MAP

Daily life in Aleppo after opposition took over the city Daily life in Aleppo after opposition took over the city  (ANSA)

ಹೊಸ ಸಿರಿಯಾವನ್ನು ರೂಪಿಸುವಲ್ಲಿ ಕ್ರೈಸ್ತರ ಪಾತ್ರದ ಕುರಿತು ಅಲೆಪ್ಪೊದ ಮರೋನೈಟ್ ಮಹಾಧರ್ಮಾಧ್ಯಕ್ಷರ ಹೇಳಿಕೆ

ಸಿರಿಯಾವು ಅನಿಶ್ಚಿತ ಸ್ಥಿತ್ಯಂತರವನ್ನು ಎದುರಿಸುತ್ತಿರುವಾಗ ಕ್ರೈಸ್ತರು ಅಂತರ್ಗತ ಮತ್ತು ಪ್ರಜಾಸತ್ತಾತ್ಮಕ ಸಮಾಜವನ್ನು ನಿರ್ಮಿಸುವಲ್ಲಿ ಪಾತ್ರವಹಿಸಬೇಕು ಎಂದು ಮಹಾಧರ್ಮಾಧ್ಯಕ್ಷರಾದ ಜೋಸೆಫ್ ಟೋಬ್ಜಿರವರು ಹೇಳುತ್ತಾರೆ.

ಸಿಸಿಲಿಯಾ ಸೆಪ್ಪಿಯಾ ಮತ್ತು ಲಿಂಡಾ ಬೊರ್ಡೋನಿ

ಬಶರ್ ಅಲ್-ಅಸ್ಸಾದ್ ರವರ ಪತನದ ನಂತರ ಸಿರಿಯಾದ ರಾಜಕೀಯ ಪರಿವರ್ತನೆಯನ್ನು ಪ್ರಾರಂಭಿಸುತ್ತಿದ್ದಂತೆ, ನಡೆಯುತ್ತಿರುವ ಹಿಂಸಾಚಾರ ಮತ್ತು ಅಸ್ಥಿರತೆಯಿಂದ ಶಾಂತಿಯ ಭರವಸೆಗಳು ಹದಗೆಡುತ್ತಿವೆ. 54 ವರ್ಷಗಳ ಆಡಳಿತದ ಅಂತ್ಯದ ನಂತರ ದೇಶಾದ್ಯಂತ ಸಂಭ್ರಮಾಚರಣೆಗಳು ಭುಗಿಲೆದ್ದವು, ಆದರೆ ಮುಂದೆ ಇರುವ ಸವಾಲುಗಳು ಅಪಾರವಾಗಿವೆ ಎಂದು ಅಲೆಪ್ಪೊದ ಮರೋನೈಟ್ ಮಹಾಧರ್ಮಾಧ್ಯಕ್ಷರಾದ ಜೋಸೆಫ್ ಟೋಬ್ಜಿರವರು ಹೇಳುತ್ತಾರೆ.

ವ್ಯಾಟಿಕನ್ ಸುದ್ಧಿಯವರೊಂದಿಗೆ ಮಾತನಾಡುತ್ತಾ, ಮಹಾಧರ್ಮಾಧ್ಯಕ್ಷರಾದ ಜೋಸೆಫ್ ಟೋಬ್ಜಿಯವರು ಭರವಸೆ ಮತ್ತು ಈ ಅನಿಶ್ಚಿತ ಅವಧಿಯಲ್ಲಿ ರಾಷ್ಟ್ರವು ಜನತೆಗೆ ಮಾರ್ಗದರ್ಶನ ನೀಡುವಾಗ ಎಚ್ಚರಿಕೆ ವಹಿಸುವ ಅಗತ್ಯದ ಬಗ್ಗೆ ಹೆಚ್ಚು ಗಮನವಹಿಸಬೇಕು ಎಂದು ಹೇಳಿದರು.

