MAP

Rams in occasione della commemorazione di Sant'Agnese presso la Casa Madre delle Suore di Nazareth Rams in occasione della commemorazione di Sant'Agnese presso la Casa Madre delle Suore di Nazareth 

ಸಂತ ಆಗ್ನೆಸ್‌ರ ಕುರಿಮರಿಗಳು: ರೋಮ್‌ ಧರ್ಮಸಭೆಯ ಪ್ರಾಚೀನ ಸಂಪ್ರದಾಯ

ಪ್ರಾಚೀನ ಸಂಪ್ರದಾಯವನ್ನು ಅನುಸರಿಸಿ, ರೋಮ್‌ನ ವಯಾ ನೊಮೆಂಟಾನಾದಲ್ಲಿರುವ ಅವರ ಹೆಸರನ್ನು ಹೊಂದಿರುವ ಮಹಾದೇವಾಲಯದಲ್ಲಿ ಸಂತ ಆಗ್ನೆಸ್ ರವರ ಹಬ್ಬದಂದು ಎರಡು ಕುರಿಮರಿಗಳನ್ನು ಆಶೀರ್ವದಿಸಲಾಗುತ್ತದೆ - ರೋಮ್‌ನ ವಯಾ ನೊಮೆಂಟಾನಾ ಅವರ ಸಮಾಧಿಯ ಸಾಂಪ್ರದಾಯಿಕ ಸ್ಥಳವಾಗಿದೆ. ಈ ಕುರಿಮರಿಗಳ ಉಣ್ಣೆಯನ್ನು ಹೊಸ ಮಹಾಧರ್ಮಾಧ್ಯಕ್ಷರುಗಳಿಗಾಗಿ ಆಯಾತಾಕಾರದ ದೊಡ್ಡ ನಿಲುವಂಗಿ(ಪ್ಯಾಲಿಯಂಗಳಾಗಿ)ಯಾಗಿ ನೇಯಲಾಗುತ್ತದೆ, ಈ ಕ್ರಿಯೆಯು ಇತಿಹಾಸದಲ್ಲಿ ಆಳವಾಗಿ ಬೇರೂರಿರುವ ಒಂದು ಪವಿತ್ರ ಸಂಪ್ರದಾಯವನ್ನು ಮುಂದುವರಿಸುತ್ತಿರುವುದನ್ನು ಪ್ರತಿಬಿಂಬಿಸುತ್ತದೆ.

