವ ವಿಶ್ವದಾದ್ಯಂತದ ಲಕ್ಷಾಂತರ ಗೆಳೆಯರ ವಾಸ್ತವಗಳನ್ನು ಪ್ರತಿಬಿಂಬಿಸುವ ಅವಕಾಶವನ್ನು ನೀಡಿತು.

ವಿಶ್ವ ಧರ್ಮಪ್ರಚಾರ ಜಪಸರವು ಪ್ರತಿ ದಶಕವು ಧರ್ಮಪ್ರಚಾರಕರ ಶುಭಸಂದೇಶವನ್ನು ಹಂಚಿಕೊಳ್ಳುವುದನ್ನು ಮುಂದುವರಿಸುವ ವಿಶ್ವದ ವಿಭಿನ್ನ ಪ್ರದೇಶಗಳನ್ನು ಪ್ರತಿನಿಧಿಸುತ್ತದೆ: ಹಸಿರು - ಆಫ್ರಿಕಾದ ಕಾಡುಗಳು ಮತ್ತು ಹುಲ್ಲುಗಾವಲು, ನೀಲಿ - ಪೆಸಿಫಿಕ್ ದ್ವೀಪಗಳನ್ನು ಸುತ್ತುವರೆದಿರುವ ಸಾಗರ, ಬಿಳಿ - ಪವಿತ್ರ ತಂದೆಯ ನೆಲೆಯಾದ ಯುರೋಪ್, ಕೆಂಪು – ಅಮೇರಿಕಾಗೆ ಧರ್ಮಪ್ರಚಾರಕರನ್ನು ಕರೆತಂದ ವಿಶ್ವಾಸದ ಬೆಂಕಿ ಮತ್ತು ಹಳದಿ - ಏಷ್ಯಾವನ್ನು ಸಂಕೇತಿಸುವ ಪೂರ್ವದ ಬೆಳಗಿನ ಬೆಳಕು.

೧೯೫೧ರಲ್ಲಿ, ಮಹಾಧರ್ಮಾಧ್ಯಕ್ಷರಾದ ಶೀನ್ ರವರು ವಿಶ್ವಾಸದ ಪ್ರಚಾರಕ್ಕಾಗಿ ಸಮಾಜದ ರಾಷ್ಟ್ರೀಯ ನಿರ್ದೇಶಕರಾಗಿದ್ದಾಗ ವಿಶ್ವ ಧರ್ಮಪ್ರಚಾರ ಜಪಸರವನ್ನು ರಚಿಸಿದರು.

ಪ್ರಾರ್ಥನೆಯಲ್ಲಿ ಮತ್ತು ತಮ್ಮ ಕೃಪಾವರಗಳನ್ನು ಎಣಿಸುತ್ತಿರುವ ಮಕ್ಕಳು
"ನಾವು ಕಥೋಲಿಕ ಶಾಲೆಗಳ ವಾರವನ್ನು ಆಚರಿಸುತ್ತಿರುವಾಗ," ಅಮೇರಿಕದ ʼದಿ ಪಾಂಟಿಫಿಕಲ್ ಮಿಷನ್ ಸೊಸೈಟೀಸ್ʼ ನ ರಾಷ್ಟ್ರೀಯ ನಿರ್ದೇಶಕರಾದ ಶ್ರೇಷ್ಠಗುರು ರೋಜರ್ ಜೆ. ಲ್ಯಾಂಡ್ರಿರವರು, "ವಿದ್ಯಾರ್ಥಿಗಳು ತಮ್ಮ ಸ್ವಂತ ಆಶೀರ್ವಾದಗಳ ಬಗ್ಗೆ ಮಾತ್ರವಲ್ಲದೆ ಶಾಲೆಗೆ ಹೋಗಲು ಅವಕಾಶವಿಲ್ಲದ ವಿಶ್ವದಾದ್ಯಂತ ಲಕ್ಷಾಂತರ ತಮ್ಮ ಗೆಳೆಯರು ಎದುರಿಸುತ್ತಿರುವ ಸವಾಲುಗಳ ಬಗ್ಗೆಯೂ ಚಿಂತಿಸಲು ನಾವು ಅವಕಾಶವನ್ನು ನೀಡಲು ಬಯಸಿದ್ದೇವೆ" ಎಂದು ವಿವರಿಸಿದರು.

"ಈ ಜ್ಯೂಬಿಲಿಯ ಭರವಸೆಯ ಸಮಯದಲ್ಲಿ, ದೇವರ ತಾಯಿಯಾದ ಮಾತೆ ಮೇರಿಯ ಮಧ್ಯಸ್ಥಿಕೆಗಾಗಿ ಪ್ರಾರ್ಥಿಸಲು ಮಹಾಧರ್ಮಾಧ್ಯಕ್ಷರಾದ ಫುಲ್ಟನ್ ಜೆ. ಶೀನ್ ರವರ ಆಹ್ವಾನದಿಂದ ಪ್ರೇರಿತರಾಗಿ, ಏಷ್ಯಾ, ಆಫ್ರಿಕಾ, ಓಷಿಯಾನಿಯಾ, ಯುರೋಪ್ ಮತ್ತು ಲತೀನ್ ಅಮೆರಿಕಾದಲ್ಲಿ ಮಕ್ಕಳನ್ನು ಪ್ರಾರ್ಥಿಸಲು ಮತ್ತು ಅವರ ಸಹ ವಿದ್ಯಾರ್ಥಿಗಳು ಎದುರಿಸುತ್ತಿರುವ ವಿಭಿನ್ನ ವಾಸ್ತವಗಳ ಬಗ್ಗೆ ತಿಳಿದುಕೊಳ್ಳಲು ಒಟ್ಟಿಗೆ ತರುವುದು ಮುಖ್ಯ ಎಂದು ನಾವು ಭಾವಿಸಿದ್ದೇವೆ" ಅವರು ವಿವರಿಸಿದರು.

ಧರ್ಮಪ್ರಚಾರಕರ ಬಾಲ್ಯ ಸಂಘದ ನಿರ್ದೇಶಕಿ ಅಲಿಕ್ಸಾಂಡ್ರಾ ಹೋಲ್ಡ್ರೆನ್ ರವರು, "ಮಕ್ಕಳು ಮಕ್ಕಳಿಗೆ ನೆರವಾಗುವ ತತ್ವದ ಮೇಲೆ ಸಂಘವನ್ನು ನಿರ್ಮಿಸಲಾಗಿದೆ, ಪ್ರಾರ್ಥನೆ ಮತ್ತು ಬೆಂಬಲದ ಮೂಲಕ ಅವರು ಪರಸ್ಪರರ ಜೀವನದಲ್ಲಿ ಬದಲಾವಣೆಯನ್ನು ತರಬಹುದು ಎಂದು ಅವರಿಗೆ ಕಲಿಸುತ್ತದೆ" ಎಂದು ನೆನಪಿಸಿಕೊಂಡರು.

29 ಜನವರಿ 2025, 12:39