MAP

Centro San Massimiliano Kolbe a Harmęże_disegno di Marian Kołodziej (Piotr Markowski) Centro San Massimiliano Kolbe a Harmęże_disegno di Marian Kołodziej (Piotr Markowski)  ( (Piotr Markowski))

ಆಶ್ವಿಟ್ಜ್ ವಾರ್ಷಿಕೋತ್ಸವ: ಸ್ಮರಣೆ ಮತ್ತು ಭರವಸೆಗೆ ಕರೆ

ಪೋಲಿಷ್ ಹಳ್ಳಿಯಾದ ಹಾರ್ಮೆಜ್‌ನಲ್ಲಿ, ಆಶ್ವಿಟ್ಜ್-ಬಿರ್ಕೆನೌದಲ್ಲಿನ ಜರ್ಮನ್ ನಾಜಿ ಸೆರೆ ಮತ್ತು ನಿರ್ನಾಮ ಶಿಬಿರದಲ್ಲಿ ಬಳಲುತ್ತಿದ್ದ ಮತ್ತು ನಾಶವಾದವರ ಸ್ಮರಣೆಯೊಂದಿಗೆ ಪ್ರಾರ್ಥನೆಯು ಹೆಣೆದುಕೊಂಡಿದೆ. ಒಂದು ಕಾಲದಲ್ಲಿ ಆಶ್ವಿಟ್ಜ್‌ನ "ಉಪಶಿಬಿರ"ವಾಗಿದ್ದ ಹಾರ್ಮೆಜ್ ಈಗ ಫ್ರಾನ್ಸಿಸ್ಕನ್ ಸಭೆಯ ಮಠ ಮತ್ತು ಸಂತ ಮ್ಯಾಕ್ಸಿಮಿಲಿಯನ್ ರವರ ಕೇಂದ್ರ, ಒಂದು ಪ್ರಾರ್ಥನೆಯ ಸ್ಥಳ, ಚಿಂತನೆ ಮತ್ತು ಹತ್ಯಾಕಾಂಡದ ಸಂತ್ರಸ್ತರ ಕುರಿತು ಮಾಹಿತಿ ನೀಡುವ ಶಿಕ್ಷಣದ ಸ್ಥಳವಾಗಿದೆ.

ಕರೋಲ್ ಡಾರ್ಮೊರೊಸ್

ಹರ್ಮೆಜ್ ಇತಿಹಾಸವು ಗಾಯದ ಗುರುತುಗಳನ್ನು ಹೊಂದಿದೆ. 1941 ರ ವಸಂತಕಾಲದಲ್ಲಿ, ನಾಜಿಗಳು ಈ ಗ್ರಾಮವನ್ನು ಜನವಸತಿಯಿಂದ ಮುಕ್ತಗೊಳಿಸಿ ನಾಶಮಾಡಿದರು, ಆ ಸ್ಥಳದಲ್ಲಿ ಹಾರ್ಮೆನ್ಸ್ ಉಪಶಿಬಿರವನ್ನು ಸ್ಥಾಪಿಸಿದರು. ಆಶ್ವಿಟ್ಜ್-ಬಿರ್ಕೆನೌನ ಸಂತ್ರಸ್ತರ ಚಿತಾಭಸ್ಮವನ್ನು ಹೆಚ್ಚಾಗಿ ಎಸೆಯಲಾಗುತ್ತಿದ್ದ ದೊಡ್ಡ ಮೀನು ಕೊಳಗಳಲ್ಲಿ ಕೆಲಸ ಮಾಡುವ ಮೂಲಕ ಕೈದಿಗಳನ್ನು ಕ್ರೂರ ಪರಿಸ್ಥಿತಿಗಳಲ್ಲಿ ಕಠಿಣ ಶ್ರಮವನ್ನು ಸಹಿಸಿಕೊಳ್ಳುವಂತೆ ಒತ್ತಾಯಿಸಲಾಯಿತು.