ಡೊರೊಟಾ ಅಬ್ದೆಲ್ಮೌಲಾ-ವಿಯೆಟ್ - ವ್ಯಾಟಿಕನ್ ನಗರ

4 ನೇ ಶತಮಾನದ ಆರಂಭದ ಯುವ ರೋಮ್‌ ನ ರಕ್ತಸಾಕ್ಷಿಯಾದ ಸಂತ ಆಗ್ನೆಸ್ ರವರ ಸಮಾಧಿಯಲ್ಲಿ ಕುರಿಮರಿಗಳನ್ನು ಆಶೀರ್ವದಿಸುವ ಪದ್ಧತಿಯ ಮೊದಲ ಉಲ್ಲೇಖವು 6ನೇ ಶತಮಾನಕ್ಕೆ ಹಿಂದಿನದು. ಈ ಸಂಪ್ರದಾಯವು ಸಂತ ಆಗ್ನೆಸ್ ರವರ ಕುರಿತಾದ ಪ್ರಾಚೀನ ದಂತಕಥೆಯೊಂದಿಗೆ ಸಂಬಂಧ ಹೊಂದಿದೆ, ಆಕೆಯ ಮರಣದ ನಂತರ ಆಕೆಯ ಹೆತ್ತವರಿಗೆ ಕಾಣಿಸಿಕೊಂಡರು ಎಂದು ಹೇಳಲಾಗುತ್ತದೆ. ಆಕೆಯ ಸಮಾಧಿಯಲ್ಲಿ ಪ್ರಾರ್ಥಿಸಲು ಬಂದಾಗ, ಆಕೆಯು ಕನ್ಯೆಯರ ಗಾನವೃಂದದಿಂದ ಸುತ್ತುವರೆದಿರುವುದನ್ನು ಮತ್ತು ಆಕೆಯ ತೋಳುಗಳಲ್ಲಿ ಶುದ್ಧ ಕುರಿಮರಿಯನ್ನು ಹಿಡಿದಿರುವುದನ್ನು ನೋಡಿದರು. ಐತಿಹಾಸಿಕ ದಾಖಲೆಗಳು ಒಮ್ಮೆ ಎರಡು ಕುರಿಮರಿಗಳನ್ನು ಸಂತ ಯೋವಾನ್ನರ ಲ್ಯಾಟೆರನ್ ಮಹಾದೇವಾಲಯದ ಹೊರಗಿನ ಗೋಡೆಗಳ ಹೊರಗಡೆ, ಸಂತ ಆಗ್ನೆಸ್ ಮಹಾದೇವಾಲಯದ ಸನ್ಯಾಸಿಗಳು ಪಾವತಿಸುವ "ಬಾಡಿಗೆ" ಎಂದು ಪರಿಗಣಿಸಲಾಗಿತ್ತು ಎಂದು ಸೂಚಿಸುತ್ತದೆ. ಲ್ಯಾಟೆರನ್ ಚಾಪ್ಟರ್‌ನ ಸದಸ್ಯರು ಈ ಕುರಿಮರಿಗಳನ್ನು ವಿಶ್ವಗುರುಗಳ ಆಶೀರ್ವಾದಕ್ಕಾಗಿ ಅವರಿಗೆ ನೀಡುತ್ತಿದ್ದರು.

ಚೈನ್ಸ್‌ನಲ್ಲಿರುವ ಸಂತ ಪೇತ್ರರ ಮಹಾದೇವಾಲಯದ ಆರ್ಕೈವ್‌ಗಳ ದಾಖಲೆಯು 1550ರಲ್ಲಿ ಕುರಿಮರಿಗಳ ಆಶೀರ್ವಾದವನ್ನು ದಾಖಲಿಸುತ್ತದೆ, ಜೊತೆಗೆ ಈ ಪದ್ಧತಿಯ ಮೂಲದ ವಿವರಣೆಯನ್ನು ನೀಡುತ್ತದೆ. “ಸಂತ ಯೋವಾನ್ನರಿಗೆ [ಲ್ಯಾಟೆರನ್] ಬಾಡಿಗೆಯಾಗಿ ನೀಡಲಾದ ಈ ಕುರಿಮರಿಗಳ ಮೂಲವು ಚಕ್ರವರ್ತಿ ಕಾನ್ಸ್ಟಂಟೈನ್ ರವರ ಮಗಳು ಸಂತ ಕಾನ್ಸ್ಟಂಟಿನಾರವರಿಂದ ಬಂದಿದೆ, ಅವರು ದೇವಾಲಯವನ್ನು ದಾನ ಮಾಡಿದರು (ಕೆಲವರು ಇದು ರಾಜ ಚಾರ್ಲ್ಸ್ I ಎಂದು ಹೇಳುತ್ತಾರೆ). ಆಕೆಯು ಸಂತ ಆಗ್ನೆಸ್ ರ ದೇವಾಲಯವನ್ನು ಮತ್ತು ಮಠವನ್ನು ಸ್ಥಾಪಿಸಿದರು, ಅವರಿಗೆ ಗಮನಾರ್ಹ ಸ್ವತ್ತುಗಳನ್ನು ನೀಡಿದರು. ಈ ಮಠವು ವಿಶ್ವದ ಧರ್ಮಸಭೆಯ ಒಂದು ಪ್ರಪ್ರಥಮ ಮಠವಾಗಿದ್ದರಿಂದ, ಇದು ವಾರ್ಷಿಕವಾಗಿ ಎರಡು ಕುರಿಮರಿಗಳನ್ನು ಅಂಗೀಕಾರದ ಸಂಕೇತವಾಗಿ ಧರ್ಮಸಭೆಯ ಶಾಸನಗಳಿಗೆ (ಕ್ಯಾನನ್‌ಗಳಿಗೆ) ಪಾವತಿಸುತ್ತಿತ್ತು. ಸಾಂಭ್ರಮಿಕ ದೈವಾರಾಧನಾ ವಿಧಿಯ ಸಮಯದಲ್ಲಿ, ಪರಮಪ್ರಸಾದದ ನಂತರ, ಕುರಿಮರಿಗಳನ್ನು ಆಶೀರ್ವದಿಸಿ ಧರ್ಮಸಭೆಯ ಶಾಸನಕಾರರಿಗೆ ಹಸ್ತಾಂತರಿಸಲಾಯಿತು. ನೋಟರಿ ಹಸ್ತಾಂತರವನ್ನು ದೃಢೀಕರಿಸುವ ದಾಖಲೆಯನ್ನು ರಚಿಸುತ್ತಿದ್ದರು. ಕುರಿಮರಿಗಳನ್ನು ವಿಶ್ವಗುರುಗಳಿಗೆ ತಲುಪಿಸುವವರು ಕೆಲವು ಚಿನ್ನದ ನಾಣ್ಯಗಳನ್ನು ಪಾವತಿಯಾಗಿ ಪಡೆದರು,” ಎಂದು ವೃತ್ತಾಂತ ಹೇಳುತ್ತದೆ.

