ಸಂತರ ಪದವಿಗೆ ಒಂದು ಹೆಜ್ಜೆ ಹತ್ತಿರ: ಥೈಲ್ಯಾಂಡ್ ತನ್ನ ಪವಿತ್ರ ರಕ್ತಸಾಕ್ಷಿಗಳನ್ನು ಗೌರವಿಸುತ್ತದೆ
ಚೈನಾರಾಂಗ್ ಮೊಂಥಿಯೆನ್ವಿಚಿಯೆಂಚೈ - ಥೈಲ್ಯಾಂಡ್, ಲಿಕಾಸ್ ಸುದ್ಧಿ
ಜನವರಿ 12 ರಂದು ಬ್ಯಾಂಕಾಕ್‌ನ ಪಶ್ಚಿಮದಲ್ಲಿರುವ ಸಂಫ್ರಾನ್‌ನಲ್ಲಿ ಪೂಜ್ಯ ನಿಕೋಲಸ್ ಬಂಕರ್ಡ್ ಕ್ರಿಟ್‌ಬಾಮ್ರುಂಗ್ ರವರ ಹಬ್ಬದ ಸ್ಮರಣಾರ್ಥ ದಿವ್ಯಬಲಿಪೂಜೆ ಆಚರಣೆಯ ಮೊದಲು, ಥೈಲ್ಯಾಂಡ್‌ನ ಪ್ರೇಷಿತ ರಾಯಭಾರಿ, ಮಹಾಧರ್ಮಾಧ್ಯಕ್ಷರಾದ ಪೀಟರ್ ಬ್ರಿಯಾನ್ ವೆಲ್ಸ್ ರವರು, ಮಹಾನಗರದ ಮಹಾಧರ್ಮಾಧ್ಯಕ್ಷರಾದ-ನೇಮಿತ ಪ್ರಾನ್ಸಿಸ್ ಕ್ಸೇವಿಯರ್ ವಿರಾ ಅರ್ಪೋಂದ್ರಾತನರವರಿಗೆ ಮಹಾನಗರ ಬ್ಯಾಂಕಾಕ್‌ನ ಮಹಾಧರ್ಮಕ್ಷೇತ್ರದ ಆರು ಮಹಾಧರ್ಮಾಧ್ಯಕ್ಷರುಗಳು ಮತ್ತು ಅದರ ಸಫ್ರಾಗನ್ ಮಹಾಧರ್ಮಕ್ಷೇತ್ರಗಳ ಪ್ರತಿನಿಧಿಗಳು: ರಾಚಬುರಿ, ಚಾಂತಬುರಿ, ನಖೋನ್ ಸಾವನ್, ಚಿಯಾಂಗ್ ಮಾಯ್, ಚಿಯಾಂಗ್ ರೈ ಮತ್ತು ಸೂರತ್ ಥಾನಿಯ, ಎಂಟು ರಕ್ತಸಾಕ್ಷಿಗಳ ಅವಶೇಷಗಳನ್ನು ಅರ್ಪಿಸಿದರು.
ಈ ಸಮಾರಂಭವು ಡಿಸೆಂಬರ್ 14, 2024 ರಂದು ಸಾಂಗ್‌ಖಾನ್‌ನಲ್ಲಿರುವ ಥೈಲ್ಯಾಂಡ್‌ನ ರಕ್ತಸಾಕ್ಷಿಗಳ ಮಾತೆಯ ದೇವಾಲಯದಲ್ಲಿ ನಡೆದ, ಇದೇ ರೀತಿಯ ಕಾರ್ಯಕ್ರಮದ ನಂತರ ನಡೆಯಿತು, ಅಲ್ಲಿ ಥಾರೇ-ನೊಂಗ್‌ಸೆಂಗ್‌ನ ಮಹಾನಗರದ ಮಹಾಧರ್ಮಕ್ಷೇತ್ರ ಮತ್ತು ಅದರ ಮೂರು ಸಫ್ರಾಗನ್ ಮಹಾಧರ್ಮಕ್ಷೇತ್ರಗಳಾದ ಉಬೊನ್ ರಾಟ್ಚಥಾನಿ, ಉಡಾನ್ ಥಾನಿ ಮತ್ತು ನಖೋನ್ ರಾಟ್ಚಸಿಮಾದ ಮಹಾಧರ್ಮಾಧ್ಯಕ್ಷರಾದ ಆಂಥೋನಿ ವೆರಾಡೆಟ್ ಚೈಸೇರಿರವರಿಗೆ ಅವಶೇಷಗಳನ್ನು ನೀಡಲಾಯಿತು.
