ಗಾಜಾ ಕದನ ವಿರಾಮವನ್ನು ಪವಿತ್ರ ನಾಡಿನ ಧರ್ಮಾಧ್ಯಕ್ಷರುಗಳು ಸ್ವಾಗತಿಸಿದ್ದಾರೆ
ಜೋಸೆಫ್ ಟುಲ್ಲೊಚ್
ಗಾಜಾದಲ್ಲಿ ಕದನ ವಿರಾಮ ಘೋಷಣೆಯನ್ನು ಪವಿತ್ರ ನಾಡಿನ ಕಥೋಲಿಕ ಧರ್ಮಾಧ್ಯಕ್ಷರುಗಳ ಸಭೆ ಸ್ವಾಗತಿಸಿದೆ ಮತ್ತು 15 ತಿಂಗಳ ಯುದ್ಧದಿಂದ ಉಂಟಾದ "ಅಗಾಧವಾದ ಯಾತನೆ"ಗೆ ಈ ಒಪ್ಪಂದವು ಶಾಶ್ವತ ಅಂತ್ಯ ಹಾಡುತ್ತದೆ ಎಂದು ತನ್ನ ಭರವಸೆಯನ್ನು ವ್ಯಕ್ತಪಡಿಸಿದೆ.
ಪತ್ರಿಕಾ ಪ್ರಕಟಣೆಯಲ್ಲಿ, ಜೆರುಸಲೇಮ್, ಪ್ಯಾಲೆಸ್ತೀನ್, ಇಸ್ರಯೇಲ್, ಜೋರ್ಡಾನ್ ಮತ್ತು ಸೈಪ್ರಸ್‌ನಲ್ಲಿ ನ್ಯಾಯವ್ಯಾಪ್ತಿಯನ್ನು ಹೊಂದಿರುವ ಎಲ್ಲಾ ಕಥೋಲಿಕ ಧರ್ಮಾಧ್ಯಕ್ಷರುಗಳು, ಪ್ರಾಂತ್ಯಾಧಿಕಾರಿಗಳು (ಎಪಾರ್ಚ್) ಮತ್ತು ಧರ್ಮಪ್ರಾಂತ್ಯಾಧಿಕಾರಿ (ಎಕ್ಸಾರ್ಚ್)ಗಳನ್ನು ಒಳಗೊಂಡಿರುವ ಸಭೆಯು, ಆದಾಗ್ಯೂ, "ಯುದ್ಧದ ಅಂತ್ಯವು ಸಂಘರ್ಷದ ಅಂತ್ಯವನ್ನು ಅರ್ಥೈಸುವುದಿಲ್ಲ" ಎಂದು ಒತ್ತಿ ಹೇಳಿದೆ.
ಸಂಘರ್ಷದ ಹೃದಯಭಾಗದಲ್ಲಿರುವ "ಆಳವಾಗಿ ಬೇರೂರಿರುವ ಸಮಸ್ಯೆಗಳನ್ನು" ಪರಿಹರಿಸಲು "ಸುದೀರ್ಘ ಪ್ರಕ್ರಿಯೆಯ" ಅಗತ್ಯವಿದೆ ಎಂದು ಕಥೋಲಿಕ ಧರ್ಮಾಧ್ಯಕ್ಷರುಗಳು ಹೇಳಿದರು.
ಈ ನಿಟ್ಟಿನಲ್ಲಿ, ಅವರ ಪತ್ರಿಕಾ ಪ್ರಕಟಣೆಯು ಅಂತರರಾಷ್ಟ್ರೀಯ ಸಮುದಾಯಕ್ಕೆ "ಯುದ್ಧ ನಂತರದ ಅವಧಿಗೆ ಸ್ಪಷ್ಟ ಮತ್ತು ನ್ಯಾಯಯುತ ರಾಜಕೀಯ ದೃಷ್ಟಿಕೋನವನ್ನು ಅಭಿವೃದ್ಧಿಪಡಿಸಲು" ಕರೆ ನೀಡಿತು.
ಯಾತ್ರಿಕರು ಮತ್ತು ಪವಿತ್ರ ವರ್ಷ
ಧರ್ಮಾಧ್ಯಕ್ಷರುಗಳು "ಪವಿತ್ರ ಸ್ಥಳಗಳಿಗೆ ಯಾತ್ರಿಕರು ಮರಳುವುದನ್ನು ಕಾತುರದಿಂದ ಕಾಯುತ್ತಿದ್ದೇವೆ" ಎಂದು ಹೇಳಿದರು.
ಕ್ರೈಸ್ತ ಧರ್ಮದ ಯಾತ್ರಿಕರು ಸಾಮಾನ್ಯವಾಗಿ ವರ್ಷಪೂರ್ತಿ ಪ್ಯಾಲೆಸ್ತೀನ್ ಮತ್ತು ಇಸ್ರಯೇಲ್‌ನಲ್ಲಿರುವ ಪವಿತ್ರ ಸ್ಥಳಗಳಿಗೆ ಭೇಟಿ ನೀಡುತ್ತಿದ್ದರು, ಆದರೆ ಅಕ್ಟೋಬರ್ 2023ರಲ್ಲಿ ಯುದ್ಧ ಪ್ರಾರಂಭವಾದಾಗಿನಿಂದ ಕ್ರೈಸ್ತ ಧರ್ಮದ ಯಾತ್ರಿಕರ ಆಗಮನ ಸಂಪೂರ್ಣವಾಗಿ ಕಣ್ಮರೆಯಾಗಿದೆ - ಪ್ರವಾಸೋದ್ಯಮವನ್ನು ಅವಲಂಬಿಸಿರುವ ಸ್ಥಳೀಯ ಆರ್ಥಿಕತೆಗಳಿಗೆ ಹಾನಿಕಾರಕ ಆರ್ಥಿಕ ಪರಿಣಾಮಗಳೊಂದಿಗೆ.
ಕೊನೆಯದಾಗಿ, ಧರ್ಮಾಧ್ಯಕ್ಷರುಗಳು ಧರ್ಮಸಭೆಯ 2025ರ ಜೂಬಿಲಿ ವರ್ಷವನ್ನು ಸಹ ಉಲ್ಲೇಖಿಸಿದರು, ಅದರ ಶೀರ್ಷಿಕೆ 'ಭರವಸೆಯ ಯಾತ್ರಿಕರು' ಎಂಬುದಾಗಿದೆ.
"ನಿರಾಸೆಗೊಳಿಸದ ಭರವಸೆಗೆ ಮೀಸಲಾಗಿರುವ" ಜೂಬಿಲಿ ವರ್ಷದ ಆರಂಭದಲ್ಲಿ ಧರ್ಮಾಧ್ಯಕ್ಷರುಗಳು, ಕದನ ವಿರಾಮವನ್ನು "ದೇವರ ನಂಬಿಗಸ್ತಿಕೆಯನ್ನು ನೆನಪಿಸುವ ಸಂಕೇತ" ಎಂದು ಬರೆದಿದ್ದಾರೆ.