ಮಹಾಧರ್ಮಾದ್ಯಕ್ಷರುಗಳಿಗೆ ಪ್ಯಾಲಿಯಮ್‌ಗಾಗಿ ಉಣ್ಣೆ
ಶತಮಾನಗಳವರೆಗೆ, ಟ್ರೆ ಫಾಂಟೇನ್ ಅಬ್ಬೆಯಲ್ಲಿರುವ ಟ್ರಾಪಿಸ್ಟ್ ಫಾರ್ಮ್‌ನಿಂದ ಕುರಿಮರಿಗಳನ್ನು ನೇರವಾಗಿ ಸಂತ ಆಗ್ನೆಸ್ ರವರ ಮಹಾದೇವಾಲಯದಿಂದ ಪವಿತ್ರ ತಂದೆಯ ಬಳಿಗೆ ಕರೆದೊಯ್ಯಲಾಗುತ್ತಿತ್ತು. ಅವರು ಅವುಗಳನ್ನು ಸಾಂಭ್ರಮಿಕ ರೀತಿಯ ಮೆರವಣಿಗೆಯಲ್ಲಿ ಸ್ವೀಕರಿಸಿ ಆಶೀರ್ವದಿಸುತ್ತಿದ್ದರು. ನಂತರ, ವಿಶ್ವಗುರುಗಳು ಕುರಿಮರಿಗಳನ್ನು ಟ್ರಾಸ್ಟೆವೆರೆಯಲ್ಲಿರುವ ಸಂತ ಸಿಸಿಲಿಯಾದ ಮಹಾದೇವಾಲಯವಾದ ಬೆನೆಡಿಕ್ಟೈನ್ ಸನ್ಯಾಸಿನಿಯರಿಗೆ ವಹಿಸಿಕೊಟ್ಟರು, ಅವರು ಕೆಲವು ತಿಂಗಳುಗಳ ನಂತರ ಅವುಗಳನ್ನು ಕತ್ತರಿಸಿದರು. ನಂತರ ಅವುಗಳ ಉಣ್ಣೆಯನ್ನು ಹೊಸದಾಗಿ ನೇಮಕಗೊಂಡ ಮಹಾಧರ್ಮಾದ್ಯಕ್ಷರುಗಳಿಗಾಗಿ ಪ್ಯಾಲಿಯಮ್‌ಗಳಾಗಿ ನೇಯಲಾಯಿತು.