ವ್ಯಾಟಿಕನ್ ರೇಡಿಯೋ–ವ್ಯಾಟಿಕನ್ ಸುದ್ಧಿಯೊಂದಿಗೆ ಜೊತೆ ಮಾತನಾಡಿದ ಸಂತ ಮ್ಯಾಕ್ಸಿಮಿಲಿಯನ್ ಕೇಂದ್ರದ ನಿರ್ದೇಶಕ ಧರ್ಮಗುರು ಕಾಜಿಮಿಯರ್ಜ್ ಮಾಲಿನೋವ್ಸ್ಕಿರವರು, ಆಶ್ವಿಟ್ಜ್‌ನ ವಿಮೋಚನೆಯ 80 ನೇ ವಾರ್ಷಿಕೋತ್ಸವವು ಮತ್ತು ಮಾನವ ಇತಿಹಾಸದ ಕರಾಳ ಅಧ್ಯಾಯಗಳನ್ನು ಎದುರಿಸುವಲ್ಲಿ ನೆನಪು ಮತ್ತು ಪ್ರೀತಿಯ ಶಾಶ್ವತ ಮಹತ್ವವನ್ನು ಈ ಸಮಯದಲ್ಲಿ ಚರ್ಚಿಸುತ್ತಾರೆ. "ಈ ಸ್ಥಳದ ವಿಶಿಷ್ಟತೆಯ ತೂಕದ ಅರಿವು ಯಾವಾಗಲೂ ಇರುತ್ತದೆ" ಎಂದು ಧರ್ಮಗುರು ಮಾಲಿನೋವ್ಸ್ಕಿರವರು ವಿವರಿಸುತ್ತಾರೆ. "ಅದಕ್ಕಾಗಿಯೇ ನಾವು ಫ್ರಾನ್ಸಿಸ್ಕನ್ನರು ಇಲ್ಲಿದ್ದೇವೆ. ಸಂತ ಮ್ಯಾಕ್ಸಿಮಿಲಿಯನ್ ಕೋಲ್ಬೆರವರ ಸ್ಮರಣಾರ್ಥವಾಗಿ ಮತ್ತು ಅವರ ಸಂತ ಪದವಿಗಾಗಿ, ದೇವರಿಗೆ ಆಳವಾದ ಕೃತಜ್ಞತೆಯಿಂದ ಅವರ ಹೆಸರಿನಲ್ಲಿ ಈ ಕೇಂದ್ರವನ್ನು ಸ್ಥಾಪಿಸಲಾಯಿತು. ಕಾರ್ಡಿನಲ್ ಫ್ರಾನ್ಸಿಸ್ಜೆಕ್ ಮಚಾರ್ಸ್ಕಿರವರು ಈ ಸ್ಥಳವನ್ನು ಗೊತ್ತುಪಡಿಸಿದರು, ಈ ಸ್ಥಳವು ಹಿಂದೆ ಒಂದು ಶಿಬಿರದ ಭಾಗವಾಗಿತ್ತು."

ಸೇಂಟ್ ಮ್ಯಾಕ್ಸಿಮಿಲಿಯನ್ ಕೇಂದ್ರ: ವಿಜಯಶಾಲಿ ಪ್ರೀತಿಯ ಅಭಯಧಾಮ
ಇಂದು, ಈ ಕೇಂದ್ರವು ಪ್ರಾರ್ಥನೆ ಮತ್ತು ಆಧ್ಯಾತ್ಮಿಕ ರಚನೆಯ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ. ಈ ಕಾಯಕವು ಜನವರಿ 27 ರಂದು ವಿಶೇಷ ಮಹತ್ವವನ್ನು ಪಡೆಯುತ್ತದೆ, ಆಶ್ವಿಟ್ಜ್‌ನ ವಿಮೋಚನೆಯ 80 ನೇ ವಾರ್ಷಿಕೋತ್ಸವವನ್ನು ಗುರುತಿಸಲು ಒಂದು ದಿವ್ಯಬಲಿಪೂಜೆಯನ್ನು ಅರ್ಪಿಸಲಾಗುತ್ತದೆ. ರಾಜರು, ಅಧ್ಯಕ್ಷರು ಮತ್ತು ಸರ್ಕಾರಿ ಅಧಿಕಾರಿಗಳು ಸೇರಿದಂತೆ ಸುಮಾರು 60 ರಾಷ್ಟ್ರಗಳು ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳ ಪ್ರತಿನಿಧಿಗಳು ಅವರ ಸ್ಮರಣಾರ್ಥವಾಗಿ ಬಿರ್ಕೆನೌ ದ್ವಾರಗಳಲ್ಲಿ ಸೇರುತ್ತಾರೆ.