ಅವಶೇಷಗಳು, ಹೊಸದಾಗಿ ರಚಿಸಲಾದ ಸ್ಮಾರಕಗಳಿಂದ ಸುತ್ತುವರೆದಿರುವ ಈ ಅವಶೇಷಗಳು, 20 ನೇ ಶತಮಾನದ ಮಧ್ಯಭಾಗದಲ್ಲಿ ಕಿರುಕುಳದ ಸಮಯದಲ್ಲಿ ತಮ್ಮ ವಿಶ್ವಾಸಕ್ಕಾಗಿ ಜೀವಿಸಿ ಮರಣ ಹೊಂದಿದ ಈ ಎಂಟು ಹುತಾತ್ಮರ ಐಕ್ಯತೆಯನ್ನು ಸಂಕೇತಿಸುತ್ತವೆ.
ಮಹಾಧರ್ಮಾಧ್ಯಕ್ಷರಾದ ವೆಲ್ಸ್ ರವರು ತಮ್ಮ ಪ್ರಬೋಧನೆಯಲ್ಲಿ, ರಕ್ತಸಾಕ್ಷಿಗಳ ಧೈರ್ಯವನ್ನು ಎತ್ತಿ ತೋರಿಸುತ್ತಾ, "ಅವರು ಮೊದಲು ನೀರಿನಲ್ಲಿ ಮತ್ತು ನಂತರ ರಕ್ತದಲ್ಲಿ, ಕ್ರಿಸ್ತನ ದೀಕ್ಷಾಸ್ನಾನವನ್ನು ಪಡೆದರು" ಎಂದು ಹೇಳಿದರು.
ಅವರು ಭಕ್ತವಿಶ್ವಾಸಿಗಳಿಗೆ, ರಕ್ತಸಾಕ್ಷಿಗಳ ತ್ಯಾಗಗಳಿಂದ ಸ್ಫೂರ್ತಿ ಪಡೆಯಲು ಮತ್ತು ಅವರ ದೀಕ್ಷಾಸ್ನಾನದ ವಾಗ್ದಾನಗಳನ್ನು ದೃಢನಿಶ್ಚಯದಿಂದ ಜೀವಿಸಲು ಸವಾಲು ಹಾಕಿದರು.
ಥೈಲ್ಯಾಂಡ್‌ನ ಎಂಟು ರಕ್ತಸಾಕ್ಷಿಗಳು: ವಿಶ್ವಾಸ ಮತ್ತು ಏಕತೆಯ ಸಾಕ್ಷಿಗಳು
ಕಳೆದ ವರ್ಷ, ಥೈಲ್ಯಾಂಡ್‌ನ ಕಥೋಲಿಕ ಧರ್ಮಾಧ್ಯಕ್ಷರುಗಳ ಸಮ್ಮೇಳನ (CBCT) ಬ್ಯಾಂಕಾಕ್‌ನ ಪೂಜ್ಯ ನಿಕೋಲಸ್ ಬಂಕರ್ಡ್ ಕೃತ್‌ಬಮ್ರುಂಗ್ ಮತ್ತು ಸಾಂಗ್‌ಖಾನ್‌ನ ಏಳು ಪೂಜ್ಯ ರಕ್ತಸಾಕ್ಷಿಗಳ ಸಂತ ಪದವಿಗೇರಿಸುವ ಕಾರಣಗಳನ್ನು ಏಕೀಕರಿಸಲು ನಿರ್ಧರಿಸಿತು.