ಇತ್ತೀಚಿನ ವರ್ಷಗಳಲ್ಲಿ, ಈ ಸಂಪ್ರದಾಯದ ಕೆಲವು ಅಂಶಗಳು ಬದಲಾಗಿವೆ: ಟ್ರ್ಯಾಪಿಸ್ಟ್‌ಗಳು ಇನ್ನು ಮುಂದೆ ಕುರಿ ಸಾಕಣೆ ಕೇಂದ್ರವನ್ನು ನಿರ್ವಹಿಸುವುದಿಲ್ಲ ಮತ್ತು ಪವಿತ್ರ ತಂದೆಯು ವ್ಯಾಟಿಕನ್‌ನಲ್ಲಿ ಕುರಿಮರಿಗಳನ್ನು ಆಶೀರ್ವದಿಸುವುದಿಲ್ಲ. ಆದಾಗ್ಯೂ, ಬೆನೆಡಿಕ್ಟೈನ್ ಸನ್ಯಾಸಿನಿಯರಿಗೆ ಕುರಿಮರಿಗಳನ್ನು ಒಪ್ಪಿಸುವ ಸಂಪ್ರದಾಯವು ಬದಲಾಗದೆ ಉಳಿದಿದೆ. ಪವಿತ್ರ ವಾರದಲ್ಲಿ, ಸನ್ಯಾಸಿನಿಯರು ಕುರಿಗಳ ಉಣ್ಣೆಯನ್ನು ಪ್ಯಾಲಿಯಮ್‌ಗಳಾಗಿ ನೇಯ್ಗೆ ಮಾಡಲು ಕುರಿಮರಿಗಳನ್ನು ಕತ್ತರಿಸುತ್ತಾರೆ. ಇದಕ್ಕೂ ಮೊದಲು, ನಜರೇತಿನ ಪವಿತ್ರ ಕುಟುಂಬದ ಸಹೋದರಿಯರು ಸಂತ ಆಗ್ನೆಸ್ ರವರ ಮಹಾದೇವಾಲಯದಲ್ಲಿ ಆಶೀರ್ವದನಾ ಸಮಾರಂಭಕ್ಕಾಗಿ ಕುರಿಮರಿಗಳನ್ನು ಸಿದ್ಧಪಡಿಸುತ್ತಾರೆ, ಅವರು 140 ವರ್ಷಗಳಿಗೂ ಹೆಚ್ಚು ಕಾಲ ವಯಾ ಮಾಕಿಯಾವೆಲ್ಲಿಯ ತಮ್ಮ ಮನೆಯಲ್ಲಿ ಈ ಕಾರ್ಯವನ್ನು ಮಾಡುತ್ತಾ ಬಂದಿದ್ದಾರೆ. ಈ ವರ್ಷ, ಕುರಿಮರಿಗಳ ತಯಾರಿಕೆಯು ವಿಶೇಷ ಮಹತ್ವವನ್ನು ಹೊಂದಿದೆ: ಇದು ನಡೆಯುತ್ತಿರುವ ಜೂಬಿಲಿ ವರ್ಷ ಮತ್ತು ಈ ಸಭೆಯ ಸ್ಥಾಪನೆಯ 150ನೇ ವಾರ್ಷಿಕೋತ್ಸವದೊಂದಿಗೆ ಹೊಂದಿಕೆಯಾಗಿದೆ.