"ಭದ್ರತಾ ದೃಷ್ಟಿಕೋನದಿಂದ, ಅಲೆಪ್ಪೊದಲ್ಲಿ ವಿಷಯಗಳು ತುಲನಾತ್ಮಕವಾಗಿ ಶಾಂತವಾಗಿವೆ" ಎಂದು ಅವರು ಹೇಳಿದರು. "ಆದಾಗ್ಯೂ, ಪ್ರತ್ಯೇಕವಾದ ಹಿಂಸಾಚಾರದ ಕೃತ್ಯಗಳು ಮುಂದುವರೆಯುತ್ತಿವೆ ಮತ್ತು ದಮಾಸ್ಕಸ್‌ ನಲ್ಲಿ ಪರಿಸ್ಥಿತಿಯು ತುಂಬಾ ಹದಗೆಟ್ಟಿದೆ ಎಂಬುದು ಕಂಡುಬರುತ್ತಿದೆ. ದುಃಖಕರವೆಂದರೆ, ಆಯುಧಗಳು ಮಕ್ಕಳ ಕೈಗಳಲ್ಲಿಯೂ ಸಹ ವ್ಯಾಪಕವಾಗಿ ಕಂಡುಬರುತ್ತಿರುವುದು. ಮಗುವೊಂದು ರೈಫಲ್ ಹಿಡಿದಿರುವುದನ್ನು ಯಾರೂ ನೋಡಬಾರದಂತಹ ಸ್ಥಿತಿಯು ಸೃಷ್ಠಿಯಗುತ್ತಿದೆ.

ಸ್ಥಿರೀಕರಣಕ್ಕಾಗಿ ತುರ್ತು ಕರೆ
ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಸಿರಿಯಾವನ್ನು ಸ್ಥಿರಗೊಳಿಸುವ ಅಗತ್ಯವನ್ನು ಮಹಾಧರ್ಮಾಧ್ಯಕ್ಷರು ಒತ್ತಿ ಹೇಳಿದರು. ಅಸ್ಸಾದ್ ರವರ ಪತನದಲ್ಲಿ ಹಯಾತ್ ತಹ್ರೀರ್ ಅಲ್-ಶಾಮ್ (HTS)ರವರನ್ನು ಸೇರಿದಂತೆ ವಿವಿಧ ಬಂಡಾಯ ಗುಂಪುಗಳ ಪಾತ್ರವನ್ನು ಅವರು ಒಪ್ಪಿಕೊಂಡರು ಆದರೆ ಮುಂದೆ ಸಾಗುವ ಅವರ ಉದ್ದೇಶಗಳ ಬಗ್ಗೆ ಎಚ್ಚರಿಕೆಯ ಆಶಾವಾದವನ್ನು ವ್ಯಕ್ತಪಡಿಸಿದರು.
"HTS ಗುಂಪು, ಅಲ್ಪಸಂಖ್ಯಾತರು ಸೇರಿದಂತೆ ಎಲ್ಲಾ ಸಮುದಾಯಗಳನ್ನು ಗೌರವಿಸುವ ಭರವಸೆಗಳನ್ನು ನೀಡಿದೆ, ಮತ್ತು ಇಲ್ಲಿಯವರೆಗೆ, ಅವರ ಕಾರ್ಯಗಳು ಅವರ ಮಾತುಗಳೊಂದಿಗೆ ಜೋಡಿಸಲ್ಪಟ್ಟಿವೆ", "ಅವರು ಕ್ರೈಸ್ತರನ್ನು ಗೌರವದಿಂದ ನೋಡುತ್ತಾರೆ ಮತ್ತು ಪ್ರಸ್ತುತವಾಗಿ ಯಾವುದೇ ರೀತಿಯ ಕಿರುಕುಳವನ್ನು ನೀಡಿಲ್ಲ ಎಂದು ಮಹಾಧರ್ಮಾಧ್ಯಕ್ಷರಾದ ಟೋಬ್ಜಿರವರು ವಿವರಿಸಿದರು

HTS ಇಸ್ಲಾಂ ಧರ್ಮದ ಸಿದ್ಧಾಂತದಲ್ಲಿ ಬೇರೂರಿದ್ದರೂ, ಗುಂಪು ಮತಾಂಧವಲ್ಲ ಮತ್ತು ಇಸ್ಲಾಂ ಧರ್ಮದ ಕಾನೂನನ್ನು ಹೇರುತ್ತಿಲ್ಲ ಎಂದು ಅವರು ಗಮನಿಸಿದರು. "ಉದಾಹರಣೆಗೆ, ಮಹಿಳೆಯರು ಮುಸುಕು ಧರಿಸುವ ಬಲವಂತದ ನಿಯಮಗಳನ್ನು ಜಾರಿ ಮಾಡುತ್ತಿಲ್ಲ ಮತ್ತು ಯಾವುದೇ ಗಮನಾರ್ಹ ಸಾಮಾಜಿಕ ಬದಲಾವಣೆಗಳಿಲ್ಲ."