1940 ಮತ್ತು 1944 ರ ನಡುವಿನ ರಾಜಕೀಯ ಮತ್ತು ಸಾಮಾಜಿಕ ಪ್ರಕ್ಷುಬ್ಧತೆಯ ಅವಧಿಯಲ್ಲಿ, ಕ್ರೈಸ್ತ ಧರ್ಮವನ್ನು "ವಿದೇಶಿ ಧರ್ಮ" ಎಂದು ಗುರಿಯಾಗಿಟ್ಟುಕೊಂಡು, ಕ್ರಿಸ್ತರಿಗೆ ಸಾಕ್ಷಿಯಾಗಿ ಜೀವಿಸಿದ ರಕ್ತಸಾಕ್ಷಿಗಳ ಜೀವನವೇ ಈ ನಿರ್ಧಾರಕ್ಕೆ ಕಾರಣ ಎಂದು ಒತ್ತಿಹೇಳುತ್ತದೆ.
ತಮ್ಮ ಊರಾದ ಸ್ಯಾಮ್ಫ್ರಾನ್‌ನ ಧರ್ಮಗುರುವಾಗಿದ್ದ ಪೂಜ್ಯ ನಿಕೋಲಸ್, ಕಿರುಕುಳದ ನಡುವೆಯೂ ತಮ್ಮ ಜನರಿಗೆ(ಹಿಂಡಿಗೆ) ಸೇವೆ ಸಲ್ಲಿಸಿದರು. 15 ವರ್ಷಗಳ ಜೈಲು ಶಿಕ್ಷೆಗೆ ಒಳಗಾದ ಅವರು, ಸೆರೆವಾಸದಲ್ಲಿದ್ದಾಗ 66 ಸಹ ಕೈದಿಗಳಿಗೆ ದೀಕ್ಷಾಸ್ನಾನ ಮಾಡಿದರು. ಒಂಬತ್ತು ತಿಂಗಳ ಅನಾರೋಗ್ಯವನ್ನು ಸಹಿಸಿಕೊಂಡರೂ, ಅವರು ತಮ್ಮ ವಿಶ್ವಾಸದಲ್ಲಿ ದೃಢವಾಗಿದ್ದರು ಮತ್ತು 1944ರಲ್ಲಿ 49ನೇ ವಯಸ್ಸಿನಲ್ಲಿ ಜೈಲಿನಲ್ಲಿ ನಿಧನರಾದರು.
ಅಷ್ಟರಲ್ಲಿ, ಸಾಂಗ್‌ಖಾನ್ ನ ಕಥೋಲಿಕ ಗ್ರಾಮದಲ್ಲಿ, ಧರ್ಮ ಬೋಧಕರಾದ ಫಿಲಿಪ್ ಸಿಫೊಂಗ್ ರವರು ಮತ್ತು ಇಬ್ಬರು ಸನ್ಯಾಸಿನಿಗಳು ಸೇರಿದಂತೆ ಆರು ಮಹಿಳೆಯರು ತಮ್ಮ ವಿಶ್ವಾಸವನ್ನು ತ್ಯಜಿಸುವ ಬದಲು ರಕ್ತಸಾಕ್ಷಿಗಳಾಗಲು ಆಯ್ಕೆ ಮಾಡಿಕೊಂಡರು.
ಅವರ ತ್ಯಾಗಗಳನ್ನು ವಿಶ್ವಗುರು ಜಾನ್ ಪಾಲ್ II ರವರು ಗುರುತಿಸಿದರು, ಅವರು 1989 ರಲ್ಲಿ ಏಳು ಸಾಂಗ್‌ಖಾನ್ ನ ರಕ್ತಸಾಕ್ಷಿಗಳನ್ನು ಮತ್ತು 2000 ರಲ್ಲಿ ಪೂಜ್ಯ ನಿಕೋಲಸ್ ರವರನ್ನು ಸಂತ ಪದವಿಗೇರಿಸಿದರು.