ಕುರಿಮರಿಗಳ ಆರೈಕೆ: ನಜರೇತಿನ ಗೌಪ್ಯ ಜೀವನದ ಚಿಂತನೆ
1880 ರ ದಶಕದಲ್ಲಿ, ಹೊಸದಾಗಿ ಸ್ಥಾಪಿಸಲಾದ ನಜರೇತಿನ ಪವಿತ್ರ ಕುಟುಂಬದ ಸಹೋದರಿಯರ ಸಭೆಯು ಕುರಿಮರಿಗಳ ಆರೈಕೆಯನ್ನು ವಹಿಸಿಕೊಳ್ಳಲು ಕೇಳಲಾಯಿತು, ಈ ಹಿಂದೆ ಈ ಜವಾಬ್ದಾರಿಯನ್ನು ನಿರ್ವಹಿಸಿದ ಸಹೋದರಿಯರನ್ನು ಬದಲಾಯಿಸಲಾಯಿತು.

"ನಮ್ಮ ಸಂಸ್ಥಾಪಕಿ ಪೂಜ್ಯ ಮಾರಿಯಾ ಫ್ರಾನ್ಸಿಸ್ ಸೀಡ್ಲಿಸ್ಕಾರವರು, ಸಂತ ಆಗ್ನೆಸ್ ರವರ ಹಬ್ಬಕ್ಕೆ ಕುರಿಮರಿಗಳನ್ನು ಸಿದ್ಧಪಡಿಸಲು ಸಹಾಯ ಮಾಡುವುದನ್ನು ಧರ್ಮಸಭೆಗೆ ನಮ್ಮ ಸೇವೆಯ ಅಭಿವ್ಯಕ್ತಿಯಾಗಿ ನೋಡಿದರು" ಎಂದು ರೋಮ್‌ನಲ್ಲಿರುವ ನಜರೇತಿನ ಪವಿತ್ರ ಕುಟುಂಬದ ಸಹೋದರಿಯರ ಪ್ರಾಂತೀಯ ಶ್ರೇಷ್ಠ ಅಧಿಕಾರಿ ಸಿಸ್ಟರ್. ಡೊರೊಟಾ ಪೊಡ್ವಾಲ್ಸ್ಕಾರವರು ವ್ಯಾಟಿಕನ್ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದರು. "ಇಂದಿಗೂ, ಈ ಸಂಪ್ರದಾಯದಲ್ಲಿ ನಮ್ಮ ಪಾಲ್ಗೊಳ್ಳುವಿಕೆ ಧರ್ಮಸಭೆಗೆ ನಮ್ಮ ಪ್ರೀತಿ ಮತ್ತು ನಿಷ್ಠೆಯನ್ನು ತೋರಿಸುತ್ತದೆ."

"ನಮ್ಮ ಆಧ್ಯಾತ್ಮಿಕತೆಯ ಇನ್ನೊಂದು ಅಂಶವು ಕುರಿಮರಿಗಳ ಸಂಪ್ರದಾಯಕ್ಕೆ ನಮ್ಮನ್ನು ಸಂಪರ್ಕಿಸುತ್ತದೆ" ಎಂದು ನಜರೇತಿನ ಪವಿತ್ರ ಕುಟುಂಬದ ಸಹೋದರಿಯರ ಪ್ರಾಂತೀಯ ಶ್ರೇಷ್ಠ ಅಧಿಕಾರಿ ಸಿಸ್ಟರ್. ಡೊರೊಟಾ ಪೊಡ್ವಾಲ್ಸ್ಕಾರವರು ಹೇಳಿದರು. "ನಜರೆತ್‌ನಲ್ಲಿ ಪವಿತ್ರ ಕುಟುಂಬದ ಜೀವನವು ರಹಸ್ಯ ಮತ್ತು ಸಾಮಾನ್ಯವಾಗಿದ್ದಂತೆಯೇ, ಅವರಿಗಾಗಿ ನಮ್ಮ ಕಾಳಜಿ ಮತ್ತು ಆಶೀರ್ವಾದಕ್ಕಾಗಿ ಅದರ ಸಿದ್ಧತೆ ಸರಳ ಮತ್ತು ಗುಪ್ತವಾಗಿದೆ" ಎಂದು ಹೇಳಿದರು.

21 ಜನವರಿ 2025, 13:54