ಈ ಸಕಾರಾತ್ಮಕ ಸೂಚನೆಗಳನ್ನು ಗುರುತಿಸುವಾಗ, ಮಹಾಧರ್ಮಾಧ್ಯಕ್ಷರು ಜಾಗರೂಕರಾಗಿದ್ದರು: "ನಾನು ತುಂಬಾ ಆಶಾವಾದಿಯಾಗಿಯೂ ಅಥವಾ ನಿರಾಶಾವಾದಿಯಾಗಿಯೂ ಇರಲು ಸಾಧ್ಯವಿಲ್ಲ. ಏಕೆಂದರೆ, ನಾವು ವಿವೇಕದಿಂದ ಜೀವಿಸಬೇಕು, ಪರಿಸ್ಥಿತಿಯು ಪ್ರತಿದಿನ ಹೇಗೆ ವಿಕಸನಗೊಳ್ಳುತ್ತದೆ ಎಂಬುದನ್ನು ಎಚ್ಚರಿಕೆ ವಹಿಸಿ ಗಮನಿಸಬೇಕು.

ಅಲ್ಪಸಂಖ್ಯಾತರು, ಮಹಿಳೆಯರು ಮತ್ತು ಮಕ್ಕಳನ್ನು ರಕ್ಷಿಸಲು ಮತ್ತು ರಾಷ್ಟ್ರದಾದ್ಯಂತ ನ್ಯಾಯವನ್ನು ಪುನಃಸ್ಥಾಪಿಸಲು ವಾಗ್ದಾನ ಮಾಡಿದ ಸಿರಿಯಾದ ಹಂಗಾಮಿ ಪ್ರಧಾನಿ ಮೊಹಮ್ಮದ್ ಅಲ್-ಬಶೀರ್ ರವರು ನೀಡಿದ ಭರವಸೆಗಳನ್ನು ಅವರು ಸೂಚಿಸಿದರು.

ಜಗತ್ತು ಈಗ ಸಿರಿಯಾವನ್ನು ವೀಕ್ಷಿಸುತ್ತಿದೆ ಎಂದು ಅವರು ಹೇಳಿದರು. “ಈ ಭರವಸೆಗಳು ಕೇವಲ ಪ್ರಚಾರವಾಗಬಾರದು. ಕಾರಣ ಸ್ಪಷ್ಟವಾದ ಪ್ರಗತಿಯಿಲ್ಲದೆ, ಸಿರಿಯಾವು ಅಂತರರಾಷ್ಟ್ರೀಯ ಮನ್ನಣೆಯನ್ನು ಪಡೆಯಲು ಹೆಣಗಾಡಬೇಕಾಗುತ್ತದೆ.

ಹೊಸ ಸಿರಿಯಾವನ್ನು ನಿರ್ಮಿಸುವಲ್ಲಿ ಪಾಲುದಾರರು
ಮಹಾಧರ್ಮಾಧ್ಯಕ್ಷ ಟೋಬ್ಜಿರವರು ಸಿರಿಯಾದ ಕ್ರೈಸ್ತರನ್ನು ದೇಶದ ಭವಿಷ್ಯವನ್ನು ರೂಪಿಸುವಲ್ಲಿ ಸಕ್ರಿಯ ಪಾತ್ರವನ್ನು ವಹಿಸುವಂತೆ ಒತ್ತಾಯಿಸಿದರು, "ನಾವು ಕ್ರೈಸ್ತರು, ಪ್ರೇಕ್ಷಕರಾಗಿ ನಿಲ್ಲಲು ಸಾಧ್ಯವಿಲ್ಲ." ಎಂದು ಹೇಳುತ್ತಾ ಕ್ರೈಸ್ತರ ಪಾತ್ರದ ಪ್ರಾಮುಖ್ಯತೆಯನ್ನು ವ್ಯಕ್ತಪಡಿಸಿದರು.

"ದಶಕಗಳ ನಿರಂಕುಶ ಆಡಳಿತದ ನಂತರ, ಇತರರು ನಮಗಾಗಿ ನಿರ್ಧಾರಗಳನ್ನು ತೆಗೆದುಕೊಂಡಾಗ, ನಾವು ಈಗ ನಮ್ಮ ಧ್ವನಿಯನ್ನು ಕಂಡುಕೊಳ್ಳಬೇಕು ಮತ್ತು ಎಲ್ಲಾ ಜನರನ್ನು ಗೌರವಿಸುವ ನಾಗರಿಕ ಮತ್ತು ಪ್ರಜಾಪ್ರಭುತ್ವದ ರಾಜ್ಯವನ್ನು ನಿರ್ಮಿಸಲು ನಮ್ಮ ಕೊಡುಗೆಗಳನ್ನು ನೀಡಬೇಕು."