ಸಂತ ಪದವಿಗೇರಿಸುವುದು ಪ್ರಗತಿಪರ ಕಾರಣ
ರಕ್ತಸಾಕ್ಷಿಗಳ ಪರಂಪರೆಯನ್ನು ಗೌರವಿಸಲು ಮತ್ತು ಅವರ ಮೇಲಿನ ಭಕ್ತಿಯನ್ನು ಉತ್ತೇಜಿಸಲು, CBCT ಥಾರೇ-ನೊಂಗ್‌ಸೆಂಗ್ ನ ಮಹಾಧರ್ಮಕ್ಷೇತ್ರದ ಮಹಾಧರ್ಮಾಧ್ಯಕ್ಷರಾದ ಆಂಥೋನಿ ವೆರಾಡೆಟ್ ಚೈಸೇರಿರವರ ನೇತೃತ್ವದಲ್ಲಿ ಸಂತ ಪದವಿ ಪ್ರತಿಷ್ಠಾಪನೆಯ ಆಯೋಗವನ್ನು ಸ್ಥಾಪಿಸಿದೆ.
ಈ ಆಯೋಗವು ಎಂಟು ರಕ್ತಸಾಕ್ಷಿಗಳ ಅವಶೇಷಗಳನ್ನು ಒಳಗೊಂಡಿರುವ ಸ್ಮಾರಕಗಳನ್ನು ಸಿದ್ಧಪಡಿಸಿತು, ಇವುಗಳನ್ನು ಥೈಲ್ಯಾಂಡ್‌ನಾದ್ಯಂತ ಪ್ರತಿ ಧರ್ಮಕ್ಷೇತ್ರದಲ್ಲಿ ಪ್ರದರ್ಶಿಸಲಾಗುತ್ತದೆ.
ಈ ಅವಶೇಷಗಳ ಸ್ಮಾರಕಗಳು ಕಥೊಲಿಕರನ್ನು ರಕ್ತಸಾಕ್ಷಿಗಳ ದೃಢ ವಿಶ್ವಾಸವನ್ನು ಅನುಕರಿಸಲು ಪ್ರೇರೇಪಿಸುವ ಗುರಿಯನ್ನು ಹೊಂದಿವೆ ಮತ್ತು ಕ್ರಿಸ್ತರ ಸಾಕ್ಷಿಗಳೊಂದಿಗೆ ಅವರ ಆಧ್ಯಾತ್ಮಿಕ ಸಂಪರ್ಕವನ್ನು ಗಾಢವಾಗಿಸುತ್ತವೆ.
ಧೈರ್ಯ ಮತ್ತು ಭರವಸೆಯ ಪರಂಪರೆ
ಮಹಾಧರ್ಮಾಧ್ಯಕ್ಷರಾದ ವೆಲ್ಸ್ ರವರು ತಮ್ಮ ಪ್ರಬೋಧನೆಯಲ್ಲಿ, ರಕ್ತಸಾಕ್ಷಿಗಳ ಮಾದರಿಯನ್ನು ಪ್ರತಿಬಿಂಬಿಸಲು ಭಕ್ತವಿಶ್ವಾಸಿಗಳನ್ನು ಒತ್ತಾಯಿಸಿದರು. "ಪವಿತ್ರಾತ್ಮವು ಅವರಿಗೆ ಅಸಾಧಾರಣ ಧೈರ್ಯ ಮತ್ತು ವಿಶ್ವಾಸದ ಜೀವನವನ್ನು ನಡೆಸಲು ಶಕ್ತಿ ನೀಡಿತು. ಅದೇ ಆತ್ಮವು ನಮ್ಮಲ್ಲಿ ವಾಸಿಸುತ್ತದೆ, ನಮ್ಮನ್ನು ಪವಿತ್ರತೆಗೆ ಕರೆ ನೀಡುತ್ತದೆ" ಎಂದು ಹೇಳಿದರು.
ರಕ್ತಸಾಕ್ಷಿಗಳ ಅಂತಿಮ ಗುರಿ - ದೇವರೊಂದಿಗಿನ ನಿತ್ಯ ಜೀವನ - ಎಲ್ಲಾ ಕ್ರೈಸ್ತರಿಗೂ ಒಂದೇ ಕರೆ ಎಂಬುದನ್ನು ಅಲ್ಲಿ ನೆರೆದಿದ್ದ ಜನರಿಗೆ ನೆನಪಿಸಿದರು.