ವಿಜಯಶಾಲಿ ಪ್ರೀತಿಯ ಅಭಯಧಾಮ ಎಂದು ಕರೆಯಲ್ಪಡುವ ಈ ಕೇಂದ್ರವು "ಆಶ್ವಿಟ್ಜ್‌ನಲ್ಲಿ ದೇವರು ಎಲ್ಲಿದ್ದನು?" ಎಂಬ ಪ್ರಶ್ನೆಗೆ ಆಳವಾದ ಪ್ರತಿಕ್ರಿಯೆಯನ್ನು ನೀಡುತ್ತದೆ. ಧರ್ಮಗುರು ಮಾಲಿನೋವ್ಸ್ಕಿರವರು ಇದರ ಬಗ್ಗೆ ಯೋಚಿಸುತ್ತಾರೆ: “ಸಹ ಖೈದಿ ಫ್ರಾನ್ಸಿಸ್ಜೆಕ್ ಗಜೋವಿಕ್ಜೆಕ್‌ಗಾಗಿ ತನ್ನ ಪ್ರಾಣವನ್ನು ನೀಡಿದ ಸಂತ ಮ್ಯಾಕ್ಸಿಮಿಲಿಯನ್ ಕೋಲ್ಬೆರವರ ಸಾಕ್ಷ್ಯದಲ್ಲಿ ಉತ್ತರವಿದೆ. ತನ್ನ ತ್ಯಾಗದ ಮೂಲಕ, ಸಂತ ಮ್ಯಾಕ್ಸಿಮಿಲಿಯನ್ ರವರು ದೇವರ ವಿಜಯಶಾಲಿ ಪ್ರೀತಿಗೆ ಸಾಕ್ಷಿಯಾದರು - ಊಹಿಸಲಾಗದ ದುಷ್ಟತನ, ಹಿಂಸೆಯ ನಡುವೆಯೂ ಮೇಲುಗೈ ಸಾಧಿಸಬಲ್ಲ ಪ್ರೀತಿ. ಜುಲೈ 29, 1941 ರಂದು, ಅವರು ಶಿಬಿರದ ಅಂಗಳದಲ್ಲಿ ತಮ್ಮ ಜೀವನದ ಅಂತಿಮ ತ್ಯಾಗವನ್ನು ಮಾಡಿದರು.

ಮರಿಯನ್ ಕೊಲೊಡ್ಜೀಜ್ ರವರಿಂದ "ಮೆಮೊರಿ ಫ್ರೇಮ್‌ಗಳು": ಕಲೆ ಮತ್ತು ಚಿಂತನೆ
ಕೇಂದ್ರದ ಅತ್ಯಂತ ಹೃದಯಸ್ಪರ್ಶಿ ವೈಶಿಷ್ಟ್ಯವೆಂದರೆ ಮೆಮೊರಿ ಫ್ರೇಮ್‌ಗಳು (ನೆನಪಿನ ಚೌಕಟ್ಟುಗಳು): ಲ್ಯಾಬಿರಿಂತ್‌ಗಳು ಎಂಬ ಪ್ರದರ್ಶನ, ಇದನ್ನು ಪ್ರಸಿದ್ಧ ರಂಗ ವಿನ್ಯಾಸಕ ಮತ್ತು ಕೈದಿಗಳ ಮೊದಲ ಸಾಗಣೆಯಿಂದ ಬದುಕುಳಿದ ಆಶ್ವಿಟ್ಜ್ ನ ಮರಿಯನ್ ಕೊಲೊಡ್ಜೀಜ್ ರವರು ರಚಿಸಿದ್ದಾರೆ. ಯುದ್ಧದ ಕೇವಲ 50 ವರ್ಷಗಳ ನಂತರ, ಭಾಗಶಃ ಪಾರ್ಶ್ವವಾಯುವಿನ ನಂತರ, ಕೊಲೊಡ್ಜೀಜ್ ರವರು ತನ್ನ ಶಿಬಿರದ ಆಘಾತವನ್ನು ಎದುರಿಸಿದ ಕ್ಷಣಗಳನ್ನು ಕಲೆಯ ಮೂಲಕ ತೋರ್ಪಡಿಸಿದರು.