ಜನರಿಗೆ ಹತ್ತಿರವಾದ ಧರ್ಮಸಭೆ
ಈ ನಿರ್ಣಾಯಕ ಸಮಯದಲ್ಲಿ ಯುರೋಪಿನ ಧರ್ಮಾಧ್ಯಕ್ಷರುಗಳ ಐಕ್ಯತೆಗಾಗಿ ಶ್ರೇಷ್ಠಗುರು ಟೋಬ್ಜಿರವರು ಧನ್ಯವಾದಗಳನ್ನು ಅರ್ಪಿಸಿದರು. COMECE ನ ಶ್ರೇಷ್ಠಗುರು ಮರಿಯಾನೋ ಕ್ರೊಸಿಯಾಟಾರವರು ಸಹಿ ಮಾಡಿದ ಪತ್ರದಲ್ಲಿ, ಯುರೋಪಿನ ಧರ್ಮಾಧ್ಯಕ್ಷರುಗಳು ಸಿರಿಯಾದ ಜನರಿಗೆ ತಮ್ಮ ಬೆಂಬಲವನ್ನು ತಿಳಿಸಿದರು ಮತ್ತು ಕ್ರಮಬದ್ಧವಾದ, ಶಾಂತಿಯುತ ಪರಿವರ್ತನೆಗೆ ಒತ್ತಾಯಿಸಿದರು.
"ನಮಗೆ, ನಾವು ಏಕಾಂಗಿಯಾಗಿ ಭಾವಿಸದಿರುವುದು ಅತ್ಯಗತ್ಯ" ಎಂದು ಧರ್ಮಾಧ್ಯಕ್ಷರು ಹೇಳಿದರು. "ಶಾಂತಿಗಾಗಿ ಅವರ ಅಚಲವಾದ ಕರೆಗಳಿಗಾಗಿ, ಶಾಂತಿಯುತ ಮತ್ತು ನ್ಯಾಯಯುತ ಪ್ರಕ್ರಿಯೆಯನ್ನು ಪ್ರೋತ್ಸಾಹಿಸಿದ್ದಕ್ಕಾಗಿ ವಿಶ್ವಗುರು ಫ್ರಾನ್ಸಿಸ್ ರವರಿಗೆ ನಾವು ಧನ್ಯವಾದಗಳು ಸಲ್ಲಿಸುತ್ತೇವೆ" ಎಂದು ಹೇಳಿದರು.

ಶಾಂತಿ ಮತ್ತು ಸೇರ್ಪಡೆಯ ಭವಿಷ್ಯ
ವೈವಿಧ್ಯತೆಯನ್ನು ಗೌರವಿಸುವ ಮತ್ತು ನ್ಯಾಯವನ್ನು ಖಾತರಿಪಡಿಸುವ ರಾಷ್ಟ್ರವನ್ನು ನಿರ್ಮಿಸಲು ಸಿರಿಯಾದ ಎಲ್ಲಾ ಜನತೆಯು ಒಟ್ಟಾಗಿ ಕೆಲಸ ಮಾಡಲು, ಮಹಾಧರ್ಮಾಧ್ಯಕ್ಷ ಟೋಬ್ಜಿಯವರು ಕರೆ ನೀಡಿದರು.

"ಈ ಹೊಸ ರಾಜಕೀಯ ಭೂದೃಶ್ಯದಲ್ಲಿ ಸಮತೋಲನದ ಶಕ್ತಿಯಾಗಲು ನಮ್ಮನ್ನು ಕರೆಯಲಾಗಿದೆ, ಪ್ರತಿಯೊಬ್ಬರನ್ನು ಗೌರವಿಸುವ ಮತ್ತು ಭವಿಷ್ಯದ ಪೀಳಿಗೆಗೆ ಭರವಸೆಯನ್ನು ನೀಡುವ ಸಮಾಜಕ್ಕೆ ನಮ್ಮ ಕೊಡುಗೆಗಳನ್ನು ನೀಡಬೇಕಾಗುತ್ತದೆ." ಆದ್ದರಿಂದ ಕ್ರೈಸ್ತರಾದ ನಾವು, ನಮಗೆ ಕೊಟ್ಟಿರುವ ಕಾರ್ಯವನ್ನು ನಾವು ನಿಷ್ಠೆಯಿಂದ ಮಾಡಬೇಕೆಂದು ಎಂದು ಅವರು ತೀರ್ಮಾನಿಸಿದರು.

17 ಡಿಸೆಂಬರ್ 2024, 11:27