"ಈ ಪ್ರದರ್ಶನವನ್ನು ಕೊಲೊಡ್ಜೀಜ್ ರವರು ಮತ್ತು ಸಂತ ಮ್ಯಾಕ್ಸಿಮಿಲಿಯನ್ ರವರ ನಡುವಿನ ಸಂವಾದವಾಗಿ ಕಾಣಬಹುದು – ಮಾನವರು ಘನತೆ ಹಾಗೂ ಮಾನವೀಯತೆಯನ್ನು ಕಾಪಾಡಲು ದಾಟಬಾರದ ಮೌಲ್ಯಗಳು ಮತ್ತು ನೈತಿಕ ಗಡಿಗಳ ಕುರಿತು ಸಂಭಾಷಣೆ" ಎಂದು ಧರ್ಮಗುರು ಮಾಲಿನೋವ್ಸ್ಕಿರವರು ವಿವರಿಸುತ್ತಾರೆ. "ಇದು ಪ್ರದರ್ಶನದ ಕೇಂದ್ರ ವಿಷಯವಾಗಿದ್ದು, ಈ ಪ್ರದರ್ಶನವು ಸಮಕಾಲೀನ ಸಂದರ್ಶಕರೊಂದಿಗೆ ಆಳವಾಗಿ ಪ್ರತಿಧ್ವನಿಸುತ್ತದೆ."

40 ಕ್ಕೂ ಹೆಚ್ಚು ರೇಖಾಚಿತ್ರಗಳನ್ನು ಒಳಗೊಂಡಿರುವ ಈ ಪ್ರದರ್ಶನವು ದುಷ್ಟತನದ ಆಧುನಿಕ ಅಭಿವ್ಯಕ್ತಿಗಳ ಬಗ್ಗೆ ಚಿಂತನೆಯನ್ನು ಪ್ರೇರೇಪಿಸುತ್ತದೆ. ಕೊಲೊಡ್ಜೀಜ್ ರವರು ಸ್ವತಃ ಗಮನಿಸಿದಂತೆ, ಆಶ್ವಿಟ್ಜ್ ಇನ್ನೂ ಜಗತ್ತನ್ನು ಪೀಡಿಸುವ ವಿವಿಧ ರೀತಿಯ ದ್ವೇಷಗಳನ್ನು ಅಸ್ತಿತ್ವದಲ್ಲಿರಿಸಿಕೊಂಡಿದೆ.

ಮುಂದಿನ ಪೀಳಿಗೆಯನ್ನು ತೊಡಗಿಸಿಕೊಳ್ಳುವುದು
ಕೇಂದ್ರವು ಯುವಜನರನ್ನು ಗುರಿಯಾಗಿಟ್ಟುಕೊಂಡು ಹೊಸ ಶೈಕ್ಷಣಿಕ ಉಪಕ್ರಮಗಳನ್ನು ಪರಿಚಯಿಸುತ್ತಿದೆ. ಪ್ರದರ್ಶನಕ್ಕೆ ಭೇಟಿ ನೀಡಿದ ನಂತರ, ಭಾಗವಹಿಸುವವರನ್ನು ರಚನಾತ್ಮಕ ಚರ್ಚೆಗಳು ಮತ್ತು ಮಾರ್ಗದರ್ಶಿ ಚಿಂತನೆಗಳಲ್ಲಿ ತೊಡಗಿಸಿಕೊಳ್ಳಲು ಆಹ್ವಾನಿಸಲಾಗುತ್ತದೆ.

"ಅನೇಕ ಯುವಕರು ಪ್ರದರ್ಶನಕ್ಕೆ ಭಾವನಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ" ಎಂದು ಧರ್ಮಗುರು ಮಾಲಿನೋವ್ಸ್ಕಿರವರು ಹೇಳುತ್ತಾರೆ. "ಈ ವರ್ಷದಿಂದ, ನಾವು ಅವರಿಗೆ ತಮ್ಮ ಆಲೋಚನೆಗಳು ಮತ್ತು ಭಾವನೆಗಳನ್ನು ಹಂಚಿಕೊಳ್ಳಲು ತಕ್ಷಣವೇ ಒಟ್ಟುಗೂಡುವ ಕಾರ್ಯಕ್ರಮದ ಅವಕಾಶವನ್ನು ನೀಡಲು ಬಯಸುತ್ತೇವೆ. ವಿಶೇಷವಾಗಿ ವಿನ್ಯಾಸಗೊಳಿಸಲಾದ ಶೈಕ್ಷಣಿಕ ವಿಧಾನಗಳನ್ನು ಬಳಸಿಕೊಂಡು, ಅವರು ತಾವು ಅನುಭವಿಸಿದ್ದ ಅನುಭವವನ್ನು ಮತ್ತು ಇಂದಿನ ತಮ್ಮ ಜೀವನಕ್ಕಾಗಿ ಅವರು ಕಲಿಯಬಹುದಾದ ಜೀವನದ ಪಾಠಗಳನ್ನು ಹಂಚಿಕೊಳ್ಳಲುವ ಸದಾವಾಕಾಶವನ್ನು ಪೂರೈಸಲಾಗಿದೆ."

ಹಾರ್ಮೆಜ್‌ನಲ್ಲಿ ಪ್ರಾರ್ಥನೆ ಮತ್ತು ಸ್ಮರಣೆ
ಮುಂದೆ ನೋಡುತ್ತಾ, ಸಂತ ಮ್ಯಾಕ್ಸಿಮಿಲಿಯನ್ ರವರ ಕೇಂದ್ರ ತನ್ನ ಶಿಲುಬೆ ಹಾದಿಯ ನಿಲ್ದಾಣಗಳನ್ನು ನವೀಕರಿಸಲು ಯೋಜಿಸಿದೆ, ಈ ಕಾರ್ಯವು ಆಶ್ವಿಟ್ಜ್‌ನಲ್ಲಿರುವ ಜಲ್ಲಿಕಲ್ಲು ಗುಂಡಿಯಿಂದ ಜಲ್ಲಿಕಲ್ಲುಗಳನ್ನು ತರವುದರ ಮೂಲಕ ಪ್ರಾರಂಭಿಸಲಾಯಿತು. ಶಿಬಿರದ ಸಂತ್ರಸ್ತರಿಗಾಗಿ ಕೇಂದ್ರವು ನಿಯಮಿತ ಪ್ರಾರ್ಥನೆಗಳನ್ನು ಸಹ ಆಯೋಜಿಸುತ್ತದೆ.

ಆಳವಾದ ಆಧ್ಯಾತ್ಮಿಕ ಶಕ್ತಿಯ ಸಂಕೇತವೆಂದರೆ ಆಶ್ವಿಟ್ಜ್ ಕೈದಿ ಬೋಲೆಸ್ಲಾವ್ ಕುಪಿಕ್ ರವರು ಕೆತ್ತಿದ ವಿದ್ಯುತ್‌ ತಂತಿಗಳಿಂದ ಕೂಡಿರುವಂತಹ ಮಾತೆಮರಿಯಮ್ಮನವರ ಪುಟ್ಟ ಪ್ರತಿಮೆ (ಅವರ್ ಲೇಡಿ ಬಿಹೈಂಡ್ ದಿ ವೈರ್ಸ್ ಪ್ರತಿಮೆ). "ಈ ಪ್ರತಿಮೆಯು ಓಸ್ವಿಸಿಮ್ ಕುಟುಂಬಗಳ ಪಾಲನಾ ಪೋಷಕಿಯಾಗಿದೆ – ಇದು, ಅವರ ಪೂರ್ವಜರ ಆಶ್ವಿಟ್ಜ್ ನಲ್ಲಿನ ಇತಿಹಾಸವನ್ನು - ಮತ್ತು ಕೈದಿಗಳ ಆಧ್ಯಾತ್ಮಿಕ ಸ್ಥಿತಿಸ್ಥಾಪಕತ್ವದ ಜ್ಞಾಪನೆ" ಎಂದು ಧರ್ಮಗುರು ಮಾಲಿನೋವ್ಸ್ಕಿರವರು ತಮ್ಮ ಮಾತುಗಳ ಮೂಲಕ ಹಂಚಿಕೊಳ್ಳುತ್ತಾರೆ.

ಪ್ರಾರ್ಥನೆ, ಶಿಕ್ಷಣ ಮತ್ತು ಸ್ಮರಣಶಕ್ತಿಯ ಸಂರಕ್ಷಣೆಯ ಮೂಲಕ, ಹರ್ಮೆಜ್ ಒಂದು ಪ್ರೀತಿಯ ಪವಿತ್ರ ಸ್ಥಳವಾಗಿ ಉಳಿದಿದೆ. ಈ ಸ್ಥಳದಲ್ಲಿ, ದ್ವೇಷದ ಮೇಲೆ ಕರುಣೆಯ ವಿಜಯವನ್ನು ಸ್ಮರಿಸುತ್ತಾ ಜೀವಿಸಲಾಗುತ್ತದೆ.

27 ಜನವರಿ 2025, 12:34